ಬೆಂಗಳೂರು: ಕರೊನಾ ಮಹಾಮಾರಿಯ ಸದ್ದಡಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದ ‘ಜನತಾ ಕರ್ಫ್ಯೂಗೆ’ ದೇಶವ್ಯಾಪಿ ಅಭೂತಪೂರ್ವ ಸ್ಪಂದನೆ ದೊರೆತ ಹೊರತಾಗಿಯೂ ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ ಹೊಸದಾಗಿ 6 ಸೋಂಕು ಪ್ರಕರಣ ದೃಢಪಟ್ಟ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಬೆಂಗಳೂರು ಸೇರಿದಂತೆ ಸೋಂಕು ಪ್ರಕರಣ ವರದಿಯಾದ ರಾಜ್ಯದ 9 ಜಿಲ್ಲೆಗಳಲ್ಲಿ ಮಾ.31ರವರೆಗೆ ಸಂಪೂರ್ಣ ದಿಗ್ಬಂಧನ (ಲಾಕ್​ಡೌನ್) ಘೋಷಿಸಿದೆ. ಇದರ ಪರಿಣಾಮ ಇಡೀ ರಾಜ್ಯದ ಮೇಲೂ ಗೋಚರಿಸುವುದರಿಂದ ಜನತಾಕರ್ಫ್ಯೂಗೆ ತೋರಿದಷ್ಟೇ ಬೆಂಬಲ, ಸಂಯಮವನ್ನು ಇನ್ನೂ 9 ದಿನ ಮುಂದುವರಿಸಿಕೊಂಡುವ ಹೋಗುವ ಜವಾಬ್ದಾರಿ ಮತ್ತೆ ಜನರ ಹೆಗಲೇರಿದೆ.
ಕರೊನಾ ವಿರುದ್ಧದ ಮುಂದುವರಿದ ಸಮರವಾಗಿ ರಾಜ್ಯ ಸರ್ಕಾರ ರಾಜ್ಯದ ಗಡಿಗಳ ಬಂದ್​ಗೂ ಮುಂದಾಗಿದೆ. ಸಿಎಂ ಯಡಿಯೂರಪ್ಪ ಕರೊನಾ ಮೂರನೇ ಹಂತಕ್ಕೆ ತಲುಪಿದರೆ ಆಗುವ ಅನಾಹುತ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಹಿರಿಯ ವೈದ್ಯ ಡಾ. ದೇವಿಶೆಟ್ಟಿ ಅವರನ್ನು ಆಹ್ವಾನಿಸಿ ವೈದ್ಯಕೀಯ ಸಲಹೆ ಪಡೆದುಕೊಂಡರು. ಬೇರೆ ಬೇರೆ ದೇಶಗಳಲ್ಲಿ ಕರೊನಾ 3ನೇ ಹಂತ ದಾಟಿರುವುದರಿಂದ ಅಲ್ಲಿ ಆಗಿರುವ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ರಾಜ್ಯದಲ್ಲಿಯೂ ಕರೊನಾ ಸೋಂಕಿತರ ಸಂಖ್ಯೆ 26ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೇ ಆಗಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಇತರರು ಉಪಸ್ಥಿತರಿದ್ದರು.
ಗಡಿ ಪೂರ್ಣ ಬಂದ್: ನೆರೆಯ ಕೇರಳ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗಡಿಗಳನ್ನು ಬಂದ್ ಮಾಡುವ ಗಟ್ಟಿಯಾದ ತೀರ್ವನವನ್ನು ಕೈಗೊಳ್ಳಲಾಗಿದೆ. ಇದರಿಂದ ಸೋಂಕಿತರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದು ತಪ್ಪಲಿದೆ. ಲಾಕ್​ಡೌನ್ 9 ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ಬೆಂಗಳೂರು ಸೇರಿದಂತೆ ಅಂತರ ಜಿಲ್ಲಾ ಸಾರಿಗೆ ವ್ಯವಸ್ಥೆ ರದ್ದಾಗುವುದರಿಂದ ಪ್ರಮುಖ ನಗರಗಳ ಸಂಪರ್ಕ ತಪು್ಪತ್ತದೆ. ಹೀಗಾಗಿ ಜನಜೀವನದ ಮೇಲೆ ಪರಿಣಾಮ ಬೀರುವುದು ಬಹುತೇಕ ಖಚಿತ
ಕರೊನಾ ಆಸ್ಪತ್ರೆ: ರಾಜ್ಯದಲ್ಲಿ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 1700 ಹಾಸಿಗೆಗಳ ವಿಕ್ಟೋರಿಯಾ ಅಸ್ಪತ್ರೆಯನ್ನು ಕೇವಲ ಕರೊನಾ ಸೋಂಕಿತರ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗುತ್ತದೆ.
