| ಡಾ. ವಿನಾಯಕ್ ಹೆಬ್ಬಾರ್
ಭಗವಾನ್ ಬುದ್ಧನಿಗೆ ಆರೋಗ್ಯ ಸಮಸ್ಯೆಯಾದಾಗ ಆ ಕಾಲದ ಪ್ರಸಿದ್ಧ ವೈದ್ಯ ಜೀವಕ, ಮೂಗಿನಲ್ಲಿ ಔಷಧ ಹಾಕುವ ಮೂಲಕ ಬುದ್ಧನ ರೋಗ ಗುಣಪಡಿಸಿದ ಎಂದು ಇತಿಹಾಸ ಹೇಳುತ್ತದೆ. ಋಗ್ವೇದ, ಕೃಷ್ಣ ಯಜುರ್ವೆದ, ಶತಪಥ ಬ್ರಾಹ್ಮಣ, ಉಪನಿಷತ್ತು ಸೇರಿ ಹಲವಾರು ಕಡೆ ನಸ್ಯಕರ್ಮದ ಉಲ್ಲೇಖ ಇದೆ. ಆದರೂ, ಕೆಲ ದಿನಗಳಿಂದ ರ್ಚಚಿತ ವಿಷಯವಾಗಿರುವ ಮೂಗಿನಲ್ಲಿ ಔಷಧ ಹಾಕುವುದು, ಲಿಂಬೆಹಣ್ಣಿನ ಗುಣ, ಲಿಂಬೆರಸವನ್ನು ಮೂಗಿನಲ್ಲಿ ಹಾಕುವುದರಿಂದ ಆಗುವ ಸಾಧಕ-ಬಾಧಕಗಳು ಮತ್ತು ಕೆಲ ವೈಜ್ಞಾನಿಕ ವಿವರಣೆಗಳ ಮಾಹಿತಿ ಇಲ್ಲಿದೆ.
ಮೂಗಿನಲ್ಲಿ ಔಷಧ ಹಾಕುವುದೂ ಚಿಕಿತ್ಸೆಯೇ?:ಆಯುರ್ವೆದದಲ್ಲಿ ನಸ್ಯಕರ್ಮ ಎಂಬ ಚಿಕಿತ್ಸೆ ಬಗ್ಗೆ ಅತ್ಯಂತ ವಿಸõತ ವಿವರಣೆಯಿದೆ. ಪಂಚಕರ್ಮದ ಪ್ರಧಾನ ಚಿಕಿತ್ಸೆಗಳಲ್ಲಿ ಇದೂ ಒಂದು. ಔಷಧಯುಕ್ತ ತೈಲ, ತುಪ್ಪ, ಕಷಾಯ, ಚೂರ್ಣ (ಪುಡಿ) ಅಥವಾ ಕೆಲ ಔಷಧ ದ್ರವ್ಯಗಳ ರಸವನ್ನು ಮೂಗಿನಲ್ಲಿ ಹಾಕುವುದೇ ನಸ್ಯಕರ್ಮ. ಕತ್ತು ಮತ್ತು ಅದರ ಮೇಲಿನ ಭಾಗಗಳ ಬಹುತೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ನಸ್ಯಕ್ಕಿದೆ. ಸಾಮಾನ್ಯವಾದ ತಲೆನೋವು, ಸೈನಸೈಟಿಸ್​ನಿಂದ ಹಿಡಿದು ಅರ್ಧಾಂಗ ವಾಯು, ಮೂರ್ಛಾರೋಗದಂಥ ಗಂಭೀರ ಸಮಸ್ಯೆಗಳಲ್ಲೂ ನಸ್ಯ ಅತ್ಯಂತ ಪರಿಣಾಮಕಾರಿ. ಕೇವಲ ರೋಗ ನಿವಾರಕವಾಗಿಯಷ್ಟೇ ಅಲ್ಲ; ರೋಗ ಬಾರದಂತೆ, ಆಂತರಿಕವಾಗಿ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಪ್ರತಿನಿತ್ಯ ಬಹಳಷ್ಟು ಆಯುರ್ವೆದ ವೈದ್ಯರು ಈ ಚಿಕಿತ್ಸೆ ಮೂಲಕ ರೋಗಿಗಳಿಗೆ ಪರಿಹಾರ ಕೊಡುತ್ತಾರೆ. ಇನ್ನೂ ವಿಶೇಷವೆಂದರೆ, ನಸ್ಯವನ್ನು ದಿನಚರ್ಯವಾಗಿ ಮಾಡಲು ಆಯುರ್ವೆದ ಹೇಳಿದೆ. ಅಂದರೆ ಹೇಗೆ ನಿತ್ಯವೂ ಹಲ್ಲು ಉಜ್ಜುತ್ತೇವೆಯೋ ಹಾಗೇ ಮೂಗಿನಲ್ಲಿ ಔಷಧ (ಸಾಮಾನ್ಯವಾಗಿ ಕೆಲವು ತೈಲಗಳನ್ನು) ಹಾಕಿಕೊಳ್ಳುವ ಕ್ರಿಯೆ ಮಾಡಿಕೊಳ್ಳಬೇಕು ಎಂದು. ಆದರೆ ಇದೆಲ್ಲದರ ಹಿಂದೆ ಆಳವಾದ ಹಲವು ವಿಷಯ ಒಳಗೊಂಡಿವೆ ಎಂಬುದನ್ನು ಮರೆಯಬಾರದು. ವ್ಯಕ್ತಿಯ ದೇಹ ಪ್ರಕೃತಿ, ರೋಗ, ಕಾಲ, ವಯಸ್ಸು ಮುಂತಾದ ವಿಷಯಗಳನ್ನು ಗಮನಿಸಿ ಯಾವ ಔಷಧ, ಎಷ್ಟು ತೀಕ್ಷ್ಣತೆಯಲ್ಲಿ, ಯಾವ ರೂಪದಲ್ಲಿ, ಎಷ್ಟು ಪ್ರಮಾಣದಲ್ಲಿ, ಎಷ್ಟು ದಿನ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
ವೈಜ್ಞಾನಿಕ ಆಧಾರ ಇದೆಯೇ?:ಆಧುನಿಕ ವಿಜ್ಞಾನದ ಮುಖೇನ ಯಾವ ವಿಷಯವನ್ನು ನಿರೂಪಿಸಲು ಸಾಧ್ಯವಾಗಿಲ್ಲವೋ ಅದು ಇಲ್ಲವೆಂದರ್ಥವಲ್ಲ. ಗಾಳಿಯಲ್ಲಿ ಆಮ್ಲಜನಕ ಇದೆ ಎಂದು ಕಂಡುಹಿಡಿಯುವ ಮೊದಲು ಅದು ಇರಲಿಲ್ಲವೇ? ಆಯುರ್ವೆದದಲ್ಲಿ ಎಷ್ಟೇ ವಿಸõತ ವಿವರಣೆಯಿದ್ದರೂ, ಭಾರತೀಯ ಪರಂಪರೆಯ ಭಾಗವೇ ಆಗಿದ್ದರೂ ‘ಉಪವಾಸ’ ತೀರಾ ಇತ್ತೀಚಿನವರೆಗೆ ಮೂರ್ಖತನವಾಗಿತ್ತು. ಈಗ ಅದರಿಂದ ಕ್ಯಾನ್ಸರ್​ನಂತಹ ರೋಗಗಳನ್ನು ಗುಣಪಡಿಸಬಹುದು ಎಂದು ಕಂಡುಹಿಡಿದ ವಿಜ್ಞಾನಿಗೆ ನೊಬೆಲ್ ಪಾರಿತೋಷಕ ಸಿಕ್ಕಿದೆ, ಈಗ ಅದು ವೈಜ್ಞಾನಿಕವಾಗಿದೆ. ಗೆಲಿಲಿಯೋಗಿಂತ ಎಷ್ಟೋ ಹಿಂದಿನ ಭಾರತೀಯ ಗ್ರಂಥ ‘ಸೂರ್ಯ ಸಿದ್ಧಾಂತ’ದಲ್ಲಿ ‘ಭೂಗೋಲಃ ವ್ಯೋಮ್ನಿ ತಿಷ್ಠತಿ’ ಎಂಬ ವಾಕ್ಯ ಬರುತ್ತದೆ. ಅಂದರೆ ಗೋಳಾಕಾರದಲ್ಲಿರುವ ಭೂಮಿ ವ್ಯೋಮ ಅಂದರೆ ಆಕಾಶದಲ್ಲಿ ಇದೆ ಎಂದರ್ಥ (ಸಂಸ್ಕೃತದಲ್ಲಿ ಆಕಾಶ ಎಂದರೆ ಅವಕಾಶ ಅಥವಾ ಸ್ವೇಸ್ ಎಂಬ ಅರ್ಥ ಬರುತ್ತದೆ). ಹಾಗಾಗಿ, ಪಾಶ್ಚಾತ್ಯ ವಿಜ್ಞಾನ ಒಪ್ಪುವವರೆಗೂ ಅದು ಇಲ್ಲ ಎನ್ನುವುದು ತಪ್ಪಾಗುತ್ತದೆ. ಅಯುರ್ವೆದ, ಯೋಗದಂತಹ ಭಾರತೀಯ ವಿಜ್ಞಾನಗಳಲ್ಲಿಯೂ ಅದರದೇ ಆದ ವೈಜ್ಞಾನಿಕತೆ ಅತ್ಯಂತ ವಿಸõತ ಮತ್ತು ಸೂಕ್ಷ್ಮವಾಗಿಯೇ ಇದೆ. ಆದರೆ ಅದನ್ನು ಸಂಪೂರ್ಣ ಬೇರೆ ತಳಹದಿಯ ಆಧುನಿಕ ವಿಜ್ಞಾನದ ಮೂಲಕ ನಿರೂಪಿಸುವುದು ಅತ್ಯಂತ ಕಷ್ಟದಾಯಕ. ಹೀಗಿದ್ದರೂ ದಿನಕಳೆದಂತೆ ಅದೆಷ್ಟೋ ವಿಷಯಗಳು ನಿರೂಪಿಸಲ್ಪಡುತ್ತಿವೆ ಎನ್ನುವುದು ಸಣ್ಣ ವಿಷಯವಲ್ಲ.
ವೈಜ್ಞಾನಿಕ ವಿವರಣೆಗಳು:ಎರಡು ಪ್ರತ್ಯೇಕ ಸಂಶೋಧನೆಗಳಲ್ಲಿ ಲ್ಯುಟನೈಸಿಂಗ್ ಹಾರ್ವೇನ್ (ಸಂಶೋಧನಾ ಬರಹ: Fink G et.al. 1973) ಮತ್ತು ಕ್ಯಾಲ್ಸಿಟೋ ನಿನ್ ಹಾಮೋನ್​ಗಳನ್ನು (ಸಂಶೋಧನಾ ಬರಹ: Potiroli E. A, et.al. 1983) ಮೂಗಿನಲ್ಲಿ ಹಾಕಿದಾಗ ರಕ್ತನಾಳಗಳ ಮೂಲಕ ಸೇರಿಸಿದಷ್ಟೇ ಪ್ರಭಾವ ಬೀರಿದ್ದವು. ಅಷ್ಟಾಂಗ ಹೃದಯ ಎಂಬ ಆಯುರ್ವೆದ ಗ್ರಂಥದಲ್ಲಿ ‘ನಾಸಾ ಹಿ ಶಿರಸೋ ದ್ವಾರಂ’ ಎಂದಿದ್ದಾರೆ. ಅಂದರೆ ಮೂಗು ತಲೆಬುರುಡೆಯನ್ನು ಪ್ರವೇಶಿಸಲು ದ್ವಾರವಿದ್ದಂತೆ ಎಂದರ್ಥ. ಮೂಗಿನಿಂದ ನೇರವಾಗಿ ಮಿದುಳಿಗೆ ದಾರಿಯಿದೆ ಎಂದಲ್ಲ. ಬದಲಿಗೆ ನಾವು ಹೊಟ್ಟೆಗೆ ಸೇವಿಸಿದ ಔಷಧ ರಕ್ತದ ಮೂಲಕ ತಲೆಬುರುಡೆಯ ಭಾಗಗಳಿಗೆ (Systemic Circulation) ಹೋಗುವುದಕ್ಕಿಂತಲೂ ತುಂಬಾ ವಿಶೇಷ ರೀತಿಯಲ್ಲಿ ನೇರವಾಗಿ ತಲೆಬುರುಡೆಯ ಭಾಗಗಳಿಗೆ ಸಿಗುತ್ತದೆ (irect pooling into intracranial organs). ಹೀಗೆ ಮೂಗಿನಲ್ಲಿ ಹಾಕಿದ ಔಷಧ ಎರಡು ವಿಧದಲ್ಲಿ ರುಂಡಭಾಗದಲ್ಲೆಲ್ಲ ಹರಡುತ್ತದೆ ಎನ್ನುತ್ತದೆ ವಿಜ್ಞಾನ. ಒಂದು, ರಕ್ತ ಪ್ರವಾಹದ ಮೂಲಕವಾದರೆ ಇನ್ನೊಂದು ಲಿಂಫಾಟಿಕ್ ಪಾಥ್ ಮೂಲಕ. ಅಂದರೆ ಬಿಳಿ ರಕ್ತಕಣಗಳು ಹರಿಯುವ ನಾಳಗಳ ಮುಖೇನ. (ಸಂಶೋಧನಾ ಬರಹಗಳು: Hamilton 1971, Kumar et.al. 1979).
