ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಅಕ್ಕಿ ಜಗಳಕ್ಕೆ ಅಖಾಡ ಸಜ್ಜಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಹೊಂದಿಸಿಕೊಳ್ಳುವ ಉದ್ದೇಶದಿಂದ ಕೇಂದ್ರದ ಎದುರು ಮತ್ತೊಮ್ಮೆ ಚೌಕಾಸಿಗೆ ಇಳಿಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಮಳೆಗಾಲದಲ್ಲೇ ಅಕ್ಕಿ ಹೆಸರಿನಲ್ಲಿ ವಿವಾದದ ಕಿಡಿ ಮತ್ತೊಮ್ಮೆ ಹೊತ್ತಿಕೊಳ್ಳುವ ಸಾಧ್ಯತೆ ಗೋಚರಿಸಿದೆ.
ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದ ಬಳಿಕ ರಾಜ್ಯ ಸರ್ಕಾರ ಹಲವು ರಾಜ್ಯಗಳಿಂದ ಖರೀದಿಗೆ ಯತ್ನಿಸಿ, ದುಬಾರಿ ಎಂಬ ಕಾರಣಕ್ಕೆ ಕೈಬಿಟ್ಟಿತ್ತು. ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ನಗದು ಪಾವತಿ ಆರಂಭಿಸಿತ್ತು. ಜು.1ಕ್ಕೆ ಈ ಪ್ರಕ್ರಿಯೆ ಆರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಬದಲಾದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ಆಶಾಭಾವನೆ ರಾಜ್ಯ ಸರ್ಕಾರದ್ದಾಗಿದೆ. ಹೀಗಾಗಿ ಮರಳಿ ಯತ್ನವ ಮಾಡು ಎಂಬಂತೆ ಎಫ್​ಸಿಐ ದರದಲ್ಲಿ ಅಕ್ಕಿ ಪಡೆಯುವ ಕಸರತ್ತಿಗೆ ಕೈಹಾಕಿದೆ.
ಮತ್ತೆ ಮನವಿ ಮಾಡುವೆ:ಭಾರತ ಆಹಾರ ನಿಗಮದ (ಎಫ್​ಸಿಐ) ಅಕ್ಕಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಇಷ್ಟರಲ್ಲೇ ದೆಹಲಿಗೆ ಹೋಗುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ತಿಳಿಸಿದರು. ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್​ರಾಂ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಪಾಲ್ಗೊಂಡನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರನ್ನು ಶೀಘ್ರ ಭೇಟಿ ಮಾಡಿ ರಾಜ್ಯಕ್ಕೆ ಎಫ್​ಸಿಐ ವಿಧಿಸುವ ದರಕ್ಕೆ ಅಕ್ಕಿ ಪೂರೈಸಲು ಮನವಿ ಮಾಡುವೆ ಎಂದು ಹೇಳಿದರು.
ಚುನಾವಣೆ ಗಿಮಿಕ್:ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ‘ಭಾರತ್ ಬ್ರಾ್ಯಂಡ್ ಅಕ್ಕಿಯನ್ನು ಕೆಜಿಗೆ 29 ರೂ. ದರದಲ್ಲಿ ವಿತರಿಸಿದ್ದರು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ನಿಲ್ಲಿಸಿದ್ದು, ಇದೊಂದು ಚುನಾವಣೆ ಗಿಮಿಕ್ ಆಗಿತ್ತು ಎನ್ನುವುದು ಬಹಿರಂಗವಾಗಿದೆ ಎಂದು ಮುನಿಯಪ್ಪ ವಾಗ್ದಾಳಿ ಮಾಡಿದರು.