ವಾರ್​ರೂಂ: ಕರೊನಾ ತಡೆಗೆ ಸಾರ್ವಜನಿಕರ ಸೇವೆಗಾಗಿ ವಾರ್​ರೂಂನ್ನು ಬಾಲಬ್ರೂಯಿ ಅತಿಥಿಗೃಹದಲ್ಲಿ ತೆರೆಯಲಾಗುತ್ತದೆ. ಪ್ರತ್ಯೇಕ ದೂರವಾಣಿಯನ್ನು ಸಹ ಒದಗಿಸಲಾಗುತ್ತದೆ. ದಿನದ 24 ಗಂಟೆ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತದೆ.
ಹಳ್ಳಿಗೆ ಹೋಗಬೇಡಿ: ಹಳ್ಳಿಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ಕಡಿಮೆ ಇರುವುದರಿಂದ ಅಲ್ಲಿ ವಯಸ್ಸಾದವರೇ ಹೆಚ್ಚು ವಾಸಿಸುತ್ತಿರುವ ಕಾರಣ ಮುಂದಿನ 15 ದಿನಗಳ ಕಾಲ ಯಾರೂ ಹಳ್ಳಿಗಳ ಕಡೆ ಹೋಗದಿರುವಂತೆ ಸರ್ಕಾರ ಮನವಿ ಮಾಡಿದೆ.
ಇಂದೂ ಸಾರಿಗೆ ಸೇವೆ ಇರಲ್ಲ: ರಾಜ್ಯದಲ್ಲಿ ಸೋಮವಾರ ಕೂಡ ಸಾರ್ವಜನಿಕ ಸಾರಿಗೆ ಸೇವೆಯನ್ನು ಸಂಪೂರ್ಣವಾಗಿ ರದ್ದು ಮಾಡಲು ತೀರ್ವನಿಸಲಾಗಿದೆ. ಮಂಗಳವಾರದಿಂದ ಎಲ್ಲ ಎಸಿ ಬಸ್ಸುಗಳು ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ಮಾ. 31ರ ತನಕ ಸ್ಥಗಿತಗೊಳಿಸಲಾಗುವುದು.
ಅಧಿವೇಶನ ಯಥಾಸ್ಥಿತಿ: ವಿಧಾನಮಂಡಲ ಅಧಿವೇಶನ ಈಗ ಘೋಷಣೆಯಾಗಿರುವಂತೆ ಯಥಾಸ್ಥಿತಿಯಲ್ಲಿ ನಡೆಯಲಿದೆ.
ಸಿಎಂ ಚಟುವಟಿಕೆ: ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಯಡಿಯೂರಪ್ಪ ಭಾನು ವಾರ ಇಡೀ ದಿನ ಮನೆಯಲ್ಲಿದ್ದರೂ ಬ್ಯುಸಿಯಾಗಿದ್ದರು. ಬೆಳಗ್ಗೆ 6ಕ್ಕೆ ಮನೆಯಲ್ಲಿ ಟಾಸ್ಕ್​ಪೋರ್ಸ್ ಸಭೆ ನಡೆಸಿದ ಅವರು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ತಮ್ಮ ಸಚಿವಾಲಯದ ಅಧಿಕಾರಿಗಳಿಂದ ಗಂಟೆಗೊಮ್ಮೆ ಮಾಹಿತಿ ಪಡೆದರು. ಮಧ್ಯಾಹ್ನ 2ಕ್ಕೆ ಮತ್ತೆ ಸಭೆ ನಡೆಸಿದ ಸಿಎಂ ಸಂಜೆ 5ಕ್ಕೆ ಕುಟುಂಬದ ಸದಸ್ಯರೊಂದಿಗೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.
