ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.—–
ಸಾಹಿತ್ಯ ಮಾನವ ಬದುಕಿನ ಅವಿಭಾಜ್ಯ ಅಂಗ. ಜೀವನ ಮೌಲ್ಯಗಳನ್ನು ಒಂದು ತಲೆ ಮಾರಿನಿಂದ ಮತ್ತೊಂದು ತಲೆಮಾರಿಗೆ ಕೊಂಡೊಯ್ಯುವಂತಹ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಜನರ ಹಿತವನ್ನು ಬಯಸುವುದೇ ಸಾಹಿತ್ಯ. ಯಾವುದೇ ಒಂದು ವಿಚಾರವನ್ನು ಇದ್ದಕ್ಕಿದ್ದಂತೆ ಹೇಳದೇ ಅದನ್ನು ಪರಿಣಾಮಕಾರಿಯಾಗಿ ಹೇಳಿದಾಗ ಅದು ಕಾವ್ಯ ಎನಿಸುತ್ತದೆ. ಇಲ್ಲಿ ಉಪಮೆ, ರೂಪಕ, ಶಬ್ದಾಲಂಕಾರದ ಜೊತೆಯಲ್ಲಿ ಅರ್ಥಾಲಂಕಾರಗಳೂ ಕೂಡಿ ವಿಚಾರ ಹೆಚ್ಚು ಪರಿಣಾಮಕಾರಿಯಾಗುತ್ತಾ ಹೋಗುತ್ತದೆ. ಬಸವಣ್ಣನವರಾಗಲಿ ಇತರ ಯಾವದೇ ವಚನಕಾರರಾಗಲಿ ಸಾಹಿತಿ ಕವಿಯಾಗಬೇಕೆಂದು ವಚನ ಬರೆದವರಲ್ಲ. ತಮ್ಮ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ಅನಿವಾರ್ಯವಾಗಿ ರೂಪುಗೊಂಡ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ. ಅಚ್ಚರಿ ಎಂದರೆ ಕಾವ್ಯ ಮೀಮಾಂಸಕರು ಹೇಳುವ ಎಲ್ಲ ಕಾವ್ಯ ಲಕ್ಷಣಗಳೂ ಇಲ್ಲಿ ಹಾಸುಹೊಕ್ಕಾಗಿ ಮೂಡಿ ಬಂದಿವೆ. ಬಸವಣ್ಣನವರ ಹಾಗೂ ಎಲ್ಲ ಶರಣರ ಲೋಕಾನುಭವವೇ ಅವರ ಕಾವ್ಯ ನಿರ್ಮಿತಿಗೆ ಸಹಕಾರಿಯಾಯಿತು. ನುಡಿದರೆ ಮುತ್ತಿನ ಹಾರದಂತಿರಬೇಕು…. ಎಂಬ ವಚನದುದ್ದಕ್ಕೂ ಲಿಂಗಮೆಚ್ಚಿ ಅಹುದಹುದೆನ್ನುವಂತಿರಬೇಕಾದರೆ ಮಾತಿನ ಸ್ವರೂಪ ಹೇಗಿರಬೇಕೆಂಬುದನ್ನು ಬಸವಣ್ಣನವರು ಮುತ್ತಿನ ಹಾರ, ಮಾಣಿಕ್ಯದ ದೀಪ್ತಿ, ಸ್ಪಟಿಕದ ಶಲಾಕೆಗಳ ಅರ್ಥಪೂರ್ಣ ಉಪಮೆಗಳನ್ನು ಕೊಡುತ್ತಾರೆ. ಮುತ್ತಿನ ಹಾರ ಮಾತಿನ ಕ್ರಮವನ್ನು, ಮಾಣಿಕ್ಯದ ದೀಪ್ತಿ ಅದು ಹೊಂದಿರಬೇಕಾದ ಜ್ಞಾನದ ಸ್ವರೂಪವನ್ನು ಹಾಗೂ ಸ್ಪಟಿಕದ ಶಲಾಕೆ ಮಾತಿನ ಶುದ್ಧತೆ ಹಾಗೂ ಪಾರದರ್ಶಕತೆಯನ್ನು ಉಪಮಿಸುತ್ತವೆ. ಇಲ್ಲಿ ವಚನವನ್ನು ಓದುತ್ತಿರುವಂತೆಯೇ ಉಪಮಿಸಿದ ವಸ್ತುಗಳು ಓದುಗರ ಕಣ್ಣ ಮುಂದೆ ಬರುತ್ತವೆ. ಜೊತೆಯಲ್ಲಿಯೇ ಅವು ಒಂದು ಮಹತ್ವದ ಸಂದೇಶವನ್ನು ಪ್ರತಿನಿಧಿಸಿ ಹೇಳುವ ವಿಷಯವನ್ನು ಮನದಟ್ಟು ಮಾಡಿ ಕೊಡುತ್ತವೆ. ಕಾವ್ಯ ಮೀಮಾಂಸಕರು ಹೇಳುವ ಕಾಂತಾ ಸಂಹಿತೆಯ ರೀತಿಯಲ್ಲಿಯೇ ಮಾತಿನ ಮಹತ್ವ ಹಾಗೂ ಪ್ರಖರತೆಯನ್ನು ಮನಸಿಗೆ ಅಚ್ಚೊತ್ತುವಂತೆ ಪ್ರತಿಪಾದಿಸುತ್ತವೆ. ನಡೆ ನುಡಿಗಳು ಒಂದಾಗಿದ್ದರೆ ಶಿವ ಸಾಕ್ಷಾತ್ಕಾರ ಸುಲಭ ಎಂಬ ಮಹತ್ತರ ಸಂದೇಶದ ಪರಿಣಾಮಕಾರಿ ಅಭಿವ್ಯಕ್ತಿಯನ್ನು ಇಲ್ಲಿ ಕಾಣುತ್ತೇವೆ.
