ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.
ಅನುಭಾವ ಶರಣರ ಒಂದು ವಿಶಿಷ್ಟವಾದ ಪರಿಕಲ್ಪನೆ. ಲೋಕದ ಜಂಜಡದಿಂದ ಮುಕ್ತವಾಗಿ ಅನಿರ್ವಚನೀಯವಾದ ಒಂದು ಮನ ಸ್ಥಿತಿ. ಶರಣರು ಆ ಒಂದು ಮನಸ್ಥಿತಿಯನ್ನು ಹೊಂದಿದ್ದರಿಂದಲೇ ಲೋಕದ ಸೆಳೆತಗಳನ್ನು ಮೀರಿ ಬೆಳೆದರು. ಜಗತ್ತನ್ನು ಇಂದ್ರಿಯಗಳ ದೃಷ್ಟಿಯಲ್ಲಿ ನೋಡಿದರೆ ಮನಸಿನಲ್ಲಿ ಆಸೆಗಳು ಗರಿಗೆದರಿ ನಿಲ್ಲುತ್ತವೆ. ಆದರೆ ಇಂದ್ರಿಯಾತೀತವಾದ ಅನುಭಾವದ ದೃಷ್ಟಿಯಲ್ಲಿ ನೋಡಿದರೆ ಎಲ್ಲ ವಸ್ತುಗಳೂ ಪ್ರಸಾದ ರೂಪದಲ್ಲಿ ಗೋಚರಿಸುತ್ತವೆ. ಆಗ ಆಸೆಯ ಬದಲು ಪ್ರಪಂಚದ ಬಗ್ಗೆ ಪೂಜ್ಯ ಭಾವ ಮೂಡುತ್ತದೆ. ಎಲ್ಲಡೆಯೂ ಶಿವ ಅಂಶವೇ ಗೋಚರಿಸುತ್ತದೆ. ‘ಎತ್ತೆತ್ತ ನೋಡಿದಡತ್ತ ನೀನೇ ದೇವಾ. ಸಕಲ ವಿಸ್ತಾರವೂ ನೀನೇ ದೇವ’ ಎಂಬ ಬಸವಣ್ಣನವರ ವಚನ ಅವರು ಜಗತ್ತನ್ನು ನೋಡುವ ದೃಷ್ಟಿಕೋನವನ್ನು ತಿಳಿಸುತ್ತದೆ. ಒಬ್ಬ ರಾಜ ಜಗತ್ತನು ನೋಡಿದಾಗ ಅದರ ಮೇಲೆ ಒಡೆತನ ಸಾಧಿಸಿ ಆಳಬೇಕೆಂಬ ಆಸೆ ಮೂಡುತ್ತದೆ. ಆದರೆ ಬಸವಣ್ಣನವರಂತಹ ಒಬ್ಬ ಅನುಭಾವಿ ಪ್ರಪಂಚವನ್ನು ನೋಡಿದಾಗ ಶಿವನ ವಾಸಸ್ಥಾನವಾದ ಈ ಜಗತ್ತಿನ ಸೇವೆ ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಭಾವಿಸುತ್ತಾರೆ. ಆಸೆಯಿಂದ ನೋಡಿದವರು ಒಡೆಯರಾಗಬಯಸಿದರೆ, ಅನುಭಾವದಿಂದ ನೋಡಿದವರು ಸೇವಕರಾಗಬಯಸುತ್ತಾರೆ. ಇದುವೆ ಇಬ್ಬರಲ್ಲಿರುವ ವ್ಯತ್ಯಾಸ.
ಅನುಭಾವ ಪಂಚ ಇಂದ್ರಿಯಗಳಿಗೂ ಮೀರಿದ ಒಂದು ಮಾನಸಿಕ ಅವಸ್ಥೆ. ಇಂದ್ರಿಯ ವಶದಲ್ಲಿರುವವರು ಕ್ಷಣಿಕ ಸುಖದಾಸೆಯ ಬೆನ್ನು ಹತ್ತಿ ಕೊನೆಗೆ ದುಃಖವನ್ನು ಅನುಭವಿಸುತ್ತಾರೆ. ಅಂತಹವರ ಮನಸು ಸದಾಚಂಚಲತೆಯಿಂದ ಕೂಡಿರುತ್ತದೆ. ಇಂಥವರ ಪಾಲಿಗೆ ಸುಖ ಶಾಂತಿ ಎಂಬುದು ಗಗನ ಕುಸುಮ, ಕನ್ನಡಿಯ ಗಂಟಾಗಿರುತ್ತದೆ. ಎಲ್ಲಿಯವರೆವಿಗೂ ಇಂದ್ರಿಯಾಸಕ್ತಿಯನ್ನು ಮೀರಿ ನಿಲ್ಲುವದಿಲ್ಲವೋ ಅಲ್ಲಿಯವರೆವಿಗೂ ಅತೃಪ್ತ ಮನಸ್ಕರಾಗಿಯೇ ಇರುತ್ತಾರೆ. ಇಂತಹವರು ಮಾಡುವ ಪೂಜೆ ಧ್ಯಾನ ಜಪ ತಪಗಳು ವ್ಯರ್ಥಾಗಿರುತ್ತವೆ. ಶರೀರದಂತೆಯೇ ಮನಸಿಗೂ ಕಣ್ಣು, ಕಿವಿ, ಮೂಗು, ನಾಲಿಗೆ ಕಾಲುಗಳಿರುತ್ತವೆ. ಅವುಗಳನ್ನು ಅಂಕಿತದಲ್ಲಿಡುವವರೆವಿಗೂ ಆಧ್ಯಾತ್ಮ ಯಾವ ಸಾಧನೆಯನ್ನೂ ಮಾಡಲಾಗುವದಿಲ್ಲ. ಅಂತೆಯೇ ಬಸವಣ್ಣನವರು-
