ಸಂಸತ್ ಭವನದ ಭದ್ರತಾ ಲೋಪ ಭಾರಿ ದೊಡ್ಡ ಪಾಠವನ್ನೇ ಕಲಿಸಿದೆ. ಇನ್ನೊಂದೆಡೆ, ರಾಜ್ಯದ ಬಳ್ಳಾರಿಯಲ್ಲೇ ಕಾರ್ಯಾಚರಿಸುತ್ತಿದ್ದ ‘ಐಸಿಸ್ ಮಾಡ್ಯೂಲ್’ ಅನ್ನು ರಾಷ್ಟ್ರೀಯ ತನಿಖಾ ಅಧಿಕಾರಿಗಳು ಬಯಲಿಗೆಳೆದು ಉಗ್ರಕೃತ್ಯಕ್ಕೆ ಸಂಚಿನ ಆತಂಕಕಾರಿ ವಿಚಾರವನ್ನು ಬಹಿರಂಗ ಗೊಳಿಸಿದ್ದಾರೆ. ಈ ಹಿಂದೆ ಮಂಗಳೂರಿನ ದೇವಸ್ಥಾನ ಉಗ್ರರ ಟಾರ್ಗೆಟ್ ಆಗಿತ್ತು ಎನ್ನುವುದು ನೆನಪಿನಿಂದ ಮರೆಯಾಗಿಲ್ಲ. ಒಟ್ಟಿನಲ್ಲಿ ಜನದಟ್ಟಣೆಯನ್ನೇ ಗುರಿಯಾಗಿಸಿ ದಾಳಿ ನಡೆಸುವುದು ಉಗ್ರರ ಸ್ಕೆಚ್. ಹೀಗಿರುವಾಗ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಭಾರಿ ಜನ ಜಮಾಯಿಸುವ ರಾಜ್ಯದ ಸುಪ್ರಸಿದ್ಧ ಪ್ರವಾಸಿ ಸ್ಥಳಗಳು, ಪಾರಂಪರಿಕ ತಾಣಗಳು, ಧಾರ್ವಿುಕ ಸ್ಥಳಗಳಲ್ಲಿ ಭದ್ರತೆ ಹೇಗಿದೆ ? ತಪಾಸಣೆ ಹೇಗಿದೆ ? ಏನೆಲ್ಲ ಸುರಕ್ಷತಾ ಕ್ರಮಗಳಿವೆ ? ಎಂಬುದರ ಕುರಿತು ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿದ್ದು, ಅದರ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು:ವರ್ಷಾಂತ್ಯ ಹಾಗೂ ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ, ಐತಿಹಾಸಿಕ ಸ್ಥಳ, ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಶಕ್ತಿ ಯೋಜನೆ ಬಲದಿಂದ ಮಹಿಳೆಯರು ಉಚಿತ ಬಸ್​ಗಳನ್ನೇರಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಎಲ್ಲೆಡೆ ಖಾಕಿ ಕಾವಲು ಇದ್ದರೂ ಇಲ್ಲದಂತಿದೆ. ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಭದ್ರತಾ ಸೌಕರ್ಯಗಳು ನಾಮಕಾವಸ್ಥೆ ಎನ್ನುವಂತಿದ್ದು, ಯಾವುದೇ ಅಚಾನಕ್ ಅವಘಡ ಸಂಭಾವ್ಯತೆಗಳನ್ನು ಎದುರಿಸಿ, ಹಾನಿಯ ಪ್ರಮಾಣ ಕಡಿಮೆ ಮಾಡುವಂಥ ಭದ್ರತಾ ಪೂರ್ವಸಿದ್ಧತೆ, ವೃತ್ತಿಪರ- ಮೂಲಭೂತ ಸೌಕರ್ಯಗಳ ಕೊರತೆ ಆತಂಕ ಮೂಡಿಸಿದೆ.
ರಾಜ್ಯದ ಬಹುತೇಕ ಪ್ರವಾಸಿ ತಾಣಗಳು ಹಾಗೂ ಧಾರ್ವಿುಕ ಕೇಂದ್ರಗಳಲ್ಲಿ ಒಂದಷ್ಟು ಸಿಸಿ ಕ್ಯಾಮರಾ, ಪೊಲೀಸ್ ಸಿಬ್ಬಂದಿ, ಲೋಹಶೋಧಕ ಯಂತ್ರಗಳ ವ್ಯವಸ್ಥೆ ಇದ್ದರೂ, ಅವುಗಳ ಅಚ್ಚುಕಟ್ಟಾದ ನಿರ್ವಹಣೆ ಇಲ್ಲ. ಪ್ರತಿನಿತ್ಯ ಲಕ್ಷಾಂತರ ಜನರು ಭೇಟಿ ಕೊಡುವ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ಬಹುತೇಕ ದೇವಸ್ಥಾನಗಳಲ್ಲೇ ಭದ್ರತೆ ಕೊರತೆ ಕಂಡುಬಂದಿದೆ. ದೈನಂದಿನ ಬೀಟ್ ಪೊಲೀಸರನ್ನು ಹೊರತುಪಡಿಸಿದರೆ ಹೆಚ್ಚುವರಿ ಸೆಕ್ಯುರಿಟಿ ವ್ಯವಸ್ಥೆ ಕಾಣುವುದಿಲ್ಲ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಲವೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಪ್ರವಾಸಿ ತಾಣಗಳಿಗೆ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆದರೆ, ನಿರಂತರವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಹೆಚ್ಚಿನ ಆದ್ಯತೆ ಕೊಡಬೇಕಿದೆ. ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ವಾರಾಂತ್ಯದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಅಷ್ಟು ಜನರ ನಿರ್ವಹಣೆಗೆ ಬೇಕಾದ ಭದ್ರತೆ ವ್ಯವಸ್ಥೆ ಇರಲಿಲ್ಲ.