ಕೆಲ ಸಂದರ್ಭಗಳಲ್ಲಿ ಯಾವುದೇ ಉಪಮೆ ರೂಪಕಗಳಿಲ್ಲದೆಯೂ ಕಾವ್ಯ ರೂಪುಗೊಳ್ಳಬಹುದು. ಅದು ಸಮರ್ಥ ಕವಿಯಿಂದ ಮಾತ್ರ ಸಾದ್ಯ. ಬಸವಣ್ಣನವರಲ್ಲಿ ಈ ಸಾಮರ್ಥ್ಯ ಸಹಜವಾಗಿಯೇ ನೆಲೆಗೊಂಡಿರುವುದನ್ನು ಕಾಣುತ್ತೇವೆ. ನೆರೆ ಕೆನ್ನೆಗೆ ತೆರೆ ಗಲ್ಲಕೆ… ಎಂಬ ವಚನದಲ್ಲಿ ಯಾವದೇ ಉಪಮೆ ರೂಪಕಗಳಿಲ್ಲ. ಆದರೂ ವಚನವನ್ನು ಓದುತ್ತಾ ಹೋದಂತೆ ಓದುಗರ ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಒಬ್ಬ ವಯೋವೃದ್ದನ ಚಿತ್ರ ಮೂಡುತ್ತಾ ಹೋಗುತ್ತದೆ. ಹಂತ ಹಂತವಾಗಿ ಶರೀರಕ್ಕೆ ಮುಪ್ಪು ಆವರಿಸುವ ಪ್ರಕ್ರಿಯೆ ಇಲ್ಲಿ ಚಿತ್ರಿತವಾಗಿದೆ. ಬದುಕಿನ ನಶ್ವರತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಸವಣ್ಣನವರು ಒಬ್ಬ ಚಿತ್ರಕಾರನಂತೆ ಬಿಡಿಸಿದ್ದಾರೆ. ಮನುಷ್ಯ ತನ್ನ ಅಂಗ ಸಾಮರ್ಥ್ಯ ಕಳೆದು ಹೋಗುವ ಮುನ್ನವೇ ದೇವರನೊಲಿಸುವ ಕಾರ್ಯ ಮಾಡಬೇಕೆಂಬ ಅವರ ಚಿಂತನೆ ಒಂದು ಅದ್ಭುತ ಚಿತ್ರ ಕಾವ್ಯವಾಗಿ ಇಲ್ಲಿ ಮೂಡಿದೆ. ಇದನ್ನು ಕಾವ್ಯ ಮೀಮಾಂಸಕರು ವಕ್ರೋಕ್ತಿ ಎಂಬುದಾಗಿ ಕರೆದಿದ್ದಾರೆ. ಮುಪ್ಪಾವಸ್ಥೆಯ ಸ್ವರೂಪವನ್ನು ವಿಭಿನ್ನವಾಗಿ ಹೇಳುವ ಮೂಲಕವಾಗಿ ಜನ ಸಾಮಾನ್ಯರಿಗೂ ಜೀವನ ಸಂದೇಶವನ್ನು ಪರಿಣಾಮಕಾರಿಯಾಗಿ ಬಸವಣ್ಣನವರು ಹೇಳಿದ್ದಾರೆ. ಇಂತಹ ಅದ್ಭುತ ಕಾವ್ಯ ಸ್ವರೂಪವನ್ನು ಇಡೀ ವಚನ ಸಾಹಿತ್ಯದುದ್ದಕ್ಕೂ ಕಾಣಬಹುದಾಗಿದೆ. ವಿಚಾರದಷ್ಟೇ ಅಭಿವ್ಯಕ್ತಿಯ ಸ್ವರೂಪವೂ ಪರಿಣಾಮಕಾರಿಯಾಗಿರುವುದು ಬಸವಣ್ಣನವರ ವೈಶಿಷ್ಟ್ಯವಾಗಿದೆ.
