| ಕೀರ್ತಿನಾರಾಯಣ ಸಿ. ಬೆಂಗಳೂರು
ಸರ್ಕಾರದ ಅನುಮತಿ ಇಲ್ಲದೆಯೇ 9,154 ಆಟೋರಿಕ್ಷಾ ‘ರಹದಾರಿ’ಗಳನ್ನು (ಸಂಚಾರ ಪರ್ವಿುಟ್) ಅಕ್ರಮವಾಗಿ ವಿತರಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ತಲಾ ಪರ್ವಿುಟ್​ಗೆ 20 ರಿಂದ 30 ಸಾವಿರ ರೂ.ವರೆಗೆ ಹಣ ಪಡೆದು ಅಕ್ರಮವಾಗಿ ವಿತರಿಸಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಕಾರ್ಯದರ್ಶಿ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ನಗರಕ್ಕೆ ಸೀಮಿತವಾಗಿ 2018ರ ನಂತರ ಸರ್ಕಾರ 1.55 ಲಕ್ಷ ಪರ್ವಿುಟ್​ಗಳನ್ನು ಕೊಡಲು ಅನುಮತಿಸಿತ್ತು. ಆದರೆ, 2023 ನ.3ರ ಅಂತ್ಯಕ್ಕೆ 1,64,154 ಪರ್ವಿುಟ್ ವಿತರಿಸಲಾಗಿದೆ. ಅಂದರೆ ಬಿಡುಗಡೆ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ 9,154 ರಹದಾರಿಗಳನ್ನು ವಿತರಣೆ ಮಾಡಿರುವುದು ಇಲಾಖೆ ಪರಿಶೀಲನೆಯಲ್ಲಿ ಬಯಲಾಗಿದೆ. ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2023 ನ.3ರ ಅಂತ್ಯಕ್ಕೆ 1,34,167 ರಹದಾರಿಗಳು ಗಣಕೀಕೃತಗೊಂಡಿವೆ.
2018ರಲ್ಲಿ ಅನುಮತಿ ನೀಡಲಾಗಿದ್ದ 25,000 ಪರ್ವಿುಟ್​ಗಳಲ್ಲಿ 2500 ವಿತರಣೆಯಾಗದೆ ಉಳಿದಿವೆ. ಇನ್ನು 5 ವರ್ಷಕ್ಕೂ ಹೆಚ್ಚು ಅವಧಿ ಮೀರಿರುವ ನೋಟಿಸ್ ಕೊಟ್ಟು ರದ್ದುಗೊಳಿಸಿರುವ 22,487 ರಹದಾರಿಗಳನ್ನು ಹೊಸ ವಾಹನಗಳಿಗೆ ಕೊಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದಾರೆ. 5,000 ಎಲೆಕ್ಟ್ರಿಕ್ ಮತ್ತು ಮಹಿಳಾ ಪಿಂಕ್ ಆಟೋಗಳಿಗೆ ಪರ್ವಿುಟ್​ಗಳನ್ನು ನೀಡಲಾಗಿದೆ. ಇವೆಲ್ಲವನ್ನು ಲೆಕ್ಕ ಹಾಕಿದರೆ 1,64,154 ಆಟೋ ಪರ್ವಿುಟ್​ಗಳು ವಿತರಣೆಯಾಗಿವೆ. ಹೆಚ್ಚುವರಿಯಾಗಿರುವ ವಿತರಣೆಯಾಗಿರುವ 9,154 ಪರ್ವಿುಟ್​ಗಳಿಗೆ ಸರ್ಕಾರದ ಅನುಮತಿ ಹಾಗೂ ಜಿಲ್ಲಾಧಿಕಾರಿಗಳ ಒಪ್ಪಿಗೆಯೇ ಇಲ್ಲವೆಂಬ ಸಂಗತಿ ಬಹಿರಂಗವಾಗಿದೆ.
ಆಟೋಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲೇ (ಆರ್​ಟಿಒ) ನೋಂದಣಿ ಸಂಖ್ಯೆ ಕೊಡಲಾಗುತ್ತದೆ. ಆದರೆ, ಸಂಚರಿಸುವ ರಹದಾರಿ ಅನುಮತಿ ಕೊಡಲು ಶಾಂತಿನಗರದಲ್ಲಿ ಪ್ರತ್ಯೇಕ ಆರ್​ಟಿಒ (ಕೆಎ-57) ಕಚೇರಿ ಇದೆ. ಈ ಮೊದಲು ಪ್ರತಿ ಆರ್​ಟಿಒ ಕಚೇರಿಗೆ ಇಂತಿಷ್ಟು ಪರ್ವಿುಟ್ ಕೊಡುವ ವ್ಯವಸ್ಥೆ ಇತ್ತು. ಆದರೆ, ಅಕ್ರಮ ನಿಯಂತ್ರಿಸಲು ಪ್ರತ್ಯೇಕ ಕಚೇರಿ ಆರಂಭಿಸಲಾಗಿತ್ತು. ಆದರೀಗ ಅದೇ ಆರ್​ಟಿಒದಲ್ಲೇ ಗೋಲ್‍ಮಾಲ್ ನಡೆದಿದೆ. 2023 ನವೆಂಬರ್​ಗೆ ಮುನ್ನ ಕೆಲಸ ಮಾಡಿದ್ದ ಮೂವರು ಆರ್​ಟಿಒಗಳ ಅವಧಿಯಲ್ಲಿ ಅಕ್ರಮ ನಡೆದಿದೆ. ಮೂವರಲ್ಲಿ ಒಬ್ಬರು ನಿವೃತ್ತಿಯಾಗಿದ್ದು, ಅವರ ಅವಧಿಯಲ್ಲೇ ಹೆಚ್ಚು ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಇನ್ನಿಬ್ಬರು ಬೇರೆ ಕಚೇರಿಗಳಿಗೆ ವರ್ಗಾವಣೆಯಾಗಿದ್ದಾರೆ.
