ಬೆಂಗಳೂರು:ಮಹಿಳೆಯರಿಗೆ ಪ್ರತ್ಯೇಕ ಹಾಗು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭವಾಗಲಿದ್ದು, ಈ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮನೆ, ಮಕ್ಕಳು ಸೇರಿ ಕುಟುಂಬದ ಸದಸ್ಯರ ಆರೋಗ್ಯ ನಿರ್ವಹಣೆ ಮಾಡುವ ಮಹಿಳೆಯರು ಕೆಲಸದ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಅದು ಗೃಹಿಣಿಯಾಗಿರಬಹುದು, ಕೆಲಸಕ್ಕೆ ಹೋಗುವವರಾಗಿರಬಹುದು. ಮಹಿಳೆಯರು ಆರೋಗ್ಯದ ಬಗ್ಗೆ ಸದಾ ನಿರ್ಲಕ್ಷ್ಯ ಹೊಂದಿರುತ್ತಾರೆ. ಪರಿಣಾಮ ಆರೋಗ್ಯ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಹೋಗುತ್ತಾರೆ. ಇದಕ್ಕೆ ಪರಿಹಾರವಾಗಿ ಹಾಗೂ ಆರಂಭದಲ್ಲೇ ಆರೋಗ್ಯ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳನ್ನು ತೆರೆಯಲಾಗುತ್ತಿದೆ. ಇದು ಕೇವಲ ಮಹಿಳೆಯರಿಗಾಗಿಯೇ ಮೀಸಲಾದ ಕ್ಲಿನಿಕ್​ಗಳು. ಇಲ್ಲಿ ನುರಿತ ಸ್ತ್ರೀರೋಗ ತಜ್ಞರು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆಗಳನ್ನು ನೀಡಲಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಈ ಕುರಿತು ವಿವರಗಳನ್ನು ನೀಡಿದರು.
ಕ್ಲಿನಿಕ್​ಗಳಲ್ಲಿ ಲಭ್ಯವಾಗುವ ಸೇವೆಗಳು:ಚಿಕ್ಕ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರಿಗೆ ಆರೋಗ್ಯ ಸೇವೆ ದೊರೆಯಲಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಮುಟ್ಟಿನ ತೊಂದರೆ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಸಂಧಿವಾತ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ, ಗರ್ಭಿಣಿಯರಿಗೆ 9 ತಿಂಗಳ ಕಾಲ ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಮತ್ತು ನವಜಾತ ಶಿಶುಗಳ ಸಮಗ್ರ ಅರೈಕೆಯ ಸಲಹೆ, ಗರ್ಭನಿರೋಧಕ ಸೇವೆಗಳು, ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿ ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ಬಗೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು.
ತಾಯಿ ಮತ್ತು ಶಿಶು ಮರಣ ತಡೆ:ರಾಜ್ಯದಲ್ಲಿ ಈಗಾಗಲೇ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಇದನ್ನು ಮತ್ತಷ್ಟು ತಗ್ಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳು ನೆರವಾಗಲಿವೆ. ಇಲ್ಲಿ ಗರ್ಭಿಣಿಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಸೇವನೆ ಹಾಗೂ ವೈಯಕ್ತಿಕ ಸ್ವಚ್ಛತೆಯ ಕುರಿತು ಸಲಹೆ, ಅಗತ್ಯ ಔಷಧಗಳ ಉಚಿತ ಪೂರೈಕೆಯಿಂದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರಕ್ತ ಹೀನತೆ, ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿ ಸಂಭವಿಸು ತಾಯಿ ಮತ್ತು ಶಿಶುಗಳ ಮರಣ ಪ್ರಮಾಣವನ್ನು ತಡೆಯಬಹುದಾಗಿದೆ.