ಇವಿಷ್ಟೇ ಅಲ್ಲದೆ ಇತ್ತೀಚಿನ ಹಲವಾರು ಸಂಶೋಧನೆಗಳು ಮೂಗಿನಲ್ಲಿ ಹಾಕಿದ ಔಷಧ ಕತ್ತಿನ ಮೇಲಿನ ಭಾಗಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳುತ್ತವೆ.
ಮೂಗಿನಲ್ಲಿ ಹಾಕಿದ ಔಷಧ ಮಿದುಳಿಗೆ ಹೋಗುವುದಿಲ್ಲವೇ?:ಮೂಗಿನಿಂದ ಮಿದುಳಿಗೆ ನೇರವಾಗಿ ಯಾವುದೇ ದಾರಿಯಿಲ್ಲ. ಜತೆಗೆ, ಭಾರತ-ಪಾಕಿಸ್ತಾನದ ಗಡಿಯಲ್ಲಿ ಇರುವಂತೆ ಅತ್ಯಂತ ಬಲಿಷ್ಠ ಪಹರೆ ಮಿದುಳನ್ನು ಕಾಪಾಡುತ್ತದೆ. ಅದಕ್ಕೆ ಬ್ಲಡ್ ಬ್ರೖೆನ್ ಬ್ಯಾರಿಯರ್ (Blood Brain Barrier) ಎನ್ನುತ್ತಾರೆ. ಇದು ಸುಲಭವಾಗಿ ಮಿದುಳಿನ ಒಳಗೆ ಪ್ರವೇಶ ಕೊಡುವುದಿಲ್ಲ. ಆಯುರ್ವೆದ ಗ್ರಂಥ ಬರೆದ ಋಷಿಗಳಿಗೆ ಇದು ತಿಳಿದಿತ್ತು. ಹಾಗಾಗಿ ಮಿದುಳನ್ನು ಪ್ರವೇಶಿಸಬೇಕು ಎಂಬ ಉದ್ದೇಶವಿದ್ದರೆ ಕೊಬ್ಬಿನಲ್ಲಿ ಕರಗುವ ಅಂಶಗಳಿರುವ ದ್ರವ್ಯಗಳನ್ನು ಎಣ್ಣೆ ಅಥವಾ ತುಪ್ಪಗಳೊಂದಿಗೆ ಸಂಸ್ಕರಿಸಿ ಆ ಎಣ್ಣೆ ಅಥವಾ ತುಪ್ಪಗಳನ್ನು ಮೂಗಿನಲ್ಲಿ ಹಾಕಿ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು, ಮಾನಸಿಕ ವ್ಯಾಧಿಗಳನ್ನು ನಿವಾರಿಸುವ ದಾರಿ ಹೇಳಿದ್ದಾರೆ. ಏಕೆಂದರೆ ಈ ಬ್ಯಾರಿಯರ್ ಕೊಬ್ಬಿನಲ್ಲಿ ಕರಗುವ ಮತ್ತು ಸೂಕ್ಷ್ಮವಾಗಿರುವ ದ್ರವ್ಯಗಳನ್ನು ಮಾತ್ರ ಒಳಗೆ ಬಿಟ್ಟುಕೊಳ್ಳುತ್ತದೆ. ಹಾಗಾಗಿ ಲಿಂಬೆರಸವನ್ನು ಮೂಗಿನಲ್ಲಿ ಒಮ್ಮೆ ಹಾಕಿದ ಮಾತ್ರಕ್ಕೆ ಅದು ಮಿದುಳಿನ ಒಳಗೆ ಹೋಗಲು ಸಾಧ್ಯವಿಲ್ಲ.