ಬಸವಣ್ಣನವರ ಈ ಅಸಾಧಾರಣ ಪ್ರತಿಭೆಯೇ ಅವರನ್ನು ಜನತೆಗೆ ಹತ್ತಿರವಾಗಿಸಿತು. ಜನ ಜಾಗೃತಿ ಮೂಡಿಸಬೇಕಂಬ ಅವರ ಜನಪರ ಕಾಳಜಿ ಅವರನ್ನು ಅಪ್ರಜ್ಞಾಪೂರ್ವಕವಾಗಿ ಒಬ್ಬ ಕವಿಯಾಗುವಂತೆ ಮಾಡಿತು. ಅವರು ಕವಿಯಾಗಬೇಕೆಂಬ ಹಂಬಲದಿಂದ ವಚನ ಬರೆದವರಲ್ಲ. ಬದಲಿಗೆ ಜನರನ್ನು ಅಜ್ಞಾನದ ಬಂಧನದಿಂದ ಬಿಡಿಸಿ ಬದುಕಿನ ಅರಿವನ್ನು ಮೂಡಿಸಬೇಕೆಂಬುದಾಗಿತ್ತು. ಅದಕ್ಕಾಗಿ ವಚನ ಒಂದು ಸಂವಹನ ಮಾಧ್ಯಮವಾಗಿ ಬಳಕೆಯಾಯಿತು. ಈ ಅನಿವಾರ್ಯತೆಯಿಂದ ರೂಪುಗೊಂಡ ವಚನ ಸಾಹಿತ್ಯ ಇಡೀ ವಿಶ್ವದಲ್ಲೇ ಅಪರೂಪದ ಸಾಹಿತ್ಯ ಪ್ರಕಾರವಾಗಿ ರೂಪುಗೊಳ್ಳುವಷ್ಟು ಪರಿಣಾಮಕಾರಿಯಾಗಿತ್ತೆಂಬುದು ಅತ್ಯಂತ ವಿಶೇಷ. ವಚನಗಳುದ್ದಕ್ಕೂ ಬಳಕೆಯಾದ ಜನಪದ ಬದುಕಿನ ಹೋಲಿಕೆಗಳು ಅವರು ಜನ ಜೀವನದೊಂದಿಗೆ ಬೆರೆತ ರೀತಿ ಹಾಗೂ ಜನಪರ ಕಾಳಜಿಯನ್ನು ತೋರಿಸುವಂತಿದೆ. ಅವರು ಬದುಕಿನುದ್ದಕ್ಕೂ ಜನಜೀವನದೊಂದಿಗೆ ಬೆರೆತು ಅರಿತು ಬಾಳಿದವರು. ಅಂತೆಯೇ ಆ ಲೋಕಾನುಭವವೇ ವಚನ ನಿರ್ಮಿತಿಗೆ ಸಾಧನಗಳಾದವು. ಅಂತೆಯೇ ಇಂದು ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡಿಗರು ಕೊಟ್ಟ ಉಡುಗೊರೆಯಂದರೆ ಅದು ವಚನ ಸಾಹಿತ್ಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಕೇವಲ ರಾಜನ ಆಸ್ಥಾನಕ್ಕೆ ಸೀಮಿತವಾಗಿ ರಾಜ ಮಹಾರಾಜರ ಮುಖಸ್ತುತಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು ಬಸವಣ್ಣನವರು ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸುವ ಸಾಧನವಾಗಿಸಿದರು. ಮಾತ್ರವಲ್ಲದೇ ಸಾಹಿತ್ಯವನ್ನು ಜನಸಾಮಾನ್ಯರ ಬದುಕಿನ ಉದ್ಧಾರಕ್ಕೆ ಬಳಕೆಯಾಗುವಂತೆ ಮಾಡಿದರು. ಇದು ಇತಿಹಾಸದಲ್ಲಿ ಶರಣರು ಜನ ಜಾಗೃತಿ ಮೂಡಿಸುವಲ್ಲಿ ಇಟ್ಟ ಮಹತ್ತರವಾದ ಹೆಜ್ಜೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + three =
Remember me