ವಿವಾದದ ಹಿನ್ನೆಲೆ:ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ನೀಡುವ ಐದು ಕೆಜಿ ಅಕ್ಕಿ ಸೇರಿ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಐದು ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯವೂ ಒಂದಾಗಿದೆ. ಅಧಿಕಾರಕ್ಕೆ ಬಂದ ತಿಂಗಳಲ್ಲೇ ಸಿಎಂ ಸಿದ್ದರಾಮಯ್ಯ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು ಹೆಚ್ಚುವರಿ ಅಕ್ಕಿ ಒದಗಿಸಲು ಕೋರಿದ್ದರು. ರಾಜ್ಯ ಸರ್ಕಾರದ ಕೋರಿಕೆಗೆ ನಿಗಮದ ಆಗಿನ ಡೆಪ್ಯುಟಿ ಮ್ಯಾನೇಜರ್ ಸಕಾರಾತ್ಮಕವಾಗಿ ಸ್ಪಂದಿಸಿ, ಸಾಗಣೆ ವೆಚ್ಚ ಭರಿಸುವ ಷರತ್ತಿನ ಪೂರೈಕೆಗೆ ಒಪ್ಪಿದ್ದರು. ನಿಗಮದ ಗೋದಾಮಿನಲ್ಲಿ ಏಳು ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿದ್ದು, ಈ ಪೈಕಿ 2,08,425 ಟನ್ ಅಕ್ಕಿಯನ್ನು ಕೆಜಿಗೆ 34 ರೂ.ನಂತೆ ನೀಡಲು ಸಿದ್ಧ. ಸಾಗಣೆ ವೆಚ್ಚವನ್ನು ನೀವೇ ಭರಿಸಬೇಕು ಎಂದು ತಿಳಿಸಿದ್ದನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದ್ದರು. ಆದರೆ, ನಿಗಮದ ಉನ್ನತಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಡೆಪ್ಯುಟಿ ಮ್ಯಾನೇಜರ್ ಒಪ್ಪಿಗೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವಿವಾದ ಹುಟ್ಟಿ ಹಾಕಿತು. ಸಂಭಾವ್ಯ ಆಹಾರ ಧಾನ್ಯ ಕೊರತೆ, ಬೆಲೆ ನಿಯಂತ್ರಣಕ್ಕಾಗಿ ಎಫ್​ಸಿಐ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆ (ಒಎಂಎಸ್​ಎಸ್) ರದ್ದುಪಡಿಸಲು ಕೇಂದ್ರದ ಆಹಾರ ಇಲಾಖೆ ಉಪ ಸಮಿತಿ ತೀರ್ವನಿಸಿತ್ತು. ಎಫ್​ಸಿಐ ಸ್ಥಳೀಯ ಅಧಿಕಾರಿ ಅನುಮತಿಗೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರ ಅವಸರದ ನಿರ್ಣಯ ತೆಗೆದುಕೊಂಡು ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು. ಇದು ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಮಾತಿನ ಸಂಘರ್ಷಕ್ಕೆ ಕಾರಣವಾಯಿತು. ಆದರೆ ಒಎಂಎಸ್​ಎಸ್​ನಡಿ ಇ-ಹರಾಜು ಮೂಲಕ ಖಾಸಗಿ ಮಾರಾಟಗಾರರು ಖರೀದಿಸಲು ಕೇಂದ್ರ ಅವಕಾಶ ನೀಡಿ, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಖಾತರಿಗೆ ಈ ಕ್ರಮವೆಂದು ಸಮರ್ಥಿಸಿತು.
ಲೋಕಸಭಾ ಚುನಾವಣೆ ಸಲುವಾಗಿ ಅರಂಭಿಸಿದ್ದ ಭಾರತ್ ಬ್ರಾ್ಯಂಡ್ ಅಕ್ಕಿ ವಿತರಣೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಅನ್ನಭಾಗ್ಯ ಯೋಜನೆಗೆ ನಾವು ಅಕ್ಕಿ ಕೇಳಿದಾಗ ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನಿದ್ದರೂ ದುರುದ್ದೇಶಪೂರ್ವಕವಾಗಿ ನೀಡಲಿಲ್ಲ. ಹೀಗಾಗಿ ಜನರಿಗೆ ಹೆಚ್ಚುವರಿಯಾಗಿ ಅಕ್ಕಿ ಬದಲು ಹಣ ನೀಡಬೇಕಾದ ಪರಿಸ್ಥಿತಿ ನಿರ್ವಣವಾಯಿತು.
