ಮೀಸಲಾತಿಯೇ ಆಂದೋಲನಕ್ಕೆ ಕಾರಣವಾಗಿದ್ದರೆ ಅದು ಜುಲೈ 21ರ ಸುಪ್ರೀಂ ಕೋರ್ಟ್ ತೀರ್ವನದ ನಂತರ ಮತ್ತೆ ತಲೆಯೆತ್ತಲು ಕಾರಣವೇ ಇರಲಿಲ್ಲ. ಆದರೆ ಪ್ರಾರಂಭದಿಂದಲೂ ಆ ಆಂದೋಲನ ಹಸೀನಾರ ವಿರುದ್ಧವೇ ಇತ್ತು, ಅದು ಮೀಸಲಾತಿ-ವಿರೋಧದ ಮುಖವಾಡ ಧರಿಸಿತ್ತು ಮತ್ತು ಅದರ ಸೂತ್ರಧಾರರು ಗೋಳದ ಆಚೆಬದಿಯಲ್ಲಿದ್ದರು ಎನ್ನುವುದೀಗ ಬಹಿರಂಗ ಸತ್ಯ
ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಅಲ್ಲೋಲಕಲ್ಲೋಲ ಘಟಿಸಿದೆ, ಇದೇ ಜನವರಿಯಲ್ಲಿ ಚುನಾವಣೆಗಳಲ್ಲಿ ಸತತ ನಾಲ್ಕನೆಯ ಬಾರಿ ಜಯಶಾಲಿಯಾಗಿದ್ದ ಪ್ರಧಾನಮಂತ್ರಿ ಶೇಖ್ ಹಸೀನಾ ವಾಜಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ, ಅವರ ಬದ್ಧ ವಿರೋಧಿ ಹಾಗೂ ಭ್ರಷ್ಟ ಮಾಜಿ ಪ್ರಧಾನಮಂತ್ರಿ ಬೇಗಂ ಖಲೀದಾ ಜಿಯಾ ಬೇಷರತ್ತಾಗಿ ಬಂಧಮುಕ್ತರಾಗಿದ್ದಾರೆ. ಆ ದೇಶದಲ್ಲಿ ಇಂದು ಅತಿ ಬಲಾಢ್ಯ ವ್ಯಕ್ತಿಯೆಂದರೆ ಕೇವಲ ಆರು ವಾರಗಳ ಹಿಂದಷ್ಟೇ ಸೇನಾ ಮುಖ್ಯಸ್ಥರಾದ ಜನರಲ್ ವಖಾರ್-ಊಝå್-ಝುಮಾನ್!
ಬಾಂಗ್ಲಾದೇಶದ ಸ್ಥಾಪಕ ‘ಬಂಗಬಂಧು’ ಶೇಖ್ ಮುಜೀಬುರ್ ರೆಹಮಾನ್​ರ ಪುತ್ರಿ ಹಾಗೂ ಅವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ರಹಸ್ಯವಾಗಿ ಸೇನಾ ವಿಮಾನವನ್ನೇರಿ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಯತ್ತ ಹಾರತೊಡಗಿದಂತೆ ಆಂದೋಲನಕಾರರು ಪ್ರಧಾನಮಂತ್ರಿಗಳ ಅಧಿಕೃತ ನಿವಾಸ ‘ಗಣಭವನ್’ಗೆ ನುಗ್ಗಿ ಲೂಟಿ ಹಾಗೂ ದಾಂಧಲೆಯಲ್ಲಿ ತೊಡಗಿದರು. ಕುರಿ, ಕೋಳಿ, ಮೀನು, ಬೆಡ್​ಶೀಟ್, ದಿಂಬು, ಕುರ್ಚಿ, ಸೀರೆ, ರವಿಕೆ, ಒಳಉಡುಪುಗಳೂ ಸೇರಿದಂತೆ ಆ ‘ವಿದ್ಯಾರ್ಥಿ’ಗಳು ಎತ್ತಿಕೊಳ್ಳದ ವಸ್ತುವೇ ಇಲ್ಲ. ಇದು ಗಣಭವನದ ಒಳಗಿನ ಸ್ಥಿತಿಯಾದರೆ ಹೊರಗೆ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಮತ್ತು ಹಿಂದೂಗಳ ಮೇಲೆ ಹಲ್ಲೆ, ಅವರ ಮನೆಗಳ ಮೇಲೆ ದಾಳಿ ವ್ಯಾಪಕವಾಗಿ ನಡೆದಿದೆ. ರಾಜಧಾನಿ ಢಾಕಾಗೆ ಹೆಸರು ನೀಡಿದ ಹಾಗೂ ಹಿಂದೂ ಶಕ್ತಿಪೀಠಗಳಲ್ಲಿ ಒಂದಾದ ಢಾಕೇಶ್ವರಿ ಮಂದಿರ ಮತ್ತು ಕಾಳಿಕಾ ಮಂದಿರ ಸೇರಿದಂತೆ ಹಲವು ಹಿಂದೂ ಮಂದಿರಗಳ ಮೇಲೆ ದಾಳಿ ನಡೆದಿದೆ. ಇಷ್ಟೇ ಅಲ್ಲ, ದೇಶದ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನಿವಾಸದ ಕಾಂಪೌಂಡ್ ಹಾರಿ ‘ವಿದ್ಯಾರ್ಥಿ’ ಆಂದೋಲನಕಾರರು ಒಳಗೆ ನುಗ್ಗಿದ್ದಾರೆ. ನಂತರ ನಿವಾಸದೊಳಗಿಂದ ಚಿತ್ಕಾರಗಳು ಕೇಳಿಬಂದವು ಎಂಬ ಸುದ್ದಿ ಇದೆ!
