ಐನೂರೈವತ್ತು ವರ್ಷಗಳ ದೀರ್ಘ ಕಾಯುವಿಕೆ ಕೊನೆಗೊಳ್ಳುವ ಹಂತ ಸಮೀಪಿಸಿದೆ. ಇದೇ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆಯಲಿದೆ. ಈ ನಿಮಿತ್ತ ಇಡೀ ದೇಶ ರಾಮಮಯವಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ಸಂದರ್ಭದಲ್ಲಿ, ಹಿಂದೆ ನಡೆದಿರುವ ಹೋರಾಟಗಳ ಪಾತ್ರ ಸ್ಮರಣೀಯ. ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ 1990ರ ಅಕ್ಟೋಬರ್ 30 ಮತ್ತು 1992ರ ಡಿಸೆಂಬರ್ 6ರ ಕರಸೇವೆಗಳು ನಿರ್ಣಾಯಕ ಪಾತ್ರ ವಹಿಸಿದವು. 1990ರಲ್ಲಿ ಕರಸೇವಕರ ಮೇಲೆ ಗೋಲಿಬಾರ್ ನಡೆದರೆ, 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಧರೆಗುರುಳಿತು. ಈ ಕರಸೇವೆಯಲ್ಲಿ ಪಾಲ್ಗೊಂಡವರು ಅಂದಿನ ಹೋರಾಟದ ಹಾದಿಯನ್ನು ಮೆಲುಕು ಹಾಕುತ್ತ ಏನೆಲ್ಲ ಹೇಳಿದರು ಎಂದು ಇಲ್ಲಿ ವಿವರಿಸಿದ್ದಾರೆ ರವೀಂದ್ರ ಎಸ್. ದೇಶಮುಖ್.
ಗ್ರಾಮಸ್ಥರು ಕಾವಲು ಕಾದರುಕೆ.ಎಸ್. ನಾರಾಯಣ್, ಸುಳ್ಯ (ದಕ್ಷಿಣ ಕನ್ನಡ)
ನಾವು ಪಾಲ್ಗೊಂಡಿದ್ದು 1990ರ ಕರಸೇವೆಯಲ್ಲಿ. ಕಾಶಿಯವರೆಗೆ ಹೋಗಿ, ಅಲ್ಲಿಂದ ಬಸ್ ಮೂಲಕ ಗೋರಖಪುರ ತಲುಪಿದೆವು. ಮತ್ತೆ ಸ್ವಲ್ಪ ದೂರ ಜೀಪ್​ನಲ್ಲಿ ಹೋದ ಬಳಿಕ, ಮುಂದೆ ಕಾಲ್ನಡಿಗೆಯಲ್ಲೇ ಅಯೋಧ್ಯೆ ತಲುಪಬೇಕಿತ್ತು. ಮುಖ್ಯರಸ್ತೆಗಳಲ್ಲಿ ತೆರಳುವಂತಿರಲಿಲ್ಲ, ಅಲ್ಲೆಲ್ಲ ಪೊಲೀಸರ ಬಿಗಿಕಾವಲು. ಹಾಗಾಗಿ, ಗದ್ದೆ, ಗುಡ್ಡ, ಗ್ರಾಮಗಳ ಮುಖೇನ ಸಾಗುತ್ತಿದ್ದವು. ಮೊದಲಿಗೆ, 10-11 ಜನರಿದ್ದ ನಮ್ಮ ತಂಡ ಕ್ರಮೇಣ ಬೆಳೆಯುತ್ತ ನೂರಾರು ಜನರು ಸೇರಿಕೊಂಡರು. ಮೂರು ದಿನದಲ್ಲಿ ನಡೆದದ್ದು 120 ಕಿ.ಮೀ.ಗಿಂತ ಸ್ವಲ್ಪ ಹೆಚ್ಚು. ಆದರೆ, ದಾರಿಯುದ್ದಕ್ಕೂ, ಗ್ರಾಮಸ್ಥರ ಸಹಕಾರ ಮರೆಯಲು ಸಾಧ್ಯವೇ ಇಲ್ಲ. ಯಾವ ರಸ್ತೆಯಲ್ಲಿ ಪೊಲೀಸರು ನಿಯೋಜಿತರಾಗಿದ್ದಾರೆ, ಯಾವ ಮಾರ್ಗದಲ್ಲಿ ಹೋದರೆ ಸೂಕ್ತ ಎಂಬುದನ್ನು ಗ್ರಾಮಸ್ಥರೇ ಹೇಳುತ್ತಿದ್ದರು.
