ಪಂಕಜ ಕೆ.ಎಂ. ಬೆಂಗಳೂರುಎಲ್ಲ ವರ್ಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರೂಪುಗೊಂಡ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ (ಎಬಿ-ಎಆರ್​ಕೆ) ಜಾರಿಯಾಗಿ ಐದು ವರ್ಷಗಳೇ ಕಳೆದರೂ ಸೂಕ್ತ ರೀತಿಯಲ್ಲಿ ಸೇವೆ ದೊರೆಯುತ್ತಿಲ್ಲ. ಜನರಿಗೂ ಯೋಜನೆಯ ಕುರಿತು ಸಮರ್ಪಕ ಮಾಹಿತಿ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳು ಅಲೆದಾಡುವ ಪರಿಸ್ಥಿತಿ ಮುಂದುವರಿದಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ವೆಂಟಿಲೇಟರ್ ಹಾಸಿಗೆಗಳು, ಆಕ್ಸಿಜನ್ ಹಾಸಿಗೆಗಳು ಸೇರಿ ಮೂಲಸೌಕರ್ಯಗಳನ್ನು ಹೆಚ್ಚಿಸ ಲಾಗಿದೆ. ಆದಾಗ್ಯೂ ತುರ್ತು ಸಂದರ್ಭ ಗಳಲ್ಲಿ ರೋಗಿಗಳ ದಾಖಲಾತಿ ಸಮಸ್ಯೆ ಮುಂದುವರಿದಿದ್ದು, ಕೆಳಹಂತದ ಆಸ್ಪತ್ರೆಗಳಿಂದ ದೊಡ್ಡ ಆಸ್ಪತ್ರೆಗಳಿಗೆ ಸ್ಥಳಾಂತರ, ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಸೇರಿ ಯೋಜನೆಯಡಿ ಚಿಕಿತ್ಸೆ ಪಡೆಯುವ ಕುರಿತು ಬಹಳಷ್ಟು ಗೊಂದಲಗಳಿವೆ.
ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಹಾಗೂ ಯದ್ವಾತದ್ವಾ ಹಣ ಪೀಕುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎಬಿ-ಎಆರ್​ಕೆ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಸೇವೆ ಪಡೆಯಲು ವಿಧಿಸಿರುವ ಶಿಫಾರಸು ನಿಯಮ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಉದಾಹರಣೆಗೆ ಇತ್ತೀಚೆಗೆ ನಿಮ್ಹಾನ್ಸ್​ನಲ್ಲಿ ಹಾಸಿಗೆ ಲಭ್ಯವಿಲ್ಲ ಎಂದು ಚಿಕಿತ್ಸೆ ವಿಳಂಬ ಮಾಡಿ ಮಗುವೊಂದು ಮೃತಪಟ್ಟ ಪ್ರಕರಣ ಅಪರೂಪದ್ದೇನಲ್ಲ. ಅದೇ ದಿನ ಬ್ರೖೆನ್ ಸ್ಟ್ರೋಕ್​ಗೆ ಒಳಗಾಗಿದ್ದ 71 ವರ್ಷದ ವೃದ್ಧರೊಬ್ಬರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್​ಗೆ ಶಿಫಾರಸು ಮಾಡಲಾಗಿತ್ತು. ಅಲ್ಲಿ ಹಾಸಿಗೆ ಲಭ್ಯವಿಲ್ಲದೆ, ವಿಕ್ಟೋರಿಯಾ ಎಮರ್ಜೆನ್ಸಿ ಟ್ರಾಮಾಗೆ ಕಳುಹಿಸಿದ್ದರು. ಆದರೆ, ಅಲ್ಲಿಯೂ ಹಾಸಿಗೆ ಲಭ್ಯವಿಲ್ಲ ಎಂಬ ಉತ್ತರ ಸಿದ್ಧವಾಗಿತ್ತು. ಅಷ್ಟೇ ಅಲ್ಲ, ಯಾವೊಬ್ಬ ವೈದ್ಯರೂ ಆ ರೋಗಿಯ ಪರಿಸ್ಥಿತಿ ನೋಡುವ ಪ್ರಯತ್ನ ಮಾಡಲಿಲ್ಲ.
ಬದಲಿಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳುತ್ತ ಸಮಯ ವ್ಯರ್ಥ ಮಾಡಿದ್ದೇ ಬಂತು. ರೋಗಿಯ ತಪಾಸಣೆ ನಡೆಸಿ ಎಬಿ-ಎಆರ್​ಕೆ ನಿಯಮಾನುಸಾರ ಖಾಸಗಿಗೆ ಶಿಫಾರಸು ಮಾಡಬಹುದಿತ್ತು. ಆ ಕೆಲಸವನ್ನೂ ಮಾಡಲಿಲ್ಲ. ಕೊನೆಗೆ ಮಾಧ್ಯಮಗಳು ಮಧ್ಯ ಪ್ರವೇಶಿಸಿ ಅಲ್ಲೇ ಹಾಸಿಗೆ ಕೊಡಿಸಬೇಕಾಯಿತು. ಆದರೂ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ರೋಗಿ ಮೃತಪಟ್ಟರು. ಇದು ಎಬಿ-ಎಆರ್​ಕೆ ಯೋಜನೆಯಡಿ ತುರ್ತು ಸಂದರ್ಭದಲ್ಲಿ ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ.
ಅರಿವಿನ ಅಗತ್ಯವಿದೆ:ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ 2018ರಲ್ಲಿ ಜಾರಿಗೆ ಬಂದಿತು. ಆದರೂ ಇದರ ಬಗ್ಗೆ ಜನರಲ್ಲಿ ಸಮರ್ಪಕ ಮಾಹಿತಿ ಇಲ್ಲ. ಹೀಗಾಗಿಯೇ ಕೆಲ ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಮಸ್ಯೆಯಾಗುತ್ತಿದೆ. ಬಹಳಷ್ಟು ಮಂದಿ ಯೋಜನೆಯಡಿ ಎಲ್ಲರಿಗೂ ಉಚಿತ ಚಿಕಿತ್ಸೆ ಎಂದು ತಪು್ಪ ತಿಳಿದಿದ್ದಾರೆ. ಇನ್ನು ತುರ್ತು ಸಂದರ್ಭದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಎಂಬ ಮಾಹಿತಿ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹಣ ಪಾವತಿ ಮಾಡಲಾಗದೆ ಪರದಾಡುವ ಸ್ಥಿತಿ ಇದೆ.
ಚಿಕಿತ್ಸಾ ದರ ಕಡಿಮೆ: ಎಬಿ-ಎಆರ್​ಕೆ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ವರೆಗೆ ನಗದುರಹಿತ ಚಿಕಿತ್ಸೆ ಲಭ್ಯವಿದೆ. ಇದಕ್ಕಾಗಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಆಸ್ಪತ್ರೆಯಲ್ಲಿ ಸೇವೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬಹುದು. ತುರ್ತು ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು ಎಂದು ಹೇಳುತ್ತಾರೆ. ಆದರೆ, ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗೆ ಹೋದಲ್ಲಿ ಮಾತ್ರ ಈ ಸೇವೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ ಇದು ಅಸಾಧ್ಯ. ಅಲ್ಲದೆ ಚಿಕಿತ್ಸೆಯ ಪ್ಯಾಕೇಜ್ ದರ ಕಡಿಮೆ ಇರುವ ಕಾರಣ ಖಾಸಗಿ ಆಸ್ಪತ್ರೆಗಳು ಇಂತಹ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲು ನಿರಾಸಕ್ತಿ ತೋರುತ್ತಿವೆ.