ಹಾಗೆ ನೋಡಿದರೆ ಆಂದೋಲನ, ಅಶಾಂತಿ, ರಾಜಕೀಯ ಅಸ್ಥಿರತೆ, ರಕ್ತಪಾತ ಬಾಂಗ್ಲಾದೇಶಕ್ಕೆ ಹೊಸದೇನೂ ಅಲ್ಲ. ಮೊದಲಿಗೆ ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಲು ಪೂರ್ವ ಪಾಕಿಸ್ತಾನೀಯರು ಅಂದರೆ ಇಂದಿನ ಬಾಂಗ್ಲಾದೇಶೀಯರು ಅನುಸರಿಸಿದ್ದೇ ಆಂದೋಲನದ ಮಾರ್ಗ. ಸತತ ಎರಡು ದಶಕಗಳ ಕಾಲ ನಡೆದ ಇದು ಅಂತಿಮವಾಗಿ 1971ರಲ್ಲಿ ಸ್ವತಂತ್ರ ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು. ಅಷ್ಟರೊಳಗೆ ಸುಮಾರು 30 ಲಕ್ಷ ಬಂಗಾಳಿಗಳು ಪಾಕ್ ಸೇನೆಯಿಂದ ಹತ್ಯೆಗೀಡಾಗಿಯಾಗಿತ್ತು, ಲಕ್ಷಾಂತರ ಮಹಿಳೆಯರು ಅತ್ಯಾಚಾರಕ್ಕೂ ಒಳಗಾಗಿ ನರಳಿದ್ದೂ ಅಗಿಹೋಗಿತ್ತು.
ಅಂತಿಮವಾಗಿ ಭಾರತದ ನೆರವಿನಿಂದ ಬಂಗಾಲಿಗಳು ಸ್ವತಂತ್ರ ‘ಸೋನಾರ್ ಬಾಂಗ್ಲಾ’ವನ್ನು ನಿರ್ವಿುಸಿಕೊಂಡ ಮೇಲೆ ಎಲ್ಲವೂ ಸರಿಹೋಯಿತೇ? ಗಂಗಾ, ಬ್ರಹ್ಮಪುತ್ರ ನದಿಗಳ ಮುಖಜಭೂಮಿಯಲ್ಲಿ ಶಾಶ್ವತ ಶಾಂತಿ ನೆಲೆಗೊಂಡಿತೇ? ಹಾಗೇನೂ ಇಲ್ಲ. ಅಸ್ತಿತ್ವಕ್ಕೆ ಬಂದ ಈ 53 ವರ್ಷಗಳಲ್ಲಿ ಆ ದೇಶದಲ್ಲಿ ನಾಲ್ಕು ಸೇನಾಕ್ರಾಂತಿಗಳು ಘಟಿಸಿವೆ, ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದನೆ ನಿಗ್ರಹಿಸಲಾಗದ ಮಟ್ಟಿಗೆ ಬೇರುಬಿಟ್ಟಿದೆ, ಹಿಂದೂಗಳ ಮೇಲೆ ಮತ್ತು ರಾಜಕೀಯ ವಿರೋಧಿಗಳ ಮೇಲೆ ಮಾರಣಾಂತಿಕ ಹಲ್ಲೆಗಳು ದಿನನಿತ್ಯದ ಘಟನೆಗಳಾಗಿವೆ. ಅಷ್ಟೇ ಅಲ್ಲ, ಇಬ್ಬರು ರಾಷ್ಟ್ರಾಧ್ಯಕ್ಷರು ಕೊಲೆಗೀಡಾಗಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರಲ್ಲಿ ಒಬ್ಬರಾದರೆ, ಇನ್ನೊಬ್ಬರು ಪಾಕಿಸ್ತಾನದಿಂದ ಬೇರಾಗಿ ಸ್ವತಂತ್ರ ಬಾಂಗ್ಲಾದೇಶದ ರಚನೆಯನ್ನು ಮೊದಲ ಬಾರಿಗೆ ಚಿತ್ತಗಾಂಗ್ ಬಾನುಲಿ ಕೇಂದ್ರದಿಂದ ಘೊಷಿಸಿದ ಹೆಗ್ಗಳಿಕೆಯ ಜನರಲ್ ಜಿಯಾ-ಉರ್-ರಹಮಾನ್!
