ಬೆಂಗಳೂರು:ಕರೊನಾ ನಿಯಂತ್ರಣ ಹಾಗೂ ರಾಜತಾಂತ್ರಿಕ ಸಂಬಂಧ ಬೆಳೆಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತತ್ವಜ್ಞಾನಿಯಂತೆ ಕೆಲಸ ಮಾಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಸಚಿವ ಡಾ.ಕೆ.ಸುಧಾಕರ್ ವ್ಯಾಖ್ಯಾನಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ದೂರದೃಷ್ಟಿ ಯೋಚನೆಗಳು ಭಾರತದಲ್ಲಿ ಆಗಬಹುದಾಗಿದ್ದ ಕೋಟ್ಯಂತರ ಸಾವು ನೋವುಗಳನ್ನು ತಡೆದಿದೆ ಎಂದರು.
ಲಸಿಕಾಕರಣದಿಂದ ಭಾರತ ಕೋವಿಡ್ ಅನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಎದುರಿಸಿದೆ. ಅನೇಕ ದೇಶಗಳಲ್ಲಿ ಈ ಹಿಂದೆಯೂ ಸಾಂಕ್ರಾಮಿಕ ರೋಗಗಳು ಬಂದಿದ್ದವು. ಸ್ಪಾನಿಷ್ ಫ್ಲೂ, ಪ್ಲೇಗ್​ನಂತಹ ಸಾಂಕ್ರಾಮಿಕ ಕಾಯಿಲೆಗಳು ಮಾರಣಾಂತಿಕವಾಗಿದ್ದವು. ದಾಖಲೆಗಳ ಪ್ರಕಾರ ಊರು ಬಿಟ್ಟು ಬೇರೆ ಊರಿಗೆ ಗುಳೆ ಹೋದವರಿದ್ದಾರೆ. ಸ್ಪಾನಿಷ್ ಫ್ಲೂ ಕಾಯಿಲೆಯಲ್ಲಿ ಸತ್ತವರಿಗಿಂತ ಹಸಿವಿನಿಂದ ಸತ್ತಿದ್ದಾರೆ ಅನ್ನುವುದನ್ನು ದಾಖಲೆಗಳು ಹೇಳುತ್ತವೆ. ಆದರೆ ಮೋದಿಯವರ ಮುಂದಾಲೋಚನೆ ಯೋಜನೆಗಳು ಕರೊನಾ ವೇಳೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಿದೆ ಎಂದು ತಿಳಿಸಿದರು.
ಕೇಸ್ ಸ್ಟಡಿ:ಪ್ರಾಣಿ (ಝೊನಾಟಿಕ್ ಇನ್ಪೆಕ್ಷನ್ ವೈರಸ್) ಗಳಿಂದ ಮನುಷ್ಯನಿಗೆ ವೈರಾಣು ಬಂತು. ಶತಮಾನದಲ್ಲಿ ಕಾಣದೇ ಇದ್ದಂತಹ ಸಾಂಕ್ರಾಮಿಕ ರೋಗ ಇದಾಗಿತ್ತು. ವೈದ್ಯಕೀಯ ಜಗತ್ತಿಗೂ ಸವಾಲು ಮತ್ತು ಕುತೂಹಲ ಇತ್ತು.
ಮೋದಿಯವರು ಮುತ್ಸದ್ದಿತನದಿಂದ ಸಮಗ್ರ ಮತ್ತು ಸಮರ್ಥವಾಗಿ ಕರೊನಾ ನಿಯಂತ್ರಣ ಮಾಡಲು ಯೋಜನೆ ರೂಪಿಸಿದ್ದರು. 135 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ತಂದಿದ್ದು ಐತಿಹಾಸಿಕ ಮತ್ತು ಕೇಸ್ ಸ್ಟಡಿಯೂ ಆಗಿದೆ ಎಂದು ಡಾ.ಸುಧಾಕರ್ ವಿಶ್ಲೇಷಿಸಿದರು.
