ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.—
ಹನ್ನೆರಡನೇ ಶತಮಾನದಲ್ಲಿ ಇಡೀ ವಿಶ್ವದ ಸಾಹಿತ್ಯವೆಂಬ ತೋಟದಲ್ಲಿ ವಿಶಿಷ್ಟವಾಗಿ ಅರಳಿದ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ. ಇದನ್ನು ದಾಸಿಮಾರ್ಯರು ಮೊದಲ ಬಾರಿಗೆ ಹುಟ್ಟು ಹಾಕಿದರೂ ಅದು ಅತಿ ಹೆಚ್ಚು ಪ್ರಖರವಾಗಿ ಬೆಳೆದದ್ದು ಬಸವಣ್ಣನವರಿಂದ ಎಂಬುದು ಬಹಳ ಮುಖ್ಯ. ಇಲ್ಲಿ ವಚನ ಸಾಹಿತ್ಯ ಹುಟ್ಟಿದ್ದು ವಚನ ರಚನೆ ಮಾಡಿ ಸಭೆ ಸಮಾರಂಭಗಳಲ್ಲಿ ಮಂಡಿಸಿ ಜನರ ಮೆಚ್ಚುಗೆ ಪಡೆಯಲೆಂದಲ್ಲ. ಇಲ್ಲಿ ಜನಜಾಗೃತಿಯೇ ಮೂಲ ಧ್ಯೇಯ. ವಚನ ಒಂದು ಸಂವಹನ ಮಾಧ್ಯಮ ಮಾತ್ರ. ಇಲ್ಲಿ ವಚನ ಎಂಬ ನಾಮಾಂಕಿತವೇ ಬಹಳ ವಿಶಿಷ್ಠವಾದದ್ದು. ವಚನವೆಂದರೆ ಭಾಷೆ, ಪ್ರಮಾಣ ಎಂಬುದಾಗಿ ಅರ್ಥ. ವಚನ ರಚಿಸುವವರು ತಮ್ಮ ನಿಜ ಜೀವನದಲ್ಲಿ ಅದರಂತೆ ನಡೆದರೆ ಮಾತ್ರ ಅದು ವಚನ ಎನಿಸುವುದು. ಇಲ್ಲದಿದ್ದಲ್ಲಿ ಅದು ಕೇವಲ ಬರಹ ಮಾತ್ರ. ಲೋಕವನ್ನು ತಿದ್ದುವ ವಚನಕಾರರು ಮೊದಲು ತಮ್ಮ ಓರೆ ಕೋರೆಗಳನ್ನು ತಿದ್ದಿಕೊಂಡಾಗ ಮಾತ್ರ ಅನ್ಯರ ಲೋಪ ದೋಷಗಳನ್ನು ತಿದ್ದಲು ಸಮರ್ಥ. ಶುದ್ದ ನಡೆ ನುಡಿ ಇಲ್ಲದ ಯಾವದೇ ವ್ಯಕ್ತಿಗೆ ವಚನಗಳನ್ನು ರಚಿಸಿ ಬೋಧಿಸುವ ನೈತಿಕ ಹಕ್ಕಿರುವದಿಲ್ಲ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂಬ ಬಸವಣ್ಣನವರ ಮಾತು ನಡೆಯಿಲ್ಲದ ನುಡಿವೀರರನ್ನು ಎಚ್ಚರಿಸಿದಂತಿದೆ.
ಗಿಳಿಯೋದಿ ಫಲವೇನು?ಬೆಕ್ಕು ಬಹುದ ಹೇಳಲರಿಯದು…ಜಗವೆಲ್ಲ ಕಾಂಬ ಕಣ್ಣು, ತನ್ನ ಕೊಂಬ ಕೊಯ್ಲ ಕಾಣಲರಿಯದು,ಇದಿರ ಗುಣವ ಬಲ್ಲೆವೆಂಬರು,ತಮ್ಮ ಗುಣವ ತಾವರಿಯರುಕೂಡಲ ಸಂಗಮದೇವಾ
ಬಸವಣ್ಣನವರ ಈ ವಚನ ಬೋಧನೆಗೂ ಸಾಧನೆಗೂ ಇರುವ ಸಾಮ್ಯತೆಯನ್ನು ಸೂಚಿಸುತ್ತದೆ. ಬರಹ ಮತ್ತು ಬದುಕಿಗೂ ನೇರ ಸಂಬಂಧವಿದ್ದರೆ ಮಾತ್ರ ಅಂತಹ ಬೋಧನೆಗೆ ಬೆಲೆ. ಇಲ್ಲದಿದ್ದಲ್ಲಿ ಆಡುವ ಮಾತು ಕೇವಲ ಮಾತಿನ ಮಾರುಕಟ್ಟೆಯ ಸರಕಾಗಿ ಬಳಕೆಯಾಗುತ್ತದೆ. ಮಾತು ಆಡುವುದು ಸುಲಭ. ಆದರೆ ಆಡಿದಂತೆ ನಡೆಯುವುದು ಬಹು ಕಷ್ಟ. ವಚನ ಚಳವಳಿಯಲ್ಲಿ ಭಾಗಿಯಾದ ಶರಣರೆಲ್ಲರೂ ಜೀವನ ಮೌಲ್ಯಗಳನ್ನು ಪಾಲಿಸಿಕೊಂಡು ಬರಲೆಂದೇ ತಮ್ಮ ಬದುಕನ್ನು ಮೀಸಲಿರಿಸಿದವರು. ಬಸವಣ್ಣನವರ ದೃಷ್ಟಿಯಲ್ಲಿ ಬದುಕು ಸಾಧನೀಕರಣದ ವೇದಿಕೆ. ನಮ್ಮೆಲ್ಲ ಇಹಪರದ ಸಾಧನೆಗೆ ಬದುಕೇ ಕರ್ಮ ಭೂಮಿ. ಆಡಿದುದನ್ನು ಮಾಡಿ ತೋರುವ ಕಾರ್ಯಕ್ಷೇತ್ರ. ಆತ್ಮಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು ನಾವು ಮಾಡುವ ಸಾಧನೆಗಳೇ ಬದುಕಿನ ಪ್ರಮಾಣಗಳು. ಬಸವಾದಿ ಶರಣರ ವಚನಗಳು ಆತ್ಮಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು ಹೊಮ್ಮಿರುವಂತಹವು. ಜನಪದ ಭಾಷೆಯಲ್ಲಿ ವಚನ ಕೊಡುವುದು ಎಂದರೆ ಪ್ರಮಾಣ ಮಾಡುವುದು. ಮಾತು ಕೊಟ್ಟಂತೆ ನಡೆದು ಕೊಳ್ಳುವುದು ಎಂಬ ಅರ್ಥದಲ್ಲಿ ವಚನ ಎಂಬ ಪದ ಬಳಕೆಯಾಗಿರುವುದು. ಸಾಹಿತ್ಯ ಕಾವ್ಯ ಕವನ ಪದ್ಯ ಮುಕ್ತಕ ಎಂಬ ಪ್ರಕಾರಗಳ ಬದಲಿಗೆ ಇಲ್ಲಿ ತಮ್ಮ ರಚನೆಗಳನ್ನು ವಚನ ಎಂದು ಕರೆದಿರುವುದು ತುಂಬಾ ಅರ್ಥಪೂರ್ಣವಾದುದು. ಬರಹ ಮತ್ತು ಬದುಕಿಗೆ ಇರುವ ನೇರ ಸಂಬಂಧವನ್ನು ಇದು ಸೂಚಿಸುತ್ತದೆ. ಇಲ್ಲಿನ ವಚನಗಳು ಅಧ್ಯಯನ, ಪಾಂಡಿತ್ಯದಿಂದ ಮೂಡಿದವುಗಳಲ್ಲ. ಬದಲಿಗೆ ಲೋಕಾನುಭವ ಹಾಗೂ ಪ್ರಾಮಾಣಿಕ ಬದುಕಿನ ಅನುಭವಗಳ ಅಭಿವ್ಯಕ್ತಿಯ ರೂಪಗಳಾಗಿರುತ್ತವೆ. ವಚನಗಳು ಬೇರಾವ ಸಾಹಿತ್ಯದ ಹಿನ್ನೆಲೆಯಿಂದ ಮೂಡಿರುವಂತಹವಲ್ಲ. ವಚನಗಳಿಗೆ ಶರಣರ ಬದುಕೇ ಆಧಾರ. ಬದುಕೇ ಪ್ರಮಾಣ. ಬಸವಣ್ಣನವರ ಸಾವಿರಾರು ವಚನಗಳಿದ್ದರೂ ಅವರು ಆಡಿದುದಕ್ಕಿಂತ ಮಾಡಿತೋರಿರುವುದೇ ಅಧಿಕ.
ಭಕ್ತಿ ಸುಭಾಷೆಯ ನುಡಿಯ ನುಡಿವೆ,ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ.ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯ್ಯಲ್ಲಿ;ಒಂದು ಜವೆ ಕೊರತೆಯಾದಡೆ,ಎನ್ನನೆದ್ದಿ ನೀನೆದ್ದು ಹೋಗು.ಕೂಡಲ ಸಂಗಮದೇವಾಇಂತಹ ವಚನಗಳು ಬಸವಣ್ಣನವರ ಬದುಕು-ಬರಹಕ್ಕೂ, ನಡೆ ಮತ್ತು ನುಡಿಗೂ ಇರುವ ನೇರ ಸಂಬಂಧವನ್ನು ಸೂಚಿಸುತ್ತವೆ. ಅವರ ಪಾರದರ್ಶಕ ಬದುಕಿನ ಜೀವಜನ್ಯ ಅಭಿವ್ಯಕ್ತ ರೂಪವೇ ವಚನಗಳು. ಇಲ್ಲಿ ಕಾಲ್ಪನಿಕತೆಗೆ ಅವಕಾಶವಿಲ್ಲ ಬದಲಿಗೆ ಅರಿತು ಆಚರಿಸಿದ ಅನುಭವವೇ ಪ್ರಮಾಣ. ಈ ಕಾರಣದಿಂದಾಗಿಯೇ ಉಳಿದೆಲ್ಲ ಸಾಹಿತ್ಯ ಪ್ರಕಾರಿಕ್ಕಿಂತ ವಚನ ಸಾಹಿತ್ಯ ವಿಭಿನ್ನವಾದ ಸ್ಥಾನ ಪಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 2 =
Remember me