ಇಂತಹ ಇತಿಹಾಸವುಳ್ಳ ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವಂತಹ ಘಟನೆಗಳು ಅಚ್ಚರಿಯನ್ನೇನೂ ಮೂಡಿಸುವುದಿಲ್ಲ. ಆದರೆ, ಹಿಂದಿನ ಅಶಾಂತಿ ಹಾಗೂ ರಕ್ತಪಾತಗಳು ಪೂರ್ಣವಾಗಿ ಆಂತರಿಕ ಮೂಲದವು. ಪ್ರಸಕ್ತ ಬೆಳವಣಿಗೆಗಳು ವಿದೇಶೀ ಪ್ರಾಯೋಜಿತ. ಹೊರಗಿನ ಶಕ್ತಿಗಳ ಹುನ್ನಾರಗಳಿಗೆ ಒಳಗಿನಿಂದಲೇ ದೊಡ್ಡ ಪ್ರಮಾಣದ ಸಹಕಾರ ದೊರೆತಿರುವುದು ಇಂದು ಬಾಂಗ್ಲಾದೇಶದಲ್ಲಿ ನಾವು ಕಾಣುತ್ತಿರುವ ವಾಸ್ತವ.
ವಿದ್ಯಾರ್ಥಿಗಳು ವಿರೋಧಿಸಿದ ‘ಮೀಸಲಾತಿ’ಯದೊಂದು ಆಸಕ್ತಿಕರ ಇತಿಹಾಸ.
1971ರ ಸ್ವಾತಂತ್ರ್ಯ ಯದ್ಧದಲ್ಲಿ ಭಾಗಿಯಾದವರಿಗೆ, ಮತ್ತವರ ಸಂಬಂಧಿಕರಿಗೆ ಸರ್ಕಾರಿ ನೌಕರಿಗಳಲ್ಲಿ 30% ಮೀಸಲಾತಿ 2018ರವರೆಗೂ ಇತ್ತು. ಇದರೊಂದಿಗೆ ಹಿಂದುಳಿದ ಜಿಲ್ಲೆಗಳ ನಿವಾಸಿಗಳಿಗೆ 10%, ಮಹಿಳೆಯರಿಗೆ 10%, ಮತ್ತಿತರ ಮೀಸಲಾತಿಗಳು ಸೇರಿ ಒಟ್ಟು ಮೀಸಲಾತಿ 56% ಇತ್ತು. ಸ್ವಾತಂತ್ರಾ್ಯಂದೋಲನ ಜರುಗಿ ಅರ್ಧ ಶತಮಾನವಾಗಿದ್ದು, ಅದರಲ್ಲಿ ನೊಂದವರಲ್ಲಿ ಹೆಚ್ಚಿನವರು ಈಗ ಇಲ್ಲದ, ಇರುವವರು ಈಗ ಸರ್ಕಾರಿ ನೌಕರಿ ಪಡೆಯುವ ವಯೋಮಿತಿ ದಾಟಿರುವುದರಿಂದ ಅವರ ಹೆಸರು ಹೇಳಿಕೊಂಡು ಅವರ ಸಂಬಂಧಿಕರು ಇನ್ನೂ ಮೀಸಲಾತಿ ಪಡೆದುಕೊಳ್ಳುವುದು ಸರಿಯಲ್ಲ ಎಂಬ ಚರ್ಚೆ 2018ರಲ್ಲಿ ಹುಟ್ಟಿಕೊಂಡಿತು.
