ಬೆಂಗಳೂರು:ಕಸ ನಿರ್ವಹಣೆ, ಸಂಚಾರ ದಟ್ಟಣೆ ಸೇರಿ ಸದಾ ಒಂದಿಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ‘ಜೀವಿಸಲು ಅತ್ಯಂತ ಸೂಕ್ತ’ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದು ಬೀಗಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ‘ಈಸ್ ಆಫ್ ಲಿವಿಂಗ್-2020’ ಸೂಚ್ಯಂಕದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಭಾಗವಹಿಸಿದ್ದ 111 ನಗರಗಳಲ್ಲಿನ ಆಡಳಿತ, ಹಣಕಾಸು, ಜೀವನಮಟ್ಟ, ಸುಸ್ಥಿರತೆ ಹಾಗೂ ನಾಗರಿಕ ಸಹಭಾಗಿತ್ವ ವಿಭಾಗಗಳಲ್ಲಿ ಮೌಲ್ಯಮಾಪನ ನಡೆಸಿ ಈ ಅಂಕ ನೀಡಲಾಗಿದೆ.
66.70 ಅಂಕ ಪಡೆಯುವ ಮೂಲಕ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಪುಣೆ (66.27), ಅಹಮದಾಬಾದ್(64.87), ಚೆನ್ನೈ(62.61) ಮುಂತಾದ ನಗರಗಳಿವೆ. ಹೂಡಿಕೆದಾರರ ಸ್ನೇಹಿಯಾಗಿರುವ ಬೆಂಗಳೂರಿನಲ್ಲಿ ಈಗಾಗಲೇ ಟೆಸ್ಲಾ ಸಂಸ್ಥೆ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಮುಂದಾಗಿದೆ. ಇದೀಗ ಈಸ್ ಆಫ್ ಲಿವಿಂಗ್ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಸಿಕ್ಕ ನಂತರ ಬೆಂಗಳೂರಿನ ಖ್ಯಾತಿ ಮತ್ತಷ್ಟು ಹೆಚ್ಚಲಿದೆ.
ಈಸ್ ಆಪ್ ಲಿವಿಂಗ್ ವಿಭಾಗದ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರಗಳ ಟಾಪ್ 10ರಲ್ಲಿ ದಾವಣ ಗೆರೆ (9) ಸ್ಥಾನ ಪಡೆದಿದ್ದು, ಶಿಮ್ಲಾ ಮೊದಲ ಸ್ಥಾನದಲ್ಲಿದೆ. ಮಂಗಳೂರು 20ನೇ ರ್ಯಾಂಕ್ ಪಡೆದಿದೆ. ಉಳಿದಂತೆ ತುಮಕೂರು, ಶಿವಮೊಗ್ಗ ಮುಂತಾದ ನಗರಗಳು 20ರ ನಂತರದ ರ್ಯಾಂಕ್ ಗಳಿಸಿವೆ.


