ಬೆಂಗಳೂರು: ರಾಜ್ಯ ಸರ್ಕಾರ ಅವಕಾಶ ನಿರಾಕರಿಸಿರುವ ನಡುವೆಯೂ ವಿವಿಧ ಸಂಘಟನೆಗಳು ಬಂದ್​ಗೆ ಸಿದ್ಧತೆ ನಡೆಸಿದ್ದು, ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಅವಕಾಶವಿಲ್ಲ. ಶಾಂತಿಯುತ ಪ್ರತಿಭಟನೆ ತಡೆಯುವುದಿಲ್ಲ. ಬಲವಂತವಾಗಿ ಬಂದ್ ಮಾಡಿಸಲು ಯತ್ನಿಸಿದರೆ ಕಠಿಣ ಕ್ರಮ ಅನಿವಾರ್ಯ ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ. ಆದರೂ ಸಂಘಟನೆಗಳು ಬಂದ್ ಮಾಡುವುದಾಗಿ ತಿಳಿಸಿದ್ದು, ಬೃಹತ್ ಮೆರವಣಿಗೆ, ಹೆದ್ದಾರಿ, ರೈಲು ತಡೆಗೆ ಮುಂದಾಗಿವೆ.
ರಾಜ್ಯದಾದ್ಯಂತ ಬಿಗಿ ಭದ್ರತೆ: ಕರ್ನಾಟಕ ಬಂದ್ ಹಿನ್ನೆಲೆ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಗಳಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಭದ್ರತೆ ಜವಾಬ್ದಾರಿ ವಹಿಸಲಾಗಿದ್ದು, ಕೆಎಸ್​ಆರ್​ಪಿ, ಸಿಎಆರ್, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಹಳೇ ಮೈಸೂರು ಭಾಗದಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಾದ್ಯಂತ ಸುಮಾರು 80 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಲವಂತ ಮಾಡದೆ ಸ್ವಯಂ ಪ್ರೇರಿತವಾಗಿ ಶಾಂತಿಯುತ ಬಂದ್ ಮಾಡಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಂದೋಬಸ್ತ್ ವಹಿಸಲಾಗಿದೆ. ಗುರುವಾರ ಮಧ್ಯರಾತ್ರಿ 12 ರಿಂದ ಶುಕ್ರವಾರ ರಾತ್ರಿ12ರವರೆಗೂ ನಗರದಲ್ಲಿ 144 ಸೆಕ್ಷನ್ ಜಾರಿಯಿರಲಿದೆ. ಫ್ರೀಡಂರ್ಪಾನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿರಲಿದೆ. ಸಂಘಟನೆಗಳಿಗೂ ಈ ಕುರಿತು ನೋಟಿಸ್ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬೀದಿಗಿಳಿದು ಹೋರಾಟ:ಬಂದ್ ವೇಳೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ತಡೆಯುವ ಜತೆಗೆ ಟೋಲ್​ಗಳನ್ನು ಬಂದ್ ಮಾಡುವ ಕೆಲಸವಾಗುತ್ತದೆ. ಬೆಂಗಳೂರು ನಗರದಲ್ಲಿ ಕನ್ನಡ ಪರ ಸಂಘಟನೆಗಳ ಸದಸ್ಯರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಬೆಳಗ್ಗೆ 10 ಗಂಟೆಗೆ ಮೇಖ್ರಿ ಸರ್ಕಲ್​ಯಿುಂದ ಟೌನ್​ಹಾಲ್​ವರೆಗೆ ರ‍್ಯಾಲಿ ನಡೆಯುತ್ತದೆ. ನಂತರ ವಾಟಾಳ್ ನೇತೃತ್ವದಲ್ಲಿ ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತದೆ. ಗಡಿಭಾಗದಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತದೆ. ರೈಲುಗಳನ್ನು ತಡೆಯುವ ಯತ್ನ ನಡೆಯಲಿದೆ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಮುತ್ತಿಗೆ ಹಾಕಲು ನಿರ್ಧರಿಸಿದೆ ಎಂದು ಸಮಿತಿ ಸಂಚಾಲಕ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ತಿಳಿಸಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು,ಇಂದು ಜನ-ಜಾನುವಾರುಗಳೊಂದಿಗೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರೈಲು ತಡೆ ಪ್ರತಿಭಟನೆ ನಡೆಸಲು ರೈತ ಸಂಘ ಸಿದ್ಧತೆ ಮಾಡಿಕೊಂಡಿದೆ. ಆದರೆ ಬಂದ್​ಗೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸ್ಪಂದನೆ ದೊರೆತಿಲ್ಲ.
