ಭಗವಂತನು ಭೂಮಿಗೆ ರಾಜ, ಋಷಿ, ಸಾಧು, ಸಂತ, ಬ್ರಾಹ್ಮಣ, ಅವಧೂತನಾಗಿ, ಜಗತ್ತಿನ ಅಜ್ಞಾನ ನಿವಾರಿಸಲು ಜನ್ಮ ತಳೆದು ಬಂದಿದ್ದಾನೆ. ಅಂತಹ ಸಹಸ್ರಾವಧಿ ದೇವಮಾನವರಲ್ಲಿ, ನಡೆದಾಡುವ ದೇವರಲ್ಲಿ ನಮ್ಮ ಸಖರಾಯಪಟ್ಟಣದ ಶ್ರೀವೆಂಕಟಾಚಲ ಅವಧೂತರೂ ಒಬ್ಬರು. ಕುಲದೈವ ಶ್ರೀ ವೆಂಕಟೇಶ್ವರರ ಆರಾಧನೆಯ ಫಲವಾಗಿ ಸಖರಾಯಪಟ್ಟಣದ ಸಾತ್ವಿಕ, ಆಧ್ಯಾತ್ಮಿಕ ಸಾಧನಾ ದಂಪತಿಗಳಾದ ಶ್ರೀನಿವಾಸಯ್ಯ ಮತ್ತು ಶಾರದಮ್ಮನವರ ಮಗ ವೆಂಕಟಾಚಲರ ಜನನವಾಯಿತು. ಬಾಲ್ಯದಿಂದಲೇ ಧ್ರುವನ ಕಥೆ ಕೇಳುತ್ತ ಬೆಳೆದವರು. ಬಾಲ್ಯದಲ್ಲಿಯೇ ಶ್ರೀಕೋಮಾರನಹಳ್ಳಿಯ ಶಂಕರಲಿಂಗ ಭಗವಾನರ ಸಂಪೂರ್ಣ ಅನುಗ್ರಹ, ಆಶೀರ್ವಾದ ಇವರಿಗೆ ಲಭ್ಯವಾಗಿತ್ತು. ಚಂದ್ರಶೇಖರ ಭಾರತಿ ಮಹಾಸ್ವಾಮಿಗಳನ್ನು ಬಾಲ್ಯದಲ್ಲಿಯೇ ಕಂಡು ಆಶೀರ್ವಾದ ಪಡೆದುಕೊಂಡವರು.
ತಂದೆಯ ಅಕಾಲಿಕ ಮರಣದಿಂದಾಗಿ ವೆಂಕಟಾಚಲರು ವಿದ್ಯಾಭ್ಯಾಸ ಮೊಟಕುಗೊಳಿಸಿ ಕೃಷಿಕಾರ್ಯದಲ್ಲಿ ನಿರತರಾದರು. ಗೃಹಸ್ಥಾಶ್ರಮ ಸ್ವೀಕರಿಸಿ ಪದ್ಮಾವತಿಯೊಂದಿಗೆ ಲೌಕಿಕ ಜೀವನ ಪ್ರಾರಂಭಿಸಿದರಾದರೂ ಇವರ ಮನಸ್ಸು ಯಾವಾಗಲೂ ಸತ್ಯಾನ್ವೇಷಣೆಯಲ್ಲಿ ತೊಡಗಿಕೊಂಡಿತ್ತು. ನಿರಾಡಂಬರದ ಜೀವನ, ನೆರೆಹೊರೆ ಮತ್ತು ಬಂಧುಬಳಗದೊಂದಿಗೆ ಸಹಜವಾಗಿ ಬದುಕುವುದು, ಯಾರೊಂದಿಗೂ ದ್ವೇಷ, ಅಸೂಯೆ ಮಾಡದೆ, ಯಾರ ಮನಸ್ಸನ್ನೂ ನೋಯಿಸದಿರುವುದೇ ಭಗವಂತನ ಸೇವೆ ಎಂದು ನಂಬಿದ್ದರು.