ಈ ಅವಧಿಯಲ್ಲಿ ಎಲ್ಲಿಯೂ ತಿಂಡಿ, ಊಟದ ಸಮಸ್ಯೆಯಾಗಲಿಲ್ಲ. ‘ರಾಮಕಾರ್ಯಕ್ಕೆ ಹೊರಟಿದ್ದೀರಿ, ನಿಮ್ಮ ಸೇವೆ ನಮ್ಮ ಭಾಗ್ಯ’ ಎಂದು ಅಯೋಧ್ಯೆ ಸುತ್ತಮುತ್ತಲಿನ ಹಳ್ಳಿಯವರು ಊಟದ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಇಡೀ ದಿನ ನಾವು ನಡೆದು, ದಣಿದು ರಾತ್ರಿ ಮಲಗಿದ ಸಂದರ್ಭದಲ್ಲಿ ಪೊಲೀಸರು ಬಂದು ಬಂಧಿಸಬಾರದು ಅಥವಾ ಇತರ ಅಹಿತಕರ ಘಟನೆ ನಡೆಯಬಾರದು ಎಂದು, ಕರಸೇವಕರಿಗೆ ಮಲಗಲು ಹೇಳಿ, ಗ್ರಾಮಸ್ಥರು ಇಡೀ ರಾತ್ರಿ ಕಾವಲು ಕಾಯುತ್ತಿದ್ದರು. ರಾತ್ರಿ ಪೊಲೀಸ್ ವಾಹನಗಳು ಬರಬಾರದೆಂದು ಗ್ರಾಮ ಪ್ರವೇಶಿಸುವ ರಸ್ತೆಯನ್ನೇ ಅಗೆದುಬಿಡುತ್ತಿದ್ದರು!
ಧನ್ಯತೆ ಮೂಡಿಸಿದ ಕ್ಷಣವೆಂದರೆ, ವಯೋವೃದ್ಧರು ಕೂಡ, ಆಗ ತರುಣರಾಗಿದ್ದ ನಮಗೆ ಬಂದು ನಮಸ್ಕರಿಸುತ್ತಿದ್ದರು. ‘ಈ ಕೆಲಸ (ರಾಮನ ಕಾರ್ಯ) ನಾವು ಮಾಡಬೇಕಾಗಿತ್ತು. ನಮ್ಮಿಂದಾಗಲಿಲ್ಲ. ನೀವಾದರೂ ಮಾಡುತ್ತಿದ್ದೀರಲ್ಲ’ ಎಂದು ಧನ್ಯತೆಯಿಂದ ಅವರು ನಮಸ್ಕರಿಸುವಾಗ ರೋಮಾಂಚನವಾಗುತ್ತಿತ್ತು. ಪ್ರತಿ ಹಳ್ಳಿಯಲ್ಲೂ ದೊರೆತ ಜನರ ಪ್ರೀತಿ ಅನನ್ಯ. ರಾಮಭಕ್ತರನ್ನು ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದು.