ಎಲ್ಲ ರಾಜ್ಯಗಳ ಜತೆಗೆ ನಿಕಟ ಸಂಬಂಧ ಬೆಳೆಸಿ ಮಾರ್ಗದರ್ಶನ, ಅಲ್ಪಾವಧಿಯಲ್ಲೇ ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ, ಲಾಕ್​ಡೌನ್​ಗೆ ಜನರಿಂದ ಸಹಕಾರ ಇತ್ಯಾದಿ ಕ್ರಮಗಳು ಮೋದಿಯವರ ದೂರದರ್ಶಿತ್ವ, ಮುತ್ಸದ್ದಿತನಕ್ಕೆ ಸಾಕ್ಷಿಯಾಗಿವೆ. ಅಭಿಯಾನ ರೂಪದಲ್ಲಿ ಲಸಿಕೆ ಉಚಿತವಾಗಿ ವಿತರಿಸಲಾಗಿದೆ. ಇವತ್ತು ವಿಶ್ಚದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ದೇಶವಾಗಿ ಭಾರತ ಸಾಧನೆ ಮಾಡಿದೆ. ದೇಶದದಲ್ಲಿ 185 ಕೋಟಿ 90 ಲಕ್ಷದ 68 ಸಾವಿರದ 616 ಡೋಸ್ ಲಸಿಕೆ ಇಲ್ಲಿ ತನಕ ನೀಡಲಾಗಿದೆ. ಚೀನಾ ನಂತರ ಅತಿ ಹೆಚ್ಚು ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತದ ಪಾತ್ರವಾಗಿದೆ ಎಂದು ವಿವರಿಸಿದರು.
ಐದು ಪಟ್ಟು ಸುಧಾರಣೆ:ಭಾರತದಲ್ಲಿ ಆರೋಗ್ಯ ವ್ಯವಸ್ಥೆ 70 ವರ್ಷಗಳ ಆಳ್ವಿಕೆಯ ಬಳುವಳಿಯಾಗಿತ್ತು. ಆರಂಭದಲ್ಲಿ ಅದನ್ನು ಇಟ್ಟುಕೊಂಡು ಕರೊನಾ ಎದುರಿಸಿದೆವು. ಆದರೆ ಅವುಗಳು ಎಲ್ಲೂ ಸಾಕಾಗಲಿಲ್ಲ. ಹೀಗಾಗಿ ಇದರ ಅಭಿವೃದ್ಧಿಗೆ ಗಮನ ಕೊಟ್ಟು, ಇವತ್ತು 4 ರಿಂದ 5 ಪಟ್ಟು ಅತ್ಯುತ್ತಮ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಜನರು ಹಸಿವಿನಿಂದ ಸಾಯಬಾರದು ಅನ್ನುವ ಕಾರಣದಿಂದ ಮೋದಿಯವರು ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದು ಒಂದೂವರೆ ವರ್ಷ ಉಚಿತ ಆಹಾರ ಧಾನ್ಯ ಪೂರೈಸಿದ್ದು, 80 ಕೋಟಿ ಜನರ ಮತ್ತು ಕುಟುಂಬಗಳಿಗೆ ಸಮಾಧಾನಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು, ವಿಶ್ವದ ಯಾವುದೇ ದೇಶಗಳಿಗೂ ಇಂತಹ ವ್ಯವಸ್ಥೆ ಮಾಡಲಾಗಿಲ್ಲ. ರಾಜ್ಯದಲ್ಲಿ ಇಲ್ಲಿ ತನಕ 10 ಕೋಟಿ 54 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಶೇ.101ಕ್ಕಿಂತ ಹೆಚ್ಚಿದೆ. 2ನೇ ಡೋಸ್ ಶೇ. 98, 12-14 ವರ್ಷ ಕೆಟಗರಿಯಲ್ಲಿ 70.2 %, 15 ರಿಂದ 17 ವರ್ಷ ಕೆಟಗರಿಯಲ್ಲಿ 79.2% 18 ರಿಂ 44 ವರ್ಷದ ಕೆಟಗರಿಯಲ್ಲಿ ಮೊದಲ ಡೋಸ್ 97.4% ನೀಡಲಾಗಿದೆ.
