ಬೆಂಗಳೂರು: ಮುಂದಿನ ತಿಂಗಳಿಂದ ಜಾರಿಗೊಳಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ‘ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ- 2020’ಕ್ಕೆ ಸೂಕ್ತ ತಿದ್ದುಪಡಿ ತಂದು ಆನಂತರವೇ ಜಾರಿಗೊಳಿಸಲಾಗುವುದು ಎಂದು ಮೇಯರ್ ಎಂ. ಗೌತಮ್ ಕುಮಾರ್ ಭರವಸೆ ನೀಡಿದ್ದಾರೆ.
ಗಬ್ಬರ್ ಸಿಂಗ್ ಟ್ಯಾಕ್ಸ್  ಕುರಿತು ಚಕಮಕಿ
ಸಭೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ವಿಷಯ ಪ್ರಸ್ತಾಪಿಸಿ, ತ್ಯಾಜ್ಯ ನಿರ್ವಹಣೆ ತೆರಿಗೆ ವಿಧಿಸುತ್ತಿರುವುದಕ್ಕೆ ಕಾರಣವೇನು? ಇದೇನು ಗಬ್ಬರ್ ಸಿಂಗ್ ತೆರಿಗೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಮಾತಿಗೆ ಕೆರಳಿದ ಆಡಳಿತ ಪಕ್ಷ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿ, ತ್ಯಾಜ್ಯದ ಕರ ವಿಧಿಸುವ ಬಗ್ಗೆ ಚರ್ಚೆ ನಡೆಸುವುದು ಅನಗತ್ಯ. ಪೂರ್ಣ ಚರ್ಚೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಅಲ್ಲಿಯವರೆಗೂ ಕರ ಅನುಷ್ಠಾನಕ್ಕೆ ಬರುವುದಿಲ್ಲ ಎಂದರು. ಆದರೂ, ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಶುಕ್ರವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ವಿಷಯ ಪ್ರಸ್ತಾಪಿಸಿ, ಸಾರ್ವಜನಿಕರು ಈಗಾಗಲೇ ಆಸ್ತಿ ತೆರಿಗೆ ಜತೆಗೆ ಶೇ.2 ತ್ಯಾಜ್ಯ ಉಪಕರ ಪಾವತಿಸುತ್ತಿದ್ದಾರೆ. ಈಗ ಹೊಸ ಉಪನಿಯಮ ಜಾರಿಗೊಂಡರೆ ಮಾಸಿಕ ಪ್ರತಿ ಮನೆಗೆ 200 ರೂ. ಹಾಗೂ ಉದ್ಯಮಗಳಿಗೆ 500 ರೂ.ನಿಂದ 6 ಸಾವಿರ ರೂ.ವರೆಗೆ ತ್ಯಾಜ್ಯ ಕರ ವಿಧಿಸಲಾಗುತ್ತದೆ. ಈಗಾಗಲೇ ಲಾಕ್​ಡೌನ್ ಜಾರಿಯಿಂದ ಜನರು ಉದ್ಯೋಗವಿಲ್ಲದೇ ಹಾಗೂ ಉದ್ಯಮಗಳನ್ನು ನಡೆಸಲಾಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಮಾಸಿಕ ತೆರಿಗೆ ಪಾವತಿ ಹೊರೆಯಾಗಲಿದ್ದು, ತ್ಯಾಜ್ಯ ನಿರ್ವಹಣಾ ಉಪನಿಯಮವನ್ನು ರದ್ದುಗೊಳಿಸಬೇಕು ಆಗ್ರಹಿಸಿದರು.