ಚೇತನ್ ಚಕ್ಕೆರೆ ಬಿಡದಿ
ಗ್ರಾಮ ಎಂದ ಮೇಲೆ ಅದಕ್ಕೊಂದು ಇತಿಹಾಸ ಇರಬೇಕು. ಇಲ್ಲೊಂದು ಗ್ರಾಮ ರಾಜ್ಯದಲ್ಲಿ ಹೆಸರು ಮಾಡಿದೆ. ಸಮಾಜಕ್ಕೆ ಹಲವು ಮಹನೀಯರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಈ ಗ್ರಾಮಕ್ಕೆ ಸಲ್ಲುತ್ತದೆ. ಪ್ರತಿ ಸರ್ಕಾರಗಳೂ ಈ ಗ್ರಾಮದ ಅಭಿವೃದ್ಧಿಗೆ ಒಲವು ತೋರಿಸುತ್ತಾರೆ. ಹಾಗಾದರೆ ಆ ಗ್ರಾಮ ಯಾವುದು ಅಂತೀರಾ ಈ ವರದಿ ಓದಿ..
ಹೌದು…. ಬಾನಂದೂರು ಗ್ರಾಮ ರಾಜ್ಯದಲ್ಲಿ ಚಿರಪರಿಚಿತವಾಗಿರುವ ಗ್ರಾಮವಾಗಿದೆ. ಬಿಡದಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಗ್ರಾಮ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜಾನಪದ ಕಲೆ ಹಾಗೂ ಆಧ್ಯಾತ್ಮಿಕವಾಗಿ ಕೂಡ ಹೆಸರು ಪಡೆದುಕೊಂಡಿದೆ. ಈ ಗ್ರಾಮ ಎಲ್ಲ ರೀತಿಯ ಸೊಗಡನ್ನು ಮೈಗೂಡಿಸಿಕೊಂಡಿದೆ. ಜಾನಪದ ಕಲೆಗಳಾದ ತಂಬೂರಿ, ಪಟ್ಟದ ಕುಣಿತ, ದೇವರ ಕುಣಿತದ ಕಲಾವಿದರು ಇಲ್ಲಿದ್ದಾರೆ. ನಶಿಸುತ್ತಿರುವ ಕುಂಬಾರಿಕೆ ವೃತ್ತಿ ಇಲ್ಲಿ ಜೀವಂತವಾಗಿದೆ. 3-4 ಕುಟುಂಬಗಳು ಇಂದಿಗೂ ಈ ಕಸುಬನ್ನು ನಡೆಸಿಕೊಂಡು ಹೋಗುತ್ತಿವೆೆ. ಅದೇ ರೀತಿ ಪೌರಾಣಿಕ ನಾಟಕಗಳನ್ನೂ ಪ್ರದರ್ಶನ ಮಾಡುವ ಅತಿ ಹೆಚ್ಚು ಕಲಾವಿದರೂ ಇಲ್ಲಿದ್ದಾರೆ.
ಹೌದು.. ಇವತ್ತಿನ ಬಾನಂದೂರು ಗ್ರಾಮ ಬಹಳ ವರ್ಷಗಳ ಹಿಂದೆ ಬಾಣಾವಾಡಿ ಆಗಿತ್ತು. ಕಾಲಕ್ರಮೇಣ ಬಾನಂದೂರಾಗಿ ಹೆಸರು ಪಡೆದುಕೊಂಡಿತ್ತು. ಇದರ ಇತಿಹಾಸ ನೋಡುತ್ತ ಹೋದರೆ ಬಾಣಾವಾಡಿಯಿಂದ ಲಿಂಗಾಯಿತರ ಕುಟುಂಬ ಪೊಲೀಸ್ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡು ಅವರಿಂದ ತಪ್ಪಿಸಿಕೊಳ್ಳಲು ಕಾಲ್ನಡಿಗೆಯಲ್ಲಿ ಹೋಗುವಾಗ ಬಿಡದಿ ಪಕ್ಕದಲ್ಲಿನ ತಗ್ಗು ಪ್ರದೇಶವಾದ ಗಿಡ-ಗಂಟಿಗಳಿಂದ ಕೂಡಿದ್ದ ಜಾಗ ಇದಾಗಿದ್ದರಿಂದ ಅವಿತುಕೊಳ್ಳಲು ಒಳ್ಳೆಯ ಸ್ಥಳವಾದ್ದರಿಂದ ಇಲ್ಲೇ ತಂಗಿದ್ದರು. ಸುಮಾರು ತಿಂಗಳಾದ ನಂತರ ಇಲ್ಲೇ ಒಂದು ಗುಡಿಸಲು ಗುಡಿಸಿ ಒಂದು ಮನೆ ಕಟ್ಟಿದರು. ನಂತರದ ದಿನಗಳಲ್ಲಿ ಇನ್ನೊಂದಷ್ಟು ಮಂದಿ ಇಲ್ಲಿಗೆ ಬಂದು ಸೇರಿಕೊಂಡರು. ದಿನ ಕಳೆದಂತೆ ಬಾಣಾವಾಡಿ ಬಾನಂದೂರು ಗ್ರಾಮವಾಗಿ ಬದಲಾಗಿ ಹೆಸರು ಮಾಡುತ್ತಿದೆ.
