ಸಿಎಂ ಆಗಿ ಬಸವರಾಜ ಬೊಮ್ಮಾಯಿಪ್ರಮಾಣ ವಚನ ಸ್ವೀಕರಿಸಿ ಮೂರು ದಿನವಾಗುತ್ತಾ ಬಂದಿದೆ. ಇದೀಗ ಬೊಮ್ಮಾಯಿ ಸಂಪುಟಕ್ಕೆ ಸೇರುವ ಬಗ್ಗೆ ಆಕಾಂಕ್ಷಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ಲಾಬಿ ನಡೆಸಿದ್ದಾರೆ. ಹೊಸ ಸಂಫುಟದಲ್ಲಿ ಯಡಿಯೂರಪ್ಪ ಸೂಚಿಸಿದವರಿಗೆ ಸಚಿವ ಸ್ಥಾನ ಸಿಗುತ್ತೋ? ಇಲ್ಲಾ ಹೈಕಮಾಂಡೇ ಪೂರ್ಣ ಕ್ಯಾಬಿನೆಟ್ ನಿರ್ಧಾ ಮಾಡುತ್ತದೋ ಅನ್ನೋದೇ ಕುತೂಹಲಕಾರಿ ಅಂಶವಾಗಿದೆ.
ಬಿಎಸ್​ವೈ ಸೂಚಿಸಿದವರಿಗೆ ಸಿಗುತ್ತಾ ಬಂಪರ್?ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಆಡಳಿತ ಆರಂಭವಾಗಿದೆ. ಕಳೆದ ಎರಡು ತಿಂಗಳು ಕಾಲ ನಡೆದ ನಾಯಕತ್ವ ಗೊಂದಲಕ್ಕೆ ಬ್ರೇಕ್ ಬಿದ್ದಿದ್ದೇ ತಡ, ಬಿಎಸ್​ ಯಡಿಯೂರಪ್ಪ ತಮ್ಮ ಆಪ್ತ ಬಸವರಾಜ ಬೊಮ್ಮಾಯಿರನ್ನೇ ಸಿಎಂ ಆಗುವಂತೆ ನೋಡಿಕೊಂಡಿದ್ದಾರೆ. ಇದರಂತೆ ಬುಧವಾರ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದಾರೆ. ಸಿಎಂ ಜತೆ ಮೂವರು ಡಿಸಿಎಂಗಳು ಕೂಡ ಪ್ರಮಾಣವಚನ ಸ್ವೀಕರಿಸೋ ಬಗ್ಗೆ ಅಂತೆ-ಕಂತೆ ಇತ್ತಾದರೂ, ಶಾಸಕಾಂಗ ಪಕ್ಷ ನಡೆದ ಬಳಿಕ ಈ ಪ್ರಸ್ತಾವನೆ ಬಿಟ್ಟು ಬೊಮ್ಮಾಯಿ ಒಬ್ಬರೇ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹಾಗೆಯೇ ಡಿಸಿಎಂ ಸೇರಿದಂತೆ ಸಂಪುಟ ರಚನೆ ಯಾವಾಗ ಅನ್ನೋ ಕುತೂಹಲವನ್ನು ಬಿಜೆಪಿ ಹೈಕಮಾಂಡ್ ಕಾಯ್ದಿರಿಸಿದೆ.
ಏನೇ ಆದರೂ ಸಂಪುಟ ರಚನೆ ಆಗಲೇಬೇಕಲ್ಲವೇ? ಒಂದು ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ. ಇದರಂತೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗೋಕೆ ಆಕಾಂಕ್ಷಿಗಳ ದಂಡೇ ಇದೆ. ಇದೀಗ ಸಚಿವಾರಾಗಬೇಕು ಅನ್ನೋ ಉಮೇದಿನಲ್ಲಿರೋ ಶಾಸಕರು, ಈಗಾಗಲೇ ಬೊಮ್ಮಾಯಿ ಮೇಲೆ ಒತ್ತಡ ಹೇರೋ ಪ್ರಕ್ರಿಯೆ ಶುರು ಮಾಡಿದ್ದಾರೆ. ಇದೆಲ್ಲದಕ್ಕಿಂತ ಮುಂಚೆ ಎದ್ದಿರೋ ಪ್ರಶ್ನೆ ಏನೆಂದರೆ, ಇಲ್ಲಿ ಬಿಎಸ್ ಯಡಿಯೂರಪ್ಪ ಸೂಚಿಸಿದವರಿಗೆ ಮಂತ್ರಿಗಿರಿ ಸಿಗುತ್ತೋ? ಇಲ್ಲಾ ಹೈಕಮಾಂಡ್​ ಲಿಸ್ಟ್​​ನಲ್ಲಿರೋ ಶಾಸಕರಿಗೆ ಮಾತ್ರ ಸಚಿವಗಿರಿ ಸಿಗ್ಗುತ್ತಾ? ಎನ್ನುವುದು.
