ಅರಣ್ಯದಂಚಿನಲ್ಲಿ ಟ್ರೆಂಚ್ ತೆಗೆದು ಬೇಲಿ ಹಾಕಿದರೆ ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಸಾಧ್ಯವಿಲ್ಲ. ಮನುಷ್ಯ ತನ್ನ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾನೆಯೇ ಹೊರತು ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ, ಆ ಹಕ್ಕುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಏನು ಕ್ರಮಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಬೇಕು ಎಂಬ ಅನಿಸಿಕೆ ವನ್ಯಜೀವಿ ಸಂರಕ್ಷಣಾ ತಜ್ಞರದ್ದು. ‘ವಿಶ್ವ ವನ್ಯಜೀವಿ’ ದಿನದಂಗವಾಗಿ ‘ವಿಜಯವಾಣಿ’ ಆಯೋಜಿಸಿದ್ದ ತಜ್ಞರು, ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ಕಾಡಂಚಿನ ಜನರಿಗೆ ತರಬೇತಿಯ ಮೂಲಕ ಅರಿವು:ಮನುಷ್ಯ ತನ್ನ ಮನೆ, ಊರು, ರಾಜ್ಯ ಎಂದು ಹಾಕಿಕೊಂಡಿರುವ ಗಡಿಯಂತೆಯೇ ವನ್ಯಜೀವಿಗಳಲ್ಲಿಯೂ ಪರಿಧಿ ಇರುತ್ತದೆ. ಅದರಲ್ಲೂ ಹುಲಿ, ಚಿರತೆಗಳು ತನ್ನದೇ ಆದ ಗಡಿ ಗುರುತಿಸಿಕೊಂಡಿರುತ್ತವೆ. ಒಂದು ಹುಲಿ ಇರುವ ಪರಿಧಿಯಲ್ಲಿ ಮತ್ತೊಂದು ಹುಲಿ ಬಂದಾಗ ಘರ್ಷಣೆ ಸಂಭವಿಸುತ್ತದೆ. ಈ ಘರ್ಷಣೆಯಲ್ಲಿ ಬಲಿಷ್ಠ ಪ್ರಾಣಿ ಆ ಪರಿಧಿಯಲ್ಲಿಯೇ ಉಳಿದರೆ ದುರ್ಬಲ ಪ್ರಾಣಿ ಕಾಡಿನಿಂದ ಹೊರಬರುತ್ತದೆ. ಕಾಡಂಚಿನಲ್ಲಿ ವಾಸವಾಗಿದ್ದು, ಆಹಾರಕ್ಕಾಗಿ ಮನುಷ್ಯನ ಸಾಕುಪ್ರಾಣಿಗಳಾದ ಹಸು, ಕುರಿ, ಮೇಕೆ ಮೇಲೆ ದಾಳಿ ಮಾಡುತ್ತದೆ. ಕೆಲವೊಮ್ಮೆ ಮನುಷ್ಯನ ಮೇಲೂ ಇಂತಹ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಡೆಯುತ್ತದೆ. ಪ್ರಾಣಹಾನಿಯೂ ಉಂಟಾಗುತ್ತದೆ. ಹಾಗಾಗಿ ಸಂಘರ್ಷವನ್ನು ತಡೆಯಲು ವನ್ಯಜೀವಿಗಳನ್ನು ಹೊಡೆದುರುಳಿಸುವುದು ಕಾರ್ಯಾಚರಣೆಯಲ್ಲಿ ಕೆಲವೊಮ್ಮ ಅನಿವಾರ್ಯವಾಗುತ್ತದೆ. ಆದ್ದರಿಂದ ಸಂಘರ್ಷ ಉಂಟಾದಾಗ ಪ್ರಾಣಹಾನಿ ಮಾಡಿಕೊಳ್ಳುವುದಕ್ಕಿಂತ ಸಂಘರ್ಷವನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಅದಕ್ಕಾಗಿ ಅರಣ್ಯ ಇಲಾಖೆಯಿಂದ ಕಾಡಂಚಿನ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಬಂಡೀಪುರ ಅರಣ್ಯ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಅರಣ್ಯ, ಪರಿಸರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಒಂದು ದಿನ ಅವರನ್ನು ಅರಣ್ಯಕ್ಕೆ ಕರೆಸಿ ಸಫಾರಿ ಮಾಡಿಸಲಾಗುತ್ತದೆ. ಬಳಿಕ ಅರಣ್ಯ, ಕಾಡುಪ್ರಾಣಿಗಳ ಕುರಿತು ಪ್ರಶ್ನೆಗಳನ್ನು ಕೊಟ್ಟು, ಉತ್ತರ ಪಡೆಯಲಾಗುತ್ತಿದೆ. ಇದರಿಂದ ಅರಣ್ಯ ವನ್ಯಜೀವಿಗಳ ಕುರಿತು ವಿದ್ಯಾರ್ಥಿದೆಸೆಯಿಂದಲೇ ಕಾಳಜಿ, ಪ್ರೇಮ ಬೆಳೆಯಲು ಸಹಕಾರಿಯಾಗುತ್ತದೆ. ಎರಡನೇ ಹಂತದಲ್ಲಿ ರೈತರು, ಗ್ರಾಮಸ್ಥರಿಗೆ ತರಬೇತಿ ನೀಡಲಾಗುವುದು.