ಮುನಿಸಿಪಲ್ ಆಡಳಿತದಲ್ಲಿ ಹಿಂದೆ:ಮುನಿಸಿಪಲ್ ಆಡಳಿತದಲ್ಲಿ ಬೆಂಗಳೂರು ತೀರಾ ಕೆಳಮಟ್ಟದಲ್ಲಿದೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳಲ್ಲಿ ಮಧ್ಯ ಪ್ರದೇಶದ ಇಂದೋರ್ ಮೊದಲ ರ್ಯಾಂಕ್ ಪಡೆದರೆ ನಂತರದಲ್ಲಿ ಗುಜರಾತ್​ನ ಸೂರತ್, ಮಧ್ಯಪ್ರದೇಶದ ಭೋಪಾಲ್ ಮುಂತಾದ ನಗರಗಳಿವೆ. ಹುಬ್ಬಳ್ಳಿ ಧಾರವಾಡ 21ನೇ ರ್ಯಾಂಕ್ ಪಡೆದರೆ ಬೆಂಗಳೂರು 31ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸೇವೆಗಳಲ್ಲಿ 25ನೇ ರ್ಯಾಂಕ್, ಹಣಕಾಸು ಸ್ಥಿತಿಯಲ್ಲಿ 40ನೇ ಸ್ಥಾನ ಪಡೆದಿದೆ. ಆದರೆ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಯ ಬೆಂಗಳೂರಿನ ನಗರಾಡಳಿತ ತಂತ್ರಜ್ಞಾನ ಅಳವಡಿಕೆಯಲ್ಲಿ 25ನೇ ಸ್ಥಾನಕ್ಕೆ ಕುಸಿದಿರುವುದು ಅಚ್ಚರಿ ಮೂಡಿಸಿದೆ.
ಆರ್ಥಿಕತೆಯಲ್ಲೂ ಮುಂದು:ಈಸ್ ಆಪ್ ಲಿವಿಂಗ್ ಒಟ್ಟಾರೆ ರ‍್ಯಾಂಕಿಂಗ್ ಜತೆಗೆ, ರ್ಯಾಂಕ್​ನ ಉಪ ವಿಬಾಗವಾದ ಆರ್ಥಿಕ ಸಾಮರ್ಥ್ಯದಲ್ಲೂ ಬೆಂಗಳೂರು ದೇಶದಲ್ಲೇ ಮೊದಲ ರ್ಯಾಂಕ್ ಪಡೆದಿದೆ. ಅಂದರೆ ಹಣಕಾಸು ಸಂಪನ್ಮೂಲ ಸೃಜನೆಯಲ್ಲಿ ರಾಜಧಾನಿ ಮುಂದಿದೆ. ಆದರೆ ಗುಣಮಟ್ಟದ ಜೀವನ ವಿಭಾಗದಲ್ಲಿ 12, ಸುಸ್ಥಿರತೆಯಲ್ಲಿ 13 ಹಾಗೂ ನಾಗರಿಕರ ಸಮೀಕ್ಷೆಯಲ್ಲಿ 18ನೇ ಸ್ಥಾನ ಗಳಿಸಿದೆ.
ದಾವಣಗೆರೆ ನಗರ ಟಾಪ್ 9:ಈಸ್ ಆಪ್ ಲಿವಿಂಗ್ ಸೂಚ್ಯಂಕದ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳಲ್ಲಿ ದಾವಣಗೆರೆ 9ನೇ ಸ್ಥಾನ ಪಡೆದಿದೆ. ಈ ವಿಭಾಗದಲ್ಲಿ 60.90 ಅಂಕ ಪಡೆದ ಶಿಮ್ಲಾ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹದ 21 ಅಂಶಗಳಲ್ಲಿ 18 ರಲ್ಲಿ 90ಕ್ಕಿಂತ ಹೆಚ್ಚಿನ ಅಂಕ ಪಡೆದಿದೆ. ಆದರೆ ರಸ್ತೆ, ಮೋರಿಗಳಲ್ಲಿ ನೀರು ತುಂಬಿಕೊಳ್ಳುವಿಕೆ, ಉತ್ತಮ ಗುಣಮಟ್ಟದ ಜೀವನ ನಿರ್ವಹಣೆಗೆ ತಕ್ಕ ಆದಾಯ, ವಿದ್ಯುತ್ ದರ ವಿಚಾರದಲ್ಲಿ ಸಾರ್ವಜನಿಕರು ಕಡಿಮೆ ಅಂಕ ನೀಡಿದ್ದಾರೆ.
4 ವಿಭಾಗದಲ್ಲಿ ಸೂಚ್ಯಂಕ:ಈ ಬಾರಿ ಕೇಂದ್ರ ಸರ್ಕಾರ ಒಟ್ಟಿಗೆ ಎರಡು ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಈಸ್ ಆಫ್ ಲಿವಿಂಗ್ ಸೂಚ್ಯಂಕ-2020 ಹಾಗೂ ಮುನಿಸಿಪಲ್ ಆಡಳಿತ ಸೂಚ್ಯಂಕ-2020 ಘೋಷಣೆ ಮಾಡಲಾಗಿದೆ. ಈ ಸೂಚ್ಯಂಕ ಲೆಕ್ಕ ಮಾಡುವ ಸಲುವಾಗಿ 10 ಲಕ್ಷಕ್ಕಿಂತ ಹೆಚ್ಚಿನ ಹಾಗೂ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳು ಎಂದು ವಿಂಗಡಣೆ ಮಾಡಲಾಗಿದೆ.

ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎನ್ನುವ ಹಿರಿಮೆ ಗಳಿಸಿರುವುದಕ್ಕೆ ಕಾರಣವಾದ ಎಲ್ಲ ಇಲಾಖೆ, ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದನೆಗಳು. ಬೆಂಗಳೂರಿನ ಸರ್ವಾಂಗೀಣ ಪ್ರಗತಿಗೆ ನಮ್ಮ ಪ್ರಯತ್ನ ಮುಂದುವರಿಸೋಣ.
|ಬಿ.ಎಸ್. ಯಡಿಯೂರಪ್ಪಮುಖ್ಯಮಂತ್ರಿ
ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. 1.30 ಕೋಟಿ ಜನಸಂಖ್ಯೆಗೆ ಎಲ್ಲ ರೀತಿಯ ಸೌಲಭ್ಯ ನೀಡಿ, ಉದ್ಯಾನಗಳು ಹಾಗೂ ಕೆರೆಗಳ ಅಭಿವೃದ್ಧಿಯಿಂದ ಈ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಬಂದಿದೆ. ಕೇಂದ್ರ ಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ.
|ಪಿ.ಸಿ. ಮೋಹನ್ಸಂಸದ
ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದಂತೆ ಇಲ್ಲಿನ ಸಂಘ-ಸಂಸ್ಥೆಗಳು ಹಾಗೂ ಜನರು ಒಟ್ಟಿಗೆ ಸೇರಿರುವುದರಿಂದ ಈ ಗೌರವ ಸಂದಿದೆ. ಈ ಸ್ಥಾನವನ್ನು ಮುಂದೆಯೂ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ. ಮುನಿಸಿಪಲ್ ಆಡಳಿತದಲ್ಲಿ ಬಿಬಿಎಂಪಿಗೆ ಯಾವುದೇ ಅಂಕ ಬಂದಿಲ್ಲ. ಈ ಪೈಕಿ ಎಲ್ಲೆಲ್ಲಿ ತಪ್ಪಾಗಿದೆ, ಎಲ್ಲೆಲ್ಲಿ ಎಡವಿದ್ದೇವೆ ಎಂಬುದನ್ನು ನೋಡಿಕೊಂಡು ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಅಂಕ ಪಡೆಯಲು ಕೆಲಸ ಮಾಡಲಾಗುವುದು.
|ಮಂಜುನಾಥ ಪ್ರಸಾದ್ಬಿಬಿಎಂಪಿ ಆಯುಕ್ತ

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
