ಬೆಂಗಳೂರು:13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021ರ ಮಾರ್ಚ್ 24ರಿಂದ 31ರವರೆಗೆ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿರುವ ಈ ಚಲನಚಿತ್ರೋತ್ಸವದಲ್ಲಿ ಈ ಬಾರಿ “ಭಾರತೀಯ ಪ್ರದರ್ಶನ ಕಲೆಗಳ ಮಹತ್ವ” ವಿಷಯದ ಮೇಲೆ ಏರ್ಪಡಿಸಲು ನಿರ್ಣಯಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತಳೆಯಲಾಯಿತು.
ಭಾರತದ ಪ್ರತಿಷ್ಠಿತ ಚಿತ್ರೋತ್ಸವವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಳೆದು ಬಂದಿದ್ದು, ಈಗಾಗಲೇ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ FIAPF ಮಾನ್ಯತೆ ದೊರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದರು. ಕೋವಿಡ್ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿ ಈ ಚಿತ್ರೋತ್ಸವ ನಡೆಯಬೇಕೆಂದು ಅವರು ಸೂಚಿಸಿದರು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಪರದೆಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಏಳು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಏಷ್ಯನ್ ಸಿನಿಮಾ, ಚಿತ್ರಭಾರತಿ (ಭಾರತೀಯ ಸಿನಿಮಾ) ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗವಿರುತ್ತದೆ. ಅಲ್ಲದೆ, ವಿಶ್ವಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ವಿಶ್ವದ, ಭಾರತದ ಮತ್ತು ಕನ್ನಡ ಚಿತ್ರರಂಗದಲ್ಲಿನ ಅಗಲಿದ ಗಣ್ಯರ ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‍ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳ ವಿಭಾಗಗಳು ವಿವಿಧ ದೃಷ್ಟಿಕೋನವನ್ನು ಬಿಂಬಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ವಿವರಿಸಿದರು.

ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಗಳ ಪ್ರದರ್ಶನದ ಜೊತೆಗೆ ಚಲನಚಿತ್ರರಂಗದ ದೇಶ-ವಿದೇಶಗಳ ನುರಿತ ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗಿನ ಸಂವಾದ, ವಿಚಾರ ಸಂಕಿರಣ, ಚಿತ್ರಕಥೆ ರಚನೆ ಕಾರ್ಯಾಗಾರ, ಮಾಸ್ಟರ್‍ ಕ್ಲಾಸ್​ ಮೊದಲಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರೋದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಇದು ಅನುಕೂಲವಾಗಲಿದೆ. ಕನ್ನಡ ಸಿನಿಮಾಗಳ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ದೇಶಗಳಿಗೆ ಪರಿಚಯಿಸುವ ಕೆಲಸವೂ ಈ ಮೂಲಕ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿಗಳು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್, ಹಿರಿಯ ಕಲಾವಿದರಾದ ಶ್ರುತಿ, ತಾರಾ ಅನುರಾಧ , ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಂಜುಮ್​ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕೆಜಿಎಫ್​ಗಾಗಿ ಕಾಯುತ್ತಿದ್ದೇನೆ…; ಅಮೆರಿಕದ ಕುಸ್ತಿಪಟುವಿನ ಇಂಗಿತ

ರಶ್ಮಿಕಾನೇ ಬೇಕು! ರಾಮ್​ಚರಣ್​ ಕಡೆಯಿಂದ ಹೀಗೊಂದು ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