ಬಡ ಹಾಗೂ ಮಧ್ಯಮ ವರ್ಗದವರಿಗೆ ಉಚಿತ ಇಲ್ಲವೆ ಕಡಿಮೆ ದರದಲ್ಲಿ ಐವಿಎಫ್ ಚಿಕಿತ್ಸೆ ಒದಗಿಸಲು ‘ಫರ್ಟಿಲಿಟಿ ಸೆಂಟರ್’ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.
|ಡಾ. ಕೆ. ಸುಧಾಕರ್ಆರೋಗ್ಯ ಸಚಿವರು
ಬಂಜೆತನ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಕಲಬುರಗಿ ಕಂದಾಯ ವಿಭಾಗಗಳಲ್ಲಿ ತಲಾ ಒಂದು ಫರ್ಟಿಲಿಟಿ ಸೆಂಟರ್​ಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುತ್ತಿರುವುದು ದೇಶದಲ್ಲಿ ಇದು ಮೊದಲು. ಬದಲಾದ ಜೀವನ ಶೈಲಿ ಮತ್ತು ಆಹಾರ ಕ್ರಮ ಹಾಗೂ ಒತ್ತಡದಿಂದಾಗಿ ಬಹಳಷ್ಟು ದಂಪತಿಗಳಲ್ಲಿ ಫಲವತ್ತತೆಯ ಸಮಸ್ಯೆ ಹೆಚ್ಚುತ್ತಿದೆ. ಹಾಗಾಗಿ ಬಹಳಷ್ಟು ಮಂದಿ ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದ 4 ಸರ್ಕಾರಿ ಆಸ್ಪತ್ರೆಗಳಲ್ಲಿ ಫರ್ಟಿಲಿಟಿ ಕ್ಲಿನಿಕ್​ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಸ್ವಂತ ಮಗು ಹೊಂದುವ ಕನಸಿನೊಂದಿಗೆ ಖಾಸಗಿ ಹಿಡಿತಕ್ಕೆ ಸಿಲುಕುತ್ತಿರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಉಚಿತ ಇಲ್ಲವೆ ಕಡಿಮೆ ದರದಲ್ಲಿ ಐವಿಎಫ್ ಚಿಕಿತ್ಸೆ ಒದಗಿಸಲು ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಸಂಬಂಧಿಸಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆ ಯೋಚಿಸಿದೆ.
ರಾಜ್ಯದಲ್ಲಿ ಮೆಡಿಕಲ್ ಸೀಟು ಪಡೆದವರೆಲ್ಲ ಗ್ರಾಮೀಣ ಸೇವೆ ಮಾಡಬೇಕೆಂಬ ಕಾನೂನು ಸಡಿಲಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಭಾಗದ ಸರ್ಕಾರಿ ಆರೋಗ್ಯ ಸೇವೆಯಲ್ಲಿ ವೈದ್ಯರ ಕೊರತೆ ಗಂಭೀರವಾಗಿ ಬಾಧಿಸಿದ ಕಾರಣ ರಾಜ್ಯದಲ್ಲಿ ಮೆಡಿಕಲ್ ಶಿಕ್ಷಣ ಪೂರೈಸಿದವರು ಗ್ರಾಮೀಣ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿತ್ತು.
ಕಾಲಾನುಕ್ರಮದಲ್ಲಿ ವೈದ್ಯರ ನೇಮಕಕ್ಕೆ ಆದ್ಯತೆ ಕೊಟ್ಟಿರುವ ಕಾರಣ ವೈದ್ಯರ ಲಭ್ಯತೆ ಹೆಚ್ಚಿದೆ. ಹೀಗಾಗಿ, ಮುಂಬರುವ ವರ್ಷದಲ್ಲಿ ಗ್ರಾಮೀಣ ಸೇವೆಗೆ ಸರ್ಕಾರಿ ಕೋಟಾದಡಿ ಸೀಟು ಪಡೆದವರನ್ನು ಮಾತ್ರ ಪರಿಗಣಿಸಲು ಬಯಸಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಏಳೂವರೆ ಸಾವಿರ ಎಂಬಿಬಿಎಸ್ ಸೀಟುಗಳಿವೆ. ಇದರಲ್ಲಿ ಸರ್ಕಾರದ ಸೀಟುಗಳು ಮೂರೂವರೆ ಸಾವಿರದಷ್ಟಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿಯೇ ನಿಯಮ ಸಡಿಲಗೊಳಿಸುವ ತಿದ್ದುಪಡಿ ವಿಧೇಯಕ ಮಂಡನೆ ಸಾಧ್ಯತೆ ಇದೆ. ವಿಜಯವಾಣಿ ಸಂವಾದದಲ್ಲಿ ಡಾ.ಸುಧಾಕರ್ ಈ ವಿಚಾರ ಖಚಿತಪಡಿಸಿದರು.
