|ಅರವಿಂದ ಅಕ್ಲಾಪುರಶಿವಮೊಗ್ಗ
ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್​ಗಳಲ್ಲಿ ಪಡಿತರ ಪೂರೈಕೆಯಲ್ಲಿ ವ್ಯತ್ಯಯವಾಗಿ ಕಳೆದ 15 ದಿನಗಳಿಂದ ವಿದ್ಯಾರ್ಥಿಗಳು ಆಹಾರಕ್ಕಾಗಿ ಪರದಾಡುವಂತಾಗಿದೆ. ಸರ್ಕಾರದಿಂದ ಸಕಾಲಕ್ಕೆ ಅಕ್ಕಿ, ಗೋಧಿ ಸರಬರಾಜು ಮಾಡದ ಕಾರಣ ಸಮಸ್ಯೆ ಎದುರಾಗಿದೆ. ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿ 1,867 ಹಾಸ್ಟೆಲ್​ಗಳಿದ್ದು, 1.58 ಲಕ್ಷ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಆಹಾರ ಸಮಸ್ಯೆ ನಿವಾರಿಸಲು ಪರದಾಡುತ್ತಿರುವ ಹಾಸ್ಟೆಲ್ ವಾರ್ಡನ್​ಗಳು ಅಕ್ಷರ ದಾಸೋಹ, ಅಂಗನವಾಡಿಗಳಿಂದ ಪಡಿತರ ತರಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ವಾರ್ಡನ್​ಗಳೇ ದಿನಸಿ ಅಂಗಡಿಗಳಲ್ಲಿ ಸಾಲಕ್ಕೆ ಅಕ್ಕಿ, ಪಡಿತರ ತಂದು ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಕರೊನಾ ಬಳಿಕ ಹಾಸ್ಟೆಲ್​ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯೂ ಮುಕ್ತಾಯವಾಗಿದೆ. ವಾರ್ಡನ್​ಗಳು ಈವರೆಗೆ ಕಷ್ಟಪಟ್ಟು ಪರಿಸ್ಥಿತಿ ನಿಭಾಯಿಸಿದ್ದಾರೆ. ಇನ್ನೊಂದು ವಾರ ಇದೇ ಸ್ಥಿತಿ ಮುಂದುವರಿದರೆ ಮಕ್ಕಳನ್ನು ಮನೆಗೆ ಕಳಿಸಬೇಕಾಗಿ ಬಂದರೂ ಅಚ್ಚರಿಯಿಲ್ಲ.
ವಸತಿ ಶಾಲೆಯಲ್ಲೂ ಸಮಸ್ಯೆ:ವಸತಿ ಶಾಲೆಗಳಲ್ಲೂ ರೇಷನ್ ಸಮಸ್ಯೆ ತಲೆ ದೋರಿದೆ. ರಾಜ್ಯದ 68 ಶಾಲೆಗಳಲ್ಲಿ ಆರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪಡಿತರ ಸಾಲ:ಸಾಮಾನ್ಯ ಜನರು ಮನೆಯಲ್ಲಿ ಅಕ್ಕಿ, ಗೋಧಿ ಖಾಲಿಯಾದರೆ ತಾತ್ಕಾಲಿಕವಾಗಿ ನೆರೆಹೊರೆಯವರಿಂದ ಸಾಲದ ರೂಪದಲ್ಲಿ ತರುತ್ತಾರೆ. ಈಗ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಿಗೂ ಇದೇ ಸ್ಥಿತಿ ಬಂದಿದೆ. ಸ್ಥಳೀಯವಾಗಿ ಪರಿಸ್ಥಿತಿ ನಿಭಾಯಿಸಲು ಮುಂದಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲೆ, ಅಂಗನವಾಡಿಗಳಿಂದ ಅಕ್ಕಿ, ಗೋಧಿ ಪಡೆಯಲು ವಾರ್ಡನ್​ಗಳಿಗೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶಾಲೆ, ಅಂಗನವಾಡಿಗಳಲ್ಲಿರುವ ಪಡಿತರ ಸಂಗ್ರಹ ಮತ್ತು ಮಕ್ಕಳ ಹಾಜರಾತಿ ಆಧರಿಸಿ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್​ಗಳಿಗೂ ರೇಷನ್ ನೀಡಲಾಗುತ್ತಿದೆ. ಇನ್ನೂ ಸ್ವಲ್ಪ ದಿನ ಇದೇ ವ್ಯವಸ್ಥೆ ಮುಂದುವರಿದರೆ ಶಾಲೆ, ಅಂಗನವಾಡಿಗಳಲ್ಲೂ ಪಡಿತರ ಕೊರತೆ ಎದುರಾಗುವುದು ನಿಶ್ಚಿತ.
ಹಾಸ್ಟೆಲ್​ಗಳಿಗೆ ಭಾರತೀಯ ಆಹಾರ ನಿಗಮದಿಂದ ಅಕ್ಕಿ, ಗೋಧಿ ಸರಬರಾಜಾಗುತ್ತದೆ. ಅದಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಕಾರಣ ಎಫ್​ಸಿಐ ಪಡಿತರ ನೀಡಿಲ್ಲ ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ.

ಹಾಸ್ಟೆಲ್​ಗಳಲ್ಲಿ ಪಡಿತರ ಸಮಸ್ಯೆ ಎದುರಾಗಿರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಪಡಿತರ ಪೂರೈಕೆಗೆ ಆದೇಶಿಸುತ್ತೇನೆ. ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರ ವಹಿಸಲಾಗುವುದು.
|ಕೋಟ ಶ್ರೀನಿವಾಸ ಪೂಜಾರಿಸಮಾಜ ಕಲ್ಯಾಣ ಸಚಿವ
ಕಳೆದ 15 ದಿನಗಳಿಂದ ಹಾಸ್ಟೆಲ್​ಗಳಲ್ಲಿ ಪಡಿತರ ಕೊರತೆಯಾಗಿದೆ. ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಪಡಿತರ ಎರವಲು ಪಡೆಯುವಂತೆ ಸೂಚಿಸಲಾಗಿದೆ. ಹಾಸ್ಟೆಲ್​ಗಳಿಗೆ ಅಕ್ಕಿ, ಗೋಧಿ ಪೂರೈಕೆಯಾದ ಬಳಿಕ ಶಾಲೆ, ಅಂಗನವಾಡಿಗಳಿಗೆ ಮರಳಿಸುವಂತೆ ಡಿಸಿ ಹಾಗೂ ಜಿಪಂ ಸಿಇಒ ಸೂಚಿಸಿದ್ದಾರೆ.
|ಹೆಸರು ಹೇಳಲಿಚ್ಛಿಸದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ
ಪ್ರತಿ ವಿದ್ಯಾರ್ಥಿಗೆ 10 ಕೆಜಿ ಅಕ್ಕಿ:ಮೆಟ್ರಿಕ್​ಪೂರ್ವ ವಿದ್ಯಾರ್ಥಿ ನಿಲಯದ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 1,500 ರೂ. ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 1,600 ರೂ.ಗಳನ್ನು ಆಹಾರಕ್ಕೆಂದು ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ. ದಿನವೊಂದಕ್ಕೆ ಒಬ್ಬ ವಿದ್ಯಾರ್ಥಿಗೆ ಊಟ, ಉಪಾಹಾರಕ್ಕೆಂದು 50 ರೂ. ಖರ್ಚು ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