ಅಕ್ಟೋಬರ್ 29ರಂದು ಅಯೋಧ್ಯೆಗೆ ತೀರಾ ಸಮೀಪವಿರುವ ಮಾವಿನ ತೋಪುಗಳಲ್ಲಿ ವಾಸ್ತವ್ಯ ಹೂಡಿದೆವು. ಅಂದು ರಾತ್ರಿ ನಮ್ಮನ್ನು ಪೊಲೀಸರು ಸುತ್ತುವರಿದರು. ಆದರೆ, ಅವರ ಸಂಖ್ಯೆ ಕಡಿಮೆ, ಕರಸೇವಕರ ಸಂಖ್ಯೆ ಜಾಸ್ತಿ ಇದ್ದಿದ್ದರಿಂದ ನಮ್ಮನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಒಂದಿಷ್ಟು ದೂರ ಹೋದಂತೆ, ಅಯೋಧ್ಯೆಯ ಜನರು ಸಿಹಿ ಹಂಚುತ್ತಿದ್ದ ಸುದ್ದಿ ಬಂತು. ಅದೇ ದಿನ ವಿವಾದಿತ ಕಟ್ಟಡದ ಬೀಗ ತೆರೆಯಲಾಗಿತ್ತು. ಆದರೆ, ಮುಂದೆ ಕೆಲ ಸಮಯದಲ್ಲೇ ಪೊಲೀಸರು ಕರಸೇವಕರ ಮೇಲೆ ಆಶ್ರುವಾಯು ಪ್ರಯೋಗಿಸಿದರು. ಅದರಿಂದ ರಾಮಭಕ್ತರಿಗೆ ಹಾನಿಯಾಗಬಾರದೆಂದು ಸ್ಥಳೀಯರು ಮನೆಗಳ ಮೇಲೆ ನಿಂತು ನೀರು ಸುರಿಯುತ್ತಿದ್ದರು. ಲಾಠಿ ಪ್ರಹಾರವಾಯಿತು. ಗೋಲಿಬಾರ್​ಗೆ ಕೊಠಾರಿ ಸೋದರರು ಹುತಾತ್ಮರಾದ ದುಃಖಕರ ಸುದ್ದಿ ಬಂದ ಬಳಿಕ, ನಮ್ಮ ತಂಡವನ್ನು ಅಯೋಧ್ಯೆ ಪ್ರವೇಶಿಸದಂತೆ ತಡೆಯಲಾಯಿತು. ಆದರೆ, ಒಂದು ವಾರ ಕಾಲ ಅಯೋಧ್ಯೆ ಹೊರವಲಯದಲ್ಲಿ ಉಳಿದುಕೊಂಡು, ಪರಿಸ್ಥಿತಿ ತಿಳಿಯಾದ ಬಳಿಕವೇ ಬಾಲರಾಮನ ದರ್ಶನ ಪಡೆದು ಊರುಗಳಿಗೆ ಮರಳಿದೆವು.

ಟಿ.ಸಿ.ಯೇ ದುಡ್ಡು ಕೊಟ್ಟು, ಜೈಶ್ರೀರಾಮ್ ಎಂದರು!ಅರವಿಂದ ಹುಣಸಗಿ, ಬೆಂಗಳೂರು
ಅಯೋಧ್ಯೆಯ ವಿವಾದಿತ ಕಟ್ಟಡ ನಮ್ಮ ಕಣ್ಣೆದುರೇ ಧ್ವಂಸಗೊಂಡ ಕ್ಷಣಗಳಿಗೆ ಸಾಕ್ಷಿಯಾದೆವು. 