ಆಗ ಪ್ರತಿಕ್ರಿಯಿಸಿದ ಗೌತಮ್ ಕುಮಾರ್, ಘನತ್ಯಾಜ್ಯ ನಿರ್ವಹಣಾ ಉಪನಿಯಮದ ತಿದ್ದುಪಡಿ ಹಾಗೂ ಜಾರಿಗೊಳಿಸಲು 90 ದಿನ ಕಾಲಾವಕಾಶವಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ಮಾಡಲಾಗುವುದು. ನಂತರ ಸರ್ಕಾರದ ಅನುಮತಿ ಪಡೆದು ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಕರಭಾರ ತಾತ್ಕಾಲಿಕ ದೂರ: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಲ್ಲಿ ಘನತ್ಯಾಜ್ಯ ನಿರ್ವಹಣಾ ಉಪನಿಯಮ ಜಾರಿಗೆ ಸಮಿತಿ ರಚಿಸಿ, ಸಮಿತಿಯ ಕೆಲವು ಶಿಫಾರಸಿನಂತೆ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಜೂ.4ರಂದು ರಾಜ್ಯ ಸರ್ಕಾರ ಹಕ್ಕುಪತ್ರದ ಮೂಲಕ ಘನತ್ಯಾಜ್ಯ ನಿರ್ವಹಣಾ ಉಪನಿಯಮ-2020ಕ್ಕೆ ಅಂಕಿತ ಹಾಕಿ ಜಾರಿಗೊಳಿಸಲು ಅನುಮತಿ ನೀಡಿತ್ತು. ಆದರೆ, ಜುಲೈನಿಂದಲೇ ನಿಯಮ ಜಾರಿಗೊಳಿಸಿ ಮಾಸಿಕ ತ್ಯಾಜ್ಯ ಕರ ಹೇರಲು ತೀರ್ವನಿಸಲಾಗಿತ್ತು. ಈಗ ಕೌನ್ಸಿಲ್​ನಲ್ಲಿ ಉಪನಿಯಮಕ್ಕೆ ತಿದ್ದುಪಡಿ ಮಾಡುವ ನಿರ್ಧಾರ ಕೈಗೊಂಡಿದ್ದು ಸಾರ್ವಜನಿಕರಿಗೆ ಕರಭಾರ ತಾತ್ಕಾಲಿಕವಾಗಿ ದೂರವಾಗಿದೆ.
ಮಳೆ ಅನಾಹುತಕ್ಕೆ ಸ್ಪಂದಿಸುತ್ತಿಲ್ಲ
ವಿದ್ಯಾರಣ್ಯಪುರ ವಾರ್ಡ್​ನಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿ ತೊಂದರೆಯಾಗಿತ್ತು. ಕೂಡಲೇ ತೆರವು ಮಾಡಲು ಅಧಿಕಾರಿಗಳಿಗೆ ಕರೆ ಮಾಡಿದರೆ, ಯಾರೊಬ್ಬರೂ ಕರೆ ಸ್ವೀಕರಿಸಿಲ್ಲ. ಕೂಡಲೇ ಪ್ರವಾಹ ಪರಿಸ್ಥಿತಿಯ ಪ್ರದೇಶಗಳಲ್ಲಿ ಅಧಿಕಾರಿಗಳ ತಂಡ ನಿಯೋಜನೆ ಜತೆಗೆ ಎಲ್ಲ ಅಧಿಕಾರಿಗಳಿಗೆ ಕರೆ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸಲು ಸೂಚಿಸಬೇಕು ಎಂದು ಕಾಪೋರೇಟರ್ ಕುಸುಮಾ ಒತ್ತಾಯಿಸಿದರು.
ಡಿ.ಜೆ. ಹಳ್ಳಿಯಲ್ಲಿ ಕರೊನಾ ಇಲ್ಲ:ದೇವರಜೀವನಹಳ್ಳಿ ವಾರ್ಡ್​ನಲ್ಲಿ ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವಾಸವಾಗಿದ್ದಾರೆ. ಇಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕಿತರಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲೂ ಬಿತ್ತರವಾಗಿದ್ದು, ಅಲ್ಲಿನ ನಿವಾಸಿಗಳನ್ನು ಯಾರೂ ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬಡವರು ಲಾಕ್​ಡೌನ್​ನಲ್ಲಿ ಮಾತ್ರವಲ್ಲದೇ ಸಡಿಲಿಕೆ ವೇಳೆಯಲ್ಲೂ ದುಡಿಮೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮೇಯರ್ ಸಂಪತ್ ಕುಮಾರ್ ಆಗ್ರಹಿಸಿದರು.
