ಪಂಕಜ ಕೆ.ಎಂಬೆಂಗಳೂರು
ರಾಜ್ಯದಲ್ಲಿ ಕಳೆದ ಒಂದೇ ತಿಂಗಳಲ್ಲಿ 1.08 ಲಕ್ಷ ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 7ರಿಂದ 8 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ತಜ್ಞರು ಅಂದಾಜಿಸಿದ್ದಾರೆ. ಇದೇ ವೇಳೆ ಚೇತರಿಕೆ ಪ್ರಮಾಣ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದ್ದು, ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಕರೊನಾದಿಂದ ಪಾರಾಗಬಹುದು ಎಂದೂ ಅವರು ಸಲಹೆ ನೀಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸಾವಿನ ಪ್ರಮಾಣ ಗಮನಾರ್ಹ ಇಳಿಕೆ ಕಂಡಿರುವುದು ತುಸು ನಿರಾಳತೆ ತಂದಿದೆ.
ಸೋಂಕು ಸಮುದಾಯಕ್ಕೆ ಹರಡಿರುವುದರಿಂದ ಪ್ರತಿನಿತ್ಯ ಸರಾಸರಿ 30 ಸಾವಿರಕ್ಕಿಂತ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಹೊಸ ಕೇಸ್​ಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಈವರೆಗೆ 1,29,287 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 53648 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 73219 ಸಕ್ರಿಯ ಪ್ರಕರಣಗಳಿವೆ. 2412 ಜನರು ಮೃತಪಟ್ಟಿದ್ದು, ಇವರಲ್ಲಿ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾ. 8ರಂದು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿತ್ತು. ಮಾ. ಅಂತ್ಯಕ್ಕೆ 101 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಏ.30ರ ವೇಳೆಗೆ ಐದು ಪಟ್ಟು ಹೆಚ್ಚಳದೊಂದಿಗೆ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಯಿತು. ಮೇ 31ರ ವೇಳೆಗೆ ಆರು ಪಟ್ಟು ಅಂದರೆ 3,221ಕ್ಕೆ ಹಾಗೂ ಜೂ. 30ಕ್ಕೆ 15,242 ತಲುಪಿತ್ತು. ಆದರೆ, ಜುಲೈ ತಿಂಗಳು ಒಂದರಲ್ಲೇ 8 ಪಟ್ಟು ಹೆಚ್ಚಳದೊಂದಿಗೆ 1.08 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಮೂಲಕ ಮಾಸಾಂತ್ಯಕ್ಕೆ ಸೋಂಕಿತರ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಿದೆ.
ಶೇ.41.52ಕ್ಕೆ ಏರಿದ ಚೇತರಿಕೆ:ರಾಜ್ಯದಲ್ಲಿ ಒಂದೆಡೆ ಸೋಂಕಿತರ ಸಂಖ್ಯೆ ಏರುತ್ತಿದ್ದರೆ ಮತ್ತೊಂದೆಡೆ ಚೇತರಿಕೆ ಪ್ರಮಾಣವೂ ಸುಧಾರಿಸುತ್ತಿದೆ. 10 ದಿನಗಳ ಹಿಂದೆ ಜು. 22ಕ್ಕೆ ಶೇ.6.81 ಇದ್ದ ಸೋಂಕಿತರ ಸಂಖ್ಯೆ ಜು.31ಕ್ಕೆ ಶೇ.9.18ಕ್ಕೆ ಏರಿಕೆಯಾಗಿದೆ. ಜು.22ಕ್ಕೆ ಶೇ.35.91 ಇದ್ದ ಚೇತರಿಕೆ ಪ್ರಮಾಣ ಆ.1ಕ್ಕೆ ಶೇ.41.52ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣವೂ ಇಳಿಕೆಯಾಗಿದೆ. ಜು. 22ಕ್ಕೆ ಶೇ. 2 ಇದ್ದ ಮರಣ ಪ್ರಮಾಣ ಜು.31ಕ್ಕೆ ಶೇ.1.86ಕ್ಕೆ ಇಳಿಕೆಯಾಗಿದೆ.
