ಬೆಂಗಳೂರು:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ ಬಹಿರಂಗ ಬೈದಾಟ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ ಅವರದ್ದು ಎನ್ನಲಾದ ಆಡಿಯೋ ವೈರಲ್ ಪ್ರಸಂಗದಿಂದ ಆಡಳಿತ ಬಿಜೆಪಿ ಮತ್ತೆ ಮುಜುಗರಕ್ಕೆ ಸಿಲುಕಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಮಿಷನ್ 150 ಗುರಿಯಿಟ್ಟುಕೊಂಡು ಹವಾ ಸೃಷ್ಟಿಸಲು, ಕಾರ್ಯಕರ್ತರಲ್ಲಿ ಹುರುಪು ತುಂಬಲು ವರಿಷ್ಠರು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಪಕ್ಷದ ಮುಖಂಡರು ಪದೇಪದೆ ಪರಸ್ಪರ ಟೀಕೆಯಲ್ಲಿ ತೊಡಗಿದ್ದು, ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ. ಜತೆಗೆ, ಪ್ರತಿಪಕ್ಷಗಳ ಆರೋಪಕ್ಕೆ ಆಹಾರ ಒದಗಿಸುತ್ತಿದ್ದಾರೆ. ಸ್ವಪಕ್ಷದವರೇ ಒಂದಿಲ್ಲೊಂದು ಪೇಚಿನ ಪ್ರಸಂಗ ಸಿಲುಕಿ ಅವರದ್ದೇ ಎನ್ನಲಾದ ವಿಡಿಯೋ, ಆಡಿಯೋಗಳು ಕಾಳ್ಗಿಚ್ಚಿನಂತೆ ಹರಡುತ್ತಿವೆ. ಇದರಿಂದಾಗಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಕುಸಿಯುತ್ತಿದೆ ಎಂದು ಪಕ್ಷದಲ್ಲಿ ಆಂತರಿಕವಾಗಿ ವಿಶ್ಲೇಷಣೆಯಾಗುತ್ತಿದೆ. ಶತಾಯಗತಾಯ ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರಕ್ಕೆ ಬರಲೆಂದು ಡಬಲ್ ಇಂಜಿನ್ ಸರ್ಕಾರದ ಸಾಧನೆಯೊಂದಿಗೆ ಪಕ್ಷದ ನಾಯಕತ್ವ ಒಂದು ಹೆಜ್ಜೆ ಮುಂದಿಟ್ಟರೆ, ಅನೂಹ್ಯ ಬೆಳವಣಿಗೆ ಹಠಾತ್ ಅಪ್ಪಳಿಸಿ ಮೂರು ಹೆಜ್ಜೆ ಹಿಂದಕ್ಕೆ ತಳ್ಳುತ್ತಿದೆ. ಮಾತ್ರವಲ್ಲ, ಪಕ್ಷದ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಯತ್ನಾಳ್ ಹೆಸರೆತ್ತದೆ ಕಿಡಿ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಶಿಗ್ಗಾಂವಿಯಲ್ಲಿ ಮಾತನಾಡುತ್ತ ಸಚಿವ ಮುರುಗೇಶ್ ನಿರಾಣಿ ‘ಪಿಂಪ್’ ಎಂದು ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಿರಾಣಿ ಶನಿವಾರ ಯತ್ನಾಳ್ ಹೆಸರೆತ್ತದೆ ಕಿಡಿಕಾರಿದರು. ಸಿಎಂ ಅಧಿಕೃತ ನಿವಾಸ ರೇಸ್​ವ್ಯೂ ಕಾಟೇಜ್ ಬಳಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಿಜಯಪುರದವರೊಬ್ಬರು ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದಾರೆ. ಒಳ್ಳೆಯ ಮನೆತನದವರು ಈ ರೀತಿ ಮಾತನಾಡಲ್ಲ. ಆ ಸಂಸ್ಕೃತಿಯಲ್ಲಿ ಇದ್ದವರೇ ಈ ರೀತಿ ಮಾತನಾಡುತ್ತಾರೆ ಎಂದು ನಿರಾಣಿ ಕಣ್ಣೀರು ಹಾಕಿದರು. ಭಾವೋದ್ವೇಗಕ್ಕೆ ಒಳಗಾದ ನಿರಾಣಿ, ಹೀಗೆಯೇ ನಾಲಿಗೆ ಹರಿಬಿಟ್ಟರೆ ಕತ್ತರಿಸಬೇಕಾಗುತ್ತದೆ ಎಂದೂ ಗುಡುಗಿದರು.
ಬಾಯಿ ಮುಚ್ಚಿಕೊಂಡಿರಲು ಸಿಎಂ ಸೂಚನೆ ನೀಡಿದ್ದರೂ ಸಡಿಲ ಮಾತುಗಳನ್ನು ಮುಂದುವರಿಸಿದ್ದು, ಪಕ್ಷದಲ್ಲಿ ಇರುವುದಕ್ಕೆ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಹೋಗಿ ಪ್ರತಿಭಟನೆ ಮಾಡಬೇಕು ಎಂದು ಸವಾಲೆಸೆದರು. ಜೆಡಿಎಸ್​ನಲ್ಲಿದ್ದಾಗ ಮುಸ್ಲಿಮರ ಟೋಪಿ ಹಾಕಿಕೊಳ್ಳುವುದು. ಬಿಜೆಪಿಗೆ ಬಂದ ಮೇಲೆ ಹಿಂದುತ್ವದ ಬಗ್ಗೆ ಮಾತನಾಡುವ ಢೋಂಗಿತನ ಪ್ರದರ್ಶಿಸುತ್ತಿದ್ದು, ವಿಜಯಪುರದ ಜನರಿಗೆ ಇವೆಲ್ಲ ಅರ್ಥವಾಗಿವೆ ಎಂದು ನಿರಾಣಿ ತಿವಿದರು. ಇನ್ನೊಂದೆಡೆ, ಇದಕ್ಕೆ ಯತ್ನಾಳ್ ಸಹ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಷಾ ಅವರದು ರೌಡಿಸಂ ಸ್ಟೈಲ್!:ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ರೌಡಿಗೆ ಹೋಲಿಸಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬಿಜೆಪಿಯೊಳಗೆ ಸಿಡಿಮಿಡಿಯ ಕಿಡಿಹೊತ್ತಿಸಿದೆ.
‘ಪಾರ್ಟಿ ವಿರುದ್ಧ ಯಾರಾದರೂ ಮಾತನಾಡಿದರೆ ಅಷ್ಟೇ ಅವರ ಕಥೆ….. ಅಮಿತ್ ಷಾ ಅವರದ್ದು ಒಂಥರಾ ರೌಡಿಸಂ ಕಣಯ್ಯ’ ಎಂದಿರುವುದು ಪಕ್ಷದ ಒಳ-ಹೊರಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೊಂದಾಣಿಕೆ ರಾಜಕೀಯ ಬೇಡವೆಂದು ಮೊನ್ನೆ ನಮ್ಮನ್ನೆಲ್ಲ ಕರೆದು ಹೇಳಿದ್ದಾರೆ. ಪಾರ್ಟಿ ವಿರುದ್ಧ ಯಾರ್ಯಾರು ಕೆಲಸ ಮಾಡುತ್ತಿದ್ದೀರಾ ಎನ್ನುವುದು ಗೊತ್ತಿದೆ ಎಂದು ಅಮಿತ್ ಷಾ ನೀಟಾಗಿ ಹೇಳಿದ್ದಾರೆ ಎಂಬ ಅಂಶವೂ ಆಡಿಯೋದಲ್ಲಿದೆ.
ಜನಾಭಿಪ್ರಾಯದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆಗೆ ಮುಂಚೆ ಆಪರೇಷನ್ ಕಮಲ ಮಾಡಿ ಮತ್ತೆ ನಮ್ಮದೇ ಸರ್ಕಾರ ರಚಿಸುತ್ತೇವೆ. ಜೆಡಿಎಸ್ ರಾಜಕೀಯ ಭವಿಷ್ಯ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ತುಮುಲ, ರಾಜ್ಯದಿಂದ ದೆಹಲಿವರೆಗಿನ ರಾಜಕೀಯ ವಿಚಾರಗಳು ಈ ಆಡಿಯೋದಲ್ಲಿವೆ.
ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನಾನು ಸ್ಪರ್ಧಿಸುವೆ. ಅದೇ ರೀತಿ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಆರ್. ಅಶೋಕ್, ಕುಮಾರಸ್ವಾಮಿ ಮಗನ ವಿರುದ್ಧ ಸಚಿವ ಅಶ್ವತ್ಥ ನಾರಾಯಣ ಸ್ಪರ್ಧಿಸಲಿ, ಇದೊಂದು ಹೋರಾಟ ಆಗಲಿ ಎಂದು ಸವಾಲೆಸೆದಿರುವುದು ಆಡಳಿತ ಪಕ್ಷದಲ್ಲಿ ಅವಲಕ್ಕಿ ಕುಟ್ಟಿದಂತಾಗಿದೆ. ಆದರೆ, ಆಡಿಯೋ ನನ್ನದಲ್ಲ. ಅದು ಫೇಕ್. ನಾನು ಏನೇ ಮಾತನಾಡುವುದು ಇದ್ದರೂ ನೇರವಾಗಿ ಮಾತನಾಡುವವನು. ನಾವು ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯೋಗೇಶ್ವರ್ ಸ್ಪಷ್ಟೀಕರಣ ನೀಡಿದ್ದಾರೆ.
