ರುದ್ರಣ್ಣ ಹರ್ತಿಕೋಟೆ ಬೆಂಗಳೂರುಗ್ರಾಮ ಪಂಚಾಯಿತಿಗಳನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಅಭಿವೃದ್ಧಿ ನಕ್ಷೆಯ ಮೂಲಕ ಜವಾಬ್ದಾರಿ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಆ ಮೂಲಕ ಹಲವು ದಶಕಗಳ ಬೇಡಿಕೆ ಈಡೇರಿಕೆಗೆ ಕಾಲ ಕೂಡಿ ಬಂದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟ್ಯಂತರ ರೂ.ಗಳ ಅನುದಾನ ಪಡೆಯುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಆಡಳಿತದ ಮೇಲೆ ಶಾಸನಸಭೆಗಳ ಸದಸ್ಯರು ಹಾಗೂ ಸಚಿವರ ಹಿಡಿತ ಹೆಚ್ಚಾಗಿದೆ. ಅದರಿಂದ ಸ್ಥಳೀಯವಾಗಿ ಅಧಿಕಾರ ಇಲ್ಲದೇ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ವ್ಯವಸ್ಥೆಯನ್ನು ಕೊನೆಗೊಳಿಸಿ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಎಂದರೆ ಗ್ರಾಮ ಸ್ವರಾಜ್ಯವಾಗಬೇಕೆಂಬ ಉದ್ದೇಶದಿಂದ ಸರ್ಕಾರ ತಿದ್ದುಪಡಿ ಕಾಯ್ದೆ ತಂದು ಒಂದು ದಶಕವಾಗುತ್ತಿದೆ. ಆದರೂ ಇದುವರೆಗೂ ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಫಲಪ್ರದವಾಗಿರಲಿಲ್ಲ. ಇದೀಗ ಸರ್ಕಾರ ಪ್ರಯತ್ನಕ್ಕೆ ಆರಂಭಿಸಿದೆ.
ಕೇರಳದಲ್ಲಿ ಅನೇಕ ಆಡಳಿತ ಸ್ಥಳೀಯ ಸರ್ಕಾರಗಳ ಕೈಯಲ್ಲಿ ಇದೆ. ನಮ್ಮ ರಾಜ್ಯದ ಕಾಯ್ದೆ ಕೇರಳಕ್ಕಿಂತ ಬಲವಾಗಿದ್ದು, ಕೇರಳದಂತೆ ಆಡಳಿತ ಹೊಣೆಗಾರಿಕೆಯೂ ಪಂಚಾಯಿತಿ ಸಂಸ್ಥೆಗಳಿಗೆ ವರ್ಗಾವಣೆಯಾದರೆ ಇಡೀ ದೇಶದಲ್ಲಿಯೇ ಮಾದರಿಯಾಗಲಿದೆ ಎಂಬ ಅಭಿಪ್ರಾಯ ಇದೆ.
ಎಷ್ಟು ಇಲಾಖೆಗಳ ಆಡಳಿತ?:ಪಂಚಾಯಿತಿ ಸಂಸ್ಥೆಗಳಿಗೆ 31 ಇಲಾಖೆಗಳ ಆಡಳಿತವನ್ನು ವರ್ಗಾವಣೆ ಮಾಡಬೇಕಾಗಿದೆ. ಅದಕ್ಕಾಗಿ ಸರ್ಕಾರ ಅಭಿವೃದ್ಧಿ ನಕ್ಷೆಯನ್ನು ರೂಪಿಸಿದೆ. ಈಗ ಎರಡು ಇಲಾಖೆಗಳು ವಿಕೇಂದ್ರೀಕರಣಕ್ಕೆ ಆದೇಶ ಮಾಡಿವೆ.
ಉಪಯೋಗ ಏನು?:ಆಡಳಿತ ವಿಕೇಂದ್ರೀಕರಣದಿಂದ ಗ್ರಾಮಗಳಿಗೆ, ವಾರ್ಡ್​ಗಳಿಗೆ ಏನೇನು ಅಭಿವೃದ್ಧಿ ಬೇಕು ಎಂಬುದನ್ನು ಸ್ಥಳೀಯವಾಗಿ ಜನರನ್ನು ಕೇಳಿ ನಿರ್ಧಾರ ಮಾಡಬಹುದು. ಹಣಕಾಸಿನ ಬಳಕೆಯಲ್ಲಿಯೂ ಪಾರದರ್ಶಕತೆ ತರಲು ಅನುಕೂಲವಾಗುತ್ತದೆ.