ಇದೇ ಗೊಂದಲ ಬಿಜೆಪಿ ಪಾಳಯದಲ್ಲಿ ಗಿರಗಿಟ್ಟಲೆ ಹೊಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಆಪ್ತನಿಗೇ ದೊರಕಿಸಿಕೊಡುವಲ್ಲಿ ಬಿಎಸ್ ಯಡಿಯೂರಪ್ಪ ಸಕ್ಸಸ್ ಆಗಿದ್ದಾರೆ. ಹೀಗಾದ ಮೇಲೆ ಯಡಿಯೂರಪ್ಪ ಮಾತೇ ಸಂಪುಟದಲ್ಲಿ ಫೈನಲ್ ಅಂತಾ ಭಾವಿಸಿರೋ ಶಾಸಕರ ಸಂಖ್ಯೆ ಏನು ಕಮ್ಮಿ ಇಲ್ಲ. ಹೀಗಾಗಿಯೇ ಬಿಎಸ್​​ ಯಡಿಯೂರಪ್ಪ ಶಿಫಾರಸ್ಸು ಮಾಡಿದವರಿಗೆ ಮಂತ್ರಿಗಿರಿ ಶತಸಿದ್ಧ ಅನ್ನೋದು ಬಹಳಷ್ಟು ಶಾಸಕರ ವಿಶ್ವಾಸ. ಅದರಲ್ಲೂ ಈ ಬಿಎಸ್ ಯಡಿಯೂರಪ್ಪ ಬೆಂಬಲಿಗ ಶಾಸಕರ ನಂಬಿಕೆ. ಯಾವಾಗ ಬಿಎಸ್​ವೈ ರಾಜೀನಾಮೆ ಕೊಡೋ ಮೂಲಕ ಸಂಘರ್ಷಕ್ಕೆ ಒತ್ತುಕೊಡಲಿಲ್ವೋ..ಹೈಕಮಾಂಡ್ ಕೂಡ ಸರ್ಕಾರದ ಜವಾಬ್ದಾರಿಯನ್ನ ಬಿಎಸ್​ವೈ ಕೈಗೆ ಕೊಟ್ಟಿರಬಹುದು ಅನ್ನೋದು ಕೆಲ ಶಾಸಕರ ವಿಶ್ವಾಸ. ಎಷ್ಟಾದರೂ ಯಡಿಯೂರಪ್ಪ ಸೂಚಿಸಿದ ಬೊಮ್ಮಾಯಿಗೇ ಸಿಎಂ ಪಟ್ಟ ಕಟ್ಟಿರೋ ಹೈಕಮಾಂಡ್, ಹೊಸ ಸಂಪುಟ ಬಗ್ಗೆಯೂ ಯಡಿಯೂರಪ್ಪ ತೀರ್ಮಾನ ಅಂತಿಮ ಅಂತಾ ಫ್ರೀ ಹ್ಯಾಂಡ್ ಕೊಡುತ್ತಾ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದೆ.
ಹೇಳಿ ಕೇಳಿ ಅಧಿಕಾರದಲ್ಲಿರಲಿ, ಬಿಡಲಿ ರಾಜಾಹುಲಿ..ರಾಜಾಹುಲಿಯೇ.! ಬಿಜೆಪಿಗೆ ಬಿಎಸ್​ವೈ ಆಧಾರಸ್ಥಂಭ ಅನ್ನೋದು ನಿರ್ವಿವಾದ. ಎಷ್ಟೇ ಆದ್ರೂ ಪಕ್ಷವನ್ನ ಬಲಪಡಿಸೋಕೆ ಜಾತಿವಾರು, ಪ್ರದೇಶಾವಾರು, ಹಿರಿತನವಾರು ಪರಿಗಣನೆ ಮೂಲಕ ಮಂತ್ರಿಮಂಡಲ ರಚಿಸುವುದು ವಾಡಿಕೆ. ಸದ್ಯ ಬಿಜೆಪಿಯಲ್ಲಿನ ಗೊಂದಲ ಪರಿಹಾರವಾದಂತೆ ಕಾಣುತ್ತಿದೆ. ಈಗ ಬಿಜೆಪಿ ತನ್ನ ಪೂರ್ಣ ಲಕ್ಷ್ಯವನ್ನು ಕೊಟ್ಟಿರೋದು ದಕ್ಷ ಆಡಳಿತ ಮೂಲಕ ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ಕಡೆಗೆ, ಆನಂತರದ ವಿಧಾನಸಭಾ ಚುನಾವಣೆ ಕಡೆಗೆ ಮತ್ತು ಆ ಬಳಿಕದ ಲೋಕಸಭಾ ಎಲೆಕ್ಷನ್​​ನಲ್ಲಿ ಪಕ್ಷಕ್ಕೆ ಲಾಭಕರ ಆಗುವ ರೀತಿ ಆಡಳಿತದತ್ತ. ಇದೇ ಈಗ ಬಿಜೆಪಿ ಎದುರಿಗಿರೋ ಗುರಿ.