ಸಾರಿಗೆ ನೌಕರರ ಕಡ್ಡಾಯ ಹಾಜರಾತಿಗೆ ಸೂಚನೆ: ಕರ್ನಾಟಕ ಬಂದ್ ನಡುವೆ ಸಾರ್ವಜನಿಕರ ಸಂಚಾರನಾಡಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಪಿಟಿಸಿ ಬಸ್ ಸಂಚಾರಕ್ಕೆ ನಿಗಮಗಳು ತೀರ್ವನಿಸಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ಶುಕ್ರವಾರ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ಉಳಿದ ಎಲ್ಲ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸಾರಿಗೆ ನಿಗಮಗಳು ಮೌಖಿಕ ಸೂಚನೆ ನೀಡಿವೆ.
ಹುಬ್ಬಳ್ಳಿ:ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಈ ರೀತಿ ಜನ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಂದಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು. ನಗರದಲ್ಲಿ ಗುರುವಾರ ಮಾತನಾಡಿದ ಅವರು, ಈ ಹಿಂದೆ ನಿತ್ಯ ತಮಿಳುನಾಡಿಗೆ ಕಾವೇರಿಯಿಂದ 10 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದಾಗ ರಾಜ್ಯ ಸರ್ಕಾರ ಸರಿಯಾಗಿ ವಾದ ಮಂಡಿಸಿದ್ದರೆ, ಈಗ ತಮಿಳುನಾಡಿಗೆ ನೀರು ಬಿಡುವ ಸ್ಥಿತಿ ಬರುತ್ತಿರಲಿಲ್ಲ. ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಈಗಾಗಲೆ ತಮಿಳುನಾಡಿಗೆ ಸಾಕಷ್ಟು ನೀರು ಬಿಡಲಾಗಿದೆ. ಕಾವೇರಿ ನದಿ ನೀರಿನ ವಿಚಾರವಾಗಿ ನ್ಯಾಯ ದೊರೆಯುವವರೆಗೂ ಹೋರಾಟ ಮಾಡುತ್ತೇವೆ. ತಮಿಳುನಾಡು ಟ್ರಿಬ್ಯೂನಲ್ ಆದೇಶ ಉಲ್ಲಂಘಿಸಿದೆ ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್​ಗೆ ತಮಿಳುನಾಡಿನ ಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ರಾಜಕೀಯಕ್ಕಾಗಿ ಹೊಸದಾಗಿ ಮದುವೆಯಾಗಿರುವ ಜೆಡಿಎಸ್, ಬಿಜೆಪಿ ಪಕ್ಷಗಳು ವಾಸ್ತವ ಮರೆಮಾಚಿ ಟೀಕೆ ಮಾಡುತ್ತಿವೆ. ನಾವು ಕಾವೇರಿ ವಿವಾದದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಎರಡು ಬಾರಿ ಸರ್ವ ಪಕ್ಷಗಳ ಸಭೆ ನಡೆಸಿದ್ದೇವೆ. ಪ್ರತಿ ಹಂತದಲ್ಲೂ ರಾಜ್ಯದ ಜನರಿಗೆ ಮಾಹಿತಿ ನೀಡುತ್ತಿದ್ದೇವೆ.| ಡಾ.ಜಿ.ಪರಮೇಶ್ವರ, ಗೃಹ ಸಚಿವ
ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ನಮ್ಮದು ಶಾಂತಿಯುತ ಬಂದ್ ಆಗಿದ್ದು, ರಾಜ್ಯದ ಎಲ್ಲರೂ ಸಹಕರಿಸಬೇಕು. ಅದೇ ರೀತಿ ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲಾ ಸಂಘಗಳು ನಮಗೆ ಬೆಂಬಲ ನೀಡಲಿವೆ. ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೆ, ರೈತ ಸಂಘಗಳು, ಸಮುದಾಯಗಳ ಸಂಘಗಳು ಬೆಂಬಲ ನೀಡಿವೆ.