ಇಲಾಖೆಗಳು ಸಿದ್ದ:ಸದ್ಯ ಪರಿಶಿಷ್ಟ ಕಲ್ಯಾಣ ಹಾಗೂ ಆರೋಗ್ಯ ಇಲಾಖೆಗಳು ಅಭಿವೃದ್ಧಿ ನಕ್ಷೆಯನ್ನು ಅಳವಡಿಸಿಕೊಳ್ಳುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಮುಂದಾಗಿವೆ. ಪರಿಶಿಷ್ಟ ಕಲ್ಯಾಣ ಇಲಾಖೆಯ 11 ಹಾಗೂ ಆರೋಗ್ಯ ಇಲಾಖೆಯ 18 ಕಾರ್ಯ ಚಟುವಟಿಕೆಗಳು ಸ್ಥಳೀಯ ಆಡಳಿತಕ್ಕೆ ವರ್ಗಾವಣೆಯಾಗಲಿವೆ.
ಸಿಎಂ ಆಸಕ್ತಿ:ಮುಖ್ಯ ಕಾರ್ಯದರ್ಶಿಗಳ ಸಭೆಯ ನಂತರ ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಸ್ಥಳೀಯ ಸರ್ಕಾರಗಳನ್ನು ಬಲ ಪಡಿಸುವ ಬಗ್ಗೆ ಗಾಂಧೀಜಿ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
2 ಇಲಾಖೆಗಳ ಯಾವ ಜವಾಬ್ದಾರಿ ವರ್ಗಾವಣೆ:ಪರಿಶಿಷ್ಟ ಕಲ್ಯಾಣ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ, ಟೆಂಡರ್​ಗಳ ಪರಿಶೀಲನೆ, ದುರಸ್ತಿ, ಕುಡಿಯುವ ನೀರು ವ್ಯವಸ್ಥೆ, ಶೌಚಗೃಹ, ಗ್ರಂಥಾಲಯ, ವಿದ್ಯಾರ್ಥಿ ವೇತನಕ್ಕೆ ಫಲಾನುಭವಿಗಳ ಗುರುತಿಸುವಿಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ, ನೈರ್ಮಲ್ಯ ಕಾರ್ವಿುಕರಿಗೆ ಉಪಕರಣಗಳ ಪೂರೈಕೆ, ವಸತಿ ಫಲಾನುಭವಿಗಳ ಗುರುತಿಸುವಿಕೆ ಹೀಗೆ ಜವಾಬ್ದಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೇವೆಗಳ ಪಟ್ಟಿ ಪ್ರದರ್ಶನ, ಆರೋಗ್ಯ ಮೇಳಗಳ ಸಂಘಟನೆ, ಸುವರ್ಣ ಆರೋಗ್ಯ ಟ್ರಸ್ಟ್ ಬಗ್ಗೆ ಪ್ರಚಾರ, ಭ್ರೂಣ ಪತ್ತೆ ಸ್ಕಾ್ಯನಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವುದು, ನವಜಾತ ಶಿಶುಗಳ ಮರಣ ಶೂನ್ಯಕ್ಕೆ ತರುವುದು, ಶಾಲಾ ಲಸಿಕೆ, ಕುಟುಂಬ ಯೋಜನೆ ಸೇವೆಯ ಬಗ್ಗೆ ಅರಿವು, ಸ್ಯಾನಿಟರಿ ಪ್ಯಾಡ್ ವಿತರಣೆ, ಆಸ್ಪತ್ರೆಗಳ ದುರಸ್ಥಿ, ಅಂಧತ್ವ ಜಾಗೃತಿ ಹೀಗೆ ವಿವಿಧ ಜವಾಬ್ದಾರಿಗಳು ವರ್ಗಾವಣೆಯಾಗುತ್ತಿವೆ.
ಕೋಟ್ಯಂತರ ರೂ. ಅನುದಾನ:ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕನಿಷ್ಠ 4 ಕೋಟಿ ರೂ.ಗಳಿಂದ ಗರಿಷ್ಠ 12 ಕೋಟಿ ರೂ.ಗಳ ತನಕ ಅನುದಾನ ಲಭ್ಯವಾಗುತ್ತದೆ. ನರೇಗಾ, ಇಂದಿರಾ ಆವಾಸ್, ಜಲಾನಯನ ಹೀಗೆ ವಿವಿಧ ಅನುದಾನಗಳು ಸಿಗುತ್ತವೆ. ಜನಸಂಖ್ಯೆ, ಹಿಂದುಳಿದಿರುವಿಕೆ ವಿವಿಧ ಮಾನದಂಡಗಳಡಿಯಲ್ಲಿ ಅನುದಾನ ಲಭ್ಯವಾಗುತ್ತದೆ. ನಗರಗಳಿಗೆ ಹೊಂದಿಕೊಂಡಂತೆ ಇರುವ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುತ್ತದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಗಳಿಗೆ ಕನಿಷ್ಠ 50 ಕೋಟಿ ರೂ.ಗಳು ತೆರಿಗೆಯಲ್ಲಿಯೇ ಲಭ್ಯವಾಗುತ್ತದೆ.