ಕೋಲು ಕೊಟ್ಟು:ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಸ್ಥಿತಿ ಕಮಲಪಡೆಯದ್ದಾಗಿದೆ. ಸಚಿವರು ಅಥವಾ ಆಡಳಿತ ಪಕ್ಷದ ಶಾಸಕರು ಒಂದಿಲ್ಲೊಂದು ಅಪಸವ್ಯಗಳ ಮಡುವಿಗೆ ಬಿದ್ದು ಒದ್ದಾಡುತ್ತಿದ್ದು, ವರ್ಚಸ್ಸು ವೃದ್ಧಿಸಿಕೊಳ್ಳಲು ಪಕ್ಷದ ನಾಯಕರು ತಿಣುಕುವಂತೆ ಮಾಡುತ್ತದೆ. ಕಾಂಗ್ರೆಸ್, ಜೆಡಿಎಸ್ ಬತ್ತಳಿಕೆಗೆ ಇದೀಗ ಯತ್ನಾಳ್-ನಿರಾಣಿ ವಾಗ್ಯುದ್ಧ, ‘ಸಿಪಿವೈ ಆಡಿಯೋ’ ಅಸ್ತ್ರಗಳು ಸೇರಿಕೊಂಡಿವೆ. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಸುಲಭದ ತುತ್ತಾಗುತ್ತಿದ್ದು, ಈ ಅಸ್ತ್ರಗಳನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಹಣಿಯಲಾರಂಭಿಸಿವೆ.
ವೈಯಕ್ತಿಕವಾಗಿ ಮಾತನಾಡುವುದು ಕರ್ನಾಟಕದ ರಾಜಕೀಯ ಸಂಸ್ಕೃತಿಯಲ್ಲ. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ಆದರೆ, ವೈಯಕ್ತಿಕ ನಿಂದನೆ ಸರಿಯಲ್ಲ. ಅದಕ್ಕೆ ಹೊರತಾಗಿ ಮಾತನಾಡಿದರೆ ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ.
ಪಕ್ಷದ ರಾಜ್ಯ ನಾಯಕರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ಯಾರ ಜತೆಗೆ ಏನು ಮಾಡಬೇಕು ಗೊತ್ತಿದೆ, ಏನಾಗಲಿದೆ ಎಂಬುದು ಕಾದುನೋಡಿ.
|ಮಹೇಶ್ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಎಚ್ಚರಿಕೆ ಕಡೆಗಣನೆ:ಇರಿಮುರಿಸು, ವರ್ಚಸ್ಸಿಗೆ ಧಕ್ಕೆ ತರುವಂತಹ ಖೆಡ್ಡಾಗಳಿಗೆ ಬೀಳಬೇಡಿ. ಮೊಬೈಲ್​ನಲ್ಲಿ ಯಾರ ಜತೆಗೂ ಬಾಯಿ ಸಡಿಲಬಿಟ್ಟು ಮಾತನಾಡಬೇಡಿ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಂತರಿಕ ಸಭೆಗಳಲ್ಲಿ ಕಿವಿಮಾತು ಹೇಳಿ, ಎಚ್ಚರಿಸಿದ್ದರೂ ಕಡೆಗಣಿಸಲಾಗಿದೆ ಎಂದು ಪಕ್ಷದ ಮೂಲಗಳು ಬೇಸರ ವ್ಯಕ್ತಪಡಿಸಿವೆ. ಎದುರಾಳಿಗಳು ಬೀಸಿದ ಬಲೆಗೆ ಬೀಳುವ ಮುನ್ನವೇ ಕೆಲವರು ತಾವೇ ಹೋಗಿ ಖೆಡ್ಡಾಕ್ಕೆ ಬೀಳುತ್ತಿದ್ದು, ಇದರಿಂದಾಗುವ ‘ಹಾನಿ ನಿಯಂತ್ರಣ’ಕ್ಕೆ ಪ್ರತ್ಯೇಕ ಕೋಶ ತೆರೆಯಬೇಕಾದ ಪರಿಸ್ಥಿತಿ ತಲೆದೋರಿದೆ ಎಂಬ ಅಸಹನೆ ಪಕ್ಷದೊಳಗೆ ಮಡುಗಟ್ಟಿದೆ.
ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
