ಬೆಂಗಳೂರು:ನಾಯಕತ್ವದ ವಿಚಾರವಾಗಿ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೊನೆಗೂ ಮೌನಮುರಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ವರಿಷ್ಠರ ಸಂದೇಶಕ್ಕೆ ಕಾದಿರುವುದಾಗಿ ಹೇಳುವ ಮೂಲಕ ಕೊನೇ ಕ್ಷಣದ ಕುತೂಹಲ ಹೆಚ್ಚಿಸಿದ್ದಾರೆ. ಬುಧವಾರ ಟ್ವೀಟ್ ಮೂಲಕ ಅಭಿಪ್ರಾಯವನ್ನು ಹೊರಹಾಕಿದ್ದ ಸಿಎಂ ಗುರುವಾರ ಬಹಿರಂಗವಾಗಿ ಮಾತಾಡಿದ್ದಾರೆ. ‘ಜು.26ಕ್ಕೆ ಸರ್ಕಾರ ಎರಡು ವರ್ಷ ಪೂರೈಸಲಿದ್ದು, 25 ಅಥವಾ ನಂತರ ವರಿಷ್ಠರು ನೀಡಲಿರುವ ಸಂದೇಶಕ್ಕೆ ಕಾದಿರುವೆ’ ಎಂದಿದ್ದಾರೆ.
‘ಪಕ್ಷದಲ್ಲಿ 75 ವರ್ಷ ವಯೋಮಿತಿ ದಾಟಿದ ಯಾರಿಗೂ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ. ಹೈಕಮಾಂಡ್ ಕಳುಹಿಸಲಿರುವ ಸಂದೇಶವನ್ನು ಪಾಲಿಸುವೆ, ಪಕ್ಷದ ಸಂಘಟನೆಗೆ ಒತ್ತು ನೀಡುವೆ. ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು’ ಎಂದು ಅವರು ಕೋರಿದರು. ‘ನನ್ನ ಪರವಾಗಿ ಯಾರೂ ಹೇಳಿಕೆ ನೀಡುವುದು ಬೇಡ. ಪ್ರತಿಭಟನೆ ಮಾಡಬಾರದು’ ಎಂದು ಮನವಿ ಮಾಡಿದ ಬಿಎಸ್​ವೈ, ‘ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದ’ ಎಂದು ಹೇಳಿದರು.
ವಿವಿಧ ವ್ಯಾಖ್ಯಾನ:ಹೈಕಮಾಂಡ್ ನೀಡಲಿರುವ ಸೂಚನೆ ಪಾಲಿಸುವೆ. ಪಕ್ಷದ ಸಂಘಟನೆಗೆ ಒತ್ತು ನೀಡುವೆ ಎಂಬ ಸಿಎಂ ಹೇಳಿಕೆ ವಿವಿಧ ವಿಶ್ಲೇಷಣೆ, ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದಾಗಿ ನಾಯಕತ್ವ ಬದಲಾವಣೆ ಚರ್ಚೆ ಮತ್ತಷ್ಟು ತುರುಸು ಪಡೆದುಕೊಂಡಿದೆ. ಹೊರಗಿನ ಚರ್ಚೆ, ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದ ಬಿಎಸ್​ವೈ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದ ನಂತರ ಸಿಎಂ ಮೌನಕ್ಕೆ ಶರಣಾದರೆ, ವದಂತಿಗೆ ಕಾರಣ ಹುಡುಕಿಕೊಂಡು ಅವರ ‘ಕಾವೇರಿ’ ನಿವಾಸಕ್ಕೆ ದೊಡ್ಡ ಸಂಖ್ಯೆಯಲ್ಲಿ ಧಾವಿಸಿದ್ದ ಮಠಾಧೀಶರು ನೈತಿಕ ಬೆಂಬಲ ನೀಡಿದ್ದರು. ಅಲ್ಲದೆ, ಬಿಎಸ್​ವೈಗೆ ಅವಧಿ ಪೂರ್ಣಗೊಳಿಸಲು ಅವಕಾಶ ಕೊಡಬೇಕು ಎಂದು ವರಿಷ್ಠರಿಗೆ ಆಗ್ರಹಿಸಿ ಬದಲಾವಣೆ ಮಾಡಿದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಸ್ವಾಮೀಜಿಗಳ ಭೇಟಿ, ಚರ್ಚೆ ಸಂದರ್ಭದಲ್ಲಿ ಬಿಎಸ್​ವೈ ರಾಜೀನಾಮೆ ಬಗ್ಗೆ ತುಟಿಬಿಚ್ಚಿಲ್ಲ. ವರಿಷ್ಠರ ತೀರ್ವನದಂತೆ ನಡೆದು ಕೊಳ್ಳುವೆ, ಯಾವುದೂ ನನ್ನ ಕೈಯ್ಯಲ್ಲಿಲ್ಲವೆಂದು ಹೇಳಿದ್ದರು.
ನಗರ ಸಂಚಾರ:ಶುಕ್ರವಾರ ಬೆಂಗಳೂರು ನಗರದಲ್ಲಿ ಸಂಚರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಖುದ್ದು ಪರಿಶೀಲನೆಯ ಇಂಗಿತವನ್ನು ಸಿಎಂ ವ್ಯಕ್ತಪಡಿಸಿದರು.