ಸ್ವಾತಂತ್ರಾ್ಯಂದೋಲನದಲ್ಲಿ ಭಾಗಿಯಾದವರು ಬಹುತೇಕ ಆಡಳಿತ ಅವಾಮಿ ಲೀಗ್ ಪಕ್ಷದವರೇ ಆಗಿದ್ದುದರಿಂದ ಈ ಮೀಸಲಾತಿಯಿಂದಾಗಿ ಶೇಖ್ ಹಸೀನಾರ ಪರ ಬೃಹತ್ ವೋಟ್​ಬ್ಯಾಂಕ್ ನಿರ್ವಣವಾಗಿರುವುದನ್ನೂ, ಅದರಿಂದಾಗಿ ತಮಗೆ ಹಾನಿಯಾಗುತ್ತಿರುವುದನ್ನೂ ಮನಗಂಡಿದ್ದ ವಿರೋಧಪಕ್ಷಗಳು ಈ ಮೀಸಲಾತಿ-ವಿರೋಧಿ ಆಂದೋಲನದ ಪರವಾಗಿ ನಿಂತವು. ಪರಿಣಾಮವಾಗಿ ಆ ಮೀಸಲಾತಿ ಆ ವರ್ಷ ರದ್ದಾಯಿತು. ಆದರೆ ಇದೇ ಜೂನ್ 5ರಂದು ದೇಶದ ಒಂದು ಹೈಕೋರ್ಟ್ ಆ 30% ಮೀಸಲಾತಿಯ ರದ್ದತಿಯನ್ನು ಅಸಿಂಧು ಎಂದು ಘೊಷಿಸಿ, ಅದನ್ನು ಮತ್ತೆ ಚಾಲನೆಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಿತು. ಈ ಕುರಿತಾಗಿ ವಿದ್ಯಾರ್ಥಿಗಳಲ್ಲಿ (ಮತ್ತವರ ಪಾಲಕರಲ್ಲಿಯೂ) ಅಸಂತೋಷ ಮೂಡಿದರೂ ಆ ಬಗ್ಗೆ ವಿರೋಧವೇನೂ ದೊಡ್ಡದಾಗಿ ವ್ಯಕ್ತವಾಗಲಿಲ್ಲ. ಅದಾಗಲು ಸರಿಸುಮಾರು ಒಂದು ತಿಂಗಳೇ ಬೇಕಾಯಿತು. ಕೊನೆಗೂ ಮೀಸಲಾತಿ-ವಿರೋಧಿ ಆಂದೋಲನ ಅತಿ ಕಡಿಮೆ ಅವಧಿಯಲ್ಲಿ ತೀವ್ರಗೊಂಡು, ಅದರ ಹತ್ತಿಕ್ಕುವಿಕೆಗಾಗಿ ಹಸೀನಾ ಸರ್ಕಾರ ಸುರಕ್ಷಾ ಪಡೆಗಳನ್ನು ನಿಯೋಜಿಸಿದ್ದರಿಂದಾಗಿ ಇನ್ನೂರಕ್ಕಿಂತಲೂ ಹೆಚ್ಚು ಆಂದೋಲನಕಾರರು ಪ್ರಾಣ ಕಳೆದುಕೊಳ್ಳುವಂತಾಯಿತು. ಪರಿಸ್ಥಿತಿ ಹೀಗೆ ಕೈಮೀರಿಹೋಗುತ್ತಿದ್ದ ಸನ್ನಿವೇಶದಲ್ಲಿ ಕತ್ತಲ ಸುರಂಗದಂಚಿನಲ್ಲಿ ಪ್ರಖರ ಬೆಳಕಿನಂತೆ ಕಂಡುಬಂದದ್ದು ಜುಲೈ 21ರಂದು ಬಂದ ದೇಶದ ಸವೋಚ್ಚ ನ್ಯಾಯಾಲಯದ ತೀರ್ಪ. ಹೈಕೋರ್ಟ್​ನ ಜೂನ್ 5ರ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಕೇವಲ 5%ಗೆ ಇಳಿಸಿತು. ಪರಿಣಾಮವಾಗಿ ವಿದ್ಯಾರ್ಥಿಗಳೂ ಆಂದೋಲನವನ್ನು ನಿಲುಗಡೆಗೆ ತರತೊಡಗಿದರು ಮತ್ತು ಅಲ್ಲಿಗೆ ಎಲ್ಲವೂ ಸರಿಹೋಯಿತು ಎಂಬ ಸ್ಥಿತಿ ನಿರ್ವಣವಾಯಿತು.
