
ಬೆಂಗಳೂರು:ಬೆಂಗಳೂರು ಉಪನಗರ ರೈಲು ಯೋಜನೆಗಳ ಮೊದಲ ಹಂತದ ಕಾಮಗಾರಿ 2026 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಬ್ಬರೂ ಸಚಿವರು ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಕೆ-ರೈಡ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (ಕಾರಿಡಾರ್-2, 25 ಕಿ.ಮೀ) ಮತ್ತು ಹೀಲಲಗಿ- ರಾಜಾನುಕುಂಟೆ (ಕಾರಿಡಾರ್-4, 46.88 ಕಿ.ಮೀ) ಉಪನಗರ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅದನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಇಂದು ನಡೆದ ಸಭೆ ಮಹತ್ವದ್ದಾಗಿದೆ ಎಂದು ಸೋಮಣ್ಣ ಹೇಳಿದರು.ಕೆಲವೊಂದು ಕಡೆ ಭೂಸ್ವಾಧೀನದ ಸಮಸ್ಯೆ ಇದ್ದು, ಮೂರು ತಿಂಗಳ ಒಳಗೆ ಭೂಮಿ ಹಸ್ತಾಂತರಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಯಾವ ಸಬೂಬು ಹೇಳದೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವರಿಬ್ಬರೂ ಸೂಚಿಸಿದರು.ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ವರ್ತುಲ ರೈಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು. ಇದೊಂದು ಒಳ್ಳೆಯ ಪರಿಕಲ್ಪನೆ ಆಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.ಸುಮಾರು 21 ಸಾವಿರ ಕೋಟಿ ವೆಚ್ಚದ 281 ಕಿ.ಮೀ ವರ್ತುಲ ರೈಲ್ವೆ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನೂ ಇದರ ಜತೆ ಸಂಪರ್ಕ ಮಾಡುವುದು ಹೆಚ್ಚು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.ಶಂಕುಸ್ಥಾಪನೆಗೊಂಡ ಒಟ್ಟು ನಾಲ್ಕು ಕಾರಿಡಾರ್ ಯೋಜನೆಗಳಲ್ಲಿ ನಿಗದಿತ ಅವಧಿಯೊಳಗೇ ಈ ಎರಡೂ ಕಾರಿಡಾರ್ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಇದರ ನಂತರ ಇತರ ಎರಡು ಕಾರಿಡಾರ್ ಯೋಜನೆಗಳ ಜಾರಿ ಸಂಬಂಧ ಚರ್ಚಿಸಲಾಗುವುದು ಎಂದರು.
ಸಮನ್ವಯ ಸಭೆಗೆ ಸೂಚನೆ:ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆಯೊಡ್ಡಿಕೊಳ್ಳುವುದರ ಬದಲು, ಎಲ್ಲಿ ಯಾರ ಸೇವೆ ಇಲ್ಲವೊ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಲಿ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೂ ಸೇರಿಸಿಕೊಂಡು ಸಮನ್ವಯದ ಸಭೆಗಳನ್ನು ನಡೆಸಬೇಕು. ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ಅನಗತ್ಯ ವಿಳಂಬವನ್ನು ತಡೆಯಬಹುದು ಎಂದು ಅವರು ಸಚಿವ ಸೋಮಣ್ಣ ಸಲಹೆ ನೀಡಿದರು.
ರೈಲ್ವೆ ಬೋಗಿಗಳ ಸಮಸ್ಯೆ:ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಬೋಗಿಗಳನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೆ-ರೈಡ್ ಟೆಂಡರ್ ಕರೆದಿದ್ದು, ಯಾವ ಸಂಸ್ಥೆಯೂ ಇದರಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ರೈಲ್ವೆಯ ನೆರವು ನೀಡಬೇಕೆನ್ನುವ ಸಚಿವ ಎಂ.ಬಿ.ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಆದಷ್ಟು ಬೇಗ ದೆಹಲಿಯಲ್ಲಿ ಸಭೆ ಆಯೋಜಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ರೈಲ್ವೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಇದಕ್ಕೊಂದು ಪರಿಹಾರ ಸೂಚಿಸುವುದಾಗಿಯೂ ಹೇಳಿದರು.ಎರಡೂ ಕಾರಿಡಾರ್ ಕಾಮಗಾರಿ ಮುಗಿಯಲು ಯೋಜನೆ ರೂಪಿಸಿದ್ದು, ಅದಕ್ಕಿಂತ ಕನಿಷ್ಠ ಆರು ತಿಂಗಳು ಮೊದಲು ರೈಲ್ವೆ ಬೋಗಿಗಳ ಸರಬರಾಜು ಆಗಬೇಕಾಗುತ್ತದೆ. ಇಲ್ಲದಿದ್ದರೆ ಆ ವೇಳೆಗೆ ರೈಲ್ವೆ ಸಂಚಾರ ಆರಂಭಿಸಲು ಕಷ್ಟ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದ ನಂತರ ಇದರ ಗಂಭೀರತೆಯನ್ನು ಗಮನಿಸಿ, ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸೋಮಣ್ಣ ನೀಡಿದರು.
ಉಪನಗರ ರೈಲ್ವೆ ಯೋಜನೆ ವಿಸ್ತರಣೆ:ಬೆಂಗಳೂರಿನ ನೆರೆಹೊರೆಯ ನಗರ/ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಉಪನಗರ ರೈಲ್ವೆ ಯೋಜನೆಯ ವಿಸ್ತರಣೆ ಅಗತ್ಯ ಇದೆ. ಬೆಂಗಳೂರಿನಿಂದ ಸಮೀಪದ ತುಮಕೂರು, ಮೈಸೂರು, ಮಾಗಡಿ, ಗೌರೀಬಿದನೂರು, ಕೋಲಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಮೊದಲು ಸಭೆಗಳನ್ನು ಮಾಡಿ ನಂತರ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಸೋಮಣ್ಣ ಅವರು ಸಚಿವ ಪಾಟೀಲ ಅವರ ಮನವಿಗೆ ಸ್ಪಂದಿಸಿದರು.
ದೇವನಳ್ಳಿ-ಕೋಲಾರ ಸಂಪರ್ಕಬೆಂಗಳೂರು- ಯುಲಂಹಕ- ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್-1 ಉಪನಗರ ರೈಲ್ವೆ ಯೋಜನೆಯನ್ನು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಪರ್ಕಿಸುವ ಬದಲು ದೇವನಹಳ್ಳಿಯಿಂದಲೇ ನೇರವಾಗಿ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯಾಸಾಧ್ಯತೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಹಾಜರಿದ್ದವರು:ಸಭೆಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ, ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × one =
Remember me
