ಬೆಂಗಳೂರು:ಕರ್ನಾಟಕದ ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಯಾಗಿ, ವಾದ-ವಿವಾದಕ್ಕೆ ಕಾರಣವಾದ ಪಠ್ಯ ಪ್ರಹಸನಕ್ಕೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಂದಾಯ ಸಚಿವ ಆರ್. ಅಶೋಕ್ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು.
ಈ ಹಿಂದೆ ಪಠ್ಯದಲ್ಲಿ ಅವರಿಗೆ ಬೇಕಾದ ಅಜೆಂಡಾ ತುರುಕುತ್ತಿದ್ದರು, ಅವುಗಳನ್ನು ಹಾಗೇ ಬೋಧಿಸಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಪಠ್ಯ ಪರಿಷ್ಕರಣೆ ಚರ್ಚೆ ವಿಷಯವಾಗಿ ಹೊಮ್ಮಿರುವುದು ಒಳ್ಳೆಯದು ಎಂದು ಅಶೋಕ್ ಹೇಳಿದರು. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತದೆ. ಕೆಲವೇ ಕೆಲವು ಸಾಹಿತಿಗಳು ಹಿಂದು ಮಲಗಿದರೆ ದೇಶ ಮಲಗೀತು ಎಂಬ ಭಾವನೆಯಲ್ಲಿರುತ್ತಾರೆ. ಬರಗೂರು ಸಮಿತಿಯಿಂದ ಪಠ್ಯದಲ್ಲಿ 150 ತಪ್ಪುಗಳಿದ್ದವು. ಇದೀಗ ಪರಿಷ್ಕರಿಸಿರುವ ಪಠ್ಯದಲ್ಲಿ ಕೇವಲ ಏಳು-ಎಂಟು ತಪ್ಪುಗಳಿವೆ. ಆದರೂ ಹಳೇ ಪಠ್ಯ ಮುಂದುವರಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಹೆಡಗೇವಾರ್ ಅವರ ಆದರ್ಶ ಪುರುಷ ಯಾರಾಗಬೇಕು ಎಂಬ ಲೇಖನ ಪಠ್ಯವಾಗಿರುವುದು ಈ ಬಾರಿಯ ಪಠ್ಯದ ವಿಶೇಷ. ಈ ಪಾಠದ ವಿಷಯಾಂಶವು ಹೆಡಗೇವಾರ್ ಅವರ ಕುರಿತಂತೆ ಇರುವ ವಿಷಯಾಂಶಗಳಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದು, ರಾಮ, ಕೃಷ್ಞ, ರಜಪೂತ, ಶಿವಾಜಿ ಇಷ್ಟವಾಗದ ಪದಗಳು. ಅದನ್ನು ತೆಗೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರದಲ್ಲಿನ ಸಮಿತಿ ಮಾಡಿತ್ತು. ನಿರಂತರವಾಗಿ ಅಲ್ಪ ಸಂಖ್ಯಾತರ ಓಲೈಕೆಮಾಡುವುದು ಅವರ ಉದ್ದೇಶವಾಗಿತ್ತು ಎಂದು ಟೀಕಿಸಿದರು.
ಸಿದ್ದರಾಮಯ್ಯನವರಿಗೆ ಟಿಪ್ಪು ಅಂದರೆ ಮೈಮೇಲೆ ಬರುತ್ತದೆ. ಮೈಸೂರು ಒಡೆಯರ್​ರನ್ನು ಕಡೆಗಣನೆ ಮಾಡಿದ್ದಾರೆ. ರಾಜವಂಶಕ್ಕೆ ಅವಮರ್ಯಾದೆ ಮಾಡಿದ್ದಾರೆ ಎಂದು ಟೀಕಿಸಿದ ಅವರು ಟಿಪ್ಪು ಬಗ್ಗೆ ಒಂದು ಪುಟ ಬರೆಯಬಹುದು, ಆತ ಮತಾಂತರ ಮಾಡಿ, ಹಿಂದುಗಳ ಮೇಲೆ ದೌರ್ಜನ್ಯ ಮಾಡಿದ್ದರೂ, ಕನ್ನಡದ ಮೇಲೆ ಅಭಿಮಾನವೇ ಇರಲಿಲ್ಲವಾದರೂ ಟಿಪ್ಪುವಿನ ಬಗ್ಗೆ ಆರು ಪುಟವಿದೆ ಎಂದರು.
ಪಠ್ಯದಲ್ಲಿ ಕುವೆಂಪು, ತಪ್ಪು ಯಾರದ್ದು?:ಕಾಗೇರಿ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ರಚನೆಯಾದ ಪಠ್ಯದಗಳಲ್ಲಿ ಕುವೆಂಪು ರಚಿಸಿದ ಎಂಟು ಪದ್ಯ, ಗದ್ಯ ಇತ್ತು. ಈಗ ಬಹಳ ದೊಡ್ಡದಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯ ಅವಧಿಯಲ್ಲಿ ಎಂಟರಿಂದ ಏಳಕ್ಕೆ ಇಳಿಸಿದರು ಎಂದು ಆರ್.ಅಶೋಕ್ ಕುಟುಕಿದರು. ಕುವೆಂಪು ಅನಲೆಯನ್ನು ತೆಗೆದರು. ಕುವೆಂಪು ರಾಮಾಯಣ ದರ್ಶನಂನಲ್ಲಿ ವಿಭೀಷಣ ಪುತ್ರಿ ವಾತ್ಸಲ್ಯದ ಬಗ್ಗೆ ಇತ್ತು. ಅದನ್ನು ಕೈಬಿಟ್ಟು, ಅವರ ಪರಮ ಪ್ರೀತಿಯ ಈಗ ಪ್ರತಿಭಟಿಸುತ್ತಿರುವ ಹಂಸಲೇಖ ಪದ್ಯ ಸೇರಿಸಿದರು ಎಂದರು. ಯೋಗ, ಸಂಸ್ಕೃತಿ, ಭಾರತೀಯ ಪರಂಪರೆ ಕುರಿತ ಪಠ್ಯವನ್ನು ಸಿದ್ದರಾಮಯ್ಯ ಸರ್ಕಾರ ಕೈ ಬಿಟ್ಟಿತು. ಅದು ಅವರಿಗೆ ಬೇಡವಾಗಿತ್ತು ಎಂದರು. ಕುವೆಂಪು ಅವರಿಗೆ ಈ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಾರೆ, ಎಂಟು ಪದ್ಯ-ಗದ್ಯವಿದ್ದುದ್ದು ಏಳು ಮಾಡಿದ್ದು ಯಾರು? ನಮ್ಮ ಸರ್ಕಾರ ಇನ್ನೂ ಮೂರು ಸೇರಿಸಿದೆ. ಕುವೆಂಪು ವ್ಯಕ್ತಿ ಪರಿಚಯ ಇರುವ ನಾಲ್ಕನೇ ತರಗತಿ ಪಠ್ಯದಲ್ಲಿ ವಾಕ್ಯ ತಪ್ಪಾಗಿದೆ ಎಂದು ಟೀಕೆ ಬಂದಿತು. ಸಂಬಂಧಿಸಿದ ಪಠ್ಯವು ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಾಗೇ ಇತ್ತು. ಆಗ ದನಿ ಎತ್ತದ ಸಾಹಿತಿಗಳು ಈಗ ದನಿ ಎತ್ತುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
| ಎಚ್.ಡಿ.ಕುಮಾರಸ್ವಾಮಿಮಾಜಿ ಮುಖ್ಯಮಂತ್ರಿ
ಅಂಬೇಡ್ಕರ್ ಪಠ್ಯದಲ್ಲಿ ಏನಿತ್ತು? ಏನಾಗಿದೆ?
– ಹೀಗಿತ್ತು-
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪ ಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದದು ಕರಡು ಸಮಿತಿ. ಡಾ.ಬಿ.ಆರ್.ಅಂಬೇಡ್ಕರ್ ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್​ವುುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ. ಮಾಧವರಾವ್ ಅವರು ಸದಸ್ಯರಾಗಿದ್ದರು.
– ಹೀಗಾಗಿದೆ-
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು ರಚಿಸಿತ್ತು. ಅವುಗಳಲ್ಲಿ ಪ್ರಮುಖವಾದದು ಕರಡು ಸಮಿತಿ. ಡಾ.ಬಿ.ಆರ್.ಅಂಬೇಡ್ಕರ್​ರವರು ಇದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್​ವುುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮುಂತಾದ ಮತ್ಸದಿಗಳು ಇದ್ದರು.
