ಬೆಂಗಳೂರು:ಹಲವು ಹಿರಿಮೆ-ಗರಿಮೆಗಳಿಗೆ ಪಾತ್ರವಾಗಿರುವ ಬೆಂಗಳೂರು ಮಹಾನಗರವನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿ, ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ರೂಪಿಸಲು ರಾಜ್ಯ ಸರ್ಕಾರ ಪಣ ತೊಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್​ಹಾಲ್​ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮಿಷನ್-2022 ಕಾರ್ಯಯೋಜನೆಗೆ ಚಾಲನೆ ನೀಡಿ, ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಕೆಂಪೇಗೌಡರ ದೂರದೃಷ್ಟಿ ಫಲವಾಗಿ 500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಮಹಾನಗರ ಪ್ರಗತಿಪರ ಧೋರಣೆಗೆ ಪೂರಕವಾಗಿಯೇ ಬೆಳೆದಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಉದ್ಯಾನನಗರ, ಉದ್ಯಮ ನಗರ, ಸಿಲಿಕಾನ್ ಸಿಟಿ, ಆರ್ಥಿಕ ರಾಜಧಾನಿ ಹಾಗೂ ಯುವಜನರ ಕನಸಿನ ನಗರವಾಗಿದೆ ಎಂದರು.
ಪ್ರತಿಷ್ಠೆಗೆ ಮುಕ್ಕಾಗದಂತೆ ಕ್ರಮ ಅಭಿವೃದ್ಧಿ ಕ್ಷಿತಿಜದಲ್ಲಿ ಬೆಂಗಳೂರಿನ ಸ್ಥಾನಕ್ಕೆ ಮುಕ್ಕಾಗದ ರೀತಿಯಲ್ಲಿ ಮೂಲ ಸವಲತ್ತುಗಳ ಸುಧಾರಣೆ, ಜ್ವಲಂತ ಸಮಸ್ಯೆಗಳ ನಿವಾರಣೆ ಜತೆಗೆ ದೂರಗಾಮಿ ಪರಿಣಾಮಗಳಿಗೆ ಪರಿಹಾರ ಕಲ್ಪಿಸಬೇಕೆಂಬ ಸದಾಶದೊಂದಿಗೆ ‘ಬೆಂಗಳೂರು ಮಿಷನ್-2022’ ಕಾರ್ಯಯೋಜನೆಯ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು. ಸುಗಮ ಸಂಚಾರ, ಸ್ವಚ್ಛ, ಸುಂದರ ನಗರವನ್ನಾಗಿ ರೂಪಿಸಿ, ಸರ್ಕಾರಿ ಯೋಜನೆಗಳು ಮತ್ತು ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ಕೈಗೆಟುಕುವ ಉದ್ದೇಶದಿಂದ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ ಎಂದರು.

ನಗರ ಎದುರಿಸುತ್ತಿರುವ ಪ್ರಮುಖ ಸವಾಲು, ಸಮಸ್ಯೆಗಳನ್ನು ಕೇಂದ್ರೀಕರಿಸಿ, ಕೂಲಂಕಷವಾಗಿ ಅಧ್ಯಯನ ನಡೆಸಿ, ಸ್ಪಷ್ಟ ಮುನ್ನೋಟದೊಂದಿಗೆ ಈ ಯೋಜನೆ ಸಿದ್ಧಪಡಿಸಲಾಗಿದೆ. ವಿಶ್ವದರ್ಜೆಯ ನಗರವಾಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದರು.