ಲಿಂಬೆಹಣ್ಣಿನ ಗುಣಗಳೇನು?:ಆಯುರ್ವೆದದ ಬಹುತೇಕ ಗ್ರಂಥಗಳಲ್ಲಿ ಲಿಂಬೆಹಣ್ಣಿನ ಗುಣಗಳ ಬಗ್ಗೆ ಮತ್ತು ಅದು ನಿವಾರಿಸುವ ಕಾಯಿಲೆಗಳ ಬಗ್ಗೆ ವಿಸõತ ವಿವರಣೆಯಿದೆ. ಇಲ್ಲಿ ನಾವು ಅದರ ಕಫ ನಿವಾರಕ ಗುಣವನ್ನಷ್ಟೇ ತಿಳಿಯೋಣ. ಧನ್ವಂತರಿ ನಿಘಂಟು ಎಂಬ ಗ್ರಂಥದಲ್ಲಿ ಕಫೋತೆ್ಕ್ಲಶಕ ಎಂದು ಕರೆದಿದ್ದಾರೆ. ಅಂದರೆ ಕಫವನ್ನು ಎಳೆದು ಹೊರಹಾಕುವುದು ಎಂದು. ಲಿಂಬೆಹಣ್ಣಿಗೆ ಉಷ್ಣ, ತೀಕ್ಷ್ಣಗುಣಗಳಿವೆ. ಈ ಗುಣಗಳು ಕಫವನ್ನು ನಿವಾರಿಸುತ್ತವೆ. ಸಹಜವಾಗಿ ಕಫ ನಿವಾರಣೆಯಾದಾಗ ಉಸಿರಾಡಲು ಅನುಕೂಲ ಆಗುತ್ತದೆ.
ಮೂಗಿನಲ್ಲಿ ಲಿಂಬೆರಸ ಹಾಕಬಹುದೇ?:ನನಗೆ ತಿಳಿದಿರುವ ಮಟ್ಟಿಗೆ ಲಿಂಬೆಹಣ್ಣಿನ ರಸವನ್ನು ಮೂಗಿಗೆ ಬಿಟ್ಟುಕೊಳ್ಳುವ ಬಗ್ಗೆ ಆಯುರ್ವೆದ ಗ್ರಂಥಗಳಲ್ಲಿ ನೇರ ಉಲ್ಲೇಖ ಇಲ್ಲ. ಆದರೆ ಪರಿಸ್ಥಿತಿ ಮತ್ತು ರೋಗಕ್ಕೆ ಅನುಗುಣವಾಗಿ ಯಾವ ದ್ರವ್ಯವನ್ನು ಬೇಕಾದರೂ ಯುಕ್ತಿಯಿಂದ ಬಳಸಲು ವೈದ್ಯನಿಗೆ ಆಯುರ್ವೆದ ಅವಕಾಶ ನೀಡುತ್ತದೆ. ಲಿಂಬೆಹಣ್ಣಿನ ರಸಕ್ಕಿಂತ ಎಷ್ಟೋ ತೀಕ್ಷ್ಣವಾದ ಶುಂಠಿ, ಕಾಳುಮೆಣಸು, ಬಜೆ ಪುಡಿಗಳಂಥ ಔಷಧಗಳನ್ನೂ ನಾವು ಸಮಸ್ಯೆಗನುಸಾರವಾಗಿ ರೋಗಿಯ ಮೂಗಿನಲ್ಲಿ ಹಾಕುತ್ತೇವೆ. ಇನ್ನು, ಲಿಂಬೆರಸವನ್ನು ಹಾಕಿದರೆ ಅದರಲ್ಲಿರುವ ಆಸಿಡ್ ಸುಟ್ಟುಬಿಡುತ್ತದೆ ಎಂದು ಅನಿಸುವುದು ಸಹಜ. ಆದರೆ, ಲಿಂಬೆರಸದಲ್ಲಿ ಸಿಟ್ರಿಕ್ ಆಸಿಡ್ ಒಂದು ಅಂಶವೇ ಹೊರತು ಪೂರ್ಣ ಆಸಿಡ್ ಅಲ್ಲ.