ಆದರೆ ಜುಲೈ ಅಂತ್ಯಗೊಳ್ಳತೊಡಗಿದಂತೆ ಅಶಾಂತಿ ಮತ್ತೆ ಉಲ್ಬಣಿಸಿತು ಮತ್ತು ಅದೀಗ ಮೀಸಲಾತಿಯ ಬದಲು ಹಸೀನಾ ಸರ್ಕಾರದ ವಿರುದ್ಧ ತಿರುಗಿತ್ತು. ಪ್ರಧಾನಿ ಹಸೀನಾ ಆಗಸ್ಟ್ 3ಕ್ಕೆ ಕರೆದ ಮಾತುಕತೆಗೂ ಬಾರದೆ ಆಂದೋಲನಕಾರರು ತಮ್ಮ ಸರ್ಕಾರ-ವಿರೋಧಿ ಚಟವಟಕೆಗಳನ್ನು ಮರುದಿನ ಇನ್ನಷ್ಟು ತೀವ್ರಗೊಳಿಸಿದರು. ಅದರ ನಿಗ್ರಹಕ್ಕೆ ಹಸೀನಾ ಸರ್ಕಾರ ಮತ್ತೆ ಸುರಕ್ಷಾಪಡೆಗಳನ್ನು ಬಳಸಿದ ಪರಿಣಾಮವಾಗಿ ಭಾನುವಾರ, ಆಗಸ್ಟ್ 4ರಂದು 99 ಜನರು ಪ್ರಾಣ ಕಳೆದುಕೊಂಡರು.
ಆಗಸ್ಟ್ 5 ನಿರ್ಣಾಯಕ ದಿನ. ಬೆಳಗ್ಗೆ 10ಕ್ಕೆ ಢಾಕಾ ನಗರದ ಮುತ್ತಿಗೆಗೆ ಹೊರಟ ಆಂದೋಲನಕಾರರನ್ನು ತಡೆಯಲು ಪದ್ಮಾ (ಗಂಗಾ) ಮತ್ತು ಜಮುನಾ (ಬ್ರಹ್ಮಪುತ್ರ) ನದಿಗಳ ಸೇತುವೆಗಳನ್ನು ಬಂದ್ ಮಾಡಿದರೂ, ಅವಾಮಿ ಲೀಗ್​ನ ವಿದ್ಯಾರ್ಥಿ ಅಂಗ ‘ಛಾತ್ರ ಲೀಗ್’ ಆಂದೋಲನಕಾರರ ವಿರುದ್ಧ ನಿಂತರೂ, ಸೇನೆ ಮೊಬೈಲ್ ಡಾಟಾ ನಿಲ್ಲಿಸಿದರೂ ಆಂದೋಲನಕಾರರು ಪ್ರಧಾನಮಂತ್ರಿಗಳ ನಿವಾಸದ ಸಮೀಪಕ್ಕೆ ಬಂದೇಬಿಟ್ಟರು. ಸೇನೆಯ ತಡೆ ಹಾಗೂ ಪೊಲೀಸ್ ಆಶ್ರುವಾಯುವನ್ನು ಧಿಕ್ಕರಿಸಿ ಆಂದೋಲನಕಾರರು ಗಣಭವನಕ್ಕೆ ಮುತ್ತಿಗೆ ಹಾಕಿದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಆಂದೋಲನವನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಹಕರಿಸುತ್ತಲೇ ತೆರೆಯ ಹಿಂದೆ ಸೇನಾ ಮುಖ್ಯಸ್ಥ ಜ. ವಖಾರ್-ಉಝ್-ಝುಮಾನ್ ಪ್ರಧಾನಿ ಹಸೀನಾರಿಗೆ ಹೇಳಿದ ಮಾತು ಅಥವಾ ಕೊಟ್ಟ ಆದೇಶ, ‘ರಾಜೀನಾಮೆ ನೀಡಿ, ಗಂಟುಮೂಟೆ ಕಟ್ಟಿ ದೇಶದಿಂದ ಹೊರನಡೆಯಿರಿ, ಅದಕ್ಕಾಗಿ ನಿಮಗಿರುವ ಸಮಯ 45 ನಿಮಿಷಗಳು ಮಾತ್ರ’ ಎಂದು! ಸೋಮವಾರ ಮಧ್ಯಾಹ್ನ ಢಾಕಾದಲ್ಲಿ ತೆರೆಯ ಹಿಂದೆ ನಡೆದದ್ದು ಈ ನಾಟಕ. ಪ್ರಶ್ನೆಯೆಂದರೆ ತೆರೆಯ ಹಿಂದೆ ನಡೆದದ್ದು ಈ ನಾಟಕ ಮಾತ್ರವೇ ಮತ್ತು ಅದು ಜರುಗಿದ್ದು ಢಾಕಾದಲ್ಲಿ ಮಾತ್ರವೇ?