ಮೋದಿಯಿಂದ ಪ್ರಭಾವಿತ:ಪ್ರತಿ ದೆಹಲಿ ಭೇಟಿ ಹಾಗೂ ರಾಜ್ಯಕ್ಕೆ ಬಂದ ಎಲ್ಲ ಸಂದರ್ಭಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಾನಗರದ ವೈಶಿಷ್ಟ್ಯದ ಬಗ್ಗೆ ಪ್ರಸ್ತಾಪಿಸಿ, ಅಭಿವೃದ್ಧಿಯಲ್ಲಿ ಸದಾ ಮುನ್ನಡೆಯಲ್ಲಿ ಇರಬೇಕು ಎಂದು ಸಲಹೆ ನೀಡಿದ್ದರು. ಉದ್ಯಮಶೀಲತೆ, ಮಾಹಿತಿ-ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ, ವಾಯುಯಾನ ಕ್ಷೇತ್ರದ ಆವಿಷ್ಕಾರ, ಅಂತಾರಾಷ್ಟ್ರೀಯಮಟ್ಟದ ಸಂಶೋಧನಾ ಕೇಂದ್ರಗಳು, ಉನ್ನತ ಅಧ್ಯಯನ ಸಂಸ್ಥೆಗಳ ಬಗ್ಗೆ ಮೋದಿ ವಿಶೇಷ ಕಾಳಜಿಗೆ ಪ್ರಭಾವಿತರಾಗಿ ಬೆಂಗಳೂರು ಮುನ್ನಡೆಯ ಅಭಿವೃದ್ಧಿ ಯೋಜನೆಗೆ ದೃಢಸಂಕಲ್ಪ ಮಾಡಿರುವೆ ಎಂದು ಯಡಿಯೂರಪ್ಪ ಹೇಳಿದರು.
6 ತಿಂಗಳಿಗೊಮ್ಮೆ ಪರಿಶೀಲನೆ:ಬೆಂಗಳೂರು ಮಿಷನ್-2022 ಅನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ. 6 ತಿಂಗಳಿಗೊಮ್ಮೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಥಳ ಪರಿಶೀಲಿಸಲಾಗುವುದು. ಅತಿ ವೇಗದ ಬೆಳವಣಿಗೆ ಜತೆಯಲ್ಲಿ ನಗರದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಚಿವರಾದ ಆರ್. ಅಶೋಕ್, ಬಿ.ಎ.ಬಸವರಾಜ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ಭಾಸ್ಕರ್, ಹಿರಿಯ ಅಧಿಕಾರಿಗಳಾದ ರಾಕೇಶ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದರು. ಡಿಎಪಿಆರ್ ಆಯುಕ್ತ ಡಾ.ಪಿ.ಎಸ್.ಹರ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಸುರೇಶ್​ಕುಮಾರ್, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.

ವಿಶ್ವಮಟ್ಟದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿ ಜಾಗತಿಕ ನಕ್ಷೆಯಲ್ಲಿ ರಾರಾಜಿಸುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಚಿತ್ರಣ ಇನ್ನೆರಡು ವರ್ಷದಲ್ಲಿ ಸಂಪೂರ್ಣ ಬದಲಾಗಲಿದೆ. ಕರೊನೋತ್ತರ ಬೆಂಗಳೂರು ಮಹಾನಗರ ಹೀಗಿರಬೇಕೆಂಬ ಸ್ಪಷ್ಟ ಪರಿಕಲ್ಪನೆಯಲ್ಲಿ ರಾಜ್ಯ ಸರ್ಕಾರ ‘ಬೆಂಗಳೂರು ಮಿಷನ್-2022’ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸುತ್ತಿದ್ದು, ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ, ಆಸಕ್ತಿವಹಿಸಿದೆ. ಹಳೆಯ ಬೇರಿಗೆ ಹೊಸ ತಲೆಮಾರು ಜೋಡಿಸುವ ರೀತಿಯಲ್ಲಿ ಯೋಜನೆ ನೀಲಿನಕ್ಷೆ ಸಿದ್ಧಪಡಿಸಲಾಗಿದ್ದು, ಕನಸಿನ ಬೆಂಗಳೂರು ಹೇಗಿರಲಿದೆ ಎಂಬ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಉತ್ತರ ಸಿಗದ ಪ್ರಶ್ನೆಗಳು
ಬೆಂಗಳೂರಿಗೆ ನವಚೈತನ್ಯ ತುಂಬಲೆಂದು ರೂಪಿಸಿದ ‘ಬೆಂಗಳೂರು ಮಿಷನ್-2022’ ಕಾರ್ಯಯೋಜನೆಯ ಅಂದಾಜು ವೆಚ್ಚ, ಸರ್ಕಾರದ ಹೂಡಿಕೆ, ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗಗಳನ್ನು ರೂಪಿಸಲಾಗಿದೆಯೆ ? ಎಂಬ ಪ್ರಶ್ನೆಗಳಿಗೆ ಸಿಎಂ, ಸಚಿವರಾದಿಯಾಗಿ ಹಿರಿಯ ಅಧಿಕಾರಿಗಳಿಂದ ನಿರ್ದಿಷ್ಟವಾದ ಉತ್ತರಗಳು ಸಿಗಲಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಸಿರು ನಿಶಾನೆ ನೀಡಲಾಗಿದೆ. ಬಜೆಟ್​ನಲ್ಲಿ ಅನುದಾನ ಮೀಸಲಿಟ್ಟಿದ್ದು, ಕಾರ್ಯಸಾಧುವಾದ ಯೋಜನೆಯನ್ನು ರೂಪಿಸಲಾಗಿದೆ. ಅನುಷ್ಠಾನಕ್ಕೆ ಏಜೆನ್ಸಿಗಳನ್ನು ಗುರುತಿಸಲಾಗಿದೆ, ಹಣಕಾಸಿನ ಅಡಚಣೆಯಾಗದು ಎಂಬ ಹಾರಿಕೆಯ ಉತ್ತರಗಳೇ ಕೇಳಿಬಂದವು.