ಬರಲಿದೆ ರೇಟಿಂಗ್ ವ್ಯವಸ್ಥೆ:ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಆದರೆ ಕೆಲಸ ಆಗುತ್ತಿಲ್ಲ. ಅನೇಕ ವಿಷಯಗಳಲ್ಲಿ ಗ್ರಾಮ ಪಂಚಾಯಿತಿಗಳು ಹಿಂದುಳಿದಿವೆ. ಅವುಗಳನ್ನು ಸುಧಾರಣೆ ಮಾಡುವುದಕ್ಕೆ ಸಂಬಂಧಿಸಿದಂತೆ 20 ಅಂಶಗಳ ರೇಟಿಂಗ್ ಮಾಡಲಾಗುತ್ತದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕುಡಿಯುವ ನೀರು, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ 20 ವಿಷಯಗಳನ್ನು ಆಯ್ಕೆ ಮಾಡಿ 6024 ಗ್ರಾಮ ಪಂಚಾಯಿತಿಗಳಲ್ಲಿಯೂ ರೇಟಿಂಗ್ ಮಾಡಲಾಗುತ್ತದೆ. ಯಾವ ವಿಷಯದಲ್ಲಿ ಯಾವ ಪಂಚಾಯಿತಿ ಹಿಂದುಳಿದಿದೆ ಎಂಬುದನ್ನು ಲೆಕ್ಕ ಹಾಕುವ ಮೂಲಕ ಆ ಪಂಚಾಯಿತಿಯನ್ನು ವಿಶೇಷ ಗಮನ ನೀಡುವ ಮೂಲಕ ಸುಧಾರಿಸುವ ಪ್ರಯತ್ನ ಮಾಡಲಾಗುತ್ತದೆ.
ಶೀಘ್ರ ಜಿಲ್ಲಾ ಯೋಜನಾ ಮಂಡಳಿ:ಹಿಂದೆ ಹಳ್ಳಿಗಳಿಗೆ ಏನೇನು ಯೋಜನೆ ಬೇಕು ಎಂಬುದನ್ನು ಗ್ರಾಮಗಳಲ್ಲಿ ಸಿದ್ಧಪಡಿಸಿ, ತಾಲೂಕು ಪಂಚಾಯಿತಿಗಳ ಮೂಲಕ ಜಿಲ್ಲಾ ಯೋಜನಾ ಮಂಡಳಿಗೆ ರವಾನಿಸಲಾಗುತ್ತಿತ್ತು. ಆದರೆ ಈಗ ಜಿಲ್ಲಾ ಯೋಜನಾ ಮಂಡಳಿಗಳೇ ಇಲ್ಲ. ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಶೀಘ್ರ ಜಿಲ್ಲಾ ಯೋಜನಾ ಮಂಡಳಿ ರಚನೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಗ್ರಾಮ ಸ್ವರಾಜ್ ಕಾಯ್ದೆಯ ತಿದ್ದುಪಡಿ ಇಲಾಖೆಗಳಿಗೆ ಅರ್ಥವಾಗಿರಲಿಲ್ಲ. ಸಾಕಷ್ಟು ಸಭೆಗಳನ್ನು ನಡೆಸುವ ಮೂಲಕ ಅರ್ಥ ಮಾಡಿಸಲಾಗಿದೆ. ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಅಧಿಕಾರ ಹಸ್ತಾಂತರಕ್ಕೆ ಮುಖ್ಯ ಕಾರ್ಯದರ್ಶಿ ಅವರಿಗೂ ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಆ ಕಾರ್ಯ ನಡೆಯಲಿದೆ.
| ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ
ಅಭಿವೃದ್ಧಿ ನಕ್ಷೆಯ ಮೂಲಕ ಅಧಿಕಾರ ಹಸ್ತಾಂತರವಾದರೆ ನಮ್ಮ ರಾಜ್ಯ ಕೇರಳಕ್ಕಿಂತ ಮುಂದಿರುತ್ತದೆ. ಏಕೆಂದರೆ ನಮ್ಮಲ್ಲಿ ಕಾಯ್ದೆ ಬಲವಾಗಿದೆ. ಮುಖ್ಯಮಂತ್ರಿಗಳು ಪಂಚಾಯಿತಿಗಳನ್ನು ಬಲ ಪಡಿಸುವ ವಿಚಾರದಲ್ಲಿ ಆಸಕ್ತರಾಗಿದ್ದಾರೆ.
| ಪ್ರಮೋದ್ ಹೆಗಡೆ ಉಪಾಧ್ಯಕ್ಷ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + one =
Remember me