ಬಾನಂದೂರು ಗ್ರಾಮ ಕೇವಲ ಬಿಡದಿಗೆ ಸೀಮಿತವಾಗಿತ್ತು. ಗ್ರಾಮವನ್ನು ರಾಜ್ಯದಲ್ಲಿ ಪ್ರಚಲಿತಕ್ಕೆ ತಂದ ಹೆಮ್ಮೆ ಡಾ. ಕೆಂಪಯ್ಯ ಅವರಿಗೆ ಸಲ್ಲುತ್ತದೆ. ಟಿವಿ ಮಾಧ್ಯಮವಿಲ್ಲದ ಆ ಕಾಲಘಟ್ಟದಲ್ಲಿ ಆಕಾಶವಾಣಿ ರೇಡಿಯೋ ಹೆಚ್ಚು ಪ್ರಸಿದ್ಧಿ ಹೊಂದಿತ್ತು. ಜಾನಪದ ಗೀತೆಗಳು ಹಾಗೂ ಅದರ ರಚನೆ ಮಾಡುವುದರಲ್ಲಿ ಕೆಂಪಯ್ಯ ಪರಿಣಿತರಾಗಿದ್ದರು. ಹಾಗಾಗಿ ಮೊದಲಿಗೆ ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕರಾಗಿ ಸೇವೆಗೆ ಸೇರಿದರು. ಆ ನಂತರ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ವಿಶೇಷ ಜಾನಪದ ಸಂಗೀತ ನಿರ್ಮಾಪಕರಾಗಿ ಸೇವೆ ಸಲ್ಲಿಸಿದರು. ಹಾಗಾಗಿ ಕೆಂಪಯ್ಯ ಹೆಸರಿನ ಹಿಂದೆ ಬಾನಂದೂರು ಸೇರಿಕೊಂಡು ಬಾನಂದೂರು ಕೆಂಪಯ್ಯ ಎಂದು ಕರೆಯಲ್ಪಟ್ಟರು.
ಶಿಕ್ಷಣ ಕ್ಷೇತ್ರಕ್ಕೆ, ಆರೋಗ್ಯಕ್ಕೆ, ಹಳ್ಳಿಗರ ಉದ್ಧಾರ ಆಗಬೇಕಾದರೆ ನಮ್ಮ ಗ್ರಾಮೀಣ ಮಹಾಜನತೆ ಮೊದಲು ಅಕ್ಷರಸ್ಥರಾಗಬೇಕೆಂದು ಸಂಕಲ್ಪ ತೊಟ್ಟಂತೆ ನಡೆದುಕೊಂಡ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಜನಿಸಿದ ಗ್ರಾಮ ಕೂಡ ಇದೆ ಬಾನಂದೂರಾಗಿದೆ. ತಮ್ಮ ಬಾಲ್ಯ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಇದೇ ಗ್ರಾಮದಲ್ಲಿ ಪಡೆದು ತದನಂತರದ ದಿನಗಳಲ್ಲಿ ಅಧ್ಯಾತ್ಮದ ಕಡೆಗೆ ಒಲವು ಸೆಳೆದು ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾಗಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.