ಪಕ್ಷದಲ್ಲಿನ ಕೆಲ ಹಿರಿಯರ ವಾದದ ಪ್ರಕಾರ ಯಾವುದು ಏನಾದ್ರೂ ಆಗ್ಲಿ..ಬಿಜೆಪಿ 2023ರ ಎಲೆಕ್ಷನ್​​ನಲ್ಲಿ ಮತ್ತೆ ಅಧಿಕಾರಕ್ಕೇರಲೇಬೇಕು ಅನ್ನೋದಷ್ಟೇ ಕಮಲ ಸಂಕಲ್ಪ. ರಾಜಾಹುಲಿ ಬಿ.ಎಸ್ ಯಡಿಯೂರಪ್ಪ ನೆರವಿಲ್ಲದೆಯೇ ಇದು ಅಸಾಧ್ಯ ಎಂಬುದು ಪಕ್ಷದ ವರಿಷ್ಟರಿಗೂ ಗೊತ್ತು. ಸಿಎಂ ಸ್ಥಾನದಿಂದ ಬಿಎಸ್ವೈರನ್ನ ಕೆಳಗಿಳಿಸೋ ಮೂಲಕ ಹೈಕಮಾಂಡ್​​, ಪಕ್ಷದಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲ ಅನ್ನೋ ಸಂದೇಶ ರವಾನಿಸಬೇಕಿತ್ತು. ಈಗ ಅದಾಗಿದೆ. ಇಲ್ಲಿ ಹಠ ಸಾಧಿಸೋದ್ರಲ್ಲಿ ಸಕ್ಸಸ್ ಆದ ಬಿಜೆಪಿಗೆ ಬಿಎಸ್​ವೈ ಜತೆಗಿನ ನಂಟನ್ನು ಕಟ್ ಮಾಡಿ ಕೊಳ್ಳೋಕೆ ಸುತಾರಾಂ ಇಷ್ಟವಿಲ್ಲ. ವಿಘ್ನ ಸಂತೋಷಿಗಳು ಎಷ್ಟೇ ಕೀ ಕೊಟ್ಟರೂ, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕರ್ನಾಟಕದ ಚಿತ್ರಣ, ಕಂಪ್ಲೀಟ್ ಚೇಂಜ್ ಇದೆ ಎಂಬ ಸತ್ಯ ಮೋದಿ-ಷಾಗೆ ಗೊತ್ತು. ಇದರಿಂದಲೇ ಬಿಎಸ್​ವೈಗೆ ಈ ಜೋಡಿ ಬಹುಪರಾಕ್ ಅನ್ನುತ್ತಿರೋದು.!
ಹೀಗಾಗಿಯೇ ಬಿಎಸ್​ವೈ ಸೂಚಿಸಿದಂತೆ ಬೊಮ್ಮಾಯಿರನ್ನ ಸಿಎಂ ಗಾದಿಯಲ್ಲಿ ಕೂರಿಸಿದ ಬಿಜೆಪಿ ಹೈಕಮಾಂಡ್​, ಸಂಪುಟ ರಚನೆ ವೇಳೆ ಯೂ ಬಿಎಸ್​ ಯಡಿಯೂರಪ್ಪ ಮಾತಿಗೆ ಮನ್ನಣೆ ಕೊಡೋ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ. ಸಂಪುಟದಲ್ಲಿ ಪೂರ್ಣ ಬಿಎಸ್​ವೈ ಹೇಳಿ ದಂತೆಯೇ ಆಗೋಕೆ ಸಾಧ್ಯವಿಲ್ಲ ನಿಜ..ಆದ್ರೂ, ಬಿಎಸ್​ವೈ ಸೂಚಿಸೋ ಗಣನೀಯ ಪ್ರಮಾಣದ ಶಾಸಕರಿಗೆ ಮಂತ್ರಿಗಾದಿ ಕೊಡೋಕೆ ವರಿಷ್ಠರು ತಕರಾರು ಮಾಡೋದು ಡೌಟ್. ಇದಲ್ಲದೇ, ಈಗಷ್ಟೇ ಸಿಎಂ ಪಟ್ಟಕ್ಕೇರಿರೋ ಬಸವರಾಜ ಬೊಮ್ಮಾಯಿ ಕೂಡ ತಮ್ಮ ಗುರು, ಅನುಭವೀ ನಾಯಕ ಬಿಎಸ್ ಯಡಿಯೂರಪ್ಪ ಸಲಹೆ ಪಡೆಯದೇ ಹೊಸ ಸಚಿವ ಸಂಪುಟ ರಚನೆಗೆ ಕೈಹಾಕಲಾರರು! ತಮಗೆ ಕನ್ವಿನ್ಸ್ ಆದ ಕೆಲ ಶಾಸಕರಿಗೆ ಸ್ವಂತ ತೀರ್ಮಾನದಂತೆ ಸಚಿವ ಗಿರಿ ಕೊಡೋಕೆ ನೋ ಪ್ರಾಬ್ಲಂ. ಆದ್ರೂ ಯಡಿಯೂರಪ್ಪ ಲಿಸ್ಟ್​ ಅನ್ನೂ ಪರಿಗಣಿಸಿಯೇ ಸಂಪುಟ ರಚನೆಗೆ ಬೊಮ್ಮಾಯಿ ಮುಂದಡಿ ಇಡ ಬಹುದು ಅನ್ನೋದು ರಾಜಕೀಯ ವಲಯದ ಹಿರಿಯರ ತರ್ಕ.