50 ದೇಶಗಳಿಗೆ ತಂತ್ರಜ್ಞಾನ:ದೇಶದ ಅರ್ಹ ಜನರಿಗೆ ಲಸಿಕೆ ಉಚಿತ ವಿತರಣೆಗೆ ವ್ಯವಸ್ಥಿತವಾಗಿ ಯೋಜನೆ ರೂಪಿಸುವ ಜತೆಗೆ ಕೋವಿನ್ ಆಪ್ ಮೂಲಕ ನಿರ್ವಹಿಸಲಾಯಿತು. ಭಾರತ ಬಳಸಿದ ಡಿಜಿಟಲ್ ತಂತ್ರಜ್ಞಾನವು ಇದೀಗ 50 ದೇಶಗಳಿಗೆ ಹಂಚಿಕೆಯಾಗುತ್ತಿದ್ದು, ಮೋದಿಯವರ ಸಹಾಯಗುಣ ವಿಶ್ವದ ಮೆಚ್ಚುಗೆ ಗಳಿಸಿದೆ ಎಂದು ಡಾ.ಸುಧಾಕರ್ ಶ್ಲಾಘಿಸಿದರು.
4ನೇ ಅಲೆಗೆ ಹೆದರಬೇಕಿಲ್ಲ:ತಜ್ಞರು ಹೇಳಿದ ಪ್ರಕಾರ ಜೂನ್-ಜುಲೈನಲ್ಲಿ ಕರೊನಾ ನಾಲ್ಕನೇ ಅಲೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಜನರು ಹೆದರಬೇಕಾದ ಅಗತ್ಯವಿಲ್ಲ ಎಂದು ಡಾ.ಕೆ.ಸುಧಾಕರ್ ಅಭಯ ನೀಡಿದರು. ಸಂಭಾವ್ಯ ಮತ್ತೊಂದು ಅಲೆ ಎದುರಿಸಲು, ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಬೇಕಾದ ಸಿದ್ಧತೆ ಮಾಡಿಕೊಂಡಿದ್ದು, ಲಸಿಕೆ ಹಾಕಿಸಿಕೊಳ್ಳುವುದನ್ನು ಜನರು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು. ಯುದ್ಧೋಪಾದಿ ಲಸಿಕೆ ವಿತರಣೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿದ್ದು, ಮೂರನೇ ಅಲೆ ಹೆಚ್ಚಿನ ಪರಿಣಾಮಬೀರಲಿಲ್ಲ, ಸೋಂಕಿತರು ಬೇಗ ಚೇತರಿಸಿಕೊಂಡರು. ಅದೇ ರೀತಿ ನಾಲ್ಕನೇ ಅಲೆ ತಡೆಗೂ ಲಸಿಕೆಯೊಂದೇ ಉಪಾಯವೆಂದರು.
ಬದಲಾಗದ ಬದ್ಧತೆ:ಲಸಿಕೆ ವಿಚಾರದಲ್ಲಿ ಕೆಲವು ವಿರೋಧ ಪಕ್ಷಗಳು ರಾಜಕಾರಣ ಮಾಡಿದವು, ಪ್ರಾರಂಭದಲ್ಲಿ ಜನರಿಗೆ ಹೆದರಿಸಿದರು. ಹಂದಿಯಿಂದ ಏನೋ ಮಾಡಿದ್ದಾರೆಂದು ಒಂದು ವರ್ಗದ ಜನರನ್ನು ಹೆದರಿಸಿ ದ್ದರು. ಅವಿಶ್ವಾಸ- ಅಸಹಕಾರ, ಟೀಕೆಯ ನಡುವೆ ನಮ್ಮ ಬದ್ಧತೆ ಬದಲಾಗಲಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಿ ಸೋಂಕು ನಿಯಂತ್ರಿಸಲಾಯಿತು ಎಂದು ಸುಧಾಕರ್ ವಿವರಿಸಿದರು.
