ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್​ಕೆ) ಯೋಜನೆಯ ‘ಆರೋಗ್ಯ ಕಾರ್ಡ್’ ಫಲಾನುಭವಿಗಳ ಸಂಖ್ಯೆ 1 ಕೋಟಿಗೆ ಸಮೀಪಿಸಿದೆ. ಈ ಸಾಧನೆಯ ಸಂದರ್ಭದಲ್ಲೇ ಯೋಜನೆಯಡಿ ಕೇವಲ 4.84 ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆಂಬುದು ವಾಸ್ತವ. ರಾಜ್ಯದಲ್ಲಿರುವ 1.15 ಕೋಟಿ ಬಿಪಿಎಲ್ ಹಾಗೂ 18 ಲಕ್ಷ ಎಪಿಎಲ್ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಹಲವೆಡೆ ವ್ಯವಸ್ಥೆ ಕಲ್ಪಿಸಿದೆ. ಗುರುವಾರದ ಅಂತ್ಯಕ್ಕೆ (ಜ.9) 99,83,032 ಲಕ್ಷ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಶುಕ್ರವಾರ 1 ಕೋಟಿ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾನ್ಯ ಸಮಸ್ಯೆಗೆ ಚಿಕಿತ್ಸೆ:ಯೋಜನೆಯಡಿ 4,84,792 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಇವುಗಳಲ್ಲಿ ಬಹುತೇಕ ಪ್ರಕರಣಗಳು ಜ್ವರ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದೆ. ಗಂಭೀರ ಹಾಗೂ ತುರ್ತು ಚಿಕಿತ್ಸೆಗಾಗಿ ರೋಗಿಗಳು ಪರದಾಡುವುದು ತಪಿಲ್ಲ. ಇನ್ನು ಚಿಕಿತ್ಸೆ ಪಡೆದವರಲ್ಲಿ ಬಿಪಿಎಲ್ ಕಾರ್ಡದಾರರೇ ಹೆಚ್ಚಿದ್ದು, ಕೇವಲ ಶೇ. 1 ಸೇವೆ ಪಡೆದಿರುವ ಎಪಿಎಲ್ ಕಾರ್ಡದಾರರು ಯೋಜನೆಯಿಂದ ದೂರವೇ ಉಳಿದಿದ್ದಾರೆ.
ಕಾರ್ಡ್ ಇದ್ದರೂ ಸೌಲಭ್ಯ ಸಿಗುತ್ತಿಲ್ಲ:ರಾಜ್ಯದ ಎಲ್ಲ ಅರ್ಹ ಫಲಾನುಭವಿಗಳಿಗೂ ಪೂರ್ಣ ಪ್ರಮಾಣದಲ್ಲಿ ಕಾರ್ಡ್ ವಿತರಣೆ ಆಗುವವರೆಗೂ ರೋಗಿಗಳು ತಮ್ಮಲ್ಲಿರುವ ಪಡಿತರ ಅಥವಾ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ನೀಡಿ ಯೋಜನೆಯಡಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಯಾವ ಕಾರ್ಡ್ ಇದ್ದರೂ ಎಲ್ಲರಿಗೂ ಸಮರ್ಪಕವಾಗಿ ಯೋಜನೆಯಡಿ ಆರೋಗ್ಯ ಸೌಲಭ್ಯ ದೊರೆಯುತ್ತದೆ ಎಂಬ ವಿಶ್ವಾಸ ಜನರಲ್ಲಿ ಇಲ್ಲವಾಗಿದೆ.
