ಚಿಕ್ಕಬಳ್ಳಾಪುರ:ರಾಜ್ಯದಲ್ಲಿನ ಎಲ್ಲ ಅರ್ಹ ಜನರಿಗೆ 6 ತಿಂಗಳಲ್ಲಿ ಆರೋಗ್ಯ ವಿಮೆ ಸೌಲಭ್ಯದ ಆಯುಷ್ಮಾನ್ ಕಾರ್ಡ್ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಎಸ್​ಜೆಸಿಐಟಿ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಡಾ.ಕೆ.ಸುಧಾಕರ್ ಫೌಂಡೇಷನ್ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿರುವ ಎರಡು ದಿನಗಳ ಬೃಹತ್ ಆರೋಗ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಸೋಂಕನ್ನು ಸಮರ್ಥವಾಗಿ ನಿಭಾಯಿಸಿದ ರಾಜ್ಯ ಸರ್ಕಾರವು, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ವಿಶೇಷ ಆದ್ಯತೆ ನೀಡಿದೆ. ಸಮರ್ಪಕ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೇರಿ ಗುಣಮಟ್ಟದ ನಾನಾ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಪ್ರತಿಯೊಬ್ಬರೂ ಸದ್ವಿನಿಯೋಗಪಡಿಸಿಕೊಳ್ಳಬೇಕು. ಇನ್ನು ಕಡ್ಡಾಯವಾಗಿ 30 ವರ್ಷ ಮೇಲ್ಪಟ್ಟ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಕಳೆದ ನೂರು ವರ್ಷಗಳಲ್ಲೇ ಕರೊನಾದಂತಹ ಸಾಂಕ್ರಾಮಿಕವನ್ನು ಸರ್ಕಾರ ಎದುರಿಸಿರಲಿಲ್ಲ. ಅದರಲ್ಲೂ ಆರೋಗ್ಯ ಸಚಿವನಾಗಿ ರಾಜ್ಯದಲ್ಲಿ ಮಾರಕ ಸೋಂಕಿನ ನಿಯಂತ್ರಣದ ಸವಾಲನ್ನು ನಿಭಾಯಿಸಬೇಕಾದ ಅವಕಾಶ ಸಿಕ್ಕಿತು. ಇದನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಲಾಯಿತು ಎಂದ ಸುಧಾಕರ್, ಅಭಿವೃದ್ಧಿಶೀಲ ದೇಶಗಳಲ್ಲಿ ಕರೊನಾ ಸಾಂಕ್ರಾಮಿಕ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ವಿದೇಶಿ ಮಾಧ್ಯಮಗಳು ವ್ಯಾಖ್ಯಾನಿಸಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಸವಾಲಿನ ನೇತೃತ್ವ ವಹಿಸಿ ಯಶಸ್ವಿ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಂಡರು. ಮುಖ್ಯಮಂತ್ರಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರೋಗ್ಯ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬಿದರು. ಸಮರೋಪಾದಿಯ ಅಗತ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಜ್ಜುಗೊಳಿಸಿದರು ಎಂದು ಹೇಳಿದರು.
ರಾಜ್ಯದಲ್ಲಿ ಇಲ್ಲಿಯವರೆಗೆ 10.80 ಕೋಟಿ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಶೇ.100, ಎರಡನೇ ಡೋಸ್ ಶೇ.98, ಮೂರನೇ ಡೋಸ್ ಶೇ.70 ಸಾಧನೆ ತೋರಲಾಗಿದೆ ಎಂದ ಸಚಿವರು, ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಉತ್ತಮವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲು ಬೃಹತ್ ಆರೋಗ್ಯ ಮೇಳ ಕೈಗೊಂಡಿದ್ದು, 14 ಖಾಸಗಿ ವೈದ್ಯಕೀಯ ಕಾಲೇಜು, 20 ಖಾಸಗಿ ಆಸ್ಪತ್ರೆ, 12 ಕಣ್ಣಿನ ಆಸ್ಪತ್ರೆ ಸೇರಿ ಹಲವು ಸಂಸ್ಥೆಗಳ ವೈದ್ಯರು ಮತ್ತು ಸಿಬ್ಬಂದಿ ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ವಿವರಿಸಿದರು.