ಸಿದ್ದರಾಮಯ್ಯ | ಮುಖ್ಯಮಂತ್ರಿ
ಫಲಿಸದ ಅಕ್ಕಿ ಖರೀದಿ ಪ್ರಯತ್ನ:ಕೆಲವು ಸ್ಥಳೀಯ ವರ್ತಕರು ಅಕ್ಕಿ ಪೂರೈಸಲು ಮುಂದೆ ಬಂದಿದ್ದರು. ಆದರೆ ಖರೀದಿ ಅವ್ಯವಹಾರ ಅಥವಾ ಸಂಶಯ ಹುಟ್ಟು ಹಾಕಬಹುದೆಂದು ಹೆಚ್ಚಿನ ದರಕ್ಕೆ ಖರೀದಿಸಲು ಸಿಎಂ ಸಿದ್ದರಾಮಯ್ಯ ಒಲವು ತೋರಲಿಲ್ಲ. ಪಂಜಾಬ್, ಛತ್ತೀಸ್​ಗಡ ಮುಂದೆ ಬಂದರೂ ಸಾಗಣೆ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಹಿಂದೆ ಸರಿಯಿತು. ಆಂಧ್ರಪ್ರದೇಶ ಮತ್ತು ತೆಲಂಗಾಣ ಆಸಕ್ತಿ ತೋರಿಸಿದರೂ ಎಫ್​ಸಿಐ ನಿಗದಿತ ಕೆಜಿಗೆ 34 ರೂ.ಗಿಂತ ಹೆಚ್ಚಿನ ದರ ಹಾಗೂ ಸಾಗಣೆ ವೆಚ್ಚವನ್ನು ಭರಿಸಬೇಕು ಎಂದು ತಿಳಿಸಿದ್ದವು. ಮಾಸಿಕ 2.28 ಲಕ್ಷ ಟನ್ ಅಕ್ಕಿ ಖರೀದಿಗೆ ಒಂದು ಸಾವಿರ ಕೋಟಿ ರೂ. ಅಧಿಕ ಮೊತ್ತ ಭರ್ತಿ ಕಷ್ಟಸಾಧ್ಯವೆಂದು ಸರ್ಕಾರಕ್ಕೆ ಅರಿವಾಯಿತು. ಹೆಚ್ಚುವರಿ ಐದು ಕೆಜಿ ಅಕ್ಕಿ ಪೂರೈಕೆಗೆ ತಿಲಾಂಜಲಿಯಿಟ್ಟು, ಸ್ವಲ್ಪಮಟ್ಟಿಗೆ ಬೊಕ್ಕಸಕ್ಕೆ ಹೊರೆ ತಗ್ಗಿಸುವ ನಗದು ನೇರ ವರ್ಗಾವಣೆ ಮಾರ್ಗದಲ್ಲಿ ಮುನ್ನಡೆದಿದೆ.
ರಾಜ್ಯದ ರೈತರ ಸಲಹೆ ತಿರಸ್ಕಾರ:ಎಫ್​ಸಿಐ, ಬೇರೆ ರಾಜ್ಯಗಳ ಸಹವಾಸವೇ ಬೇಡ. ಅನ್ನಭಾಗ್ಯಕ್ಕೆ ಬೇಕಾದ ಗುಣಮಟ್ಟದ ಅಕ್ಕಿ ಸ್ಥಳೀಯ ರೈತರ ಬಳಿ ಲಭ್ಯವಿದೆ. ತಕ್ಷಣಕ್ಕೆ ಲಭ್ಯವಿರುವಷ್ಟನ್ನು ಕೆಜಿಗೆ 40 ರೂ.ನಂತೆ ಖರೀದಿಸಿರಿ. ಮುಂದಿನ ವರ್ಷಕ್ಕೆ ಸೂಕ್ತ ಬೆಲೆ ನಿಗದಿ ಮಾಡಿ ಖಾತರಿಪಡಿಸಿ, ಬೇಕಿರುವಷ್ಟು ಬೆಳೆದು ಕೊಡಲು ನಾವು ಸಿದ್ಧರಿದ್ದೇವೆಂದು ರೈತರು ಕರೆಕೊಟ್ಟಿದ್ದಾರೆ. ರೈತ ಸಂಘಟನೆಗಳು ಮತ್ತು ಅಕ್ಕಿ ಗಿರಣಿ ಮಾಲೀಕರ ಜಂಟಿ ಸಭೆ ಕರೆದು ರ್ಚಚಿಸಿ, ಮುಂದಿನ ವರ್ಷಕ್ಕೆ ಯೋಜನೆ ರೂಪಿಸಲು ಸಾಧ್ಯವಿದೆ ಎಂಬ ಅನ್ನದಾತರ ಸಲಹೆಯನ್ನು ಸರ್ಕಾರ ತಾತ್ಸಾರ ಮಾಡಿದೆ ಎಂದು ರೈತ ಸಂಘ ಟನೆಗಳ ಮುಖಂಡರು ಟೀಕಿಸಿದ್ದಾರೆ.
.5 ಕೆಜಿ ಅಕ್ಕಿ ವಿತರಣೆಗೆ ಸರಣಿ ವಿಘ್ನ
.ಅಕ್ಕಿ ಬದಲು ತಲಾ – ₹170 ನೀಡಿಕೆ
.ಐದು ಕೆಜಿ ಅಕ್ಕಿಯ ಮೊತ್ತ -₹170
.ಕೆಜಿಗೆ -₹34ನಂತೆ ಹಣ ವಿತರಣೆ
.ನಗದು ನೇರ ಪಾವತಿಗೆ ಈಗ 1 ವರ್ಷ
ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ: ರಾಹುಲ್ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