ಮಠಾಧೀಶರ ಭೇಟಿ:ಬಿಎಸ್​ವೈ ಯಥಾರೀತಿ ಸಿಎಂ ಆಗಿ ಮುಂದುವರಿದು, ಅವಧಿಪೂರ್ಣಗೊಳಿಸಬೇಕು ಎಂಬ ಅಭಿಲಾಷೆ ಹೊಂದಿರುವ ಮಠಾಧೀಶರ ಭೇಟಿ ಗುರುವಾರವೂ ಮುಂದುವರಿಯಿತು. ಸಿಎಂ ಅಧಿಕೃತ ನಿವಾಸಕ್ಕೆ ಗುರುವಾರ ಆಗಮಿಸಿದ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಮಾರ್ಕಂಡಮುನಿ, ಶ್ರೀ ಷಡಕ್ಷರ ಸ್ವಾಮೀಜಿ, ಬ್ರಹ್ಮಾನಂದ ಮುನಿ ಹಾಗೂ ಶಿವಮುನಿ ಸ್ವಾಮೀಜಿ ಭೇಟಿಯಾಗಿ ರ್ಚಚಿಸಿ, ಶುಭ ಹಾರೈಸಿದರು. ಮಠಾಧೀಶರ ಹಾರೈಕೆಗೆ ಕೃತಜ್ಞತೆ ಸಲ್ಲಿಸಿದ ಬಿಎಸ್​ವೈ, ‘ಪಕ್ಷಕ್ಕೆ ನಿಷ್ಠನಾಗಿದ್ದು, ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ’ ಎಂದು ನಿವೇದಿಸಿಕೊಂಡಿದ್ದಾರೆ.
ಅಷ್ಟೇಕೆ ಅವಸರ?:ಪಕ್ಷದ ವರಿಷ್ಠರಿಂದ ಇನ್ನೂ ಯಾವುದೇ ಸಂದೇಶ ಬಂದಿಲ್ಲ. ನಿಮಗೆ (ಮಾಧ್ಯಮದವರು) ಏಕಿಷ್ಟು ಅವಸರ ಎಂದು ಬಿಎಸ್​ವೈ ಗಡಸು ಧ್ವನಿಯಲ್ಲಿ ಚಟಾಕಿ ಹಾರಿಸಿದರು. ‘ವರಿಷ್ಠರು ತೆಗೆದುಕೊಳ್ಳುವ ತೀರ್ವನಕ್ಕೆ ಬದ್ಧನಾಗಿರುವೆ. ಅಧಿಕಾರದಲ್ಲಿ ಇರಲಿ, ಬಿಡಲಿ. ಪಕ್ಷ ಸಂಘಟಿಸಿ ಮತ್ತೊಮ್ಮೆಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ’ ಎಂದು ಬಿಎಸ್​ವೈ ದೃಢಪಡಿಸಿದರು.
ಯಡಿಯೂರಪ್ಪನವರು ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಅಲ್ಲದೆ, ಸಾಮಾಜಿಕ ನ್ಯಾಯ ಒದಗಿಸಲು ಕೂಡ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಂಡು ಅಧಿಕಾರಾವಧಿ ಪೂರ್ಣಗೊಳಿಸಲು ಪಕ್ಷದವರು ಅವಕಾಶ ನೀಡಬೇಕು.
|ಶ್ರೀಷಡಕ್ಷರಮುನಿ ಸ್ವಾಮೀಜಿಆದಿಜಾಂಬವ ಕೋಡಿಹಳ್ಳಿ ಬೃಹನ್ಮಠ
ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ:ಪಕ್ಷದಲ್ಲಿ ಪರ್ಯಾಯ ನಾಯಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ. ಆದರೆ, ಯಾರ ಹೆಸರನ್ನೂ ವರಿಷ್ಠರಿಗೆ ಶಿಫಾರಸು ಮಾಡುವುದಿಲ್ಲ ಎಂದು ಹೇಳುವ ಮೂಲಕ ಆಸೆಯಿಟ್ಟುಕೊಂಡಿದ್ದ ಹಲವು ಬೆಂಬಲಿಗರನ್ನು ಸಿಎಂ ನಿರಾಸೆಗೆ ತಳ್ಳಿದರು. ಸ್ವತಃ ಹೈಕಮಾಂಡ್ ಕೇಳಿದರೂ ಯಾವ ಹೆಸರನ್ನೂ ಸೂಚಿಸುವುದಿಲ್ಲ. ನಿರ್ದಿಷ್ಟವಾಗಿ ಇಂತಹ ಸಮುದಾಯಕ್ಕೆ ಕೊಡಿ, ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಒತ್ತಡವನ್ನೂ ಹೇರುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನಿರ್ಣಾಯಕ ತಿರುವು:ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ವರಿಷ್ಠರಿಗೆ ತಿಳಿಸಿದ್ದೆನೆಂದು ಬಿಎಸ್​ವೈ ಗುರುವಾರ ಸಂಜೆ ಮತ್ತೊಂದು ಹೇಳಿಕೆ ನೀಡಿ, ಚರ್ಚೆಗಳಿಗೆ ನಿರ್ಣಾಯಕ ತಿರುವು ನೀಡಿದರು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮತ್ತೆ ಮಾತಿಗೆಳೆದ ಮಾಧ್ಯಮದವರಿಗೆ ಹೀಗೆ ಪ್ರತಿಕ್ರಿಯಿಸಿದರು.
26ರಂದು ಸರ್ಕಾರದ ಸಾಧನೆ ಅನಾವರಣ:ಸರ್ಕಾರ ಎರಡು ವರ್ಷ ಪೂರೈಸಲಿರುವ ಜು.26ರಂದು ಸಾಧನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ವರಿಷ್ಠರ ಸೂಚನೆಯಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್
ತಂದೆ ನಿನ್ನೆ ರಾತ್ರಿ ಬ್ಲ್ಯಾಕ್​ ಫಂಗಸ್​​ನಿಂದ ನಿಧನ; ಇಂದು ಆ ದುಃಖದ ನಡುವೆಯೂ ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆದ ಪುತ್ರಿ ಚಂದನಾ…



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