ಸಿಲಿಕಾನ್​ಸಿಟಿ ಜನರಿಗೆ ಮಾಸಿಕ ಕಸದ ಶುಲ್ಕ ವಿಧಿಸುವುದಿಲ್ಲ
ಬೆಂಗಳೂರು: ಮನೆ ಮನೆ ಕಸ ಸಂಗ್ರಹಿಸುವುದಕ್ಕೆಂದು ಬೆಂಗಳೂರು ಮಹಾನಗರದ ಜನರಿಗೆ ಹೊಸದಾಗಿ ಮಾಸಿಕ ಕಸದ ಶುಲ್ಕ ವಿಧಿಸುವುದಿಲ್ಲ. ಅಂತಹ ಪ್ರಸ್ತಾವನೆಯೂ ಇಲ್ಲವೆಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಸ್ಪಷ್ಟಪಡಿಸಿದ್ದಾರೆ.
‘ಬೆಂಗಳೂರು ಮಿಷನ್-2022’ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿ ದರು. ಬೆಂಗಳೂರು ಆಮೂಲಾಗ್ರ ಅಭಿವೃದ್ಧಿಗೆ ಸಿದ್ಧವಾದ ಯೋಜನೆಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಸದಾಗಿ ಕಸದ ಶುಲ್ಕ ವಿಧಿಸುವುದೂ ಒಂದು ಎಂಬುದರಲ್ಲಿ ಸತ್ಯವಿಲ್ಲ. ಆ ರೀತಿ ಚಿಂತನೆ ಇಲ್ಲವೆಂದರು.
ನಗರದ ಜ್ವಲಂತ ಸಮಸ್ಯೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ಒದಗಿಸಲೆಂದು ಪ್ರಮುಖ 8 ಕ್ಷೇತ್ರಗಳ ಮೇಲೆ ಈ ಯೋಜನೆ ಗಮನಹರಿಸಿದೆ. ಕಾರ್ಯಗತ ಸಾಧ್ಯವಿರುವ ಅಭಿವೃದ್ಧಿ ಕಾಮಗಾರಿಗಳು ಇದರಲ್ಲಿದ್ದು ಸರ್ಕಾರ ಅನುದಾನ ಒದಗಿಸಿದೆ ಎಂದು ಹೇಳಿದರು. ಸುಗಮ ಸಂಚಾರ, ಸ್ವಚ್ಛ, ಸುಂದರ, ಹಸಿರುನಗರ, ಜನಸಂಪರ್ಕಕ್ಕೆ ಡಿಜಿಟಲ್ ವೇದಿಕೆ ಬಳಕೆ, ಮೂಲ ಬೆಂಗಳೂರಿನ ಇತಿಹಾಸ, ಪರಂಪರೆ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ಯೋಜನೆಯ ತಿರುಳಾಗಿದೆ ಎಂದರು.

ಗಮನಹರಿಸಿದ ಕ್ಷೇತ್ರಗಳ ಕಾಯರ್åಯೋಜನೆ ಅನುಷ್ಠಾನ ಪೂರ್ಣಗೊಂಡ ಬಳಿಕ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ 110 ಹಳ್ಳಿಗಳ ಮೂಲ ಸವಲತ್ತು ಅಭಿವೃದ್ಧಿ, ಕೊಳಚೆ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಾಹೀರಾತು ನೀತಿ:ಜಾಹೀರಾತು ಪ್ರದರ್ಶನ ಫಲಕಗಳ ಕುರಿತು ಸ್ಪಷ್ಟ ನೀತಿ ರೂಪಿಸಲಾಗುವುದು. ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟ ಬಳಿಕ ಮುಂದಿನ ಹೆಜ್ಜೆಯಿಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಉತ್ತರಿಸಿದರು.