| ಡಾ.ಪಿ.ರಮೇಶ್​ಕುಮಾರ್ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಸಂರಕ್ಷಣೆ ಯೋಜನೆ ನಿರ್ದೇಶಕ ಬಂಡೀಪುರ
ಎಲ್ಲರಿಗೂ ಬದುಕುವ ಹಕ್ಕಿದೆ:ಪರಿಸರದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ ಮನುಷ್ಯ ತನ್ನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾನೆಯೇ ಹೊರತು ಪ್ರಾಣಿ, ಪಕ್ಷಿಗಳ ಹಕ್ಕುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಚಿಂತಿಸುತ್ತಿಲ್ಲ. ಹೀಗಾಗಿ, ತಮಗೆ ಉಪಟಳವಾಗುತ್ತಿದೆ ಎಂದು ವನ್ಯಜೀವಿಗಳನ್ನು ಕೊಲ್ಲುವ ಅಥವಾ ಅವುಗಳು ಸಂಚರಿಸುವ ದಾರಿಗೆ ಅಡ್ಡಗಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚುವಂತೆ ಮಾಡಿದೆ. ಹಿಂದೆ ಮನುಷ್ಯ ಕಾಡಿನಲ್ಲಿಯೇ ಇದ್ದು ಪ್ರಾಣಿಗಳೊಂದಿಗೆ ಸಹಜೀವನ ನಡೆಸುತ್ತಿದ್ದಂತೆ ಕಾಡಂಚಿನ ಜನರು ಹೊಂದಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಅವುಗಳೊಂದಿಗೆಯೇ ಬದುಕು ಕಂಡುಕೊಳ್ಳಬೇಕಿದೆ.
| ಡಾ.ಸಂತೃಪ್ತ್ ಪರಿಸರವಾದಿ
ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ :ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ನಿಜ. 191 ವಯಸ್ಕ ಹುಲಿಗಳು ಹಾಗೂ 35 ಮರಿ ಹುಲಿಗಳು ಇವೆ. ವಯಸ್ಕ ಹುಲಿಗಳು ಈಗಾಗಲೇ ತಮ್ಮ ಪರಿಧಿ ಗುರುತಿಸಿಕೊಂಡಿದ್ದು, ಅಲ್ಲಿಯೇ ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತಿವೆ. ಆದರೆ 35 ಮರಿ ಹುಲಿಗಳು ಬೆಳೆಯುತ್ತಿದ್ದು, ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿವೆ. ಕಾಳಗದಿಂದ ಈಗಾಗಲೇ ಎರಡು ಮರಿ ಹುಲಿಗಳು ಮೃತಪಟ್ಟಿವೆ. ಒಂದು ರಸ್ತೆ ಅಪಘಾತದಲ್ಲಿ ಸತ್ತಿದೆ. ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟದ ಕಡೆಯಲ್ಲೂ ಇನ್ನೂ 40 ರಿಂದ 50 ಸ್ಥಳಗಳು ಹುಲಿವಾಸಕ್ಕೆ ಯೋಗ್ಯವಾಗಿವೆ. ಆದರೆ ಅವುಗಳು ಅತ್ತ ಚಲಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಬಂಡೀಪುರದಲ್ಲಿ 185 ಚಿರತೆ ಇದ್ದು, 41 ಸಾವಿರ ಜಿಂಕೆ, 87 ಸಾವಿರ ಕಡವೆ, 5 ಸಾವಿರ ಕಾಟೆ ಇನ್ನಿತರ ಪ್ರಾಣಿಗಳು ಇವೆ. ಹಾಗಾಗಿ ಮಾಂಸಾಹಾರ ಪ್ರಾಣಿಗಳಿಗೆ ಆಹಾರ ಸಮಸ್ಯೆ ಇಲ್ಲ ಎಂದು ಬಂಡೀಪುರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್​ಕುಮಾರ್ ಮಾಹಿತಿ ನೀಡಿದರು.
ಪ್ರಾಣಿಗಳಿಗೆ ಯಾವುದೇ ಗಡಿ ಇಲ್ಲ :ಕಾಡುಪ್ರಾಣಿಗಳಿಗೆ ಯಾವುದೇ ಗಡಿ ಇಲ್ಲ. ಅದರ ವ್ಯಾಪ್ತಿ ಒಂದು ಅರಣ್ಯ ಪ್ರದೇಶದಿಂದ ಮತ್ತೊಂದು ಅರಣ್ಯ ಪ್ರದೇಶದವರೆಗೂ ಹರಡಿರುತ್ತದೆ. ನಮ್ಮ ರಾಜ್ಯದ ಆನೆ, ಕೇರಳ, ತಮಿಳುನಾಡಿಗೆ ಹೋಗಬಾರದು ಎಂದರೆ ಅಗುವುದಿಲ್ಲ. ಆನೆಗಳಿಗೆ ವಂಶವಾಹಿನಿಯಾಗಿ ಅವುಗಳು ಓಡಾಡುವ ಜಾಗ ತಿಳಿದಿರುತ್ತದೆ. ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅರಣ್ಯ ಪ್ರದೇಶ ಹಾಗೂ ಆನೆಗಳು ಓಡಾಡುವ ಜಾಗವನ್ನು ಮುಚ್ಚಿ ತನ್ನ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಆದರೂ ಆನೆಗಳು ಓಡಾಡಿದ ಜಾಗದ ಜಾಡು ಹಿಡಿದು ಸುತ್ತಿ, ಬಳಸಿ ಹೋಗುತ್ತವೆ. ಹೀಗೆ ಹೋಗುವಾಗ ಅವುಗಳು ಅನ್ಯಮಾರ್ಗದಲ್ಲಿ ತೆರಳುತ್ತವೆ. ಇದರಿಂದ ಮಾನವ ಬೆಳೆದ ಬೆಳೆ ಸೇರಿದಂತೆ ಅನೇಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುತ್ತದೆ. ಇದಕ್ಕೆ ಪರೋಕ್ಷವಾಗಿ ಮಾನವನೇ ಕಾರಣ. ಆನೆಗಳು ಓಡಾಡುತ್ತಿದ್ದ ಮಾರ್ಗವನ್ನು ಹಾಗೆಯೇ ಬಿಟ್ಟಿದ್ದರೆ ಇಂತಹ ಸಂಘರ್ಷ ಸಂಭವಿಸುತ್ತಿರಲಿಲ್ಲ. ಆದ್ದರಿಂದ ಪ್ರಾಣಿಗಳು, ಓಡಾಡುವ ಜಾಗವನ್ನು ಮುಚ್ಚದೆ, ಅತಿಕ್ರಮಿಸಿಕೊಳ್ಳದೆ ಹಾಗೆಯೇ ಬಿಟ್ಟರೆ ಅವು ಆ ಮಾರ್ಗದಲ್ಲಿ ಸಂಚರಿಸುತ್ತವೆ. ಇದರಿಂದ ಮನುಷ್ಯನಿಗೆ ತೊಂದರೆ ಕೊಡುವುದಿಲ್ಲ ಎನ್ನುವುದನ್ನು ಮನಗಾಣಬೇಕು. ಜನಸಂಖ್ಯೆ ಬೆಳೆದಂತೆ ಮಾನವ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಜೀವನೋಪಾಯಕ್ಕೆ ಕೃಷಿಯಲ್ಲಿ ತೊಡಗುತ್ತಿದ್ದಾನೆ. ಹಿಂದೆ ನಮ್ಮ ಹಿರಿಯರು ಜೋಳ, ರಾಗಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯುತ್ತಿದ್ದರು. ಆದರೆ ಈಗ ಆನೆಗಳು, ಕಾಡುಪ್ರಾಣಿಗಳಿಗೆ ಇಷ್ಟವಾಗುವ ಬೆಳೆ ಬೆಳೆಯುತ್ತಿದ್ದಾನೆ. ಇವುಗಳನ್ನು ತಿನ್ನಲು ಪ್ರಾಣಿಗಳು ಕಾಡಿನಿಂದ ಹೊರಬರುತ್ತಿವೆ. ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಹೊರಬರುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದರೂ ಅದಕ್ಕೆ ವೈಜ್ಞಾನಿಕ ಅಂಕಿ, ಅಂಶಗಳು ಇಲ್ಲ. ಸದ್ಯ ಪ್ರಾಣಿಗಳ ಸಂಖ್ಯೆ ಸಮತೋಲನದಲ್ಲಿದೆ.

| ಕೃಪಾಕರ ಖ್ಯಾತ ವನ್ಯಜೀವಿ ಛಾಯಾಗ್ರಾಹಕ
ಜನರ ವಿಶ್ವಾಸ ಗಳಿಸುವುದು ಮುಖ್ಯ:ಅರಣ್ಯ ಇಲಾಖೆಯ ಯಾವುದೇ ಯೋಜನೆ ಗಳನ್ನು ಜಾರಿಗೊಳಿಸಲು ಮುಖ್ಯವಾಗಿ ಜನರ ಸಹಕಾರ ಅಗತ್ಯ. ಅರಣ್ಯ ಅಧಿಕಾರಿಗಳು ಸ್ಥಳೀಯ ಜನರ ಸಹಕಾರ ಪಡೆಯದಿದ್ದರೆ ಯಾವುದೇ ಯೋಜನೆ ಮಾಡಿದರೂ ಅದು ಸಾಕಾರಗೊಳ್ಳುವುದು ಕಷ್ಟ. ಹಾಗಾಗಿ ಮಾನವ-ವಜ್ಯಜೀವಿಗಳ ಸಂಘರ್ಷವನ್ನು ತಡೆಯಲು ಜನರನ್ನು ಮೊದಲು ಜಾಗೃತಗೊಳಿಸಬೇಕು. ಕಾಡಂಚಿನಲ್ಲಿರುವ ಜಮೀನುಗಳಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಕ್ರಮ ಅನುಸ ರಿಸಬೇಕು ಎನ್ನುವ ತರಬೇತಿ ನೀಡಬೇಕು. ಶಾಲಾ ಹಂತದಲ್ಲಿಯೇ ಅರಣ್ಯದ ಕುರಿತು ಪಠ್ಯವನ್ನು ಸೇರಿ ಸುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಬದ್ಧತೆ ಇರುವವರು ಅಧಿಕಾರದಲ್ಲಿ ಇರಬೇಕು, ಸರ್ಕಾರ ಕೂಡ ಯೋಜನೆಗಳಿಗೆ ಅಗತ್ಯವಾದ ಅನುದಾನ ಬಿಡುಗಡೆಗೊಳಿಸಬೇಕು. ದೀರ್ಘಕಾಲದ ಯೋಜನೆಗಳನ್ನು ಗುಣಮಟ್ಟದಿಂದ ಜಾರಿಗೊಳಿಸುವ ಬದ್ಧತೆ ಬೇಕು. ಅರಣ್ಯದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ.