ಬೇರೆ ರಾಜ್ಯಗಳಲ್ಲೂ ಇಳಿಕೆ:ಸೋಂಕಿತರ ಏರಿಕೆ ದರದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಆದರೆ, ಜು.15 ರಿಂದ ಜು. 28 ರವರೆಗಿನ 14 ದಿನಗಳ ಅವಧಿಯಲ್ಲಿ ಕರ್ನಾಟಕ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಅದೇ ವೇಳೆ ದೆಹಲಿ, ತಮಿಳುನಾಡು, ತೆಲಂಗಾಣ ಮತ್ತು ಕೇರಳದಲ್ಲಿ ಈಗ ಸೋಂಕಿತರ ದರ ಶೇ.10ಕ್ಕಿಂತ ಕಡಿಮೆಯಾಗಿದೆ. ಗುಜರಾತ್​ನಲ್ಲಿ ಕಳೆದ 15 ದಿನಗಳ ಹಿಂದೆ ಇದ್ದ ಸೋಂಕಿತರ ಏರಿಕೆ ದರ ಶೇ.11 ರಿಂದ ಶೇ.7 ಕ್ಕೆ ಇಳಿಯಾಗಿದೆ. ಸೋಂಕಿತರ ದರ ಮಹಾರಾಷ್ಟ್ರದಲ್ಲಿ ಶೇ.21, ಕರ್ನಾಟಕದಲ್ಲಿ ಶೇ.18, ಬಿಹಾರದಲ್ಲಿ ಶೇ.16, ಪಶ್ಚಿಮ ಬಂಗಾಳದಲ್ಲಿ ಶೇ.15, ಆಂಧ್ರಪ್ರದೇಶದಲ್ಲಿ ಶೇ.14 ಮತ್ತು ಒಡಿಶಾದಲ್ಲಿ ಶೇ.11 ಏರಿಕೆ ಕಾಣುತ್ತಿದೆ.
ಮಾರ್ಚ್​ವರೆಗೆ ಸೋಂಕು?ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಂಪ್ಯೂಟೇಷನಲ್ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್ ಗಣೇಶನ್ ಅವರ ಅಧ್ಯಯನದ ಪ್ರಕಾರ, 2021ರ ಮಾರ್ಚ್​ವರೆಗೆ ಕರೊನಾ ಸೋಂಕು ಏರುಗತಿಯಲ್ಲೇ ಸಾಗಲಿದೆ. ಮಾರ್ಚ್ ವೇಳೆಗೆ ದೇಶದ 6.18 ಕೋಟಿ ಮಂದಿಗೆ ಸೋಂಕು ತಗುಲಲಿದೆ. 82 ಲಕ್ಷ ಸಕ್ರಿಯ ಸೋಂಕಿತರು ಇರಲಿದ್ದಾರೆ ಎಂದು ಹೇಳಿದ್ದಾರೆ. ಅಧ್ಯಯನದಲ್ಲಿ ಪ್ರಮುಖವಾಗಿ ದೇಶದ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸಲಾಗಿದೆ. ದೇಶದಲ್ಲಿನ ಈಗಿನ ಸ್ಥಿತಿಗತಿ, ಸುಧಾರಿತ ಸನ್ನಿವೇಶ, ಅತ್ಯಂತ ಕಳಪೆ ಸನ್ನಿವೇಶಗಳನ್ನು ಆಧರಿಸಿ ಭವಿಷ್ಯದಲ್ಲಿ ಎಷ್ಟು ಸೋಂಕು ಉಂಟಾಗಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ. ಪ್ರಕರಣಗಳು ಇದೇ ರೀತಿ ಮುಂದುವರಿದರೆ 6.18 ಕೋಟಿ ಮಂದಿ ಸೋಂಕಿತರಾಗಬಹುದು. ರಾಜ್ಯಗಳ ವಿಶ್ಲೇಷಣೆ ಗಮನಿಸಿದರೆ ಕರ್ನಾಟಕ ಒಂದರಲ್ಲೇ 32 ಲಕ್ಷ ಮಂದಿಗೆ ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕಾಳಜಿ ಇರಲಿ:ವೃದ್ಧರು, ಗರ್ಭಿಣಿಯರು, ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ, ಕಿಡ್ನಿ ಸಮಸ್ಯೆ ಸೇರಿ ಗಂಭೀರ ಕಾಯಿಲೆ ಇರುವವರನ್ನು ಕರೊನಾ ಹೆಚ್ಚಾಗಿ ಕಾಡುತ್ತದೆ. ಈವರೆಗೆ ಮೃತಪಟ್ಟವರಲ್ಲಿ ಬಹುತೇಕರು ಬೇರೆ ಕಾಯಿಲೆಗಳನ್ನು ಹೊಂದಿರುವವರು. ಆದ್ದರಿಂದ ಇಂಥವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ನಿಯಮ ಪಾಲಿಸಿ ಸುರಕ್ಷಿತವಾಗಿರಿ
ಈ ಮಾಸಾಂತ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಬಹುದೆಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದ್ದು, ನಂತರ ನಿಧಾನವಾಗಿ ಇಳಿಕೆಯಾಗಲಿದೆ. ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಜನರು ಸ್ವಯಂಎಚ್ಚರಿಕೆ ವಹಿಸುವುದು ಅಗತ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ, ಆರೋಗ್ಯಕರ ಚಟುವಟಿಕೆ ರೂಢಿಸಿಕೊಳ್ಳಬೇಕು.
| ಡಾ. ಸಿ.ಎನ್.ಮಂಜುನಾಥ್ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ
https://www.vijayavani.net/russia-preparing-mass-vaccination-against-coronavirus-for-october/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 6 =
Remember me
