ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದ ಶ್ರೀಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.
ಬಸವಣ್ಣನವರ ಜೀವನ ಚರಿತ್ರೆ ಅದೊಂದು ವಿರಕ್ತಿಭಾವದ ಮಹಾಕಾವ್ಯ. ಇಡೀ ಜಗತ್ತು ಯಾವ ಅಧಿಕಾರ ಆಸೆ ಅಂತಸ್ತುಗಳಿಗಾಗಿ ಹಗಲಿರುಳು ಹೋರಾಡುತ್ತಿದೆಯೊ ಅಂತಹ ಅಧಿಕಾರ ಸಂಪತ್ತುಗಳು ತಾನಾಗಿಯೇ ಮಂತ್ರಿಪದವಿಯ ರೂಪದಲ್ಲಿ ಒದಗಿ ಬಂದಾಗ ಅವೆಲ್ಲವನ್ನೂ ಅತ್ಯಂತ ಸರಳವಾಗಿ ನಿರಾಕರಿಸಿದ ಧೀಮಂತ ವ್ಯಕ್ತಿತ್ವ ಬಸವಣ್ಣನವರದು. ಪರಸ್ತ್ರೀ ಪರಧನ ಸರ್ಪ ಅಗ್ನಿಗಿಂತಲೂ ಕ್ರೂರವಾದವು ಎಂದು ಭಾವಿಸುವ ಅವರ ವಿರಕ್ತಿ ಭಾವ ಮಹತ್ತರವಾದುದು. ಕಾಯಕದಿಂದ ಬಂದ ಪದಾರ್ಥ ಮಾತ್ರ ಸ್ವೀಕಾರಾರ್ಹವಾದುದು. ದುಡಿಯದೇ ಬರುವ ದ್ರವ್ಯ ಸ್ವೀಕಾರಾರ್ಹವಲ್ಲ ಎಂಬ ಅವರ ನಿಲುವು ನೀತಿ ಮಾರ್ಗದ ದಾರಿದೀಪ. ಅಧಿಕಾರ ಸಂಪತ್ತುಗಳು ಜನಸೇವೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಜನ ಸೇವೆಗೆ ಅಧಿಕಾರ ಮಾರಕವಾಗುವದಾದರೆ ಅಂಥ ಯಾವ ಪದವಿಯೂ ಬೇಡವೆಂದು ನಿರಾಕರಿಸಿದವರು ಮಹಾವೈರಾಗಿ ಬಸವಣ್ಣನವರು. ಅರಮನೆಯ ಭಂಡಾರ ಜನ ಸೇವೆಗೆ ಜಂಗಮ ದಾಸೋಹಕ್ಕೆ ವಿನಿಯೋಗವಾಗಬೇಕೆ ಹೊರತು ಯಾರೂಬ್ಬರ ಸೊತ್ತಾಗಬಾರದೆಂಬ ನಿಲುವು ಜನಸೇವೆಯ ಹೆಸರಿನಲ್ಲಿ ಸ್ವಾರ್ಥಸಾಧಿಸುವ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದಂತಿದೆ. ಮುಖ್ಯವಾಗಿ ಜನಸೇವಕರಲ್ಲಿ ಇರಬೇಕಾದದ್ದು ಅಧಿಕಾರ ಹಣದ ಮೋಹವಲ್ಲ. ಬದಲಿಗೆ ಪರಿಶುದ್ಧ ಆತ್ಮ , ಪರಿಶುದ್ದ ಹಸ್ತ ಹಾಗೂ ಜನಪರ ಕಾಳಜಿ. ಇವುಗಳಿಲ್ಲದೇ ಯಾರೂ ಜನ ಸೇವಕರಾಗಲಾರರು. ಮೊದಲು ಧರ್ಮವಂತನಾದರೆ ಮಾತ್ರ ಜನಸೇವಕನಾಗಬಲ್ಲ ಎಂಬುದನ್ನು ನಡೆದು ತೋರಿದವರು ಬಸವಣ್ಣನವರು.
ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದೆಳೆಯಅನ್ನ ದೊಳಗೊಂದಗುಳಇಂದಿಂಗೆ ನಾಳಿಂಗೆ ಬೇಕೆಂದೆನಾದಡೆನಿಮ್ಮಾಣೆ ನಿಮ್ಮ ಪುರಾತನರಾಣೆ!ನಿಮ್ಮ ಶರಣರಿಗಲ್ಲದೇ ಮತ್ತೊಂದನರಿಯೆ,ಕೂಡಲಸಂಗಮದೇವಾ
ಎಂಬ ಬಸವಣ್ಣನವರ ವಚನ ಮಂತ್ರಿವರೇಣ್ಯರು ಪದಗ್ರಹಣದಲ್ಲಿ ಮಾಡಬೇಕಾದ ಪ್ರಮಾಣ ವಚನದಂತಿದೆ. ಈ ಎಲ್ಲ ನಿಲುವುಗಳನ್ನು ಬಸವಣ್ಣನವರು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದವರು. ಕಳ್ಳರು ಬಂದು ಹಸುಗಳನ್ನು ಕದ್ದೊಯ್ದ ಸಂದರ್ಭದಲ್ಲಿ ಕರುಗಳು ಅನಾಥವಾಗಬಾದೆಂಬ ಕಾರಣದಿಂದ ಹಸುಗಳಿದ್ದೆಡೆಗೆ ಕರುಗಳನ್ನೂ ಬಿಟ್ಟು ಬರುವಂತೆ ಮಾಡಿದ ಅವರ ಪ್ರಾಣಿದಯೆ ಹಾಗೂ ಕಾಳಜಿ ನಿಜಕ್ಕೂ ಅನುಪಮವಾದದ್ದು. ಜನ ಸೇವೆ ಮಾಡಲು ಅಧಿಕಾರ ಅನಿವಾರ್ಯ ವೆಂದು ಭಾವಿಸದ ಕಾಲದಲ್ಲಿ ಅಧಿಕಾರದಿಂದ ಹೊರಗಿದ್ದೂ ಜನಸೇವೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟವರು ಬಸವಣ್ಣನವರು. ಜನಸೇವೆಗಾಗಿ ಅಧಿಕಾರವಿರಬೇಕೆ ವಿನಃ ಅಧಿಕಾರಕ್ಕಾಕಿ ಜನಸೇವಕರಾಗಬಾರದು ಎಂಬುದು ಆವರ ಜನಸೇವೆಯ ಸಿದ್ಧಾಂತ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಭಾರ ಮಾಡುವ ಪ್ರತೀ ಜನನಾಯಕರಿಗೂ ಬಸವಣ್ಣನವರು ಹಾಕಿಕೊಟ್ಟ ನೀತಿ ಮಾರ್ಗ ಅತ್ಯಂತ ಸಮರ್ಪಕವಾದದ್ದು. ಮಂತ್ರಿಯೊಬ್ಬ ಧರ್ಮೋದ್ಧಾರಕನಾಗುವುದೇ ಒಂದು ಅಚ್ಚರಿ. ಅರಮನೆ ಗುರುಮನೆಗಳು ಜನಸೇವೆಯ ಎರಡು ರಾಜ ಪಥಗಳು. ಬಸವಣ್ಣನವರೊಬ್ಬರೇ ಆ ಎರಡೂ ಮಾರ್ಗದಲ್ಲಿ ನಡೆದದ್ದು ನಿಜಕ್ಕೂ ಅಚ್ಚರಿ.
ಮಾನವ ಸಹಜ ದೌರ್ಬಲ್ಯಗಳಾದ ಆಸೆ ಆಮಿಶಗಳು ಸರ್ವರಲ್ಲಿಯೂ ಸರ್ವೇ ಸಾಮಾನ್ಯ. ಆದರೆ ಯಾವದೇ ವಸ್ತ್ರ ವಡವೆಗಳಿಗೆ ಆಸೆ ಪಡದೇ ಅವುಗಳನ್ನು ಮೀರಿನಿಲ್ಲುವ ಮಾನಸಿಕ ತಾಕತ್ತು ಬಸವಣ್ಣನವರದ್ದು. ಅವರು ಲೋಕವನ್ನು ಆಸೆಯ ಕಣ್ಣುಗಳಿಂದ ನೋಡದೇ ಪೂಜ್ಯ ಭಾವದಿಂದ ನೋಡಿದವರು. ಅಂತೆಯೇ ಒಡೆಯನಾಗಿ ರಾಜ್ಯಭಾರಮಾಡಲಿಚ್ಚಿಸದೇ, ಕಿಂಕರ ಭಾವದಿಂದ ಜನಸೇವೆ ಮಾಡಿದರು. ಅಂತೆಯೇ ಅವರಲ್ಲಿ ಸೇವೆಯೇ ಸಾರ್ಥಕ ಜೀವನವೆನಿಸಿತು. ತ್ಯಾಗದಲ್ಲಿರುವ ಸಂತೃಪ್ತಿ ಭೋಗ ವೈಭೋಗಳಲ್ಲಿ ಇರಲು ಸಾಧ್ಯವಿಲ್ಲ. ಏನೆಲ್ಲ ಗಳಿಸಿ ದೊಡ್ಡವರಾಗಲು ಹವಣಿಸುವ ಮನಸುಗಳ ಮದ್ದೆಯೇ ತ್ಯಾಗಿಯಾಗಿ ಯೋಗಿಯಾಗಿ ದೊಡ್ಡವರಾದವರು ಬಸವಣ್ಣನವರು. ಇದು ಎಲ್ಲರಿಗೂ ಸಿದ್ಧಿಸುವಂತಹದ್ದಲ್ಲ. ಹೊನ್ನು ಮಣ್ಣುಗಳ ವ್ಯಾಮೋಹ ತೊರೆದು ನಿಲ್ಲುವ ಬಸವಣ್ಣನವರ ಮನೋಸ್ಥೈರ್ಯ ಹಾಗೂ ವೀರವೈರಾಗ್ಯಭಾವವೇ ಇಂದು ಅವರನ್ನು ಜನಮನದಲ್ಲಿ ಪೂಜ್ಯ ಸ್ಥಾನದಲ್ಲಿರಿಸಿದೆ. ಪರಂಪರೆಯಿಂದ ಬಂದ ಅರಸೊತ್ತಿಗೆಯಿಂದ ರಾಜ ಮಹರಾಜರಾಗಿ ಮೆರೆದವರು ಅನೇಕರಿರಬಹುದು. ಆದರೆ ಅವರಾರೂ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಾರರು. ಬದಲಿಗೆ ನ್ಯಾಯ ನೀತಿ ಮಾರ್ಗದಲ್ಲಿ ನಡೆದು ನಿಸ್ವಾರ್ಥವಾಗಿ ಸೇವೆ ಮಾಡಿದ ಬಸವಣ್ಣನವರತಹ ಮಹಾನುಭಾವಿಗಳು ಸೂರ್ಯ ಚಂದ್ರರಿರುವವರೆಗೂ ಶಾಶ್ವತರಾಗಿರುತ್ತವೆಂಬುದಕ್ಕೆ ಬಸವಣ್ಣ ನವರ ಜೀವಮಾನ ಸಾಧನೆಯೇ ನಿದರ್ಶನ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + one =
Remember me