ಏನಿರುತ್ತದೆ
ಲಾಕ್​ಡೌನ್ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆ, ಔಷಧಾಲಯ, ಆಂಬ್ಯುಲೆನ್ಸ್, ಹಾಲು, ದಿನಪತ್ರಿಕೆ, ಪೆಟ್ರೋಲ್ ಬಂಕ್
ಆಹಾರ, ಪಡಿತರ ಮಳಿಗೆಗಳು, ತರಕಾರಿ, ಮಾಂಸ, ಹಣ್ಣಿನ ಮಾರುಕಟ್ಟೆಗಳು
ಸರಕು ಸಾಗಣೆ
ಪೊಲೀಸ್, ಅಗ್ನಿಶಾಮಕ ಸೇವೆ
ಸರ್ಕಾರಿ ಕಚೇರಿ, ಅಂಚೆ ಕಚೇರಿ, ವಿದ್ಯುತ್ ಪೂರೈಕೆ, ಮುನ್ಸಿಪಲ್ ಸೇವೆಗಳು ಲಭ್ಯ
ಬ್ಯಾಂಕ್, ಎಟಿಎಂಗಳು
ಹೋಟೆಲ್​ಗಳಲ್ಲಿ ಪಾರ್ಸೆಲ್ ಮಾತ್ರ
ಆಹಾರ, ಔಷಧಗಳನ್ನು ಮನೆಗೆ ಡೆಲಿವರಿ ಕೊಡಲು ಅವಕಾಶ
ಕೃಷಿ ಸಂಬಂಧಿತ ಮಳಿಗೆಗಳು
ಏನಿರುವುದಿಲ್ಲ
ವಾಣಿಜ್ಯ ಮಳಿಗೆಗಳು, ವರ್ಕ್​ಶಾಪ್, ಗೋದಾಮುಗಳು
ಸರ್ಕಾರಿ ಮತ್ತು ಖಾಸಗಿ ವಾಹನಗಳು
ಕಾರ್ಖಾನೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದಿಲ್ಲ
ಐಟಿ-ಬಿಟಿ ಸಂಸ್ಥೆಗಳ ನೌಕರರು ಕಡ್ಡಾಯವಾಗಿ ವರ್ಕ್ ಫ್ರಂ ಹೋಂ ಮಾಡಬೇಕು (ಸಾಧ್ಯವಾಗದ ಪರಿಸ್ಥಿತಿ ಹೊರತುಪಡಿಸಿ)
ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಸಾರಿಗೆ ಸೇವೆ ರದ್ದು
ಹವಾನಿಯಂತ್ರಿತ ಸಾರಿಗೆ ವ್ಯವಸ್ಥೆ ನೀಡುವಂತಿಲ್ಲ
ಶಾಪಿಂಗ್ ಮಾಲ್, ಚಲನಚಿತ್ರ ಮಂದಿರಗಳು
ಮನೆಯಲ್ಲಿ ಆಹಾರ ಸ್ಟಾಕ್ ಮಾಡಿಕೊಳ್ಳುವ ಅಗತ್ಯತೆ ಇಲ್ಲ. ಆಹಾರ ಸಮಸ್ಯೆ ಆಗದ ರೀತಿ ಸರ್ಕಾರ ಕ್ರಮ ವಹಿಸಿದೆ. ರಾಜ್ಯದ ಜನ ಮಾ. 31ರ ತನಕ ಸಹಕರಿಸಬೇಕಾಗಿದೆ.
| ಬಿ.ಎಸ್.ಯಡಿಯೂರಪ್ಪ ಸಿಎಂ
ಮುಖ್ಯಮಂತ್ರಿ ಸಭೆಯ ಇತರ ನಿರ್ಧಾರಗಳು
=ಐಸಿಎಂಆರ್ ಮತ್ತು ಎನ್​ಐವಿ ಸಹಕಾರದೊಂದಿಗೆ ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ ಕರೊನಾ ತಪಾಸಣೆಗೆ ಪರವಾನಿಗೆ ಕೊಡಿಸಲು ಕ್ರಮ=ಲ್ಯಾಬ್ ಟೆಸ್ಟ್ ಗಳ ಪ್ರಮಾಣ ಹೆಚ್ಚಿಸಲು ಕ್ರಮ=ಸ್ಥಳೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯಗೊಳ್ಳಲು ತೀರ್ವನ=ಎಲ್ಲ ಚುನಾವಣೆಗಳ ಮುಂದೂಡಿಕೆ=ಎರಡು ತಿಂಗಳ ಪಡಿತರ ಒದಗಿಸಲು ಕ್ರಮ=ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ
ಭಾನುವಾರ ಒಂದೇ ದಿನ ರಾಜ್ಯದಲ್ಲಿ 6 ಮಂದಿ ಕರೊನಾ ವೈರಸ್​ ಸೋಂಕಿತರು ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