ಖಾಸಗಿ ಆಸ್ಪತ್ರೆಗಳು ದೂರ:ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೀಡುತ್ತಿರುವ ಚಿಕಿತ್ಸಾ ದರ ತೀರ ಕಡಿಮೆ ಇದ್ದು, ಇದರಿಂದ ಹಾಕಿದ ಬಂಡವಾಳವೂ ಸಿಗುವುದಿಲ್ಲ ಎಂಬ ಕಾರಣಕ್ಕೆ ಬಹುತೇಕ ಖಾಸಗಿ ಆಸ್ಪತ್ರೆಗಳು ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿವೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದು ಈಗಾಗಲೇ ಯೋಜನೆಯಿಂದ ಹೊರ ನಡೆದಿದೆ. ಇದಲ್ಲದೆ ತುರ್ತು ಸಂದರ್ಭದಲ್ಲಿ ಜನರು ಹತ್ತಿರದಲ್ಲಿ ಸೇವೆ ಪಡೆಯಲು ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳನ್ನು ನೋಂದಣಿ ಮಾಡಿಸುವಲ್ಲಿಯೂ ಯೋಜನೆಯ ಹೊಣೆ ಹೊತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಿಫಲವಾಗಿದೆ. ರಾಜ್ಯಾದ್ಯಂತ ಕೇವಲ 444 ಖಾಸಗಿ ಆಸ್ಪತ್ರೆಗಳು ನಿರ್ದಿಷ್ಟ ಚಿಕಿತ್ಸೆ ನೀಡಲು ಒಪ್ಪಿ ನೋಂದಣಿಯಾಗಿವೆ.
ಮಾಹಿತಿ ಕೊರತೆ
ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆಯುವ, ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಹೋಗುವ, ಹೆಚ್ಚಿನ ಚಿಕಿತ್ಸೆಗೆ ರೆಫರಲ್ ಮೂಲಕ ಖಾಸಗಿ ಆಸ್ಪತ್ರೆ ಹೋಗುವ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತಿದೆ. ಆದರೆ ಖಾಸಗಿಯಲ್ಲಿ ಯೋಜನೆಯಡಿ ನೋಂದಣಿ ಆಗಿರುವ ಎಲ್ಲ ಆಸ್ಪತ್ರೆಗಳಲ್ಲೂ ಎಲ್ಲ ಬಗೆಯ ಚಿಕಿತ್ಸೆ ಲಭ್ಯವಿಲ್ಲ.
ಹಾಗೆಯೇ ಎಲ್ಲ ಆಸ್ಪತ್ರೆಗಳು ಎಲ್ಲ ಸೇವೆಗಳಿಗೂ ನೋಂದಣಿಯಾಗಿಲ್ಲ. ಹೀಗಾಗಿ ಯಾವ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ಸಿಗುತ್ತದೆ ಎಂಬ ಮಾಹಿತಿ ಜನಸಾಮಾನ್ಯರಿಗೆ ಲಭ್ಯವಿಲ್ಲದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಇನ್ನು ತುರ್ತು ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿದು ನೋಂದಣಿಯಾಗದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಯೋಜನೆಯ ಲಾಭ ಪಡೆಯಲಾಗದೆ ಲಕ್ಷಾಂತರ ಹಣ ತೆರುತ್ತಿದ್ದಾರೆ. ಹೀಗಾಗಿ ಯೋಜನೆ ಪ್ರಚಾರಕ್ಕೆ ಸೀಮಿತವಾಗಿದ್ದು, ಫಲಾನುಭವಿಗಳಿಗೆ ಸಕಾಲದಲ್ಲಿ ಸೂಕ್ತ ಸೇವೆ ದೊರೆಯುತ್ತಿಲ್ಲ.
ಹೆಚ್ಚು ಜನ ಚಿಕಿತ್ಸೆ ಪಡೆದ ಆಸ್ಪತ್ರೆಗಳು
ಮೈಸೂರಿನ ಕೆ.ಆರ್. ಜಿಲ್ಲಾ ಆಸ್ಪತ್ರೆ 14, 792 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (12,911) ಹಾಸನದ ಶ್ರೀ ಚಾಮರಾಜೇಂದ್ರ ಆಸ್ಪತ್ರೆ (11,416) ಮಂದಿಗೆ ಚಿಕಿತ್ಸೆ ಒದಗಿಸಿವೆ. ಖಾಸಗಿ ವಲಯದಲ್ಲಿ ಉಡುಪಿಯ ಮಣಿಪಾಲದ ಕಸ್ತೂರಬಾ ಆಸ್ಪತ್ರೆ (5,350), ಧಾರವಾಡದ ಎಸ್​ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ (4,125), ಬೆಂಗಳೂರಿನ ನಾರಾಯಣ ಹೃದಯಾಲಯ (3,320) ರೋಗಿಗಳಿಗೆ ಹೆಚ್ಚು ಸೇವೆ ನೀಡಿವೆ.
| ಪಂಕಜ ಕೆ.ಎಂ. ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