1992 ಡಿಸೆಂಬರ್ 1ರಂದೇ ಅಯೋಧ್ಯೆ ತಲುಪಿದ್ದೆವು. ರೈಲಿನಲ್ಲಿ ಸಾವಿರಾರು ಕರಸೇವಕರು ಇದ್ದರು; ವಿಶೇಷ ರೈಲುಗಳಾಗಿದ್ದರಿಂದ ಬಹುತೇಕರು ಟಿಕೆಟ್ ಪಡೆದಿರಲಿಲ್ಲ. ನಾನು ಮತ್ತು ನನ್ನ ಸ್ನೇಹಿತರೊಬ್ಬರು ಟಿಕೆಟ್ ತೆಗೆಸಿದ್ದೆವು. ಟಿಕೆಟ್ ಕಲೆಕ್ಟರ್ ಬಂದು, ಅದನ್ನು ಪರಿಶೀಲಿಸಿದರು. ಆದರೆ, ಸೋಲಾಪುರ ನಿಲ್ದಾಣ ಬರುತ್ತಿದ್ದಂತೆ ಆ ಟಿಸಿ ನಮ್ಮನ್ನು ಕರೆದು, ನಿಲ್ದಾಣದಲ್ಲಿ ಪ್ರೀತಿಯಿಂದ ಚಹಾ ಕೊಡಿಸಿದರು. ಮತ್ತು ‘ನೀವು ರಾಮನ ಕಾರ್ಯಕ್ಕೆ ಹೋಗುತ್ತಿದ್ದೀರಿ ಟಿಕೆಟ್ ಬೇಕಿಲ್ಲ’ ಎಂದು ಹೇಳಿ, ಆ ಟಿಕೆಟ್ ರದ್ದು ಮಾಡಿ, ಆ ದುಡ್ಡನ್ನು ನಮ್ಮ ಕೈಗಿತ್ತರು. ಅಷ್ಟೇ ಅಲ್ಲ, ಅವರ ಜೇಬಿಂದ 200 ರೂಪಾಯಿ ತೆಗೆದುಕೊಟ್ಟು, ಇದನ್ನು ರಾಮನಿಗೆ ಸಮರ್ಪಿಸಿಬಿಡಿ ಎಂದು ಹೇಳಿ, ‘ಜೈಶ್ರೀರಾಮ್ ಎಂದರು. ಆಶ್ಚರ್ಯ ಎಂದರೆ, ಡಿ. 6ರಂದು ವಿವಾದಿತ ಕಟ್ಟಡದ ಗುಂಬಜ್​ಗಳು ಬಿದ್ದ ಮೇಲೂ ಎಷ್ಟೋ ಹೊತ್ತಿನವರೆಗೆ ಆತಂಕ, ಉದ್ವಿಗ್ನತೆ ಕಾಣಲಿಲ್ಲ. ಅಯೋಧ್ಯೆಯನ್ನು ಮಿಲಿಟರಿ ತಮ್ಮ ವಶಕ್ಕೆ ತೆಗೆದುಕೊಂಡಿತು. ಸೇನೆಯ ಒಬ್ಬ ಅಧಿಕಾರಿ, ‘ನೀವು ಬಂದ ಕೆಲಸ (ಕರಸೇವೆ) ಆಯಿತಲ್ಲ, ಇನ್ನು ವಿಳಂಬ ಮಾಡಬೇಡಿ. ಹೊರಡಿ’ ಎಂದರು. ಆದರೆ, ನಾವು ಬೆಳಗ್ಗೆ ಹೋಗುತ್ತೇವೆ ಎಂದು ತಿಳಿಸಿದೆವು. ಅಂದು ಬೆಳಗ್ಗೆ ಆರಂಭವಾಗಿದ್ದ ಕರಸೇವೆ ಮುಗಿಯುವಾಗ ಸಂಜೆ ಕಳೆದಿತ್ತು. ಇಡೀ ದಿನ ಊಟ, ತಿಂಡಿ ಇಲ್ಲ, ಎಲ್ಲಿ ತೆರಳಬೇಕು ಎಂಬುದು ಗೊತ್ತಿಲ್ಲ. ಕರಸೇವೆಗೆ ನನ್ನ ಜತೆಗೆ ನನ್ನ 10 ವರ್ಷದ ಮಗ ಶಶಾಂಕ್ ಕೂಡ ಬಂದಿದ್ದ. ಪೊಲೀಸರು ಆ ಮಗುವನ್ನು ನೋಡಿ, ಮೌನವಾದರು. ಪರಿಣಾಮ, ಪೊಲೀಸರು ತಾವು ತಂದಿದ್ದ ಊಟವನ್ನೇ ನಮಗೆ ನೀಡಿ, ಉಪಚರಿಸಿದರು. ಮರುದಿನ ನಸುಕಿನ ಜಾವ ನಾವು ಅಯೋಧ್ಯೆಯಿಂದ ಊರಿಗೆ ಮರಳಿದೆವು.