ಸಚಿವರ ಸ್ಪಷ್ಟನೆಗಳು:
ಬೆಂಗಳೂರು ವಿಭಾಗ ಪರಿಚಯ ವಿಚಾರದಲ್ಲಿ ಆರನೇ ತರಗತಿ ಪಠ್ಯದಲ್ಲಿ ಕೆಂಪೇಗೌಡರ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಸೇರಿಸಲಾಗಿದೆ. ಸಿಂಧೂ ಸಂಸ್ಕೃತಿ ಪಾಠ ತೆಗೆದು ನೆಹರೂ ಪತ್ರಗಳು ಪಾಠ ಸೇರಿಸಿದ್ದರು ಈಗ ಸಿಂಧೂ ಸರಸ್ವತಿ ನಾಗರಿಕತೆ ಪಠ್ಯ ಸೇರಿಸಲಾಗಿದೆ. ಅಂಬೇಡ್ಕರ್, ವಿವೇಕಾನಂದರ ಪಾಠ ಕೈ ಬಿಡಲಾಗಿತ್ತು, ಸೇರ್ಪಡೆ ಮಾಡಲಾಗಿದೆ. ಎಸ್.ಎಲ್ ಭೈರಪ್ಪ ಬರೆದ ಯಾವುದೇ ಬರಹ ಪಠ್ಯದಲ್ಲಿ ಇರಲಿಲ್ಲ. ಈಗ ಸೇರಿಸಲಾಗಿದೆ. ಸನಾತನ ಧರ್ಮದ ಬಗ್ಗೆ ಮಾಹಿತಿ ಇರಲಿಲ್ಲ, ಈಗ ಸೇರ್ಪಡೆ ಮಾಡಲಾಗಿದೆ. ಕ್ರೖೆಸ್ತ, ಇಸ್ಲಾಂ ಎಂಬ ಅಧ್ಯಾಯವನ್ನು ಪಾಶ್ಚಾತ್ಯ ರಿಲೀಜಿಯನ್ ಎಂದು ಬದಲಾಯಿಸಿ, ಯಹೂದಿ, ಪಾರ್ಸಿ ಧರ್ಮ ಗಳ ವಿಷಯ ಸೇರಿಸಲಾಗಿದೆ.
ಪುಸ್ತಕ ಹರಿದಿದ್ದು ಸರಿಯೇ?
ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಂಪೇಗೌಡರ ಬಗ್ಗೆ ಪಾಠವಿರಲಿಲ್ಲ. ನಮ್ಮ ಅವಧಿಯಲ್ಲಿ ಸೇರಿಸಲಾಗಿದೆ. ಈ ಪರಿಷ್ಕೃತ ಪಠ್ಯವನ್ನು ಡಿ.ಕೆ.ಶಿವಕುಮಾರ್ ಹರಿದರು. ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುವೆ ಎಂದರು. ನಾರಾಯಣ ಗುರು, ಭಗತ್ ಸಿಂಗ್, ಪೆರಿಯಾರ್ ಪಾಠ ಬಿಟ್ಟಿಲ್ಲ. ಆದರೂ ಅಪಪ್ರಚಾರ ಮಾಡಿದರು. ಅವರ ಅವಧಿಯಲ್ಲಿ ಟಿಪ್ಪು, ತುಘಲಕ್, ಮೊಘಲ್ ವಿಚಾರ ಪುಟಗಟ್ಟಲೆ ಬರೆದು ಭಾರತೀಯ ರಾಜರ ಸಾಹಸ, ಶೌರ್ಯ ಮಕ್ಕಳಿಗೆ ಪರಿಚಯಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ನಾಗೇಶ್ ಗೈರು:
ಕಂದಾಯ ಸಚಿವ ಅಶೋಕ್ ಹಾಗೂ ಇತರೆ ಸಚಿವರು ಪಠ್ಯ ಪರಿಷ್ಕರಣೆಯ ವಿವಾದಕ್ಕೆ ಸಮರ್ಥನೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಗೈರು ಹಾಜರಿ ಗಮನ ಸೆಳೆಯಿತು. ನಾಗೇಶ್ ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದರೂ ಸುದ್ದಿಗೋಷ್ಠಿಗೆ ಏಕೆ ಬರಲಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ. ನಾಗೇಶ್ ಅವರ ಕಚೇರಿಯಿಂದಲೆ ವಿವರಗಳ ಕೈಪಿಡಿ ಮಾಡಿಕೊಡಲಾಗಿದೆ. ನಾಗೇಶ್ ಸಾಕಷ್ಟು ಸಮರ್ಥನೆ ಮಾಡಿಕೊಂಡಿದ್ದರೂ ವಿವಾದ ತಣ್ಣಗಾಗದ ಹಿನ್ನೆಲೆಯಲ್ಲಿ ಹಿರಿಯ ಸಚಿವರಿಂದ ಸುದ್ದಿಗೋಷ್ಠಿ ಮಾಡಿಸಲಾಗಿದೆ.