ಮಾಸ್ಕ್ ದಂಡ ವಸೂಲಿಗೆ ಕಡಿವಾಣ ಹಾಕಿ:ಚರ್ಚೆ ವೇಳೆ ಕಾಪೋರೇಟರ್ ಡಾ. ರಾಜು ಮಾಸ್ಕ್ ತೆಗೆದು ಮಾತನಾಡಲು ಆರಂಭಿಸಿದಾಗ ಸಂಪತ್​ಕುಮಾರ್, ‘ನೀವು ಮಾಸ್ಕ್ ಧರಿಸಿ ಮಾತನಾಡಬೇಕು. ಮಾಸ್ಕ್ ಧರಿಸದ ಇವರಿಗೆ ದಂಡ ವಿಧಿಸಬೇಕು’ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಕಾರಿನಲ್ಲಿ ಗ್ಲಾಸ್ ಏರಿಸಿಕೊಂಡು ಹೋಗುವವರನ್ನು, ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸುತ್ತಿದ್ದಾರೆ. ಯಾರು, ಯಾವ ಸ್ಥಳದಲ್ಲಿ ಮಾಸ್ಕ್ ಧರಿಸಬೇಕು ಎಂಬುದರ ಬಗ್ಗೆ ಸೂಕ್ತ ಮಾರ್ಗಸೂಚಿ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸೆರೆ ಸಿಕ್ಕ ಪಾಕ್​ ಉಗ್ರರು: ಭಯಾನಕ ಜಾಲ ಭೇದಿಸಿದ ಭಾರತೀಯ ಯೋಧರು
ಅತಿಥಿ ಶಿಕ್ಷಕರ ಬಿಡುಗಡೆ:ಬಿಬಿಎಂಪಿ ಶಾಲೆಗಳಲ್ಲಿ ಶೇ.70 ಅತಿಥಿ ಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 3 ತಿಂಗಳಿಂದ ವೇತನ ನೀಡದೆ ಕೆಲಸದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಅವರ ಜೀವನಕ್ಕೆ ತೊಂದರೆಯಾಗಿದ್ದು, ಪಾಲಿಕೆ ಶಾಲೆಗಳಿಗೂ ಶಿಕ್ಷಕರ ಕೊರತೆಯಾಗಲಿದೆ ಎಂದು ಮಾಜಿ ಮೇಯರ್ ಶಾಂತಕುಮಾರಿ ಆಕ್ಷೇಪ ವ್ಯಕ್ತಪಡಿಸಿದರು. ಯಾವ ಅತಿಥಿ ಶಿಕ್ಷಕರನ್ನೂ ಕೆಲಸದಿಂದ ಕೈಬಿಡಲಾಗಿಲ್ಲ. ಪ್ರತಿ ವರ್ಷದಂತೆ ಕೆಲಸದಿಂದ ಬೇಸಿಗೆ ರಜೆ ವೇಳೆ ಕೆಲಸದಿಂದ ಬಿಡುಗಡೆಗೊಳಿಸಿ, ಶಾಲೆ ಆರಂಭವಾದ ನಂತರ ಕೆಲಸಕ್ಕೆ ಕರೆಸಲಾಗುತ್ತದೆ. ಈಗ ಕರೊನಾ ಸೋಂಕು ಹರಡುತ್ತಿರುವ ಕಾರಣ, ಶಾಲೆಗಳು ಆರಂಭವಾಗದ ಕಾರಣ ಕೆಲಸಕ್ಕೆ ಬಾರದಂತೆ ತಿಳಿಸಲಾಗಿದೆ. ಅವರಿಗೆ ಮಾರ್ಚ್​ವರೆಗೂ ವೇತನ ನೀಡಿದ್ದು, ಏಪ್ರಿಲ್ ವೇತನ ಹಾಗೂ ಸಂಬಳ ಹೆಚ್ಚಳಕ್ಕೂ ಕ್ರಮ ವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಭರವಸೆ ನೀಡಿದರು.