ಯೋಧರು ಸೆಲ್ಯೂಟ್ ಹೊಡೆದಾಗಡಾ.ಸುರೇಶ ಹೇರೂರ್, ಕಲಬುರಗಿ
ಕರಸೇವೆಗೆ ಹೊರಡಲು ಸಿದ್ಧನಾಗಿದ್ದೆ. ಮನೆಯಲ್ಲಿ ಬೇರೆಯದ್ದೇ ವಾತಾವರಣ. ನನ್ನ ಮದುವೆಗೆ ಹೆಣ್ಣು ನೋಡುತ್ತಿದ್ದರು. ಆದರೆ, ತುಂಬ ಸ್ಪಷ್ಟವಾಗಿ ಹೇಳಿಬಿಟ್ಟೆ, ‘ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣ ಆಗುವವರೆಗೂ ಮದುವೆಯಾಗುವುದಿಲ್ಲ, ಇದು ನನ್ನ ಸಂಕಲ್ಪ’ ಎಂದು. ಹಾಗಾಗಿ, ಈಗಲೂ ಅವಿವಾಹಿತನಾಗಿಯೇ ಉಳಿದುಕೊಂಡಿದ್ದೇನೆ. ಈ ಸಂಕಲ್ಪ ಕೈಗೊಂಡ ಬಳಿಕ ಮನೆಯವರು ಅನಿವಾರ್ಯವಾಗಿ ನನ್ನನ್ನು ಬೀಳ್ಕೊಟ್ಟರು. ಆದರೆ, ಪ್ರಯಾಣದಲ್ಲಿ ವ್ಯತ್ಯಾಸವಾಗಿ ನಾನು ಆಂಧ್ರಪ್ರದೇಶ ಮತ್ತು ಕೇರಳ ಕಾರ್ಯಕರ್ತರ ತಂಡದೊಂದಿಗೆ ಹೈದರಾಬಾದ್​ನಲ್ಲಿ ಅಯೋಧ್ಯೆಗೆ ಹೋಗಲು ರೈಲು ಹತ್ತಿದೆ. ಕೇರಳದಿಂದ ಎರಡು ಸಾವಿರಕ್ಕೂ ಅಧಿಕ ತರುಣರು ಬಂದಿದ್ದರು. ಡಿಸೆಂಬರ್ 6ರಂದು ಬೆಳಗ್ಗೆ ನಾವು ಅಯೋಧ್ಯೆ ತಲುಪುವಷ್ಟರಲ್ಲಿ ಕರಸೇವೆ ಆರಂಭಗೊಂಡಿತ್ತು. ಮತ್ತೊಂದೆಡೆ ನಾಯಕರ ಭಾಷಣಗಳು, ರಾಮಭಜನೆಗಳು ನಿರಂತರವಾಗಿ ನಡೆಯುತ್ತಿದ್ದವು. ವಿವಾದಿತ ಕಟ್ಟಡ ಉರುಳಿದ ಸಂದರ್ಭ ಕಾರ್ಯಕರ್ತರ ಹಷೋದ್ಗಾರ ಮುಗಿಲು ಮುಟ್ಟಿತ್ತು. ಅಂದು ರಾತ್ರಿಯೇ ತಾತ್ಕಾಲಿಕ ಟೆಂಟ್ ನಿರ್ವಿುಸುವ ಕೆಲಸ ಆರಂಭವಾಯಿತು. ಕರಸೇವಕರ ತಂಡದಲ್ಲಿದ್ದ ಇಂಜಿನಿಯರ್​ಗಳು ಈ ಕೆಲಸಕ್ಕೆ ಕೈಜೋಡಿಸಿದರು. ಟೆಂಟ್ ನಿರ್ಮಾಣ ಆಗಿ, ಅಲ್ಲಿ ಬಾಲರಾಮನನ್ನು ಇಡುವವರೆಗೂ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆ ಸ್ಥಳದಿಂದ ಕದಲಲಿಲ್ಲ. ಆ ಹೊತ್ತಿಗೆ ಇಡೀ ಪ್ರದೇಶವನ್ನು ಸೈನ್ಯ ಸುತ್ತುವರಿದಿತ್ತು. ಟೆಂಟ್​ನಲ್ಲಿ ಬಾಲರಾಮನು ಇರುವುದನ್ನು ನೋಡಿ, ಯೋಧರು ಶೂಗಳನ್ನು ಬಿಚ್ಚಿ ನಮಸ್ಕರಿಸಿದರು, ಸೆಲ್ಯೂಟ್ ಹೊಡೆದರು. ಈ ದೃಶ್ಯ ಇಡೀ ಕಾರ್ಯಕರ್ತ ಸಮುದಾಯವನ್ನು ರೋಮಾಂಚಿತಗೊಳಿಸಿತು. ವಾಪಸ್ ಪ್ರಯಾಣ ಸುಲಭವಾಗಿರಲಿಲ್ಲ. ರೈಲುಗಳ ಮೇಲೆ ಕಲ್ಲು ತೂರಿದರು. ದಾಳಿಗೆ ಯತ್ನಿಸಿದರು. ರಾಮನ ಕಾರ್ಯ ಪೂರ್ಣ ಆಗಿತ್ತಲ್ಲ, ಹಾಗಾಗಿ ನಮಗೆ ಯಾವುದೇ ಆತಂಕ ಕಾಡಲಿಲ್ಲ. ಸುರಕ್ಷಿತವಾಗಿ ಊರುಗಳಿಗೆ ಮರಳಿದೆವು. ಈಗ ಭವ್ಯ ಮಂದಿರ ಸಾಕಾರಗೊಳ್ಳುತ್ತಿರುವುದು ನಮ್ಮ ಜೀವನದ ಸಾರ್ಥಕ ಕ್ಷಣ.
ಪುಟ್ಟ ಭಾರತವೇ ಅಲ್ಲಿತ್ತುಎಸ್. ರಾಧಾಕೃಷ್ಣ, ಮೈಸೂರು
ಕರಸೇವೆಗೆ ಹೋಗುವಾಗ (1992) ಮತ್ತು ಮರಳುವಾಗ ನಮ್ಮ ರೈಲಿನಲ್ಲಿ ಪುಟ್ಟ ಭಾರತವೇ ಇತ್ತು. ದೇಶದ ಬಹುತೇಕ ಎಲ್ಲ ರಾಜ್ಯಗಳ ರಾಮಸೇವಕರಿದ್ದರು. ಎಲ್ಲರಲ್ಲೂ ಉತ್ಸಾಹವಿತ್ತು, ರಾಮಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇವೆಂಬ ಸಾರ್ಥಕತೆ ಇತ್ತು. ನಾವು ಅಯೋಧ್ಯೆಗೆ ಹೋಗುತ್ತಿದ್ದಾಗ ಅಹಿತಕರ ಘಟನೆ ನಡೆಯಿತು. ರೈಲಿನಲ್ಲಿ ಮುಸ್ಲಿಂ ಯುವಕನೊಬ್ಬ ಕರಸೇವಕರೊಂದಿಗೆ ವಾಗ್ವಾದ ನಡೆಸಿ, ಒಬ್ಬ ರಾಮಭಕ್ತನಿಗೆ ಚೂರಿಯಿಂದ ಇರಿದ. ಕೂಡಲೇ ಆ ಯುವಕನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿ, ರಾಮಭಕ್ತನನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿ, ಪ್ರಯಾಣ ಮುಂದುವರಿಸಿದೆವು. ‘ನಾವು ಹನುಮನ ನಾಡಿನಿಂದ ಬಂದ ಕರಸೇವಕರು’ ಎಂದು ಉತ್ಸಾಹದಿಂದ ಮುನ್ನುಗ್ಗಿ, ವಿವಾದಿತ ಕಟ್ಟಡ ಧ್ವಂಸವಾಗುವ ಕ್ಷಣಕ್ಕೆ ಸಾಕ್ಷಿಯಾದೆವು. ಕೆಲವೇ ಗಂಟೆಗಳಲ್ಲಿ ಮೂರೂ ಗುಂಬಜ್​ಗಳು ಧರೆಗುರುಳಿದವು. 