ತಾವು ಮಾಡುವ ನೌಕರಿ ಅಥವಾ ವ್ಯವಹಾರದಲ್ಲಿ ಮೋಸ ಮಾಡದಿರುವುದೇ ಉತ್ತಮ ಜೀವನ. ಅದರಲ್ಲಿಯೇ ಭಗವಂತನ ಕೃಪೆ ದೊರೆತು ನಮ್ಮ ಕಲ್ಯಾಣವಾಗುವುದು ಎಂದು ಜನರಿಗೆ ತಿಳಿಸುತ್ತಿದ್ದರು. ಜನರು ಇವರನ್ನು ‘ಗುರುನಾಥರು’ ಎಂದು ಪ್ರೇಮದಿಂದ ಕರೆಯುತ್ತಿದ್ದರು, ಇವರು ಸಖರಾಯಪಟ್ಟಣದಲ್ಲಿ ಯಾವ ಜಾಗೆಯಲ್ಲಿ ಇದ್ದಾರೆ ಎಂದು ಕಂಡುಹಿಡಿಯುವುದೇ ನಿಗೂಢವಾಗಿತ್ತು. ಇದ್ದ ಜಾಗದಿಂದ ಒಂದೇ ಕ್ಷಣದಲ್ಲಿ ಮಾಯವಾಗುತ್ತಿದ್ದರು. ಶೃಂಗೇರಿ, ಶ್ರೀಕ್ಷೇತ್ರ ಆನಂದವನ ಅಗಡಿ ಮತ್ತು ಕೋಮಾರನಹಳ್ಳಿ ಗುರುನಾಥರು ಅತ್ಯಂತ ಪ್ರೇಮಿಸುತ್ತಿದ್ದ ಕ್ಷೇತ್ರಗಳು.
‘ಗುರುವಿನ ಕೃಪೆ ಪಡೆಯಲು ನಾವು ಅವನಿಗೆ ಯಾವಾಗಲೂ ದೀನನಾಗಿ, ಶರಣಾಗತ ಭಾವದಿಂದ ನಡೆದೂಕೊಳ್ಳಬೇಕು. ನಮ್ಮ ಶುದ್ಧ ಅಂತಃಕರಣದಿಂದ ಮಾತ್ರ ಗುರುವಿನ ಕೃಪೆ ದೊರೆಯುವುದು’ ಎಂದು ವೆಂಕಟಾಚಲರು ಹೇಳುತ್ತಿದ್ದರು. ಎಂತಹುದೇ ಕಷ್ಟದಿಂದ ಬರುವ ಜನರನ್ನು ಪ್ರೇಮದಿಂದ ಕುಳ್ಳಿರಿಸಿಕೊಂಡು ಸಮಾಧಾನ ಪಡಿಸಿ ಪರಿಹಾರ ಹೇಳುತ್ತಿದ್ದರು. ಜನರು ಮಾಡಿದ ತಪ್ಪನ್ನು ಜನರ ಮಧ್ಯದಲ್ಲಿಯೇ ಮುಲಾಜಿಲ್ಲದೆ ತಿಳಿಸಿ ಅವರ ಅಧರ್ಮದ ಮಾರ್ಗ ಬಿಡಿಸಿದ ನೂರಾರು ಉದಾಹರಣೆಗಳುಂಟು. ತಂದೆ-ತಾಯಿಯ ಮನ ನೋಯಿಸುವವರನ್ನು ಕಂಡರೆ ಗುರುನಾಥರಿಗೆ ಬಹಳ ಬೇಸರದೊಂದಿಗೆ ಸಿಟ್ಟೂ ಬರುತ್ತಿತ್ತು. ‘ಜೀವಂತವಿದ್ದಾಗ ಪ್ರೇಮ ಮಾಡಿ. ಸತ್ತ ಮೇಲೆ ಶ್ರಾದ್ಧ ಮಾಡಲು ಬಡಿದಾಡಬೇಡಿ’ ಎಂದು ಹೇಳುತ್ತಿದ್ದರು. ವೆಂಕಟಾಚಲ ಗುರುಗಳ ವಿಶೇಷವೆಂದರೆ ಯಾರಿಂದಲೂ ಹಣ ಅಥವಾ ವಸ್ತುಗಳನ್ನು ಸ್ವೀಕರಿಸುತ್ತಿರಲಿಲ್ಲ, ಅಪಾರ ಶಕ್ತಿ ಸಾಮರ್ಥ್ಯ ಹೊಂದಿದ್ದರೂ ನನ್ನಿಂದಲೇ ಈ ಕಾರ್ಯವಾಗಿದೆಯೆಂದು ಎಂದೂ ಬೀಗಿದವರಲ್ಲ.