ಮೀಸಲಾತಿಯೇ ಆಂದೋಲನಕ್ಕೆ ಕಾರಣವಾಗಿದ್ದರೆ ಅದು ಜುಲೈ 21ರ ಸುಪ್ರೀಂ ಕೋರ್ಟ್ ತೀರ್ವನದ ನಂತರ ಮತ್ತೆ ತಲೆಯೆತ್ತಲು ಕಾರಣವೇ ಇರಲಿಲ್ಲ. ಇಂತಹ ಸೂಕ್ಷ ್ಮ ಸಂದರ್ಭಗಳಲ್ಲಿ ಉಂಟಾಗಬಹುದಾದ ಯಾವುದೇ ಗೊಂದಲವನ್ನು ಪ್ರಧಾನಿ ಹಸೀನಾ ಕರೆದ ಮಾತುಕತೆಯಲ್ಲಿ ಪರಿಹರಿಸಿಕೊಳ್ಳಬಹುದಿತ್ತು. ಆದರೆ ಪ್ರಾರಂಭದಿಂದಲೂ ಆ ಆಂದೋಲನ ಹಸೀನಾರ ವಿರುದ್ಧವೇ ಇತ್ತು, ಅದು ಮೀಸಲಾತಿ-ವಿರೋಧದ ಮುಖವಾಡ ಧರಿಸಿತ್ತು ಮತ್ತು ಅದರ ಸೂತ್ರಧಾರರು ಗೋಳದ ಆಚೆಬದಿಯಲ್ಲಿದ್ದರು ಎನ್ನುವುದೀಗ ಬಹಿರಂಗ ಸತ್ಯ.
ಶೇಖ್ ಹಸೀನಾ 1996-2001ರ ಅವಧಿಯಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ನಂತರ 2009ರಲ್ಲಿ ಮತ್ತೆ ಪ್ರಧಾನಿಯಾದರು. ನಂತರದ ದಿನಗಳಲ್ಲಿ ಅವರಲ್ಲಿ ಹೆಚ್ಚುಹೆಚ್ಚು ಅಧಿಕಾರವನ್ನು ತಮ್ಮ ಕೈಯಲ್ಲೇ ಕೇಂದ್ರೀಕರಿಸಿಕೊಳ್ಳಲು ಹೋದದ್ದಿದೆ. ದುರಂತವೆಂದರೆ ಇದನ್ನು ತಡೆಯುವ ನೈತಿಕಶಕ್ತಿ ವಿರೋಧಪಕ್ಷಗಳಿಗಿಲ್ಲ. ನೆತ್ತಿಯವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಪ್ರಮುಖ ವಿರೋಧಪಕ್ಷ ಬಿಎನ್​ಪಿ (ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ) ಮತ್ತು ಪಾಕಿಸ್ತಾನದ ಕೈಗೊಂಬೆಯಾಗಿರುವ ಜಮಾತ್-ಎ-ಇಸ್ಲಾಮಿಗಳು ಬಾಂಗ್ಲಾದೇಶಕ್ಕೆ ಶಾಪವೇ ಸರಿ. ಇಂತಹ ಸ್ಥಿತಿಯಲ್ಲಿ ಹೆಚ್ಚಿನ ಅಧಿಕಾರವನ್ನು ತಮ್ಮ ಹಾಗೂ ತಮ್ಮ ಪಕ್ಷದ ಕೈಯಲ್ಲೇ ಇರಿಸಿಕೊಂಡ ಹಸೀನಾ ದೇಶಕ್ಕೆ ಒಳ್ಳೆಯದನ್ನೇ ಮಾಡಿದ್ದಾರೆ. ಇದನ್ನು ಹೊರಜಗತ್ತೂ ಅರ್ಥಮಾಡಿಕೊಂಡಿದೆ. ಆದರೆ ಎಡವಟ್ಟಾದದ್ದು ಅಮೆರಿಕದ ವಿಷಯದಲ್ಲಿ.