1990ರಲ್ಲಿ ನಡೆದ ಹಿಂಸಾಚಾರದ ಬಗ್ಗೆ ರಾಮಭಕ್ತರಲ್ಲಿ ಆಕ್ರೋಶವಿತ್ತು. ಡಿ. 6ರ ರಾತ್ರಿ ತಾತ್ಕಾಲಿಕ ಶಿಬಿರಗಳಿಗೆ ಮರಳಿ, 7ರಂದು ಊರುಗಳಿಗೆ ಪ್ರಯಾಣ ಆರಂಭಿಸಿದೆವು. ಬೆಂಗಳೂರು ತಲುಪುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ವ್ಯಾನ್​ಗಳಿದ್ದವು. ‘ಯಾರೆಲ್ಲ ಅಯೋಧ್ಯೆ ಕರಸೇವೆಯಿಂದ ಬಂದಿದ್ದೀರಿ, ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇವೆ, ವಾಹನಗಳಲ್ಲಿ ಕುಳಿತುಕೊಳ್ಳಿ’ ಎಂದು ಅನೌನ್ಸ್ ಮಾಡುತ್ತಿದ್ದರು. ಅದನ್ನು ನಂಬಿದ ನಾವು ಹೋಗಿ ಪೊಲೀಸ್ ವಾಹನಗಳಲ್ಲಿ ಕುಳಿತೆವು. ನಮ್ಮನ್ನು ಬಂಧಿಸಿ, ಜೈಲಿಗೆ ತಳ್ಳಲಾಯಿತು. ಈ ಕ್ರಮವನ್ನು ವಿರೋಧಿಸಿ ಎರಡು ದಿನಗಳ ಕಾಲ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡ ಬಳಿಕ, ನಮ್ಮನ್ನು ಬಿಡುಗಡೆ ಮಾಡಿದರು.
ವಾನರ ಸೇನೆಯ ಸಾಹಸ…ಮೋಹನ್ ಚಿತಳೆ, ಹುಬ್ಬಳ್ಳಿ
ಐನೂರು ವರ್ಷಗಳ ನೋವು ರಾಮಭಕ್ತರ ಎದೆಯಲ್ಲಿ ಮಡುಗಟ್ಟಿತ್ತು. 1992ರ ಡಿಸೆಂಬರ್ 6ರಂದು ಅದು ನಿವಾರಣೆಯಾಯಿತು. ವಿವಾದಿತ ಕಟ್ಟಡ ಉರುಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಮಹಾರಾಷ್ಟ್ರದ ಶಿವಸೇನೆಯ ಶಿವಸೈನಿಕರು ಮತ್ತು ಕರ್ನಾಟಕ, ಕೇರಳದ ರಾಮಭಕ್ತರು. ಉತ್ತರಪ್ರದೇಶದ ಎಲ್ಲ ಜಿಲ್ಲೆಗಳಿಂದಲೂ ಭಾರಿ ಸಂಖ್ಯೆಯಲ್ಲಿ ರಾಮಭಕ್ತರು ಬಂದಿದ್ದರು. ಉತ್ತರಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ‘ಯಾವುದೇ ಕಾರಣಕ್ಕೂ ರಾಮಭಕ್ತರ ಮೇಲೆ ಬಲಪ್ರಯೋಗ ಮಾಡುವುದಿಲ್ಲ’ ಎಂದು