| ವಾಟಾಳ್ ನಾಗರಾಜ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಪ್ರಾಧಿಕಾರಕ್ಕೆ ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೂಲಕ ಹೇಳಿಸಬೇಕಿತ್ತು. ಆದರೆ, ಆ ಕೆಲಸವನ್ನು ಸಂಸದರು ಮಾಡುತ್ತಿಲ್ಲ. ಬದಲಾಗಿ ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆ. ಸ್ವಾತಂತ್ರ್ಯ ದೊರಕಿದಾಗಿನಿಂದಲೂ ಕೇಂದ್ರದ ಮೇಲೆ ತಮಿಳುನಾಡು ಪ್ರಭಾವ ಹೆಚ್ಚಿದೆ. ಹಾಗಾಗಿಯೇ ಎಲ್ಲವನ್ನೂ ಸಾಧಿಸಿಕೊಂಡು ಬರುತ್ತಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ.| ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಬೆಂಗಳೂರು:ಕಾವೇರಿ ನದಿ ನೀರು ಸಂಕಷ್ಟಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯದ ಕಾನೂನು ಪರಿಣತರ ಜತೆ ಸಭೆ ಕರೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆಗೆ ನಡೆಯುವ ಸಭೆಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಜ್ಯಕ್ಕೆ ಸೇರಿದ ನ್ಯಾಯಮೂರ್ತಿಗಳು, ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳು, ಅಡ್ವೋಕೇಟ್ ಜನರಲ್​ಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
ಸಂಕಷ್ಟ ಸೂತ್ರ ರಚನೆಯಾಗುವಂತೆ ಯಾವ ರೀತಿಯಲ್ಲಿ ಒತ್ತಡ ತರಬೇಕು, ಸರ್ಕಾರಕ್ಕೆ ಇರುವ ಕಾನೂನು ಅವಕಾಶಗಳು ಏನೇನು, ಈಗ ಎದುರಾಗಿರುವ ಸಂಕಷ್ಟದಿಂದ ಪಾರಾಗುವುದು ಹೇಗೆ ಎಂದು ಸಿಎಂ ಸಲಹೆ ಪಡೆಯಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ ಸೇರಿ ಕೆಲವು ಸಚಿವರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು.
ಸಭೆಗೆ ಖುದ್ದಾಗಿ ಭಾಗವಹಿಸಲು ಸೂಚನೆ: ಶುಕ್ರವಾರ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ ಆನ್​ಲೈನ್ ಬದಲಿಗೆ ಖುದ್ದಾಗಿ ಭಾಗವಹಿ ಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ ಡಿಸಿಎಂ ಶಿವಕುಮಾರ್, ಹಿರಿಯ ಕೃಷಿ ತಜ್ಞರು, ನೀರಾವರಿ ತಜ್ಞರ ಸಭೆ ಕರೆದಿದ್ದು ಅಲ್ಲಿ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಶ್ರೀರಂಗಪಟ್ಟಣ: ಕೆಆರ್​ಎಸ್​ನಿಂದ ತಮಿಳುನಾಡಿಗೆ ಹರಿಸಲು ಜಲಾಶಯದಲ್ಲಿ ನೀರಿಲ್ಲ. ಆ ಕಾರಣದಿಂದ ನದಿ ಮೂಲಕ ಮಿನರಲ್ ನೀರನ್ನೇ ಕನ್ನಡಿಗರು ಸುರಿದು ಕಳುಹಿಸುತ್ತಿದ್ದೇವೆ ಎಂಬ ಕಲ್ಪಿತ ಪ್ರದರ್ಶನದ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ಹರಿಸಲು ಆದೇಶ ನೀಡಿರುವ ಪ್ರಾಧಿಕಾರ ಹಾಗೂ ಅಧಿಕ ನೀರಿಗೆ ಬೇಡಿಕೆ ಇಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರ ದಹನ ಮಾಡಿದರು. ಬಳಿಕ 10ಕ್ಕೂ ಹೆಚ್ಚು ಬೃಹತ್ ಕ್ಯಾನ್​ಗಳಲ್ಲಿ ತರಲಾಗಿದ್ದ ಮಿನರಲ್ ನೀರನ್ನು ನದಿಗೆ ಸುರಿದು ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