ಬೆರಳೆಣಿಕೆಯಷ್ಟಿರುವ ಸ್ಥಳೀಯ ಪೊಲೀಸರು ಮತ್ತು ಶ್ರೀ ಮಠದ ಭದ್ರತಾ ಸಿಬ್ಬಂದಿ ಭಕ್ತರನ್ನು ಸಂಭಾಳಿಸುವಲ್ಲಿ ಹೆಣಗಾಡುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಹೈಕೋರ್ಟ್, ವಿಧಾನಸೌಧ, ರಾಜಭವನ ಹೊರತುಪಡಿಸಿದರೆ ಪ್ರಮುಖ ಜನಸಂದಣಿ ಪ್ರದೇಶಗಳಾದ ಕೆಂಪೇಗೌಡ ಬಸ್ ನಿಲ್ದಾಣ, ನಮ್ಮ ಮೆಟ್ರೋ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಸಿಟಿ ಸಿವಿಲ್ ಕೋರ್ಟ್ ಸೇರಿದಂತೆ ನಿತ್ಯ ಸಹಸ್ರಾರು ಜನ ಸಂಚರಿಸುವ ನೂರಾರು ಹಾಟ್​ಸ್ಪಾಟ್​ಗಳಲ್ಲಿ ಸಮರ್ಪಕ ಭದ್ರತೆ ಇಲ್ಲ.
ತಕ್ಷಣ ಆಗಬೇಕಾದ್ದೇನು?:ಆಧುನಿಕ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ಅಳವಡಿಸಲು ಸರ್ಕಾರ, ಸ್ಥಳೀಯ ಆಡಳಿತ ಗಮನ ಹರಿಸಬೇಕು. ಧಾರ್ವಿುಕ ಕೇಂದ್ರ, ಸ್ಮಾರಕಗಳು ಸೇರಿ ಎಲ್ಲ ಕಡೆ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸ ಬೇಕು. ವೀಕ್ಷಣೆಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ಒಳಬಿಡುವ ವ್ಯವಸ್ಥೆ ಆಗಬೇಕು. ಕಾರ್ಯನಿರ್ವಹಿಸದೆ ಕೆಟ್ಟಿರುವ ಸಿಸಿ ಕ್ಯಾಮರಾ, ಮೆಟಲ್ ಡಿಟೆಕ್ಟರ್​ಗಳನ್ನು ಗಮನಿಸಿ ಸರಿಪಡಿಸಬೇಕು. ಪೊಲೀಸ್ ಸಿಬ್ಬಂದಿ ಜತೆಗೆ ಗೃಹ ರಕ್ಷಕ ಸಿಬ್ಬಂದಿಯನ್ನು ಹಾಗೂ ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು. ಸಾವಿರಾರು ಜನರು ಬರುವ ಸ್ಥಳಗಳನ್ನು ಗುರುತಿಸಿ, ಅಲ್ಲಿಗೆ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ತಂಗುವ ರೆಸಾರ್ಟ್, ಹೋಮ್​ ಸ್ಟೇ, ಹೋಟೆಲ್​ಗಳಿಗೆ ಭದ್ರತಾ ಮಾರ್ಗಸೂಚಿ ರೂಪಿಸಬೇಕು.
ಅಲಕ್ಷ್ಯ ಸಲ್ಲದು…:ಆಧುನಿಕ ತಂತ್ರಜ್ಞಾನಗಳ ವಿಚಾರದಲ್ಲಿ ಎಲ್ಲರಿಗಿಂತ ಮೊದಲೇ ಅಪ್​ಡೇಟ್ ಆಗಿ, ಅದನ್ನು ದುರ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಪರಾಧಿಗಳು ಮುಂದಿರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ಧಾರ್ವಿುಕ ಹಾಗೂ ವಿಹಾರ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಪ್ರತಿಯೊಂದು ಪ್ರಸಿದ್ಧ ಪ್ರವಾಸಿ ತಾಣ, ಧರ್ಮಕ್ಷೇತ್ರ, ಸಾಂಸ್ಕೃತಿಕ ಹಿರಿಮೆಯ ಸ್ಥಳಗಳಿಗೆ ಪ್ರತೀದಿನ ಭೇಟಿ ನೀಡುವ ಸಹಸ್ರಾರು ಪ್ರವಾಸಿಗರ ಸುರಕ್ಷತೆ ವಿಚಾರದಲ್ಲಿ ಅಲಕ್ಷ್ಯ ಸಲ್ಲದು. ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಆಡಳಿತ ಮಂಡಳಿಗಳು ಆಧುನಿಕ ಸುರಕ್ಷಾ ಸೌಕರ್ಯಗಳನ್ನು ಬಳಸಿಕೊಂಡು ಕಟ್ಟೆಚ್ಚರ, 24/7 ಕಣ್ಗಾವಲು ವಹಿಸುವುದು ಪ್ರಥಮ ಆದ್ಯತೆ ಆಗಬೇಕು. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಬೇಕು. ಆಗ ಮಾತ್ರ ಸಂಭಾವ್ಯ ಅನಾಹುತ ತಪ್ಪಿಸಿ, ಪ್ರವಾಸ ಪ್ರಯಾಸವಾಗದಂತೆ ನೋಡಿಕೊಳ್ಳಲು ಸಾಧ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