ಅಮೆರಿಕದ ಜೋ ಬೈಡೆನ್ ಸರ್ಕಾರ ಚೀನಾ ವಿರುದ್ಧ ತನ್ನ ಸಾಮರಿಕ ಶಕ್ತಿ ವೃದ್ಧಿಸಿಕೊಳ್ಳಲು ತರಾತುರಿಯಲ್ಲಿ ತೊಡಗಿತಷ್ಟೆ. ಆ ಯೋಚನೆಯ ಅಂಗವಾಗಿ ಬಾಂಗ್ಲಾದೇಶದ ಪುಟ್ಟ ಸೈಂಟ್ ಮಾರ್ಟಿನ್ ದ್ವೀಪವನ್ನು ಸೇನಾನೆಲೆಯಾಗಿ ಅಭಿವೃದ್ಧಿಪಡಿಸಲು ವಾಷಿಂಗ್​ಟನ್ ಬಯಸಿತ್ತು ಎಂದೂ ಹೇಳಲಾಗುತ್ತದೆ. ಆದರೆ ಇದು ಹಸೀನಾ ಸರ್ಕಾರಕ್ಕೆ ಸಮ್ಮತವಿರಲಿಲ್ಲ. ದೊಡ್ಡಣ್ಣನ ದೃಷ್ಟಿಯಲ್ಲಿ ಇದು ‘ಉದ್ಧಟತನ’. ಹಸೀನಾರನ್ನು ಇಳಿಸಿ ತನಗೆ ಅನುಕೂಲಕರವಾದ ಸರ್ಕಾರವನ್ನು ಢಾಕಾದಲ್ಲಿ ಕೂರಿಸಲು ಬೈಡೆನ್ ಸರ್ಕಾರ ಪ್ರಯತ್ನ ಆರಂಭಿಸಿತು. 2024ರ ಜನವರಿಯ ಚುನಾವಣೆಗಳನ್ನು ದೇಶಹಿತಕ್ಕಾಗಿಯೇ ಜಯಿಸಲು ಕೆಲವು ತಂತ್ರಗಳನ್ನು ಹಸೀನಾ ಅನುಸರಿಸಿದ್ದನ್ನೇ ಅವರ ವಿರುದ್ಧ ಬ್ಲಾ್ಯಕ್​ವೆುೕಲ್​ಗಾಗಿ ಅಮೆರಿಕ ಬಳಸಿದ ಸುಳಿವನ್ನು ಹಸೀನಾರೇ ನೀಡಿದ್ದಾರೆ. ಆ ಪ್ರಕಾರ ಸೈಂಟ್ ಮಾರ್ಟಿನ್ ದ್ವೀಪವನ್ನು ತಮಗೊಪ್ಪಿಸಿದರೆ ತಮ್ಮ ಪರವಾಗಿ ಬಾಂಗ್ಲಾದೇಶದೊಳಗೆ ಮತ್ತು ಹೊರಗೆ ಜನಾಭಿಪ್ರಾಯ ಮೂಡಿಸಿ ತಮಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವುದಾಗಿ ಬೈಡೆನ್ ಸರ್ಕಾರ ಹಿರಿಯ ಅಧಿಕಾರಿಯೊಬ್ಬರ ಮೂಲಕ ಸಂದೇಶ ಕಳುಹಿಸಿತಂತೆ. ತಾವು ಇದಕ್ಕೆ ಸಮ್ಮತಿಸಲಿಲ್ಲ ಎಂದು ಹಸೀನಾ ಹೇಳುತ್ತಾರೆ. ನಂತರ ತನ್ನ ತಾಳಕ್ಕೆ ಕುಣಿಯದ ಹಸೀನಾರನ್ನು ‘ಸರ್ವಾಧಿಕಾರಿ’ ಎಂದು ಜನಾಭಿಪ್ರಾಯ ಮೂಡಿಸಲು ಅಮೆರಿಕ ಆರಂಭಿಸಿತು. ಸೈಂಟ್ ಮಾರ್ಟಿನ್ ದ್ವೀಪವನ್ನೂ ಒಳಗೊಂಡಂತೆ ಆಗ್ನೇಯ ಬಾಂಗ್ಲಾದೇಶ, ಈಶಾನ್ಯ ಭಾರತ ಮತ್ತು ವಾಯವ್ಯ ಮ್ಯಾನ್ಮಾರ್​ನ ಕ್ರಿಶ್ಚಿಯನ್ ಪ್ರದೇಶಗಳನ್ನು ತನ್ನ ಪ್ರಭಾವಕ್ಕೆ ತೆಗೆದುಕೊಂಡು ಹೊಸ ಕ್ರಿಶ್ಚಿಯನ್ ದೇಶವೊಂದನ್ನು ನಿರ್ವಿುಸಲು ಅಮೆರಿಕ ಪ್ರಯತ್ನಿಸುತ್ತಿದೆಯೆಂದು ಆ ದೇಶದ ಹೆಸರು ಹೇಳದೆ ಹಸೀನಾ ಆಪಾದಿಸಿದ್ದೂ ಉಂಟು. ಇದರ ಸತ್ಯಾಸತ್ಯತೆ ಬಗ್ಗೆ ನಿಖರವಾಗಿ ಹೇಳಲಾಗದು.