ನಿಯಮವೇನು?
– ಬೆಂಗಳೂರು ನಗರಕ್ಕೆ ಸೀಮಿತವಾಗಿ ವಾರ್ಷಿಕ ಇಂತಿಷ್ಟು ಆಟೋ ಪರ್ವಿುಟ್​ಗಳನ್ನು ವಿತರಿಸಲು ಸರ್ಕಾರ ಅನುಮತಿ ನೀಡಿ, ಬಿಡುಗಡೆ ಮಾಡುತ್ತದೆ.
– ಆರ್​ಟಿಒ ಅಧಿಕಾರಿಗಳು ವಿತರಣೆ ಮಾಡುವ ಮುನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮುಂದೆ ಮಂಡಿಸಿ, ಅವರ ಆದೇಶದ ನಂತರ ವಿತರಣೆ ಮಾಡಬೇಕು.
ಅಕ್ರಮಕ್ಕೆ ಕಡಿವಾಣ ಹೇಗೆ?
– ವಾಹನಗಳ ರಿಜಿಸ್ಟ್ರೇಷನ್ ನಂಬರ್ ಮಾದರಿಯಲ್ಲಿ ಆಟೋ ಪರ್ವಿುಟ್​ಗಳ ವಿತರಣೆಗೆ ಕ್ರಮಬದ್ಧ ವ್ಯವಸ್ಥೆ ಜಾರಿಗೆ ತರಬೇಕು.
– ವಾಹನ್-4 ತಂತ್ರಾಂಶದಲ್ಲಿ ಆಟೋ ಪರ್ವಿುಟ್ ವಿತರಣೆಯನ್ನೂ ಜೋಡಣೆ ಮಾಡಿ, ಪ್ರತಿಯೊಂದು ಪರ್ವಿುಟ್​ಗೂ ಸೀರಿಯಲ್ ನಂಬರ್ ಕೊಡಬೇಕು.
– ಒಮ್ಮೆ ವಿತರಣೆಯಾದ ಪರ್ವಿುಟ್ ಅನ್ನು ಮತ್ತೆ ನಕಲು ಮಾಡಿದರೆ ಎಚ್ಚರಿಸುವಂತಹ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕು.
22,000 ಪರ್ವಿುಟ್ ರದ್ದು:ಆಟೋ ಪರ್ವಿುಟ್ (ರಹದಾರಿ) ಪಡೆದ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ಹಾಗೂ 5 ವರ್ಷಕ್ಕಿಂತ ಹೆಚ್ಚು ಅವಧಿಗೆ ರಹದಾರಿ ನವೀಕರಣಗೊಳಿಸದ 22,487 ಪರ್ವಿುಟ್​ಗಳನ್ನು ಸಾರಿಗೆ ಇಲಾಖೆ ರದ್ದುಪಡಿಸಿ, ಹೊಸ ವಾಹನಗಳಿಗೆ ಮರು ಮಂಜೂರು ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ.
ಅಕ್ರಮ ಹೇಗೆ?
1) ಆಟೋ ಪರ್ವಿುಟ್ ವಿತರಣೆಗೆ ಕ್ರಮಬದ್ಧ ವ್ಯವಸ್ಥೆ ಇಲ್ಲದಿರುವುದು ಅಕ್ರಮಕ್ಕೆ ಅವಕಾಶ
2) ಒಂದೇ ವಾಹನ, ಒಬ್ಬನೇ ಚಾಲಕನ ಹೆಸರಲ್ಲೇ 2-3 ಪರ್ವಿುಟ್ ವಿತರಣೆ
3) ಒಂದು ಪರ್ವಿುಟ್​ಗೆ 20 ರಿಂದ 30 ಸಾವಿರ ರೂ. ಲಂಚ ಪಡೆದ ಆರೋಪ
4) ಅಕ್ರಮದಲ್ಲಿ ಮಧ್ಯವರ್ತಿಗಳ ಪಾತ್ರ ಪ್ರಮುಖ ವಾಗಿದ್ದು, ಅವರಿಂದಲೇ ಡೀಲ್ ಆರೋಪ
5) ಹಳೇ ಪರ್ವಿುಟ್ ಸರೆಂಡರ್ ಮಾಡಿ, ಇನ್ನೊಂದು ವಾಹನಕ್ಕೆ ರಿನೀವಲ್ ಮಾಡಿಸ ಬೇಕು. ಆದರೆ, ಸರೆಂಡರ್ ಮಾಡದೆ ಅಕ್ರಮ.
6)  ಒಂದೇ ಪರ್ವಿುಟ್ ಅನ್ನು ಹಲವು ಬಾರಿ ವಿತರಿಸುವ ಅಕ್ರಮವನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಜಾರಿಗೆ ತರದ ಆರೋಪ.
1. 1.55 ಲಕ್ಷ ಪರ್ವಿುಟ್​ಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ
2. ಪರಿಶೀಲನೆಯಲ್ಲಿ 1,64,154 ರಹದಾರಿ ವಿತರಣೆ ಪತ್ತೆ
3. ಹೆಚ್ಚುವರಿ ಪರ್ವಿುಟ್ ವಿತರಣೆ ವಿರುದ್ಧ ಲೋಕಾಗೆ ದೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eight =
Remember me
