ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.
ದೈವ ಸಾಕ್ಷಾತ್ಕಾರಕ್ಕೆ ದಾರ್ಶನಿಕರು ಕಂಡುಕೊಂಡ ಸಾಧನ ಭಕ್ತಿ ಮಾರ್ಗ. ಕಾಲಗತಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕು ಭಕ್ತಿ ತನ್ನ ಅರ್ಥ ಕಳೆದುಕೊಳ್ಳುವ ಸ್ಥಿತಿ ಬಂದೊದಗಿತ್ತು. ಪ್ರಾಣಿ ಹಿಂಸೆಯನ್ನೇ ಒಳಗೊಂಡ ಹೋಮ ಹವನಾದಿಗಳು ಆಚರಣೆಗೆ ಬಂದು ಜನರಲ್ಲಿ ಮೌಢ್ಯ ತಾಂಡವವಾಡುವ ಕಾಲ ಬಂದಿತ್ತು. ಧರ್ಮಾಚರಣೆಯ ಹೆಸರಿನಲ್ಲಿ ಜಾತಿ ಭೇದ, ಲಿಂಗ ಭೇದ ಮೊದಲಾದ ಅನರ್ಥಗಳು ಜನರನ್ನು ದಿಕ್ಕು ತಪ್ಪಿಸುವಂತಾಗಿದ್ದವು. ಭಕ್ತಿಯ ಪರಿಕಲ್ಪನೆಯೇ ವಿಕೃತವಾಗಿ ಆಚರಣೆಯ ಹೆಸರಿನಲ್ಲಿ ಅನಾಚಾರಗಳೇ ಚಲಾವಣೆಯಲ್ಲಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಭಕ್ತಿ ಮತ್ತು ಆಚರಣೆಗಳ ನಿಜಾರ್ಥವನ್ನು ಅರಿವು ಮಾಡಿ ಕೊಟ್ಟರು. ಇದರಿಂದಾಗಿ ಮೇಲ್ವರ್ಗದವರ ಅಸಹನೆಗೆ ಗುರಿಯಾದರೂ ಅದಾವುದನ್ನೂ ಲೆಕ್ಕಿಸದೇ ಜನಜಾಗೃತಿ ಮೂಡಿಸುವಲ್ಲಿ ಮುಂದಾದವರು ಬಸವಣ್ಣನವರು.
ಲೋಕದ ಕತ್ತಲೆಯನ್ನು ನಿವಾರಿಸುವ ಪೌರ್ಣಮಿಯ ಚಂದಿರನಂತೆ ಬಂದ ಬಸವಣ್ಣ ಈ ಎಲ್ಲ ಜಾಡ್ಯಗಳಿಗೆ ದಿವ್ಯ ಔಷಧಿಯಾಗಿ ಭಕ್ತಿ ಚಳವಳಿಯನ್ನು ಮುನ್ನಡೆಸಿದರು. ಬಸವಣ್ಣ ಭಕ್ತಿಭಂಡಾರಿಯಂದೇ ಪ್ರಸಿದ್ಧಿ ಪಡೆದವರು. ಹಾಗೆಂದು ಅವರು ತಮ್ಮನ್ನು ತಾವು ಭಕ್ತ ಎಂದು ಕರೆದುಕೊಳ್ಳದೇ ಭಕ್ತರ ಸೇವಕ ಎಂದು ಕರೆದು ಕೊಂಡವರು. ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬಲ್ಲಿ ಅವರ ವಿನಯತೆ ಮಡುಗಟ್ಟಿ ನಿಂತಿದೆ. ತಮ್ಮನ್ನು ತಾವು ಭಕ್ತ ಎಂದು ಕರೆದುಕೊಂಡರೆ ಅದನ್ನು ಅಹಂಕಾರವೆಂದು ಭಾವಿಸಿದವರು ಬಸವಣ್ಣನವರು. ಬಸವಣ್ಣನವರ ಬದುಕಿನಲ್ಲಿ ಭಕ್ತಿಯ ಸ್ವರೂಪ ಎಷ್ಟು ಸೂಕ್ಷ್ಮವಾದುದೆಂದು ಅರಿವಾಗುತ್ತದೆ. ದೇವರನ್ನು