ಲಿಂಬೆರಸವನ್ನು ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ಕಫದ ವಾಂತಿಯಾದರೆ ಉಸಿರಾಡಲು ಅನುಕೂಲವಾಗುತ್ತದೆ. ವಾಂತಿಯಾಗದೆ ಹೋದರೂ ಮೂಗಿನ ಒಳಗಿನ ಕಫವೆಲ್ಲ ಹೊರಗೆ ಹರಿದು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಆದರೆ ಇದರಿಂದ ಕರೊನಾ ಸಮಸ್ಯೆ ಗುಣವಾಗುತ್ತದೆ ಎಂದಾಗಲಿ, ಹಾಳಾಗಿರುವ ಶ್ವಾಸಕೋಶ ಸರಿಯಾಗಿಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸರಿಯಾಗಿ ಬಳಸಿದರೆ ತೀಕ್ಷ್ಣವಾದ ವಿಷವೂ ಅದ್ಭುತ ಔಷಧವಾಗುತ್ತದೆ. ಸರಿಯಾಗಿ ಬಳಸದಿದ್ದರೆ ಅತ್ಯುತ್ತಮ ಔಷಧವೂ ವಿಷವಾಗುತ್ತದೆ ಎಂದು ಆಯುರ್ವೆದ ಹೇಳುತ್ತದೆ. ಇದು ಲಿಂಬೆರಸದ ವಿಷಯದಲ್ಲೂ ಸತ್ಯವಾದದ್ದು.
ಇದನ್ನು ನಿತ್ಯವೂ ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ನಿಂಬೆಯ ಉಷ್ಣ, ತೀಕ್ಷ್ಣ್ಣ ಅಮ್ಲ (ಹುಳಿ) ಗುಣಗಳು ಮೂಗಿನ ಒಳಪದರ, ಕಣ್ಣು, ಕೂದಲುಗಳು ಮುಂತಾದ ಭಾಗಗಳಿಗೆ ತೊಂದರೆಯನ್ನುಂಟು ಮಾಡುತ್ತವೆ. ಈ ಕ್ಷಣಕ್ಕೆ ಅನುಕೂಲವೆನಿಸಿದರೂ ಕಾಲಾಂತರದಲ್ಲಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸುಶ್ರುತ ಸಂಹಿತೆಯಲ್ಲಿ ಅತಿಯಾದ ನಸ್ಯ ಪ್ರಯೋಗದಿಂದ ಮಿದುಳಿನ ಸುತ್ತಲಿರುವ ದ್ರವ ಸೋರುವಂತಹ (Cerebrospinal fluid leak) ಗಂಭೀರ ಸಮಸ್ಯೆಗಳೂ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ನಾವೇನು ಮಾಡಬಹುದು?:ಕಫ ತೆಗೆಯಲು ಲಿಂಬೆಹಣ್ಣು ಅನುಕೂಲಕರವಾಗಿರುವುದರಿಂದ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಎರಡೆರಡು ಹನಿ ಹಾಕಿಕೊಳ್ಳಬಹುದು ಎಂದು ಸಾಮಾನ್ಯವಾಗಿ ಹೇಳಬಹುದು. ಹಾಕಿಕೊಳ್ಳುವ ಮೊದಲು ಮುಖಕ್ಕೆ ಎಣ್ಣೆಯ ಮಸಾಜ್ ಮಾಡಿ, ಸ್ಟೀಮ್ ತೆಗೆದುಕೊಂಡರೆ ಔಷಧ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದರೆ, ಕೆಲ ರೋಗಿಗಳಲ್ಲಿ ನಸ್ಯಕರ್ಮದ ನಿಷೇಧವನ್ನೂ ಆಯುರ್ವೆದ ಹೇಳಿದೆ. ಹಾಗಾಗಿ, ನಿಮ್ಮ ಆಯುರ್ವೆದ ವೈದ್ಯರ ಸಲಹೆ ಪಡೆಯುವುದು ಸೂಕ್ತ. ನಸ್ಯದಂತಹ ಅದ್ಭುತ ಚಿಕಿತ್ಸಾ ಕ್ರಮವನ್ನು ಗೌರವಿಸೋಣ, ತಿಳಿವಳಿಕೆಯಿಂದ ಹೆಜ್ಜೆ ಇಡೋಣ.
(ಲೇಖಕರು ತಜ್ಞ ವೈದ್ಯರು, ಧಾತ್ರಿ ಆಯುರ್ವೆದ, ಶಿರಸಿ ಸಂಪರ್ಕಕ್ಕೆ-8660939261)
ಕರೊನಾಗೆ ಮೊಸರನ್ನದ ಶಾಂತಿ!; ಮೊದಲ ಅಲೆಯಲ್ಲಿ ‘ಗೋ ಕರೊನಾ ಗೋ’, ಎರಡನೇ ಅಲೆಯಲ್ಲಿ ‘ಕರೊನಮ್ಮ ಊರು ಬಿಟ್ಟು ಹೋಗಮ್ಮ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