ರಾಜಕಾಲುವೆ ತೆರವು:ರಾಜಧಾನಿಯಲ್ಲಿ 2,800 ಕಿ.ಮೀ. ರಾಜಕಾಲುವೆ ಒತ್ತುವರಿಯಾಗಿದ್ದು, 1,730 ಕಿ.ಮೀ. ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಿ 770 ಕಿ.ಮೀ. ಒತ್ತುವರಿ ತೆರವುಗೊಳಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೇಳಿದರು. ಬೆಂಗಳೂರಿಗೆ ಹೊಸ ರ್ಪಾಂಗ್ ನೀತಿ ಜಾರಿಗೆ ತರುವ ಉದ್ದೇಶದಿಂದ ತಮ್ಮದೇ ಅಧ್ಯಕ್ಷತೆಯಲ್ಲಿ ರಚಿತ ಸಮಿತಿ ಕರಡು ರೂಪಿಸುತ್ತಿದೆ. ಹೊಸ ವಾಹನ ಖರೀದಿಗೆ ಮುನ್ನ ರ್ಪಾಂಗ್ ಸ್ಥಳದ ಕುರಿತು ಘೋಷಣಾಪತ್ರ ನೀಡುವುದು, ಸ್ಮಾರ್ಟ್ ರ್ಪಾಂಗ್ ಇತ್ಯಾದಿ ಸಲಹೆಗಳು ಬಂದಿದ್ದು, ಕರಡು ನೀತಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸ್ಮಾರ್ಟ್​ಸಿಟಿಗೆ ಕರೊನಾ ಛಾಯೆ
ಬೆಂಗಳೂರು ಮಹಾನಗರದ ಸ್ಮಾರ್ಟ್ ಸಿಟಿ ಯೋಜನೆಗೆ ಕರೊನಾ ಛಾಯೆ ಆವರಿಸಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾದವು. ವಿಳಂಬಕ್ಕೆ ಮಳೆಯೂ ಮತ್ತೊಂದು ಕಾರಣವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಸ್ಪಷ್ಟಪಡಿಸಿದರು. ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಅಭಿವೃದ್ದಿ ಕಾಮಗಾರಿಗಳು ಇದೀಗ ಚುರುಕುಗೊಂಡಿವೆ. ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಬಿಬಿಎಂಪಿ ಮಸೂದೆಗೆ ಶೀಘ್ರವೇ ಅಂಕಿತ
ಪಾಲಿಕೆ ಚುನಾವಣೆ ಮುಂದೂಡಲೆಂದು ಪ್ರತ್ಯೇಕ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿಲ್ಲ. ಬೆಂಗಳೂರಿನ ಬೆಳವಣಿಗೆ, ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಿದ ಬಿಬಿಎಂಪಿ ಮಸೂದೆಗೆ ವಿಧಾನಮಂಡಲ ಒಪ್ಪಿಗೆ ನೀಡಿದೆ ಎಂದು ಕಂದಾಯ ಸಚಿವ ಅಶೋಕ್ ಸಮಜಾಯಿಷಿ ನೀಡಿದರು. ವೈಜ್ಞಾನಿಕವಾಗಿ ವಾರ್ಡ್ ಗಳ ಮರುವಿಂಗಡಣೆ, ವಾರ್ಡ್ ಸಂಖ್ಯೆ ಹೆಚ್ಚಳ, ಆದಾಯ ವೃದ್ಧಿಗೆ ಪೂರಕ ಪ್ರತ್ಯೇಕ ಕಾಯ್ದೆ ಶೀಘ್ರ ಜಾರಿಯಾಗಲಿದೆ. ಬೆಂಗಳೂರು ನಗರದ ಮಾಸಿಕ ಸಂಚಾರವನ್ನು ಸಿಎಂ ಮುಂದುವರಿಸಲಿದ್ದಾರೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
