ಬೆಂಗಳೂರು:ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ(ಬುಧವಾರ) ನಡೆಯುತ್ತಿರುವ ‘ಬೆಂಗಳೂರು ಟೆಕ್​ ಶೃಂಗಸಭೆ’ಗೆ ವರ್ಚುವಲ್​ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು ಎಂದು ಬಣ್ಣಿಸಿದರು.
ಬೆಂಗಳೂರು ಟೆಕ್​ ಸಮ್ಮಿಟ್​ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕೋವಿಡ್ ಸಂದರ್ಭವೂ ಭಾರತದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿತ್ತು. ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗುತ್ತಿದೆ. ತಂತ್ರಜ್ಞಾನ ಬಳಕೆ ಭ್ರಷ್ಟಾಚಾರ ನಿಯಂತ್ರಣದ ಸಾಧನವೂ ಆಗಿ ಪರಿವರ್ತನೆಗೊಂಡಿದೆ ಎಂದರು.
ಸಮಾನತೆ ಹಾಗೂ ಸಶಕ್ತೀಕರಣದ ಪ್ರಧಾನ ಸಾಧನವಾಗಿದೆ ತಂತ್ರಜ್ಞಾನ. ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ಅದರಲ್ಲೂ ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ. ಹೆಲ್ತ್ ಟೆಕ್‌, ಫಿನ್‌ ಟೆಕ್‌, ಎಡುಟೆಕ್‌ ಸೇರಿದಂತೆ ಎಲ್ಲ ರಂಗಗಳನ್ನೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್‌ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್‌ ಆಗಿದೆ. ಜತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 81 ರಿಂದ 41ಕ್ಕೆ ಜಿಗಿದಿದೆ ಎಂದರು.  ಕಳೆದ ಎಂಟು ವರ್ಷದಲ್ಲಿ ಬ್ರಾಡ್ ಬಾಂಡ್ ಹಾಗೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದೆ. ತಂತ್ರಜ್ಞಾನದ ನೆರವಿನಿಂದ ಅತೀ ದೊಡ್ಡ ಲಸಿಕೆ ಅಭಿಯಾನವನ್ನು ಭಾರತದಲ್ಲಿ ಯಶಸ್ವಿ ಮಾಡಿದ್ದೇವೆ ಎಂದರು.
ಹಲವು ವರ್ಷಗಳಿಂದ ಬೆಂಗಳೂರು ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದ ಯುವಶಕ್ತಿ ಏನೆಂದು ಇಡೀ ಜಗತ್ತಿಗೆ ತಿಳಿದಿದೆ. ನಾವು ನಮ್ಮ ಪ್ರತಿಭೆಯನ್ನು ಜಾಗತಿಕ ಒಳಿತಿಗಾಗಿ ಬಳಸುತ್ತಿದ್ದೇವೆ. ತಂತ್ರಜ್ಞಾನದ ಮೂಲಕ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣಗಳನ್ನು ಸಾಧಿಸಲಾಗುತ್ತಿದೆ. ಜತೆಗೆ, ಭ್ರಷ್ಟಾಚಾರಕ್ಕೂ ಇದು ತೆರೆ ಎಳೆದಿದೆ. ಭಾರತವಂತೂ ಈಗ ಮಾಹಿತಿ ಸೂಪರ್​ ಹೈವೇ ಆಗಿದೆ. ಕರೊನಾ ಪಿಡುಗಿನ ವಿರುದ್ಧ ಹೋರಾಟ, ಶಿಕ್ಷಣ, ನೇರ ನಗದು ವರ್ಗಾವಣೆ, ಜನ್‌ಧನ್‌, ಆಧಾರ್​, ಇ-ಮಾರ್ಕೆಟ್‌ ಎಲ್ಲವನ್ನೂ ಭಾರತ ತಂತ್ರಜ್ಞಾನದ ಸಮರ್ಥ ಬಳಕೆ ಮೂಲಕ ಯಶಸ್ವಿಯಾಗಿ ಕೈಗೊಂಡಿದೆ ಎಂದು ಮೋದಿ ವಿವರಿಸಿದರು.