ಟಿಪ್ಪು ಪುಸ್ತಕ ಬರೆಸಿದ್ದು ಬಿಜೆಪಿ ಸರ್ಕಾರ:
ಟಿಪ್ಪು ಸುಲ್ತಾನ್ ಎಂದ ಕೂಡಲೇ ಉರಿದುಬೀಳುವ ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ಅವರ ಸರ್ಕಾರವೇ ಟಿಪ್ಪು ಬಗ್ಗೆ ಬರೆಸಿ, ಪ್ರಕಟಿಸಿದ್ದ ಪುಸ್ತಕ ಮತ್ತು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಟಿಪ್ಪುವನ್ನು ಹಾಡಿ ಹೊಗಳಿದ ಮುನ್ನುಡಿಯನ್ನು ಓದಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಟಿಪ್ಪುವಿನ ರಾಷ್ಟ್ರೀಯ ರಾಜ್ಯದ ಕಲ್ಪನೆ, ಸಮರ ಕಲೆ, ಸುಧಾರಣೆಯ ಹುರುಪು, ಟಿಪ್ಪುವನ್ನು ಎಣೆಯಿಲ್ಲದ ನಾಯಕನನ್ನಾಗಿ ಮಾಡಿದೆ ಎಂದು ತಾವೇ ಪ್ರಕಟಿಸಿದ್ದ ಪುಸ್ತಕದಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಚಿವ ಗೋವಿಂದ ಕಾರಜೋಳ ಹಾಡಿ ಹೊಗಳಿದ್ದಾರೆ. ಆಗ ತಾವೆಲ್ಲಿ ಅಡಗಿ ಕೂತಿದ್ದಿರಿ ಅಶೋಕ್ ಎಂದು ಪ್ರಶ್ನಿಸಿದ್ದಾರೆ. ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ಬಿಜೆಪಿ ನಾಯಕರಿಗೆ. ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದರು ಎಂದು ಕೆಣಕಿದ್ದಾರೆ.
ಬುಧವಾರ ಸಂಜೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದೆ. ? ಅಂಬೇಡ್ಕರ್, ಕುವೆಂಪು, ಸಿದ್ದಗಂಗಾ ಮಠ ಸೇರಿ ಏಳು ವಿಚಾರದಲ್ಲಿ ಆಗಿರುವ ದೋಷವನ್ನು ತಕ್ಷಣವೇ ಸರಿಪಡಿಸಿ ಸರಿಯಾದ ಕ್ರಮದಲ್ಲಿ ಮಕ್ಕಳಿಗೆ ಕಲಿಸಲು ಕ್ರಮ. ? ಬಸವಣ್ಣನವರ ಪಠ್ಯದ ವಿಷಯದಲ್ಲಿ ನಾಡಿನ ಸ್ವಾಮೀಜಿಗಳು ಸರ್ವಸಮ್ಮತ ಮಾಹಿತಿ ನೀಡಿದಲ್ಲಿ ತಕ್ಷಣವೇ ಪಠ್ಯದಲ್ಲಿ ಸೇರ್ಪಡೆ ಮಾಡುವುದು. ? ಪ್ರತಿರೋಧಕ್ಕೆ ಬಗ್ಗದೆ, ಬರಗೂರು ಸಮಿತಿ ಮಾಡಿದ ಲೋಪಗಳನ್ನು ಎಳೆಎಳೆಯಾಗಿ ಬಿಚ್ಚಿಡುವುದು. ? ಜಾತಿ ಆಧಾರದಲ್ಲಿ ಬರುವ ಟೀಕೆಯನ್ನು ಹಿಮ್ಮೆಟ್ಟಿಸಲು ಪಠ್ಯದಲ್ಲಿ ನೀಡಿರುವ ಸಂಗತಿಯನ್ನೇ ಬಹಿರಂಗ ಮಾಡಿ ಬಾಯಿ ಮುಚ್ಚಿಸುವುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