ಘೋಷಿಸಿದ್ದು, ಐತಿಹಾಸಿಕ ನಿರ್ಣಯ. ಡಿಸೆಂಬರ್ ಚಳಿ ವಿಪರೀತವಾಗಿತ್ತು. ಅಯೋಧ್ಯೆ ಸುತ್ತಮುತ್ತಲಿನ ಜನರ ಸಹಕಾರ ಅವಿಸ್ಮರಣೀಯ. ಬೆಚ್ಚನೆಯ ಉಡುಪುಗಳು, ಹೊದಿಕೆಗಳನ್ನು ನೀಡಿ, ‘ರಾಮಕಾರ್ಯಕ್ಕೆ ಬಂದಿದ್ದೀರಿ. ನಿಮಗೆ ಕಷ್ಟ ಆಗಬಾರದು’ ಎನ್ನುತ್ತಿದ್ದರು. ಸಾವಿರಾರು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಿ ಕರಸೇವೆಗೆ ಬಂದಿದ್ದು ವಿಶೇಷ. ವಿವಾದಿತ ಕಟ್ಟಡ ಉರುಳಿದ ಬಳಿಕ, ಅದರ ಅವಶೇಷಗಳನ್ನು ತೆಗೆದು, ಆ ಪ್ರದೇಶವನ್ನು ಸಮತಟ್ಟು ಮಾಡುವುದು ಭಾರಿ ಸವಾಲಿನ ಕೆಲಸವಾಗಿತ್ತು. ಜತೆಗೆ, ಯಾವ ಕ್ಷಣದಲ್ಲಿ ಏನಾಗುತ್ತೆ ಎಂಬ ಆತಂಕದ ವಾತಾವರಣ. ಶ್ರೀರಾಮ ಸಮುದ್ರೋಲ್ಲಂಘನ ಮಾಡಲು ವಾನರ ಸೇನೆ ರಾಮಸೇತು ನಿರ್ವಿುಸಿದ್ದು ಗೊತ್ತೇ ಇದೆ. ಕರಸೇವಕರಲ್ಲೂ ಆ ಹನುಮ ಶಕ್ತಿ ಪ್ರವೇಶಿಸಿತ್ತು. ಜೆಸಿಬಿ ಅಥವಾ ಯಾವುದೇ ಯಂತ್ರಗಳು ಅಲ್ಲಿರಲಿಲ್ಲ. ಮೂರು ಸಾವಿರಕ್ಕೂ ಅಧಿಕ ರಾಮಭಕ್ತರು ಕೆಲವೇ ಗಂಟೆಗಳಲ್ಲಿ ಅಂದರೆ ಡಿ. 6ರ ರಾತ್ರಿಯ ಹೊತ್ತಿಗೆ ಕಟ್ಟಡದ ಪಳೆಯುಳಿಕೆಗಳನ್ನು ತೆಗೆದು, ಆ ಪ್ರದೇಶವನ್ನು ಸಮತಟ್ಟು ಮಾಡಿದರು. ನಸುಕಿನ ಜಾವದ ಹೊತ್ತಿಗೆ ತಾತ್ಕಾಲಿಕ ಟೆಂಟ್ ನಿರ್ಮಾಣ ಆಗಿ, ಅಲ್ಲಿ ಬಾಲರಾಮನೂ ಬಂದ. ಇಂಥ ಶ್ರೇಷ್ಠ ಕಾರ್ಯಕ್ಕೆ ನಮ್ಮ ಜೀವನದ ಕೆಲ ಸಮಯ ನೀಡಿದ್ದು, ಸಾರ್ಥಕ ಎನಿಸಿದೆ. ಆ ಹೋರಾಟ ಕೊನೆಗೂ ಫಲ ಕೊಟ್ಟಿದೆ. ರಾಮಕಾರ್ಯದಲ್ಲಿ ಭಾಗಿಯಾದ ಸಂತೋಷ ಅಸಾಧಾರಣ.
ಟಿ-20 ವಿಶ್ವಕಪ್​ಗೆ ಹಾರ್ದಿಕ್​ ಪಾಂಡ್ಯ ಸಾರಥ್ಯ?; ಸಿಡಿದೆದ್ದ ರೋಹಿತ್​ ಅಭಿಮಾನಿಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
