ಹುಬ್ಬಳ್ಳಿ:ವಾಲ್ವ್ ತಯಾರಿಕೆಯಲ್ಲಿ ಜಾಗತಿಕ ನಕಾಶೆಯಲ್ಲಿ ಗುರುತಿಸಿಕೊಂಡಿರುವ ಬಿಡಿಕೆ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಮತ್ತೆ ಹುಬ್ಬಳ್ಳಿಯವರ ಪಾಲಾಗಿದೆ. ಬಹುರಾಷ್ಟ್ರೀಯ ಕಂಪನಿಯ ತೆಕ್ಕೆಗೆ ಸೇರಿದ್ದ ಹುಬ್ಬಳ್ಳಿಯ ಈ ಕಂಪನಿಯನ್ನು ಹುಬ್ಬಳ್ಳಿಯವರೇ ಆದ ಬಿಮಲ್ ಮೆಹ್ತಾ ಹಾಗೂ ಡಾ.ವಿ.ಎಸ್.ವಿ ಪ್ರಸಾದ ಮರು ಖರೀದಿ ಮಾಡಿದ್ದಾರೆ. ನಗರದ ಉದ್ಯಮಿ ಭರತ ಖಿಮ್ಜಿ ಸ್ಥಾಪಿಸಿದ ಈ ಕಂಪನಿಯನ್ನು 298.3 ಕೋಟಿ ರೂ.ಗಳಿಗೆ ವೈರ್ ಇಂಜಿನಿಯರಿಂಗ್ ಸರ್ವೀಸಸ್ 2010ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ನಂತರ ಅದನ್ನು ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿತ್ತು.
ಹುಬ್ಬಳ್ಳಿ ಮೂಲದ ಐಎಂಸಿ ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ಜಂಟಿ ಉದ್ಯಮವಾದ ಐಎಂಸಿ ಸ್ವರ್ಣ ವೆಂಚರ್ಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯು ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಇಂಡಿಯಾ ಕಂಪನಿಯ ಶೇ. 100 ಷೇರುಗಳನ್ನು ಗುರುವಾರ ಖರೀದಿಸಿದೆ. ‘ಬಿಡಿಕೆ ವಾಲ್ವಸ್’ ಬ್ರ್ಯಾಂಡ್ ಅಡಿಯಲ್ಲಿ ಬಾಲ್ ವಾಲ್ವ್, ಬಟರ್​ಫ್ಲೈ ವಾಲ್ವ್, ಡಯಾಫ್ರಾಮ್ ವಾಲ್ವ್, ಸುರಕ್ಷತಾ ಪರಿಹಾರ ಕವಾಟ ಮತ್ತು ಪ್ಲಗ್ ವಾಲ್ವ್​ಗಳನ್ನು ತಯಾರಿಸುತ್ತಿದ್ದ ಮುಂಚೂಣಿ ಕಂಪನಿಯಾದ ಟ್ರಿಲಿಯಂ ಫ್ಲೋಟೆಕ್ನಾಲಜೀಸ್ ಇಂಡಿಯಾ ಪ್ರೖೆ.ಲಿ. ಕಂಪನಿಯ ಷೇರುಗಳನ್ನು ಯಶಸ್ವಿಯಾಗಿ ಖರೀದಿಸಿರುವುದಾಗಿ ಐಎಂಸಿ ಸ್ವರ್ಣ ವೆಂಚರ್ಸ್ ಘೋಷಿಸಿದೆ. ದೇಶ – ವಿದೇಶದ ಮಾರುಕಟ್ಟೆಗಳಲ್ಲಿ ಹೆಸರು ವಾಸಿಯಾಗಿರುವ ಟ್ರಿಲಿಯಂ ಫ್ಲೋಟೆಕ್ನಾಲಜೀಸ್ ಕಂಪನಿಯು ಪ್ರತಿಷ್ಠಿತ ಗ್ರಾಹಕರಾದ ರಿಲಯನ್ಸ್, ಅದಾನಿ, ಒಎನ್​ಜಿಸಿ, ಎಚ್​ಎಂಇಎಲ್, ಎನ್​ಟಿಪಿಸಿ, ಜೆಎಸ್​ಡಬ್ಲು, ಎಲ್ ಆಂಡ್ ಟಿ, ಜನರಲ್ ಎಲೆಕ್ಟ್ರಿಕ್, ದೂಸನ್, ಸೀಮೆನ್ಸ್, ಅಯಾನ್ ಎಕ್ಸ್​ಚೇಂಜ್, ಅಂತಾರಾಷ್ಟ್ರೀಯ ಗ್ರಾಹಕರಾದ ಎಬಿಬಿ ಅಲ್ಟಮ್ ಹಿಟಾಚಿ ಮತ್ತು ಹನಿವೆಲ್ ಮತ್ತಿತರ ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ. ಈ ಸ್ವಾಧೀನದ ಮೂಲಕ ತೈಲ ಮತ್ತು ಅನಿಲ, ವಿದ್ಯುತ್, ಲೋಹಗಳು ಮತ್ತು ಗಣಿಗಾರಿಕೆಯಂತಹ ವಿವಿಧ ವಲಯಗಳಿಗೆ ಸೇವೆ ಒದಗಿಸುವುದನ್ನು ಮುಂದುವರಿಸಲು ಐಎಂಸಿ ಸ್ವರ್ಣ ವೆಂಚರ್ಸ್ ಉದ್ದೇಶಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಐಎಂಸಿ ಸ್ವರ್ಣ ವೆಂಚರ್ಸ್ ಅಧ್ಯಕ್ಷ ಬಿಮಲ್ ಮೆಹ್ತಾ, ‘ವಾಲ್ವ್ ಉತ್ಪಾದನೆಯಲ್ಲಿ ಆದ್ಯ ಪ್ರವರ್ತಕ ಎನಿಸಿದ ಅಗ್ರಗಣ್ಯ ಸಂಸ್ಥೆ ಮತ್ತೆ ಭಾರತೀಯರ ಹಿಡಿತಕ್ಕೆ ಬಂದಿದೆ’ ಎಂದರು. ಐಎಂಸಿ ಸ್ವರ್ಣ ವೆಂಚರ್ಸ್ ಸಹ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ‘ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ಇದೆ. ಕಂಪನಿಯ ಹಿಂದಿನ ಖ್ಯಾತಿಯನ್ನು ಮರುಸ್ಥಾಪಿಸಲಿದ್ದೇವೆ’ ಎಂದರು. ಗ್ರಾಹಕರ ನಿರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸುತ್ತೇವೆ ಮತ್ತು ಮಾರಾಟವನ್ನು ಹಲವು ಪಟ್ಟು ಹೆಚ್ಚಿಸುತ್ತೇವೆ ಎಂದು ಐಎಂಸಿ ಸ್ವರ್ಣ ನಿರ್ದೇಶಕರಾದ ಶ್ಯಾಮ್ ಮೆಹ್ತಾ ಹಾಗೂ ಮೌನಿಕಾ ಕೋರೆ ತಿಳಿಸಿದರು.
ಐಎಂಸಿ ಗ್ರೂಪ್:ಐಎಂಸಿ ಉದ್ಯಮ ಸಮೂಹವು ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ 55 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಉಕ್ಕು ವಿತರಣೆ ಸಂಸ್ಥೆಯಾಗಿದೆ. ಕಂಪನಿಯು ಟಾಟಾ ಸ್ಟೀಲ್ ಮತ್ತು ಜೆಎಸ್​ಡಬ್ಲ್ಯು ಸ್ಟೀಲ್ ಅನ್ನು ಪ್ರತಿನಿಧಿಸುತ್ತಿದೆ.
ಸ್ವರ್ಣ ಗ್ರೂಪ್ ಆಫ್ ಕಂಪನೀಸ್​ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರ 30 ವರ್ಷಗಳ ಕಠಿಣ ಪರಿಶ್ರಮದಿಂದ ಬೆಳೆದು ಬಂದ ಸಂಸ್ಥೆಯಾಗಿದೆ. ಸಂಸ್ಥೆಯು ರೈಲ್ವೆ ಸೇತುವೆ ನಿರ್ಮಾಣ ಸೇರಿ ಹಲವು ರೈಲ್ವೆ ಯೋಜನೆಗಳನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದೆ. ಹೋಟೆಲ್ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ತಯಾರಿಕೆ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಅಗತ್ಯವಿರುವವರಿಗೆ ನೆರವಾಗುವ ಹಾಗೂ ವೈದ್ಯಕೀಯ ಉಪಕರಣ ದಾನ ನೀಡುವ ಮೂಲಕ ಡಾ. ವಿ.ಎಸ್.ವಿ. ಪ್ರಸಾದ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