ಮಕ್ಕಳ ಆರೋಗ್ಯ ತಪಾಸಣೆ:ಆರರಿಂದ 12 ವರ್ಷ ವಯೋಮಿತಿ ಮಕ್ಕಳಿಗೆ ಇನ್ನೂ ಯಾವುದೇ ಲಸಿಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಜ್ಞರ ಶಿಫಾರಸಿನ ಮೇರೆಗೆ ಈ ವಯಸ್ಸಿನ ಆಯ್ದ 5,000 ಮಕ್ಕಳ ಆರೋಗ್ಯ ತಪಾಸಣೆಗೆ ಅನುಮತಿ ನೀಡಲಾಗಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯುವುದನ್ನು ತಾತ್ಸಾರ ಮಾಡಬಾರದು. ಅರ್ಹರಲ್ಲಿ ಉಳಿದ 32 ಲಕ್ಷ ಜನರು ಎರಡನೇ ಡೋಸ್ ಲಸಿಕೆ ವೇಗವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, 12 ನಂತರದ ವಿವಿಧ ವಯೋಮಿತಿ ಅರ್ಹರಿಗೆ ಲಸಿಕೆ ವಿತರಣೆ ಚುರುಕುಗೊಳಿಸಲು ಸೂಚಿಸಲಾಗಿದೆ ಎಂದರು. ರಾಜ್ಯಕ್ಕೆ 243 ಆಮ್ಲಜನಕ ಘಟಕಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು, ಈ ಪೈಕಿ ಮಂಜೂರು ಮಾಡಿದ 233 ಘಟಕಗಳಿಗೆ ಚಾಲನೆ ನೀಡಿದ್ದು, ಉಳಿದ ಒಂಭತ್ತು ಘಟಕಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.
ಮಾಸ್ಕ್ ಕಡ್ಡಾಯ ಸಡಿಲಿಸಲ್ಲ:ಹಲವು ದೇಶಗಳಲ್ಲಿ ವೈರಾಣು ಹೊಸ ತಳಿ ಪತ್ತೆಯಾಗಿದ್ದು, ಸೋಂಕು ಹಾವಳಿ ಹೆಚ್ಚಿರುವ ಕಾರಣಕ್ಕೆ ಆ ದೇಶಗಳಿಂದ ಬರುವ ಜನರ ಮೇಲೆ ವಿಶೇಷ ನಿಗಾವಹಿಸಲು ನಿರ್ಧರಿಸಲಾಗಿದೆ. ಮಾಸ್ಕ್ ಕಡ್ಡಾಯ ಸಡಿಲಿಸುವ ಪ್ರಶ್ನೆಯೇ ಇಲ್ಲ. ಹಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಿರುವ ಕಾರಣಕ್ಕೆ ಕೇಂದ್ರದ ಸೂಚನೆ, ತಾಂತ್ರಿಕ ತಜ್ಞರ ಸಲಹೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ತಜ್ಞರು ನೀಡಿದ ಎಚ್ಚರಿಕೆಗೆ ತಕ್ಕಂತೆ ಕ್ರಮಕ್ಕೆ ಮುಂದಾಗಿದ್ದೇವೆ. ಕಠಿಣ ನಿರ್ಬಂಧ ಜಾರಿಗೆ ಯೋಚಿಸಿಲ್ಲ, ಅಂತಹ ಪರಿಸ್ಥಿತಿ ಉದ್ಭವಿಸಬಾರದು ಎಂದು ಆಶಿಸುವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