ಭಾವುಕರಾದ ಸಚಿವ:ಕಾಲೇಜು ವ್ಯಾಸಂಗದ ಅವಧಿಯಲ್ಲಿ ತಾಯಿ ಶಾಂತಾ ಹೃದಯಾಘಾತಕ್ಕೊಳಗಾಗಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮನೆಯಿಂದ ಆಸ್ಪತ್ರೆಗೆ ಕರೆ ತರಲು ಒಂದು ಗಂಟೆ ಸಮಯ ಹಿಡಿಯಿತು. ಇದರಿಂದ ಅವರನ್ನು ಕಳೆದುಕೊಳ್ಳಬೇಕಾಯಿತು. ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ಅಂದು ತಾಯಿಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕೆಂಬ ಅರಿವು ನನಗಿರಲಿಲ್ಲ. ಈಗಲೂ ಸಾಮಾನ್ಯ ಜನರಲ್ಲಿ ಆರೋಗ್ಯದ ಅರಿವಿನ ಕೊರತೆ ಇದೆ ಎಂದು ಹೇಳಿದ ಸುಧಾಕರ್ ಭಾವುಕರಾದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ:ಬರೋಬ್ಬರಿ 2 ಲಕ್ಷ ಮಂದಿ ಭಾಗಿಯಾಗುವು ದರೊಂದಿಗೆ ಎರಡು ದಿನಗಳ ಬೃಹತ್ ಆರೋಗ್ಯ ಮೇಳವು ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದ್ದು, ಸಂಸ್ಥೆಯ ಅಧ್ಯಕ್ಷ ಡಾ.ದಿವಾಕರ್ ಸುಕುಲ್, ಇಂಗ್ಲೆಂಡ್ ಸಂಸದ ವೀರೇಂದ್ರ ಶರ್ವ, ಸುಪ್ರೀಂ ಕೋರ್ಟ್ ವಕೀಲ ಸಂತೋಷ್ ಶುಕ್ಲ ಅವರು ಸಚಿವ ಡಾ.ಕೆ.ಸುಧಾಕರ್​ಗೆ ಪ್ರಮಾಣ ಪತ್ರ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಮೊದಲ ದಿನವಾದ ಶನಿವಾರ 2,05,343 ಮಂದಿ ಭಾಗವಹಿಸಿ, ಆರೋಗ್ಯ ಸೇವೆ ಪಡೆದಿರುವುದು ಹೊಸ ದಾಖಲೆಯಾಗಿದೆ.
ಮಾನವ ಸಂಪನ್ಮೂಲವೇ ದೇಶದ ಪ್ರಮುಖ ಸಂಪನ್ಮೂಲ. ಆರೋಗ್ಯಕರ ಜನರಿಂದ ದೇಶ ಸುಸ್ಥಿರವಾಗಿರುತ್ತದೆ. ಯಾವುದೇ ಅನಾರೋಗ್ಯದ ಲಕ್ಷಣ ಇಲ್ಲದವರೂ ಆರೋಗ್ಯ ಮೇಳಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಕುಟುಂಬದ ಹೊರೆಯನ್ನು ತಗ್ಗಿಸಬೇಕು.
|ಡಾ. ನಿರ್ಮಲಾನಂದನಾಥ ಸ್ವಾಮೀಜಿಆದಿಚುಂಚನಗಿರಿ ಮಠದ ಪೀಠಾಧಿಪತಿ
ಸ್ಥಳೀಯ ಆಸ್ಪತ್ರೆಗಳು ಹಾಗೂ ಧಾರ್ವಿುಕ ಸಂಸ್ಥೆಗಳ ನೆರವಿನಲ್ಲಿ ಪ್ರತಿ ಜಿಲ್ಲೆಗಳಲ್ಲಿ ಇದೇ ರೀತಿಯ ಬೃಹತ್ ಆರೋಗ್ಯ ಮೇಳವನ್ನು ರಾಜ್ಯ ಸರ್ಕಾರ ಆಯೋಜಿಸಬೇಕು. ಸ್ವಚ್ಛ ಭಾರತ, ಯೋಗ ಮೊದಲಾದವುಗಳ ಮೂಲಕ ಸದಾ ಆರೋಗ್ಯವಾಗಿರಿಸಲು ಆರೋಗ್ಯ ಮೇಳದಲ್ಲಿ ಪ್ರೇರಣೆ ಸಿಗುವಂತಾಗಬೇಕು.
|ಬಿ.ಎಲ್.ಸಂತೋಷ್ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
1.50 ಲಕ್ಷ ನೋಂದಣಿ:ಆರೋಗ್ಯ ಮೇಳದಲ್ಲಿ ಆನ್​ಲೈನ್ ಇಲ್ಲವೇ ಆಫ್​ಲೈನ್ ಮೂಲಕ ಹೆಸರು ನೋಂದಣಿಗೆ ಅವಕಾಶ ನೀಡಿದ್ದು, ಇದರಲ್ಲಿ ಕೇವಲ ಆನ್​ಲೈನ್​ನಲ್ಲೇ 1.50 ಲಕ್ಷ ನೋಂದಣಿಯಾಗಿದೆ ಎಂಬುದು ಅಚ್ಚರಿಯ ಸಂಗತಿ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 2 =
Remember me