ನಿಯಮ ಸಡಿಲದ ಪರಿಣಾಮ:ಪ್ರಸ್ತುತ ತರುತ್ತಿರುವ ತಿದ್ದುಪಡಿ ಕಾನೂನಿನಿಂದ ಗ್ರಾಮೀಣ ಸೇವೆ ಕಡ್ಡಾಯ ಎಂಬುದು ಸರ್ಕಾರಿ ಕೋಟಾದಡಿ ಸೀಟು ಪಡೆದವರಿಗೆ ಮಾತ್ರ ಅನ್ವಯವಾಗಲಿದೆ. ವರ್ಷಕ್ಕೆ ಮೂರು ಸಾವಿರದಷ್ಟು ಮಂದಿ ಈ ಮಾರ್ಗದಲ್ಲಿ ಗ್ರಾಮೀಣ ಸೇವೆಗೆ ಲಭ್ಯರಾಗುತ್ತಾರೆ. ಹೀಗಾಗಿ, ಸರ್ಕಾರಕ್ಕೆ ವೈದ್ಯರ ಕೊರತೆ ಬಾಧಿಸದು. 2013ರಲ್ಲಿ ‘ಕರ್ನಾಟಕದಲ್ಲಿ ವೈದ್ಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ವಿಧೇಯಕ’ ಮಂಡಿಸಿದ್ದ ಅಂದಿನ ವೈದ್ಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಕೋರ್ಸ್ ಅವಧಿಯನ್ನು ಐದೂವರೆ ವರ್ಷಗಳ ಬದಲಿಗೆ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯನ್ನೂ ಸೇರಿಸಿ 6 ವರ್ಷಗಳ ಕೋರ್ಸ್ ರೂಪಿಸುವುದರಿಂದ ಗ್ರಾಮೀಣ ಸೇವೆಗೆ ವೈದ್ಯರು ಸಿಗುತ್ತಾರೆ ಎಂದು ಸರ್ಕಾರದ ತೀರ್ಮಾನ ಸಮರ್ಥಿಸಿಕೊಂಡಿದ್ದರು. ಸರ್ಕಾರದ ನಿಲುವಿಗೆ ಆಕ್ಷೇಪವೂ ವ್ಯಕ್ತವಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಗ್ರಾಮೀಣ ಸೇವೆ ನಿರಾಕರಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ತಡೆ ಹಿಡಿಯಲಾಗುವುದು ಹಾಗೂ ಕರ್ನಾಟಕದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಜತೆಗೆ, ಎಂಬಿಬಿಎಸ್ ಮಾಡಿದವರಿಗೆ 15 ಲಕ್ಷ, ಪಿ.ಜಿ. ಡಿಪ್ಲೊಮಾ ಮಾಡಿದವರಿಗೆ 25 ಲಕ್ಷ ಮತ್ತು ಎಂಡಿ ಮಾಡಿದವರಿಗೆ 25 ಲಕ್ಷ ರೂ.ವರೆಗೆ ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಹೊಸ ಕಾಲೇಜು:ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿದ ಮಾಹಿತಿ ಪ್ರಕಾರ, ಈ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಹಾವೇರಿ, ಚಿಕ್ಕಮಗಳೂರು, ಬೆಂಗಳೂರು, ಚಿಕ್ಕ ಬಳ್ಳಾಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಆರಂಭವಾಗಿದ್ದು, 1-2 ಎರಡನೇ ವರ್ಷದ ಕೋರ್ಸ್ ನಡೆಯುತ್ತಿದೆ. ಪಿಪಿಪಿ ಮಾಡೆಲ್​ನಲ್ಲಿ ಚಿತ್ರದುರ್ಗದಲ್ಲಿ ಹೊಸ ಕಾಲೇಜು ಆರಂಭಿಸಲಾಗುತ್ತಿದೆ. ರಾಮನಗರದಲ್ಲಿ ಫೆಬ್ರವರಿಯಲ್ಲಿ ಹೊಸ ಕಾಲೇಜಿಗೆ ಶಂಕುಸ್ಥಾಪನೆ ನಡೆಯಲಿದೆ. ಒಟ್ಟಾರೆ ಇನ್ನೆರಡು ವರ್ಷದಲ್ಲಿ ಸರ್ಕಾರಿ ಕಾಲೇಜಿನಲ್ಲೇ 4500 ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