ಹಣ ಪಾವತಿ ವಿಳಂಬ:ಎಬಿ-ಎಆರ್​ಕೆ ಯೋಜನೆಯಡಿ ಚಿಕಿತ್ಸೆ ನೀಡಲು ವಿಧಿಸಿರುವ ದರ ಕಡಿಮೆ ಇದ್ದು, ಇದರಿಂದ ಆಸ್ಪತ್ರೆ ನಿರ್ವಹಣೆಗೆ ಸಮಸ್ಯೆಯಾಗಲಿದೆ. ಜತೆಗೆ ಶಿಫಾರಸು ಪ್ರಕರಣಗಳಿಗೆ ನೀಡಿದ ಚಿಕಿತ್ಸೆ ವೆಚ್ಚ ಭರಿಸುವುದು ವಿಳಂಬ ಆಗುತ್ತಿದೆ. ಈ ಸಮಸ್ಯೆ ಸರ್ಕಾರಿ ಆಸ್ಪತ್ರೆಗಳಿಗೂ ಇದೆ. ಯೋಜನೆಯಡಿ ಹೆಚ್ಚಿನವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೆಚ್ಚ ಪಾವತಿ ಮಾಡುವುದು ವಿಳಂಬವಾಗುತ್ತಿದೆ. ಇದರಿಂದ ನಿರ್ದಿಷ್ಟ ಕಂಪನಿಗಳಿಗೆ ಹಣ ಪಾವತಿಸಲು ಸಾಧ್ಯವಿಲ್ಲದೆ ಅವರಿಂದ ಶಸ್ತ್ರಚಿಕಿತ್ಸೆಗಳಿಗೆ ಅಗತ್ಯವಿರುವ ಉಪಕರಣಗಳನ್ನು (ಇಂಪ್ಲಾಂಟ್ ಸೇರಿ ಇತರೆ) ಖರೀದಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಚಿಕಿತ್ಸೆಯ ವೆಚ್ಚ ಶೀಘ್ರ ಪಾವತಿ ಸಲು ಕ್ರಮ ವಹಿಸಬೇಕು ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು.
ಹೆಚ್ಚಿನ ಚಿಕಿತ್ಸೆ ಸೇರ್ಪಡೆಯಾಗಬೇಕಿದೆ:ಯೋಜನೆಯಡಿ ಸದ್ಯ 1,650 ಚಿಕಿತ್ಸಾ ವಿಧಾನಗಳನ್ನಷ್ಟೇ ಸೇರಿಸಲಾಗಿದೆ. ಪ್ರತಿ ಚಿಕಿತ್ಸೆಗೆ ನಿರ್ದಿಷ್ಟ ದರವಿದೆ. ಇವುಗಳ ಹೊರತಾಗಿ ಇತರೆ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ರೋಗಿಗಳು ಹಣ ಪಾವತಿಸಬೇಕಿದೆ. ಉದಾಹರಣೆಗೆ ಶೋಲ್ಡರ್ ಆಥ್ರೋಸ್ಕೋಪಿ ಸಮಸ್ಯೆ ಸೇರ್ಪಡೆಯಾಗಿಲ್ಲ. ಇದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 30-40 ಸಾವಿರ ಹಾಗೂ ಖಾಸಗಿಯಲ್ಲಿ 1.50 ಲಕ್ಷ ರೂ. ವೆರೆಗೆ ವೆಚ್ಚ ಆಗುತ್ತದೆ. ಇಂತಹ ಹಲವು ಚಿಕಿತ್ಸೆಗಳು ಯೋಜನೆಯಡಿಯಲ್ಲಿಲ್ಲ. ಹೀಗಾಗಿ ಈ ಬಗ್ಗೆ ತಜ್ಞರ ಸಲಹೆ ಪಡೆದು ಮತ್ತಷ್ಟು ಚಿಕಿತ್ಸೆಯನ್ನು ಸೇರಿಸುವ ಮೂಲಕ ಚಿಕಿತ್ಸಾ ವಿಧಾನಗಳ ಪಟ್ಟಿ ಪರಿಷ್ಕರಿಸಬೇಕಿದೆ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆಗಳ ವೈದ್ಯರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