ಜಂಟಿ ಆಯುಕ್ತರಿಂದ ಬೊಕ್ಕಸಕ್ಕೆ ನಷ್ಟ: ಬಿಬಿಎಂಪಿಯಲ್ಲಿ 2008-09ನೇ ಸಾಲಿನಿಂದ ಜಾರಿಗೊಳಿಸಲಾದ ಸ್ವಯಂ ಘೋಷಣೆ ಆಸ್ತಿತೆರಿಗೆ ಪಾವತಿಯಲ್ಲಿ ಬೊಕ್ಕಸಕ್ಕೆ ತೆರಿಗೆ ನಷ್ಟವಾಗಿತ್ತು. ಈ ಬಗ್ಗೆ ಟೋಟಲ್ ಸ್ಟೇಷನ್ ಸರ್ವೆ (ಟಿಎಸ್​ಎಸ್)ಮಾಡಲಾಯಿತು. ಆಗ ವ್ಯತ್ಯಾಸವಾದ ತೆರಿಗೆದಾರರಿಗೆ ವಿಶೇಷ ನೋಟಿಸ್ ನೀಡಿದಾಗ ಮೇಲ್ಮನವಿ ಸಲ್ಲಿಸಿದರು. ಇದನ್ನು ಇತ್ಯರ್ಥಪಡಿಸುವ ನೆಪದಲ್ಲಿ ಅಂದಿನ ಜಂಟಿ ಆಯುಕ್ತರು ತೆರಿಗೆದಾರರೊಂದಿಗೆ ಶಾಮೀಲಾಗಿ ಕೋಟ್ಯಂತರ ರೂ. ಆದಾಯ ನಷ್ಟ ಮಾಡಿದ್ದಾರೆ ಎಂದು ಪದ್ಮನಾಭರೆಡ್ಡಿ ದೂರಿದರು. ಅದಕ್ಕೆ ಉತ್ತರಿಸಿದ ಆಯುಕ್ತರು, 15 ದಿನಗಳ ಒಳಗಾಗಿ ಸಂಪೂರ್ಣ ವರದಿಯನ್ನು ಕೌನ್ಸಿಲ್​ಸಭೆಗೆ ಮಂಡಿಸಲಾಗುವುದು ಎಂದರು. ಟಿಎಸ್​ಎಸ್ ನಂತರದ ವ್ಯತ್ಯಾಸ ಮೊತ್ತ ನಿಗದಿ ಮಾಡುವುದರಲ್ಲಿ ಅವ್ಯವಹಾರ ನಡೆದಿದ್ದು, ಪಾಲಿಕೆಗೆ 41.17 ಕೋಟಿ ರೂ. ನಷ್ಟ ಉಂಟಾಗಿದೆ. ಸಂಬಂಧಪಟ್ಟ ಕಟ್ಟಡಗಳಿಂದ ದುಪ್ಪಟ್ಟು ದಂಡ ಹಾಗೂ ಶೇ.2 ಬಡ್ಡಿ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.
ನಾಲ್ವರು ಉಗ್ರರು ಭದ್ರತಾ ಪಡೆ ಗುಂಡಿಗೆ ಬಲಿ: ಜಮ್ಮು-ಕಾಶ್ಮೀರದಲ್ಲಿ ಮುಂದುವರಿದ ಉಗ್ರ ಬೇಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