ಶುಭಕಾರ್ಯಗಳಿಗೆ ಆಮಂತ್ರಣ ನೀಡಲು ಬರುತ್ತಿದ್ದವರಿಗೆ ತಾವೇ ಸ್ವತಃ ಅಮೂಲ್ಯ ಆಭರಣ, ವಸ್ತ್ರ ನೀಡಿರುವ ಉದಾಹರಣೆಯುಂಟು. ಬಂದ ಜನರೊಂದಿಗೆ ಹಾಸ್ಯಭರಿತ ಮಾತುಗಳನ್ನಾಡುತ್ತ ಮುಂದಾಗುವ ಗಂಡಾಂತರವನ್ನು ತಪ್ಪಿಸಿದ್ದುಂಟು, ಹೊರಡುವವರನ್ನು, ‘ಬೇಡ ನಾಳೆ ಹೋಗು’ ಎಂದು ಹೇಳಿ ಉಳಿಸಿಕೊಂಡು ಅವರಿಗೆ ಬರಬಹುದಾಗಿದ್ದ ಆಪತ್ತನ್ನು ದೂರ ಮಾಡಿದ್ದೂ ಉಂಟು. ‘ಶುಭದಿನ, ಶುಭಗಳಿಗೆ’ ಎಂಬ ಸಂಪ್ರದಾಯಕ್ಕೆ ಗುರುಗಳು ತಮ್ಮದೇ ಶೈಲಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. 2010ರ ಆಷಾಢ ಬಹುಳ ಪಂಚಮಿ ಅವರು ಸಗುಣಾವತಾರ ಮುಗಿಸಿದ ದಿನ. ಅಂತಃಕರಣದ ಅನೇಕ ಭಕ್ತರಿಗೆ ಅವರು ಅವತಾರ ಮುಗಿಸುವುದನ್ನು ಮೊದಲೇ ತಿಳಿಸಿದ್ದರು. ಈಗಲೂ ಸಖರಾಯಪಟ್ಟಣದ ಅವರ ವೇದಿಕೆಯ ಮುಂದೆ ಕುಳಿತು ಪ್ರಾರ್ಥಿಸಿದ ನಿವೇದನೆಯನ್ನು ಅವರು ಪೂರ್ಣಗೊಳಿಸುತ್ತಿದ್ದಾರೆ, ಅನೇಕ ಜನರಿಗೆ ಈಗಲೂ ಸ್ವಪ್ನಾವಸ್ಥೆಯಲ್ಲಿ ಬಂದು ಅವರ ಕಷ್ಟಕ್ಕೆ ಪರಿಹಾರ ನೀಡುತ್ತಿದ್ದಾರೆ. ‘ವೆಂಕಟಾಚಲ ಗುರುಗಳು ಈಗ ಎಲ್ಲಿದ್ದಾರೆ?’ ಎಂದರೆ ‘ನಮ್ಮ ನಮ್ಮ ಮನೆಯಲ್ಲಿಯೇ ಇದ್ದಾರೆ. ನಾವು ಮಾಡುವ ಗುರುಸೇವೆಯಲ್ಲಿ ಇದ್ದಾರೆ. ನಾವು ನಡೆದುಕೊಳ್ಳುವ ಸಚ್ಚಾರಿತ್ರ್ಯದ ಸತ್ಯಮಾರ್ಗದಲ್ಲಿಯೇ ಇದ್ದಾರೆ’. ಅವರ ಕೃಪೆ ಪಡೆಯಬೇಕೆಂದರೆ ಅವರು ತಿಳಿಸಿದ ಶ್ರೇಷ್ಠವಾದ ಸಾಧನಾಮಾರ್ಗದಲ್ಲಿ ನಡೆಯುವುದೇ ಸರಳ ಉಪಾಯ.
ಹಾವೇರಿ: ಫೇಸ್​ಬುಕ್ ಯುವತಿ ನಂಬಿ ಬರೋಬ್ಬರಿ 30 ಲಕ್ಷ ರೂ. ಕಳೆದುಕೊಂಡ ಯೋಗ ಶಿಕ್ಷಕ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + seventeen =
Remember me
