| ವಿಲಾಸ ಮೇಲಗಿರಿ ಬೆಂಗಳೂರುಗ್ರಾಮೀಣ ಜನರು ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಲವು ದಾಖಲೆಗಳನ್ನು ತ್ವರಿತ ಮತ್ತು ಸಮೀಪದಲ್ಲೇ ಪಡೆಯುವ ಸಲುವಾಗಿ ಆರಂಭಿಸಿರುವ ‘ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ’ಗಳು ಸಿಬ್ಬಂದಿ ಇಲ್ಲದೆ ಬಸವಳಿಯುತ್ತಿವೆ.
ಹಳ್ಳಿ ಜನರು ಅಗತ್ಯ ದಾಖಲೆಗಳನ್ನು ಬೇಗ ಹಾಗೂ ಹತ್ತಿರದಲ್ಲೇ ವಿವಿಧ ಇಲಾಖೆ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ’ ತೆರೆದಿದೆ. ರಾಜ್ಯದ 6009 ಪಂಚಾಯಿತಿಗಳಲ್ಲಿ ಈ ಕೇಂದ್ರಗಳಿದ್ದು, ಲಕ್ಷಾಂತರ ಜನರಿಗೆ ಸೇವೆ ಒದಗಿಸಬೇಕಿದೆ. ಆದರೆ, ಮೂಲಸೌಲಭ್ಯವಿಲ್ಲದೆ ಇವು ಸಮರ್ಪಕ ಸೇವೆ ನೀಡುತ್ತಿಲ್ಲ.
ಈ ಕೇಂದ್ರಗಳಿಗೆ ಕಂಪ್ಯೂಟರ್ ಒದಗಿಸಿದ್ದರೂ ಆಪರೇಟರ್​ಗಳ ನೇಮಕ ಮಾಡಿಲ್ಲ. ಉದ್ಯೋಗ ಸೃಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದನ್ನು ಬಿಟ್ಟರೆ ಆ ಕುರಿತ ಕಡತಕ್ಕೆ ಚಾಲನೆ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಬ್ಬ ಕಂಪ್ಯೂಟರ್ ಅಪರೇಟರ್ ಇದ್ದರೂ ಕಾರ್ಯಬಾಹುಳ್ಯದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಈ ಕೇಂದ್ರಗಳಲ್ಲಿ ಜನರಿಗೆ ಸಿಗಬೇಕಾದ ಸೇವೆಗಳು ಸಿಗುತ್ತಿಲ್ಲ.
ಕಟ್ಟಡ ಅನುಮತಿ, ತೆರಿಗೆ ನಿರ್ಧರಣಾ ಪಟ್ಟಿ, ಜನನ-ಮರಣ ಪ್ರಮಾಣ ಪತ್ರ, ಪಹಣಿ, ವಿದ್ಯುತ್ ಬಿಲ್, ದೂರವಾಣಿ ಬಿಲ್, ಬಸ್, ರೈಲ್ವೆ, ಏರ್ ಟಿಕೆಟ್ ಬುಕ್ಕಿಂಗ್, ಮತದಾರರ ಗುರುತಿನ ಚೀಟಿ ಮಾರ್ಪಾಡು ಸೇರಿ ನೂರು ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಈ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ, ನೂರು ಸೇವೆ ಕೊಡುವ ಜಾಗದಲ್ಲಿ ಬಹುತೇಕ ಕಡೆ ಕೆಲವೇ ಸೇವೆಗಳು ದೊರೆಯುತ್ತಿವೆ.
ಪ್ರಗತಿ ಪರಿಶೀಲನೆ ಇಲ್ಲ:ಬಾಪೂಜಿ ಸೇವಾ ಕೇಂದ್ರಗಳ ಮೇಲ್ವಿಚಾರಣೆ, ಪ್ರಗತಿ ಪರಿಶೀಲನೆ ಸರಿಯಾಗಿ ಆಗುತ್ತಿಲ್ಲ. ಈ ಕೇಂದ್ರಗಳ ಮೇಲ್ವಿಚಾರಣೆಗೆಂದೇ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ (ಎಡಿಪಿಆರ್) ಹುದ್ದೆ ಸೃಜನೆ ಮಾಡಲಾಗಿದೆಯಾದರೂ ಮೇಲ್ವಿಚಾರಣೆ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಪರೂಪ.