ಒಂದು ಕಾಲಘಟ್ಟದಲ್ಲಿ ಈ ಗ್ರಾಮದಲ್ಲಿ ಬೆಲ್ಲವನ್ನು ತಯಾರು ಮಾಡಲಾಗುತ್ತಿತ್ತು. ಸುಮಾರು 7-8 ಆಲೆ ಮನೆಗಳು ಇದೊಂದೇ ಗ್ರಾಮದಲ್ಲಿ ಇದ್ದು, ಈ ಆಲೆಮನೆಗಳಲ್ಲಿ ತಯಾರಿಸುತ್ತಿದ್ದ ಬೆಲ್ಲಕ್ಕೆ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇತ್ತಂತೆ. ಬಾನಂದೂರಿನ ಬೆಲ್ಲ ಅಂದರೆ ಅಷ್ಟು ಹೆಸರು ಮಾಡಿತ್ತು. ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಹಾಗಾಗಿ ಬೆಲ್ಲ ತಯಾರು ಮಾಡುವ ಆಲೆ ಮನೆಗಳು ಸಹ ಕಾರ್ಯನಿರ್ವಹಿಸುತ್ತಿದ್ದವು. ಇಲ್ಲಿನ ಆಲೆ ಮನೆ ಬೆಲ್ಲದ ಜತೆಗೆ ಆಲೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೂ ಬೇರೆ ಕಡೆ ಬೇಡಿಕೆ ಇತ್ತು.
ನಮ್ಮ ಗ್ರಾಮ ಇಂದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ನಮ್ಮ ಗ್ರಾಮದಲ್ಲಿ ಜನಿಸಿದ ಹಲವು ಮಹನಿಯರು ಕಾರಣರಾಗಿದ್ದಾರೆ. ಅಂತಹ ಗ್ರಾಮದಲ್ಲಿ ನಾವು ಜನಿಸಿರುವುದು ನಮ್ಮ ಪುಣ್ಯ. ಎಲ್ಲ ವರ್ಗದ ಜನರು ಈ ಗ್ರಾಮದಲ್ಲಿದ್ದಾರೆ. ಒಟ್ಟು 3500 ಜನಸಂಖ್ಯೆ ಇದ್ದು 500 ಮನೆಗಳಿವೆ. 1500 ಮತದಾರರನ್ನು ನಮ್ಮ ಗ್ರಾಮ ಹೊಂದಿದೆ. ನಮ್ಮ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ದೇವಾಲಯಗಳಿವೆ. ಅದರಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಹೆಚ್ಚು ಹೆಸರು ಪಡೆದಿದೆ. ನಮ್ಮ ಗ್ರಾಮ ಪುರಸಭೆಗೆ ಸೇರಿಕೊಂಡಿದ್ದು ವಾರ್ಡ್ ಆಗಿ ಬದಲಾಗಿದೆ.
ಗಂಗಾಧರ್, ಗ್ರಾಮದ ಹಿರಿಯ ಮುಖಂಡರು
ಜಾನಪದ ಕಲೆಗಳಿಗೆ ಸುತ್ತಮುತ್ತಲಿನ ಗ್ರಾಮ ಹಾಗೂ ತಾಲೂಕುಗಳಲ್ಲಿ ನಮ್ಮ ಗ್ರಾಮ ಹೆಸರುವಾಸಿಯಾಗಿದೆ. ಇದಕ್ಕೆಲ್ಲ ಮುನ್ನುಡಿ ಬರೆದವರು ಡಾ. ಕೆಂಪಯ್ಯ ಅವರು. ಪ್ಲಾಸ್ಟಿಕ್ ಬಂದ ಮೇಲೆ ಮಣ್ಣಿನ ವಸ್ತುಗಳು ಕಣ್ಮರೆಯಾಗುತ್ತಿವೆ. ಆದರೆ, ನಮ್ಮ ಗ್ರಾಮದಲ್ಲಿ ಕುಂಬಾರಿಕೆ ಇನ್ನೂ ಜೀವಂತವಾಗಿದೆ. ಇಲ್ಲಿನ ಕುಡಿಯುವ ನೀರಿನ ಗಡಿಗೆಗೆ ಬೇಡಿಕೆ ಇದೆ. ಬಾಲಗಂಗಾಧರ ನಾಥ ಸ್ವಾಮೀಜಿಗಳ ತಂದೆ ತಾಯಿಗಳ ಗದ್ದುಗೆ ಕೂಡ ಇದೆ. ಬಿಜಿಎಸ್‌ಗೆ ಸಂಬಂಧಿಸಿದ ಮಠ ಇದ್ದು ಶಾಲೆಗಳು ನಡೆಯುತ್ತಿವೆ.
ನಂಜುಂಡಿ, ಗ್ರಾಮದ ಯುವ ಮುಖಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twenty =
Remember me