2018ರಲ್ಲೇ ರದ್ದಾಗಿದ್ದ ಮೀಸಲಾತಿಯನ್ನು ಹೈಕೋರ್ಟ್ ಮತ್ತೆ ಜಾರಿಗೆ ತಂದದ್ದು, ಅದು ಆಂದೋಲನವಾಗಿ ಬೆಳೆದದ್ದು, ನಂತರ ಸುಪ್ರೀಂ ಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಆಂದೋಲನ ಮುಂದುವರಿದದ್ದು ಸಂಶಯಗಳಿಗೆ ಕಾರಣವಾಗುತ್ತದೆ. ಜತೆಗೆ ಪಾಕಿಸ್ತಾನದಲ್ಲಿ ಅಮೆರಿಕ-ವಿರೋಧಿ ಇಮ್ರಾನ್ ಖಾನ್ ಸರ್ಕಾರದ ಪತನಕ್ಕೆ ಸಂಚು ಹೂಡಿದರು ಎನ್ನಲಾದ ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿ ಡೊನಾಲ್ಡ್ ಲು ಮೇ 30ರಂದು ಬಾಂಗ್ಲಾದೇಶಕ್ಕೆ ಬಂದದ್ದು, ಅದಾದ ಆರು ದಿನಕ್ಕೆ ಮೀಸಲಾತಿ ಮರುಚಾಲನೆಗೆ ಹೈಕೋರ್ಟ್ ಆದೇಶ ನೀಡಿದ್ದು, ನಂತರ ಅದನ್ನು ತಳ್ಳಿಹಾಕಿ ಜುಲೈ 21ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆಂದೋಲನಕ್ಕೆ ತಣ್ಣೀರೆರಚಿದ ಎರಡು ದಿನಗಳ ನಂತರ ಅಮೆರಿಕದ ರಾಯಭಾರಿ ಪೀಟರ್ ಡಿ. ಹಾಸ್ ತಾವು ತಮ್ಮ ಕೆಲಸವನ್ನು ಪೂರ್ಣಗೊಳಿಸಲಾಗಲಿಲ್ಲ ಎಂದು ಹೇಳಿ ಬಾಂಗ್ಲಾ ಸರ್ಕಾರದಿಂದ ಔಪಚಾರಿಕ ವಿದಾಯವನ್ನೂ ಸ್ವೀಕರಿಸದೆ ಹೊರಟುಹೋದದ್ದು ಹಸೀನಾ ಎತ್ತಂಗಡಿಯಲ್ಲಿ ‘ದೊಡ್ಡಣ್ಣ’ನ ಪಾತ್ರದ ಬಗ್ಗೆ ಸಂಪುಟಗಟ್ಟಲೆ ಹೇಳುತ್ತವೆ. ಇವುಗಳ ಜತೆಗೆ, ‘ಹಸೀನಾರನ್ನು ಹೊರಗಟ್ಟಿ ಸೇನಾ ಮುಖ್ಯಸ್ಥ ಜ. ವಖಾರ್-ಉಝå್-ಝುಮಾನ್ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರಶಂಸಿರುವುದನ್ನೂ ಸೇರಿಸಿದರೆ ಚಿತ್ರ ಪೂರ್ಣಗೊಳ್ಳುತ್ತದೆ. ಬಾಂಗ್ಲಾದ ಬೆಳವಣಿಗೆ ಭಾರತದ ರಾಜತಾಂತ್ರಿಕ, ಸಾಮರಿಕ ಹಾಗೂ ಆರ್ಥಿಕ ಹಿತಾಸಕ್ತಿಗಳ ಮೇಲೆ ಮೇಲೆ ಬೀರುವ ಪ್ರಭಾವ ಅಗಾಧ. ಇದು ಪ್ರತ್ಯೇಕ ವಿಶ್ಲೇಷಣೆಯ ವಸ್ತುವಿಷಯ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​​ಗೆ ತಲುಪಿದ ವಿನೇಶ್ ಫೋಗಟ್: ಕೇಂದ್ರಕ್ಕೆ ಟಾಂಗ್ ಕೊಟ್ಟ ಸಾಕ್ಷಿ, ಬಜರಂಗ್‌ ಪೂನಿಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + nineteen =
Remember me