ತಂತ್ರಜ್ಞಾನದ ಅಳವಡಿಕೆ ಮೂಲಕ ನಾವು 200 ಕೋಟಿಗೂ ಹೆಚ್ಚು ಕರೊನಾ ಲಸಿಕೆ ನೀಡಿದ್ದೇವೆ. 200 ದಶಲಕ್ಷ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್‌ ಭಾರತ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಡೇಟಾ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದು ನರೇಂದ್ರ ಮೋಡಿ ಅಭಿಪ್ರಾಯಪಟ್ಟರು.
ಬಳಿಕ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ 25 ವರ್ಷಗಳಲ್ಲಿ ತಾಂತ್ರಿಕವಾಗಿ ಕರ್ನಾಟಕ ರಾಜ್ಯ ಹಂತಹಂತವಾಗಿ ಬಹಳಷ್ಟು ಸಾಧನೆ ಮಾಡಿದ್ದು, ದೇಶದಲ್ಲಿಯೇ ಬಂಡವಾಳ ಆಕರ್ಷಣೆಯಲ್ಲಿ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಅದರಲ್ಲಿಯೂ ಬ್ರ್ಯಾಂಡ್ ಬೆಂಗಳೂರು ನವೋದ್ಯಮಗಳ ತವರೂರು ಎಂದು ಹೆಸರಾಗಿದೆ. ಕರ್ನಾಟಕದ ತಾಂತ್ರಿಕ ಗುಣಮಟ್ಟವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದರು.
ರಜತ ಸಂಭ್ರಮದಲ್ಲಿರುವ ಏಷ್ಯಾದ ಅತೀ ದೊಡ್ಡ ಬೆಂಗಳೂರು ಟೆಕ್​ ಶೃಂಗ ಸಭೆಯು ಇಂದಿನಿಂದ 3 ದಿನಗಳ ಕಾಲ ನಡೆಯಲಿದೆ. ಈ ಸಮಾವೇಶವು ಕನಿಷ್ಠ 9 ಒಡಂಬಡಿಕೆಗಳಿಗೆ (ಎಂಒಯು) ಹಾಗೂ 20ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. 575 ಹೆಚ್ಚು ಪ್ರದರ್ಶಕರು, ದೇಶದ 16 ವಿವಿಧ ರಾಜ್ಯಗಳ ಸ್ಟಾರ್ಟಪ್​ಗಳು ಪಾಲ್ಗೊಂಡಿರುವುದು ಈ ಬಾರಿಯ ವಿಶೇಷ. 350ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪರಿಣತರು ತಂತ್ರಜ್ಞಾನದ ಮಜಲುಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಐಟಿ-ಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್​, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಆಸ್ಟ್ರೇಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್‌ ಪ್ಯಾಟ್ಸ್‌, ಫಿನ್ಲೆಂಡ್‌ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ಕೊನೆನ್‌, ಅರಬ್‌ ಸಂಯುಕ್ತ ಸಂಸ್ಥಾನದ ಸಚಿವ ಒಮರ್‍‌ ಬಿನ್‌ ಸುಲ್ತಾನ್‌, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಬಿಟಿ ವಿಷನ್‌ ಗ್ರೂಪ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‍‌ ಷಾ, ಸ್ಟಾರ್ಟಪ್ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಎಸ್‌ಟಿಪಿಐನ ಉನ್ನತ ಪ್ರತಿನಿಧಿಗಳಾದ ಅರವಿಂದ್‌ಕುಮಾರ್‍‌ ಮತ್ತು ಶೈಲೇಂದ್ರ ತ್ಯಾಗಿ, ವಿಜಯ್‌ ಚಂದ್ರು, ಜಿತೇಂದ್ರ ಛಡ್ಡಾ, ಕಿಂಡ್ರೆಲ್‌ ಸಂಸ್ಥಾಪಕ ಮಾರ್ಟಿನ್‌ ಶ್ರೋಟರ್, ಉದ್ಯಮಿ ನವೀನ್‌ ತೆವಾರಿ, ತೆ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಅಧ್ಯಕ್ಷ ಬಿ.ವಿ. ನಾಯ್ಡು ಉಪಸ್ಥಿತರಿದ್ದರು.
‘ಬೆಂಗಳೂರು ಟೆಕ್​ ಶೃಂಗಸಭೆ’ಗೆ ಪ್ರಧಾನಿ ಮೋದಿ ಚಾಲನೆ: ತಂತ್ರಜ್ಞಾನಿಗಳು, ಉದ್ಯಮಿಗಳು ಭಾಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