ಇಂಟರ್​ನೆಟ್ ವ್ಯತ್ಯಯ:ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವೆ ಒದಗಿಸಲು ಇನ್ನೊಂದು ಬಹು ದೊಡ್ಡ ಅಡ್ಡಿ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್​ನೆಟ್ ವ್ಯತ್ಯಯವಾಗುತ್ತಿರುವುದು. ಇಂಟರ್​ನೆಟ್ ಸ್ಪೀಡ್ ಸಮಸ್ಯೆಯಿಂದ ಸಿಗುವ ಸೇವೆಗಳೂ ತ್ವರಿತವಾಗಿ ಸಿಗುತ್ತಿಲ್ಲ. ನಿರಂತರವಾಗಿ ಇಂಟರ್​ನೆಟ್ ಸಂಪರ್ಕ ಕಲ್ಪಿಸಬೇಕು ಎಂಬುದು ಬಾಪೂಜಿ ಕೇಂದ್ರಗಳ ಕಂಪ್ಯೂಟರ್ ಆಪರೇಟರ್​ಗಳ ಆಗ್ರಹ.
ಮ್ಯಾನುವಲ್​ಗೆ ಮರಳಿದ ಸಿಬ್ಬಂದಿ?:ಅನೇಕ ಸೇವೆಗಳಲ್ಲಿ ಇಲಾಖೆ ಸಮನ್ವಯತೆಯ ಕೊರತೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ದಾಖಲೆಗಳನ್ನು ಕೈಬರಹ(ಮ್ಯಾನುವಲ್) ಮೂಲಕವೇ ಕೊಡಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರಗಳಿಂದ ಅಪ್​ಲೋಡ್ ಆದ ಅರ್ಜಿಗಳಿಗೆ ಮೇಲಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಇವೆ.
ತಂತ್ರಾಂಶ ಬಳಕೆ ಅತಂತ್ರ:ಬಾಪೂಜಿ ಸೇವಾ ಕೇಂದ್ರಗಳ ನಿರ್ವಹಣಾ ವೈಫಲ್ಯದಿಂದ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನರ ಬಳಿಗೇ ಸೇವೆ ಕೊಡುವ ವಾಗ್ದಾನ ಮರೀಚಿಕೆಯಾಗುತ್ತಿದೆ. ತಂತ್ರಾಂಶ ಕೈಗೆಟುಕುವಂತಿದ್ದರೂ ನಿರ್ವಹಣಾ ವಿಫಲತೆಯಿಂದಾಗಿ ಕೇಂದ್ರಗಳು ಅತಂತ್ರವಾಗುತ್ತಿವೆ.
ಸಮನ್ವಯದ ಕೊರತೆ?:ಬಾಪೂಜಿ ಸೇವಾ ಕೇಂದ್ರದಲ್ಲಿ ಅಪ್​ಲೋಡ್ ಮಾಡಿ ಕೋರಲಾದ ಸೇವೆಗಳಿಗೆ ಕಂದಾಯ ಸೇರಿ ಬೇರೆ ಬೇರೆ ಇಲಾಖೆಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಒಂದಿಲ್ಲ ಒಂದು ಕಾರಣ ನೀಡಿ ಆನ್​ಲೈನ್ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಗ್ರಾಹಕರು ಹೋಬಳಿ, ತಾಲೂಕು ಕೇಂದ್ರಗಳಿಗೆ ಅಲೆದಾಡಬೇಕಿದೆ. ಕಂದಾಯ ಇಲಾಖೆಯಿಂದ ವಿತರಿಸಬೇಕಾದ ಆದಾಯ, ಜಾತಿ ಮತ್ತಿತರ ಪ್ರಮಾಣಗಳಿಗಂತೂ ಕೊಕ್ಕೆ ಹಾಕುವುದೇ ಹೆಚ್ಚು. ಹೀಗಾಗಿ ಇಲಾಖೆ ನಡುವೆ ಸಮನ್ವಯದ ಕೊರತೆ ಉಂಟಾಗಿ ಈ ಕೇಂದ್ರಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸೇವೆ ಸುಲಲಿತವಾಗಿ ದೊರೆಯುವುದಿಲ್ಲ ಎಂಬ ಭಾವನೆ ಬೇರೂರುತ್ತಿದೆ. ಹಾಗಾಗಿ ಬಾಪೂಜಿ ಕೇಂದ್ರಗಳನ್ನು ಜನ ನೆಚ್ಚಿಕೊಳ್ಳುತ್ತಿಲ್ಲ.
10 ರೂ. ಸೇವೆಗೆ 100 ರೂ. ಖರ್ಚು!:ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವೆಗಳು ಸಮರ್ಪಕವಾಗಿ ದೊರೆಯದೇ ಇರುವುದರಿಂದ 10 ರೂ.ಗೆ ಸಿಗುವ ಸೇವೆಗೆ 100 ರೂ. ಹಾಗೂ ಸಮಯ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದು ಗೊತ್ತಿದ್ದೂ ಪಿಡಿಒಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಪತ್ನಿಯ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಿ ಆಕೆಯ ಮೂರ್ತಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಿರುವ ಪತಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 + seventeen =
Remember me