‘ರಿಮೋಟ್’ ಕೈಲಿ ಹಿಡಿಯುತ್ತಾ ಹೈಕಮಾಂಡ್?ಇನ್ನೊಂದು ಮೂಲದ ಪ್ರಕಾರ, ಸಿಎಂ ಗಾದಿಯನ್ನ ಬಿಎಸ್​ವೈ ಹೇಳಿದವರಿಗೆ ನೀಡಿದ್ರೂ, ಈ ಹಿಂದೆ ಮೂಗುದಾರ ಕೈಲಿ ಹಿಡಿದಂತೆ ಈ ಸಲವೂ ರಿಮೋಟ್ ಅನ್ನ ತಾನೇ ಕಂಟ್ರೋಲ್ ಮಾಡಲಿದೆ. ನಿಮಗೆ ನೆನಪಿರಬಹುದು, ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತಿಂಗಳು ದಾಟಿದ್ರೂ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅವಕಾಶವನ್ನೇ ನೀಡಲಿಲ್ಲ. ಪ್ರವಾಹ ಸಂಕಷ್ಟದ ಸಂದರ್ಭದಲ್ಲೂ ಬಿಎಸ್​ವೈ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ರಾಜ್ಯವನ್ನ ಸುತ್ತಾಡಬೇಕಾಯ್ತು. ಆನಂತರ ಬಿಎಸ್​ವೈ ಸಂಫುಟ ವಿಸ್ತರಣೆಯಲ್ಲೂ, ಅನಿರೀಕ್ಷಿತ ಆಯ್ಕೆ ಎಂಬಂತೆ ಮೂವರು ಡಿಸಿಎಂಗಳ ನೇಮಕ ಮಾಡಲಾಯಿತು. ಅದರಲ್ಲೂ ಎಲೆಕ್ಷನ್ ಸೋತಿದ್ದ ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ಕೊಡೋ ಮೂಲಕ ಬಿಎಸ್​ವೈಗೆ ತಮ್ಮ ಸಮುದಾಯದಲ್ಲೇ ಪರ್ಯಾಯ ಎಂಬಂತೆ ಚೆಕ್​ಮೇಟ್ ಇಡಲಾಯಿತು. ಆದ್ರೆ, ಹುಲಿ ಹುಲಿಯೇ ಎಂಬುದನ್ನ ಯಡಿಯೂರಪ್ಪ ನಿರೂಪಿಸಿದ್ದು, ಹೈಕಮಾಂಡ್​ ಇಟ್ಟ ಪಾನ್​​​ಗಳೆಲ್ಲಾ ಠುಸ್ ಪಟಾಕಿಗಳಾಗಿದ್ದು ಇತಿಹಾಸ.
ಆದ್ರೂ ಬಿಎಸ್​ವೈರನ್ನು ಕಂಟ್ರೋಲ್​​ ಮಾಡದಿದ್ರೆ ಪಕ್ಷದ ಹಿಡಿತ ತಪ್ಪೋದು ಫಿಕ್ಸ್ ಅನ್ನೋ ನಿರ್ಣಯಕ್ಕೆ ಏನಾದ್ರೂ ಹೈಕಮಾಂಡ್ ಬಂದ್ರೆ, ಬೊಮ್ಮಾಯಿ ನೂತನ ಸಂಪುಟದಲ್ಲಿ ಕೈಯಾಡಿಸಬಹುದು. ನೋಡಿ..ಈಗ ನೀವು ಹೇಳಿದಂತೆಯೇ ಸಿಎಂ ಮಾಡಿದ್ದೇವೆ. ಸಂಪುಟದ ಬಗ್ಗೆ ತೀರಾ ತಲೆಕೆಡಿಸಿಕೊಳ್ಳಬೇಡಿ ಅಂತಾ ಬಿಎಸ್​ವೈಗೆ ಹೈಕಮಾಂಡ್ ಸೂಚಿಸಬಹುದು. ಈ ಸಂಭಾವ್ಯತೆ ಕಷ್ಟವಾದ್ರೂ..ದೆಹಲಿ ಮಟ್ಟದಲ್ಲಿ ಬಿಎಸ್​ವೈ ವಿರೋಧಿಗಳು ಕೂಡ ತಮ್ಮದೇ ಆದ ಪ್ರಭಾವ ಹೊಂದಿರೋದನ್ನ ನಿರಾಕರಿಸುವಂತಿಲ್ಲ. ಬಿಎಸ್​ವೈಗೆ ಲಗಾಮು ಹಾಕೋಕೆ, ಪಕ್ಷನಿಷ್ಠರ ಹೆಸರಿನಲ್ಲಿ ಕೆಲವು ಅನಿರೀಕ್ಷಿತ ಹೆಸರುಗಳು ಸಂಪುಟದೊಳಗೆ ಇಣುಕಿದ್ರೂ ಅಚ್ಚರಿಪಡಬೇಕಿಲ್ಲ.
ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಬಹುದು ಅನ್ನೋ ಬಗ್ಗೆ ನಾನಾ ವ್ಯಾಖ್ಯಾನ ಕೇಳಿಬರುತ್ತಿವೆ. ಈ ಹೊತ್ತಿನಲ್ಲಿ ಬೊಮ್ಮಾಯಿ ಸಂಪುಟ ರಚನೆ ಸಂದರ್ಭದಲ್ಲಿ ಮಧ್ಯಪ್ರವೇಶಿಸೋದಿಲ್ಲ ಅಂತಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗೆಯೇ ಮಂತ್ರಿಗಿರಿಗಾಗಿ ತಮ್ಮನ್ನ ಕಾಣಲು ಬರಬೇಡಿ ಅಂತಾ ಕೂಡ ಬಿಎಸ್​ವೈ ಹುಕುಂ ಮಾಡಿದ್ದಾರೆ. ಇದಲ್ಲದೇ, ವಲಸಿಗರಿಗೆ ಕೂಡ ಅಭಯ ಕೊಟ್ಟ ಬಿಎಸ್​ವೈ, ಡೋಂಟ್ ವರಿ ಎಂದಿದ್ದಾರೆ.
ಸಂಪುಟ ಎಂಟ್ರಿಗೆ ಶಾಸಕರ ನಾನಾ ಕಸರತ್ತು!ರಾಜ್ಯದಲ್ಲಿ ಬೊಮ್ಮಾಯಿ ದರ್ಬಾರ್ ಆರಂಭವಾಗಿ ಎರಡು ದಿನ ಕಳೆದಿದೆ. ಇದೀಗ ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಇಂಥಾ ಹೊತ್ತಿನಲ್ಲಿ ಸಂಪುಟ ಸೇರೋಕೆ ಕಮಲ ಪಕ್ಷದಲ್ಲಿ ಆಕಾಂಕ್ಷಿಗಳ ಲೆಕ್ಕ ದಿನೇದಿನೇ ಹೆಚ್ಚು ತ್ತಲೇ ಇದೆ. ಇಲ್ಲಿ ಹೈಕಮಾಂಡ್​ ಏನು ಹೇಳುತ್ತೋ ಅನ್ನೋದನ್ನ ಕೇಳೋದಕ್ಕೆ ಖುದ್ದು ಬೊಮ್ಮಾಯಿಯೇ ದೆಹಲಿ ಟೂರ್​ಗೆ ಮುಂದಾಗಿ ದ್ದಾರೆ. ಹೇಗಿದ್ರೂ ಮೋದಿ-ಅಮಿತ್ ಷಾ, ಜೆಪಿ ನಡ್ಡಾ ಹಾಗೂ ರಾಜನಾಥ್ ಸಿಂಗ್​ಗೆ ಥ್ಯಾಂಕ್ಸ್ ಹೇಳಲು ದೆಹಲಿಗೆ ತೆರಳುತ್ತಿರೋ ಬೊಮ್ಮಾಯಿ, ಇದೇ ಸಂದರ್ಭ ಅಥವಾ ಮುಂದಿನ ಭೇಟಿ ವೇಳೆ ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್​​ ಪರ್ಮಿಷನ್ ಕೇಳೋ ಸಂಭವ ಇದೆ. ಇನ್ನೊಂದೆಡೆ, ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗೆಗಿನ ಕಸರತ್ತು ಬಿರುಸುಗೊಂಡಿದೆ. ಈ ನಿಟ್ಟಿನಲ್ಲಿ ಯಾರನ್ನ ಸಂಪುಟಕ್ಕೆ ತೆಗೆದುಕೊಂಡ್ರೆ ಬೆಸ್ಟ್ ಅಂತಾ ಸಿಎಂ ಬೊಮ್ಮಾಯಿ ಕೂಡ ಎಲ್ಲಾ ಕೋನಗಳಿಂದಲೂ ಅಳೆದೂ ತೂಗೋ ಕಾರ್ಯ ನಡೆಸಿದ್ದಾರೆ. ಈ ಮಧ್ಯೆ ಸಂಪುಟ ರಚನೆ ಸಂದರ್ಭದಲ್ಲಿ ಬಿಎಸ್​ ಯಡಿಯೂರಪ್ಪ ನಿವಾಸಕ್ಕೆ ಶಾಸಕರ ದಂಡೇ ದಾಂಗುಡಿ ಇಡುತ್ತಿದೆ. ತಮಗೆ ಈ ಸಲ ಅವಕಾಶ ಮಾಡಿಕೊಡಿ ಅಂತಾ ಶಾಸಕರು ಬಿಎಸ್​ವೈ ಬಳಿ ಶಾಸಕರು ತಮ್ಮದೇ ಆದ ಅರ್ಹತೆ, ಕೋಟಾ ಮುಂದಿಟ್ಟು ಅಲವತ್ತುಕೊಳ್ತಿದ್ದಾರೆ. ಕೊನೆಗೆ ಶಾಸಕರ ಒತ್ತಡದಿಂದ ರೋಸಿಹೋದ ಬಿಎಸ್ ಯಡಿಯೂರಪ್ಪ, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡೋಕೆ ಬರೋದು ಬೇಡ ಅಂತಾ ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಆದ್ರೂ ತಮ್ಮ ಆಪ್ತ ಬಸವರಾಜ ಬೊಮ್ಮಾಯಿಗೆ ಒಳ್ಳೆಯ ಸಚಿವರ ಟೀಂ ಕಟ್ಟಿಕೊಡೋಕೆ ಬಿಎಸ್​ವೈ ಕೂಡ ತಮ್ಮದೇ ಆದ ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮೊದಲ ಬಾರಿಗೆ ಬಿಎಸ್ವೈ ಆರ್​​ಎಸ್​ಎಸ್​ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಬುಧವಾರವಷ್ಟೇ ಬಿಎಸ್​ವೈ ನಿವಾಸ ಕಾವೇರಿಗೆ ಭೇಟಿಯಾಗಿದ್ದ ಆರ್​ಎಸ್​ಎಸ್​ ಮುಖಂಡ ಮುಕುಂದ್, ಕಚೇರಿಗೆ ಆಗಮಿಸುವಂತೆ ಆಹ್ವಾನ ಕೊಟ್ಟ ಬೆನ್ನಲ್ಲೇ ಒಂದೇ ದಿನದಲ್ಲಿ ಯಡಿಯೂರಪ್ಪ ಕೇಶವಕೃಪಾಗೆ ಧಾವಿಸಿದ್ದಾರೆ. ಏಳು ತಿಂಗಳ ಬಳಿಕ ಆರ್​ಎಸ್​ಎಸ್​ ಕಚೇರಿಗೆ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಸೇರಿದಂತೆ ಪ್ರಚಲಿತ ಸಂಗತಿಗಳ ಬಗ್ಗೆ ಆರ್​ಎಸ್​ಎಸ್ ನಾಯಕರೊಂದಿಗೆ ಬಿಎಸ್​ವೈ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ. ಇದಕ್ಕೂ ಮುನ್ನ, ಗುರುವಾರ ಕೂಡ ಸಿಎಂ ಬಿಎಸ್​ವೈ ನಿವಾಸಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಕೆಲಕಾಲ ಸಮಾಲೋಚನೆ ನಡೆಸಿದ್ದಾರೆ. ದೆಹಲಿ ಭೇಟಿ ಹಾಗೂ ಸಂಪುಟ ವಿಸ್ತರಣೆ ಸಂಬಂಧ ಗುರು ಬಿಎಸ್​ವೈ ಜತೆ ಸಿಎಂ ಬೊಮ್ಮಾಯಿ ಸಮಾಲೋಚಿಸಿದರು ಎಂದು ಹೇಳಲಾಗಿದೆ.
ಹೊಸ ಸಂಪುಟದಲ್ಲಿ ಚಾನ್ಸ್ ಸಿಗುತ್ತೋ ಇಲ್ವೋ ಎಂಬ ಟೆನ್ಷನ್​ನಲ್ಲಿ ವಲಸಿಗ ಮಾಜಿ ಸಚಿವರಿದ್ದಾರೆ. ಈಗಾಗಲೇ ಕೆಲವರು ಬೊಮ್ಮಾಯಿ, ಬಿಎಸ್​ವೈ ನಿವಾಸದತ್ತ ಸುತ್ತು ಹಾಕಿದ್ರೆ, ಇನ್ನೂ ಕೆಲ ವಲಸಿಗರು ದೆಹಲಿ ಮೂಡ್​ನಲ್ಲಿದ್ದಾರೆ. ಇನ್ನೊಂದೆಡೆ, ವಲಸಿಗರಿಗೆ ಸಚಿವ ಸ್ಥಾನ ಕೊಡೋ ಬಗ್ಗೆ ಬೊಮ್ಮಾಯಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಅನ್ನೋ ಮೂಲಕ ಬಿಎಸ್​ವೈ ವಲಸಿಗರಿಗೆ ಅಭಯ ಕೊಟ್ಟಿದ್ದಾರೆ. ಮತ್ತೊಂದೆಡೆ, ತಾವು ಬೊಮ್ಮಾಯಿ ಸಚಿವ ಸಂಪುಟ ಸೇರೋದಿಲ್ಲ ಅಂತಾ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪುನರುಚ್ಛರಿಸಿದ್ದಾರೆ.
ಈ ಹಿಂದೆ ತಾವು ಯಡಿಯೂರಪ್ಪ ಸಂಪುಟದಲ್ಲಿ ಕಾರ್ಯನಿರ್ವಹಿಸಿದ ಕಾರಣ, ಸಿಎಂ ಆದ ಬಳಿಕವೂ ತಾವು ಬಿಎಸ್​ವೈ ಸಂಪುಟ ಸೇರಿದ್ದೆ. ಆದ್ರೆ, ಬೊಮ್ಮಾಯಿ ಸಂಪುಟದಲ್ಲಿ ಕೆಲಸ ಮಾಡೋಕೆ ಮುಜುಗರ ಆಗೋದನ್ನ ಜಗದೀಶ್ ಶೆಟ್ಟರ್ ದಿಗ್ವಿಜಯ ನ್ಯೂಸ್ ಜತೆ ಬಿಚ್ಚಿಟ್ಟಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡೋಕೆ ಜಗದೀಶ್ ಶೆಟ್ಟರ್ ಸಚಿವಸ್ಥಾನ ಬೇಡ ಎಂದಿದ್ದಾರೆ. ಶೆಟ್ಟರ್ ನಿರ್ಣಯವನ್ನ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಸಿಎಂ ಅನೌನ್ಸ್ ದಿನವೇ ತಮ್ಮ ಹೆಸರನ್ನ ಡಿಸಿಎಂ ಆಗಿ ಪ್ರಕಟಿಸಲಿಲ್ಲ ಅಂತಾ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದ ಹಿರಿಯ ನಾಯಕ ಬಿ ಶ್ರೀರಾಮುಲು, ಇದು ಸುಳ್ಳು ಎಂದಿದ್ದಾರೆ. ತಮಗೆ ಯಾವುದೇ ಹುದ್ದೆ ಕೊಟ್ರೂ ನಿಭಾಯಿಸೋದಾಗಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಬೊಮ್ಮಾಯಿ ಸಂಪುಟ ಸೇರ್ಪಡೆ ಬಗ್ಗೆ ಸಚಿವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನ, ಕೆಲ ಶಾಸಕರ ವಾದ ಗಮನ ಸೆಳೆಯುತ್ತಿದೆ. ಇನ್ನೂ ಲೇಟ್ ಆದ್ರೆ, 75 ವರ್ಷ ದಾಟುತ್ತೆ. ಆಗ ಮಂತ್ರ್ರಿಗಿರಿ ಕೇಳೋ ಅರ್ಹತೆಯೇ ಇಲ್ಲದಂತಾಗಲಿದೆ. ಅಷ್ಟರೊಳಗೆ ಸಚಿವ ಸ್ಥಾನ ಕೊಡಿ ಅಂತಾ ಹಿರಿಯ ಶಾಸಕರು ನಾಯಕರ ದಂಬಾಲು ಬೀಳ್ತಿದ್ದಾರೆ.
ರಾಜ್ಯದಲ್ಲಿ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿ ಮೂರು ದಿನ ಆಗಿದೆ. ಇದೀಗ ಸಚಿವರು ಯಾರು ಎಂಬುದೇ ಸಸ್ಪೆನ್ಸ್ ಎನಿಸಿದೆ. ಡಿಸಿಎಂ ಸ್ಥಾನ ಎಷ್ಟು? ಕಳೆದ ಸಲದಂತೆ ಮೂವರು ಡಿಸಿಎಂಗಳಿರಲಿದ್ದಾರಾ?ಇಲ್ಲಾ ನಾಲ್ಕು ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡೋ ಮೂಲಕ ಸಾಮಾಜಿಕ ನ್ಯಾಯದ ಮಂತ್ರವನ್ನ ಬಿಜೆಪಿ ಪಠಿಸುತ್ತಾ? ಇಂಥಾ ಹಲವು ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಸಚಿವಾಕಾಕಾಂಕ್ಷೆ ಹೊತ್ತ ಕೆಲ ಹಿರಿಯರು ತಮ್ಮದೇ ಆದ ವಾದ ಮುಂದಿಡುತ್ತಿದ್ದಾರೆ. ಲಾಸ್ಟ್ ಚಾನ್ಸ್ ಕೊಡಲಿ ಅನ್ನೋ ಇರಾದೆಯಲ್ಲಿ ಈ ಸಚಿವರಿದ್ರೆ, ಮಾಜಿ ಸಚಿವ, ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಕೂಡ ಕೊಟ್ಟರೆ ಓಕೆ, ಇಲ್ಲದಿದ್ರೂ ನೋ ಪ್ರಾಬ್ಲಂ ಅನ್ನೋ ಧಾಟಿಯಲ್ಲಿದ್ದಾರೆ. ಡಿಸಿಎಂ ಹುದ್ದೆಗಾಗಿ ಕುರುಬ ಸಮುದಾಯದ ಸ್ವಾಮೀಜಿಗಳು ಒತ್ತಾಯ ಮಾಡಿದ ನಡುವೆ, ತಮಗೆ ಸಚಿವ ಸ್ಥಾನ ಕೊಟ್ರೆ ಆಡಳಿತ ನಡೆಸೋದಾಗಿ ಹೇಳಿದ್ದಾರೆ. ಒಂದು ವೇಳೆ ಮಂತ್ರಿಗಿರಿ, ಕೊಡದಿದ್ರೂ ಬೇಸರವಿಲ್ಲ ಅಂತಾ ಕೆಎಸ್ ಈಶ್ವರಪ್ಪ ಡಿಫೆನ್ಸ್ ಆಡಿದ್ದಾರೆ. ಇನ್ನೊಂದೆಡೆ, ಡಿಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಲಾಬಿ ಜೋರಾಗತೊಡಗಿದೆ. ಆರ್ ಅಶೋಕ್ ಸೇರಿದಂತೆ ಕೆಲವು ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ. ವಲಸಿಗ ಶಾಸಕ ಮುನಿರತ್ನ ಕೂಡ ದಿಲ್ಲಿ ಫ್ಲೈಟ್ ಹತ್ತಿದ್ದಾರೆ. ಇದಲ್ಲದೇ, ಬಿಎಸ್​ವೈ ಆಡಳಿತ ವೇಳೆಯೇ ಪರೀಕ್ಷೆ ಬರೆದಿದ್ದೇನೆ ಎಂದಿದ್ದ ಸಿಪಿ ಯೋಗೇಶ್ವರ್ ಕೂಡ ತಮ್ಮದೇ ಆದ ಸಂಪರ್ಕಗಳ ಮೂಲಕ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಇನ್ನ, ಸಿಎಂ ಆಕಾಂಕ್ಷಿಯಾಗಿದ್ದ ಅರವಿಂದ್ ಬೆಲ್ಲದ್​ಗೆ ಸಚಿವ ಸ್ಥಾನ ಸಿಗುತ್ತಾ ಅನ್ನೋದು ಕೂಡ ರಹಸ್ಯವಾಗೇ ಉಳಿದಿದೆ.
ಇನ್ನೊಂದೆಡೆ, ಶೇ. 60 ರಷ್ಟು ಹಳಬರಿಗೆ ಚಾನ್ಸ್..ಶೇ. 40ರಷ್ಟು ಹೊಸಮುಖಗಳಿಗೆ, ಅವಕಾಶವಂಚಿತರಿಗೆ ಏಕೆ ಚಾನ್ಸ್ ಕೊಡಬಾರದು ಎಂಬ ವಾದ ಕೂಡ ಕಮಲ ವಲಯದಲ್ಲಿ ಹೊಸದಾಗಿ ಕೇಳಿಬರುತ್ತಿದೆ ಎನ್ನಲಾಗಿದೆ. ಹೀಗಾದ್ರೆ, ಕಳೆದ ಸಂಪುಟ ದಲ್ಲಿದ್ದ 12ಕ್ಕೂಮಂದಿ ಔಟ್ ಆಗೋದು ಖಚಿತ. ಏನೇ, ಆಗಿಲಿ ನಮಗೂ ಒಂದು ಅವಕಾಶ ಕೊಡಿ ಅನ್ನೋ ಆಕಾಂಕ್ಷಿಗಳ ಲೆಕ್ಕ ಮಾತ್ರ ದೊಡ್ಡದಾಗುತ್ತಲೇ ಇದೆ. ಒಟ್ಟಾರೆ, ಹೇಳಬೇಕೆಂದ್ರೆ, ಅಚ್ಚರಿ ಆಯ್ಕೆಗಳಿಗೆ ಬಿಜೆಪಿ..ಅದರಲ್ಲೂ ಮೋದಿ-ಅಮಿತ್ ಷಾ ಜೋಡಿ ಫೇಮಸ್. ಈ ಹಿಂಎ ಕೆಲವು ರಾಜ್ಯಗಳಲ್ಲಿ ಅಚ್ಚರಿ ಎನಿಸೋ ಮುಖಗಳಿಗೆ ಸಿಎಂ ಸೀಟ್ ಕೊಟ್ಟ ಉದಾಹರಣೆ ಹಲವು ಇವೆ. ಇಷ್ಟು ಮಾತ್ರವಲ್ಲ, ಲೇಟೆಸ್ಟ್ ಎಂಬಂತೆ ಮೋದಿ ಸಂಪುಟ ಸರ್ಜರಿ ವೇಳೆಯೂ ಯಾರೂ ಊಹಿಸದ ಲೀಡರ್​ಗಳನ್ನ ಮೋದಿ ಗುರುತಿಸಿದ್ದಾರೆ. ಹೀಗಾಗಿ ಇದೇ ಸೂತ್ರವನ್ನೇನಾದ್ರೂ ಮೋದಿ-ಷಾ ರಾಜ್ಯಕ್ಕೂ ಅಡಾಪ್ಟ್ ಮಾಡಿಕೊಂಡ್ರೆ, ಕಾದಿದೆ ಸರ್​ಪ್ರೈಸ್.! ಯಾರ್ಯಾರಿಗೆ ಕಾದಿದ್ಯೋ ಲಕ್?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