| ರಾಜಕುಮಾರ್ ಪರಿಸರವಾದಿ
ಅಧಿಕಾರಿಗಳ ಕಾರ್ಯವೂ ಮುಖ್ಯಜನರು ಸಹಕಾರ ನೀಡುತ್ತಿಲ್ಲ ಎಂದು ದೂರುವ ಅರಣ್ಯ ಇಲಾಖೆ ಅಧಿಕಾರಿಗಳು ಪಾರದರ್ಶಕವಾಗಿ, ಬದ್ಧತೆ ಯಿಂದ ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟುವಲ್ಲಿ ಕಾರ್ಯನಿರ್ವಹಿ ಸಬೇಕು. ಅಧಿಕಾರಿ, ಸಿಬ್ಬಂದಿಯಲ್ಲೂ ಕೆಲವೊಮ್ಮೆ ಹೊಂದಾಣಿಕೆ, ಸಮನ್ವಯತೆ ಇರುವುದಿಲ್ಲ. ಜನರನ್ನು ದೂರುವ ಬದಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು ಕಾಟಾಚಾರಕ್ಕೆ ಮಾಡದೆ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಆಗ ಜನರು ಕಾಡನ್ನು ಆಶ್ರಯಿಸದೆ ನಾಡಿನ ಕಡೆಗೆ ಬರುತ್ತಾರೆ.
| ನಾಗಾರ್ಜುನಕುಮಾರ್ , ಸಂಶೋಧನಾ ವಿದ್ಯಾರ್ಥಿ
ಆನೆಗಳಿಗೆ ಕಂಟಕವಾದ ವಿದ್ಯುತ್ ಅವಘಡ ಕಾಡುಗಳ್ಳ, ನರಹಂತಕ ವೀರಪ್ಪನ್ ದಂತಕ್ಕಾಗಿ ಕೊಂದ ಆನೆಗಳಿಗಿಂತ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಆನೆಗಳ ಸಂಖ್ಯೆಯೇ ಅಧಿಕವಾಗಿದೆ. ಕಾಡಂಚಿನಲ್ಲಿ ಹಲವು ಭಾಗ ಒತ್ತುವರಿ ಮಾಡಿಕೊಂಡು ಜಮೀನು ಮಾಡುತ್ತಿರುವ ರೈತರು, ಪ್ರಾಣಿಗಳಿಗೆ ಪ್ರಿಯವಾದ ಆಹಾರದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರಾಣಿಗಳು ಬೆಳೆನಾಶ ಮಾಡುತ್ತವೆ ಎಂದು ಬೇಲಿ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದಾರೆ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಬೇಸರ ವ್ಯಕ್ತಪಡಿಸಿದರು.
ಕಾಡಿನ ಬೆಂಕಿ ತಡೆಯಲು ಕ್ರಮ ಕಾಡಿನ ಬೆಂಕಿ ಪ್ರಕರಣಗಳು ಬಹುತೇಕ ಮಾನವ ದುರುದ್ದೇಶದಿಂದಲೇ ಅಗುತ್ತಿವೆ. ಬೇಸಿಗೆಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಕಾಡಿನ ಬೆಂಕಿ ನಂದಿಸಲು ಇಲಾಖೆ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸಜ್ಜುಗೊಂಡಿದೆ. ಬೆಂಕಿ ಕಾಣಿಸಿಕೊಂಡ 2-3 ಗಂಟೆಯಲ್ಲಿಯೇ ತಹಬದಿಗೆ ತರುವ ಶಕ್ತಿ ಇಲಾಖೆಗೆ ಇದೆ ಎಂದು ಡಾ.ಪಿ.ರಮೇಶ್​ಕುಮಾರ್ ಹೇಳಿದರು.
ನಿರ್ವಹಣೆ: ಎಂ.ಆರ್. ಸತ್ಯನಾರಾಯಣ, ಆರ್​.ಕೃಷ್ಣ, ಕಿರಣ್​ ಮಾದರಹಳ್ಳಿ, ಮಹದೇವಸ್ವಾಮಿ, ಚಿತ್ರಗಳು: ಕೆ.ಎಚ್​. ಚಂದ್ರು
ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