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆನಿಮ್ಮ ಶರಣರ ಪಾದವಲ್ಲದೇ ;ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲ ಸಂಗಮ ದೇವಾಎಂದಿದ್ದಾರೆ. ಮೇಲು ನೋಟಕ್ಕೆ ಈ ವಚನ ವಿಚಿತ್ರವೆನಿಸಿದರೂ ಇದರ ಹಿಂದೆ ಒಂದು ಮಹತ್ತರವಾದ ಅರ್ಥವಿದೆ. ಶರೀರದ ಎಲ್ಲ ಅಂಗಾಂಗಳಿಗೆ ಅದರದೇಯಾದ ಚಂಚಲತೆಯಿರುತ್ತದೆ. ಇವೆಲ್ಲವೊ ಮನಸಿನ ಏಕಾಗ್ರತೆಗೆ ಭಂಗ ತರುವಂತಹವು. ಅಂತೆಯೇ ಬಸವಣ್ಣನವರು ಮನಸಿನ ವಿಕಾರಕ್ಕೆ ಕಾರಣವಾದ ಚಂಚಲತೆಯನ್ನು ಮೀರಿ ನಿಲ್ಲಿಸುವಂತೆ ದೇವರಲ್ಲಿ ಮೊರೆಯಿಡುತ್ತಾರೆ. ವಿಕೃತ ಮನಸಿನ ಸ್ತಿತಿಯನ್ನು ಮೀರಿ ಅಂತರಂಗದಲ್ಲಿ ಪರಮಾತ್ಮನ ಸಾಕ್ಷಾತ್ಕಾರ ಹೊಂದುವುದೇ ಅನುಭಾವ. ಇದೊಂದು ಬಾಹ್ಯ ಸೆಳೆತಗಳನ್ನು ಮೀರಿ ನಿಲ್ಲುವ ಮನಸಿನ ಅವಸ್ಥೆ. ಅದನ್ನೇ ಶರಣರು ಅನು ಬಾವ ಎಂಬುದಾಗಿ ಕರೆದಿದ್ದಾರೆ. ಕಾಮ ಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು; ಶಿವಂಗೆ ಮಿಗೆ ಒಲಿದವರನು ನಾನಗಲಲಾರೆನು,ಕಾಣಾ, ಕೂಡಲ ಸಂಗಮ ದೇವಾ ಎಂಬ ಬಸವಣ್ಣ ನವರ ವಚನ ಅನುಭಾವಿಗಳ ಉತ್ತುಂಗ ಮನಸ್ತಿತಿಯನ್ನು ತಿಳಿಸುತ್ತದೆ.
ಶರಣರ ಇಡೀ ಆಧ್ಯಾತ್ಮ ಸಾಧನೆಯ ಅಂತಿಮ ಗುರಿಯೇ ಈ ಮನಸ್ತಿತಿಯನ್ನು ಹೊಂದುವದಾಗಿರುತ್ತದೆ. ಲೋಕದ ಸಾಂಸಾರಿಕ ಜಂಜಡಮೀರಿ ಮಹತ್ತರ ಸಾಧನೆಗೆ ಅನುಭಾವವೇ ಮುಖ್ಯ ಭೂಮಿಕೆಯಾಗಿರಿತ್ತದೆ. ಅನುಭಾವಿಯಾದವರು ಪ್ರಪಂಚದಲ್ಲಿದ್ದರೂ ಅದರ ವಿಕಾಕರಕ್ಕೆ ಒಳಗಾಗದೇ ನಿಶ್ಪ್ರಪಂಚರಾಗಿರುತ್ತಾರೆ. ಕೆಸೆರಿನಲ್ಲರಳಿದ ಕಮಲ ಕೆಸರಿನಿಂದ ಮಲಿನವಾಗದೇ ನಿರ್ಮಲವಾಗಿರುವಂತೆಯೇ, ಅನುಭಾವಿಗಳಾದವರು ಸಂಸಾರದೊಳಗಿದ್ದರೂ ಸಾಂಸಾರಿಕ ಬಂಧನಕ್ಕೊಳಗಾಗದಂತೆ ಜೀವನ್ಮುಕ್ತರಾಗಿರುತ್ತಾರೆ. ಅಂತಹ ಅವಸ್ಥೆ ಪಡೆಯ ಬೇಕಾದರೆ ಅನುಭಾವಿಯಾಗಿರ ಬೇಕು. ಬಸವಣ್ಣ ಅನುಭಾವದ ಉತ್ತುಂಗ ಶಿಖರವೇರಿದ ಮಹಾನುಭಾವಿ. ಅಂತೆಯೇ ಸಕಲ ಸಾಧನೆಯ ಶಿಖರಾರೋಹಿಗಳಾಗಿ ಲೋಕಕ್ಕೆ ಬೆಳಕಾದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