ಗುಡಿ ಗುಂಡಾರಗಳಲ್ಲಿ ಮಾತ್ರ ಕಾಣುವ ಭಕ್ತ ಸಂಕುಲದ ನಡುವೆಯೇ ಜಗವೆಲ್ಲವೂ ಶಿವನ ವಾಸಸ್ಥಾನ, ಜಗದೊಳಗಿರುವ ಸರ್ವರೂ ಶಿವ ಸ್ವರೂಪಿಗಳು, ಎನ್ನುವ ಅವರ ಅತ್ಯಂತ ಭಾವುಕ ಮನ ಸ್ಥಿತಿ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಭಕ್ತಿಯು ಶಿವ ಜೀವರ ಸಂಬಂಧ ಮಾತ್ರವಲ್ಲ, ಬದಲಿಗೆ ಜೀವ ಜೀವರ ನಡುವಿನ ಸಂಬಂಧವೂ ಹೌದು. ಅಂತೆಯೇ ಅಣು ತೃಣ ಕಾಷ್ಟಗಳಲ್ಲಿ ಶಿವನಂಶವನ್ನು ಕಾಣುವದರ ಜೊತೆಯಲ್ಲಿ ಸಕಲ ಪ್ರಾಣಿಗಳಲ್ಲಿಯೂ ಪರಮಾತ್ಮನ ಅಂಶ ಅಡಗಿರುವದರಿಂದ ಯಾವ ವ್ಯಕ್ತಿ ಅಥವಾ ಜೀವವನ್ನು ನೋಯಿಸದೇ ಇರುವುದೇ ಭಕ್ತಿ ಎಂದು ಭಾವಿಸಿದವರು. ಸಕಲ ಪ್ರಾಣಿಗಳಿಗೆ ಲೇಸನೇ ಬಯಸುವುದೇ ಧರ್ಮ ಎಂಬ ಭಾವ ಅವರಲ್ಲಿ ವ್ಯಕ್ತವಾಯಿತು. ಭಕ್ತಿ ಅದೊಂದು ಭಾವನಾತ್ಮಕವಾದ ಮನಸ್ಥಿತಿ. ತನ್ನಿಂದ ಅನ್ಯರಿಗೆ ಕಿಂಚಿತ್ತೂ ಕೇಡು ಉಂಟಾಗದಂತೆ ನಡೆದುಕೊಳ್ಳುವ ಜೀವನ ಸ್ವರೂಪ.
ಕಂಡ ಭಕ್ತರಿಗೆ ಕೈ ಮುಗಿವಾತನೇ ಭಕ್ತ.ಮೃದು ವಚನವೇ ಸಕಲ ಜಪಂಗಳಯ್ಯ,ಮೃದುವಚನವೇ ಸಕಲ ತಪಂಗಳಯ್ಯ.ಸದು ವಿನಯವೇ ಸದಾಶಿವನ ಒಲುಮೆಯಯ್ಯ.ಕೂಡಲ ಸಂಗಯ್ಯ ನಂತಲ್ಲದೊಲ್ಲನಯ್ಯ.
ದೇವರಂತೆಯೇ ದೇವರ ಭಕ್ತರಲ್ಲಿಯೂ ದೇವರನ್ನು ಕಾಣುವ ಬಸವಣ್ಣನವರು ಲೋಕವನ್ನು ನೋಡುವ ದೃಷ್ಟಿಕೋನವೇ ಅತ್ಯಂತ ವಿಶಿಷ್ಟವಾದದ್ದು. ಮಾನವರಲ್ಲಿ ಮಹದೇವನನ್ನು ಕಾಣುವ ಅವರು ಕೂಡಲಸಂಗಮನಲ್ಲಿ ಸದಾ ಬೇಡುವುದೇ ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲ ಸಂಗಮದೇವಾ ಎಂಬುದಾಗಿ. ಇಲ್ಲಿ ಭಕ್ತಿಯಂದರೆ ನಿರ್ಮಲವಾದ ಅಂತಃಕರಣ. ಅಂತರಂಗ ಅರುಷಡ್ವರ್ಗಗಳನ್ನು ನಿವಾರಿಸಿಕೊಂಡು ಪರಿಶುದ್ಧಾತ್ಮರಾಗಿ, ಸಮರ್ಪಣಾ ಭಾವದಿಂದ ಶಿವ ಸಾಕ್ಷತ್ಕಾರ ಬಯಸುವುದು. ಆತ್ಮೋನ್ನತಿಯೊಂದಿಗೆ ಲೋಕೋದ್ಧಾರವನ್ನು ಬಯಸುವ ವಿಶಾಲಗುಣ. ಹಾಗೂ ನಿಶ್ಚಲವಾದ ಮನಸು. ಪೂಜೆ ಜಪತಪಗಳೇ ದೇವರನ್ನು ಒಲಿಸುವ ಸಾಧನಗಳೆಂದು ಭಾವಿಸಿದ್ದ ಸಂದರ್ಭದಲ್ಲಿಯೇ ಅವುಗಳೊಂದಿಗೆ ಅನ್ಯರಿಗೆ ಒಳಿತನ್ನು ಬಯಸು ಹ್ರದಯಾಂತಃ ಕರಣವೂ ಒಂದು ಸಾಧನೆ. ಈ ಮೂಲಕ ಧರ್ಮವನ್ನು ಮಡಿ ಹುಡಿ ಆಚಾರಳಿಗೆ ಸೀಮಿತಗೊಳಿಸದೇ ಜೀವಕಾರುಣ್ಯದ ನೆಲೆಯಲ್ಲಿ ಅರ್ಥೈಸಿ ಮಹಾನುಭಾವರು ಬಸವಣ್ಣನವರು. ಶಿಲೆಯ ದೇವರಿಗಿಂತ ಚೈತನ್ಯ ಹೊಂದಿರುವ ಜೀವಸಂಕುಲದ ಸೇವೆಯನ್ನೇ ಭಗವಂತನ ಸೇವೆಯಂದು ಭಾವಿಸಿದರು. ಮದ್ಯರಾತ್ರಿಯಲ್ಲಿ ಮನೆಗ ಕಳ್ಳನೊಬ್ಬ ನುಗ್ಗಿದರೂ ಕಳ್ಳನ ಮನೆಗೆ ಬಲುಗಳ್ಳನೊಬ್ಬ ಬಂದರೆ ಕೂಡಲಸಂಗಯ್ಯನಲ್ಲದೇ ಮತ್ತಾರು ಎಂದು ಭಾವಿಸುವಲ್ಲಿ ಅವರ ಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದು. ಬಸವಣ್ಣನವರ ಇಂತಹ ಉದಾತ್ತ ವಿಚಾರ ಧಾರೆಗಳು ಅವರನ್ನು ವಿಶ್ವ ಮಾನವತಾವಾದಿಯಾಗಿಸಿದವು. ಹಾಗೆಂದು ಮೂಲದೈವದ ಅಸ್ತಿತ್ವವನ್ನು ಎಲ್ಲಿಯೂ ನಿರಾಕರಿಸಿದವರಲ್ಲ. ಸಕಲ ಚರಾಚರ ಜಗತ್ತಿನ ಆಗು ಹೋಗುಗಳಿಗೆ ಮೂಲ ಶಕ್ತಿಯಾದ ಪರಾತ್ಪರ ವಸ್ತುವಿನ ಸ್ವರೂಪವನ್ನು ‘ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ’ ಎಂಬುದಾಗಿ ಕೊಂಡಾಡಿದವರು. ಜಗತ್ತಿಗೆ ಜನ್ಮವಿತ್ತ ಆ ಮಹಾಶಕ್ತಿಯನ್ನು ‘ತಂದೆ ನೀನು ತಾಯಿ ನೀನು’ ಎಂದು ಸ್ತುತಿಸಿದವರು. ‘ನೀನೊಲಿದರೆ ಕೊರಡು ಕೊನರುವದಯ್ಯ’ ಎಂಬುದಾಗಿ ಆ ಶಕ್ತಿಯ ಮಹಿಮೆಯನ್ನು ಕೊಂಡಾಡಿದವರು. ಬಸವಣ್ಣನವರು ಮೌಢ್ಯವನ್ನು ನಿರಾಕರಿಸಿದರೇ ಹೊರತು ನಾಸ್ತಿಕರಾಗಲಿಲ್ಲ. ದೈವವನ್ನು ಒಪ್ಪಿದರೇ ಹೊರತು ಮೌಢ್ಯ ಆಚರಿಸಲಿಲ್ಲ. ಅರ್ಥ ಕಳೆದು ಕೊಂಡಿದ್ದ ಧರ್ಮಾಚರಣೆಗಳು ಅವರ ಈ ಎಲ್ಲ ವಿಶಿಷ್ಟ ನಿಲುವುಗಳಿಂದ ಪುನಃ ನಾವೀನ್ಯತೆ ಪಡೆದುಕೊಂಡವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 15 =
Remember me
