| ನಂದಿನಿ ಹೆದ್ದುರ್ಗ
ಸುತ್ತಿನ ನಮ್ಮ ಜಗತ್ತು ಕಳೆದ ಹದಿನೈದು ದಿನದಿಂದ ಯಾರತ್ತಲೋ ಕೈ ತೋರುತ್ತಿದೆ. ಬೆಟ್ಟ ಕೊರೆದ್ರಿ, ಗುಡ್ಡ ಉರುಳಿಸಿದ್ರಿ, ಮರ ಕತ್ತರಿಸಿದ್ರಿ, ನದಿ ತಿರುಗಿಸಿದ್ರಿ, ರೆಸಾರ್ಟ್ ಮಾಡಿದ್ರಿ, ಕೊಳ ಕಟ್ಟಿಸಿದ್ರಿ, ಕಾಫಿ ತೋಟ ಬೆಳೆದ್ರಿ, ನೀಲಗಿರಿ ನೆಟ್ರಿ, ಅಕೇಷಿಯಾ ಹಾಕಿದ್ರಿ, ಅಲ್ಲಿಗೂ ರಸ್ತೆ ಬೇಕಾ, ಇಲ್ಲಿಗೂ ಲಾಡ್ಜಿಂಗ್ ಬೇಕಾ? ಎಲ್ಲಿಯವರೆಗೂ ಕ್ಷಮಯಾಧರಿತ್ರಿ, ಸಿಡಿದಳು ಪೃಥ್ವಿ!
ಯಾಕಾಗಿ, ಯಾರಿಂದ? ನೀವು ಕಾರಣ, ನೀವೂ ಕಾರಣ, ನೀವೇ ಕಾರಣ ಅಂತೆಲ್ಲ ಯಾರೆಡೆಗೋ ಬೆರಳು ತೋರುತ್ತಿದ್ದಾರೆ. ಯಾರನ್ನೋ ತುರುಸಿನಲ್ಲಿ, ಬಿರುಸಿನಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮೀಡಿಯಾಗಳಲ್ಲಿ ಈ ಪ್ರಶ್ನೆಗಳನ್ನು ಓದಿದಾಗೆಲ್ಲ ತನಗೇ ಕೇಳ್ತಿರುವುದು ಎನ್ನಿಸಿ ಬೆಚ್ಚುವ ಹಾಗಾಗಿದೆ. ನೆಲದಾಯ ಮೇಲೆ ದೌರ್ಜನ್ಯ ಮಾಡಿದ್ರಿ ಅಂತ ಬೆರಳು ತೋರಿಸ್ತಿರುವ ಎಷ್ಟು ಮಂದಿಗೆ ಈ ದೌರ್ಜನ್ಯ ಮಾಡಿರುವವರಲ್ಲಿ ನಾನೂ ಒಬ್ಬ ಅಂತ ಅನಿಸಿದೆ? ಸಿಡಿದ ಪೃಥ್ವಿಗೆ, ಕುಸಿದ ಗುಡ್ಡಕ್ಕೆ, ಉಕ್ಕಿದ ನದಿಗೆ ನಾನೂ ಕಾರಣ ಅಂತ ಅನಿಸಿದೆಯಾ? ಸುಮ್ಮನೇ ನಮಗೆ ನಾವೇ ಈ ಕೆಳಗಿನ ಪ್ರಶ್ನೆ ಕೇಳ್ಕೊಳ್ಳೋಣ.
ನಮ್ಮಲ್ಲಿ ಎಷ್ಟು ಮಂದಿಯ ಬಳಿ ಅಗತ್ಯವಿರದಿದ್ದರೂ ಒಂದಕ್ಕಿಂತ ಹೆಚ್ಚು ವೆಹಿಕಲ್ ಇವೆ? ಎಷ್ಟು ಮಂದಿಯ ಬಳಿ ಒಂದಕ್ಕಿಂತ ಹೆಚ್ಚು ಮನೆಗಳಿವೆ? ಅಗತ್ಯ ಇಲ್ಲದಿದ್ದರೂ ಶಾಪಿಂಗ್ ಮಾಡಿ ಪೇರಿಸಿ ತಂದಿಡುವ ಸ್ವಭಾವ ಯಾರಿಗೆಲ್ಲ ಇದೆ? ಆಡಂಬರಕ್ಕಾಗಿ ಎಷ್ಟು ಮಂದಿ ಎಸಿ ಅಳವಡಿಸಿಕೊಂಡಿದ್ದೀವಿ (ಮನುಷ್ಯ ತಡೆಯಬಹುದಾದ ಬಿಸಿಲು ಸದ್ಯ ನಮ್ಮಲ್ಲಿದೆ.)?, ಎಷ್ಟು ಮಂದಿ ಶೋಕಿಗಾಗಿ ಮೂರ್ನಾಲ್ಕು ಫೋನು ಇಟ್ಕೊಂಡಿದ್ದೀರಿ? ವರ್ಷಕ್ಕೊಮ್ಮೆ ಫೋನು, ಕಾರು ಬದಲಿಸುವ ಶೋಕಿ ಯಾರಿಗೆಲ್ಲ ಇದೆ? ಯಾರಿಗೆಲ್ಲ ಮನೆಯ ಫರ್ನಿಚರ್ಸ್ ಪದೇಪದೆ ಬದಲಿಸುವ ಮರುಳಿದೆ? ಯಾರೆಲ್ಲ ಹೆಣಭಾರದ ಕರ್ಟನ್ ಬಿಟ್ಟು ಕತ್ತಲೆ ಸೃಷ್ಟಿಸಿ ಬೆಳಕಿಗಾಗಿ ಲೈಟು ಹಚ್ತಿದ್ದೀರಿ(even the solar electricity emissions are too high)? ಯಾರೆಲ್ಲ ಕೋಟೆ ಎತ್ತರದ ಕಾಂಪೊಂಡು ಕಟ್ಕೊಂಡಿದ್ದೀರಿ? ಯಾರೆಲ್ಲ ಕುಟುಂಬದ ವೈಯಕ್ತಿಕ ಕಾರ್ಯಕ್ರಮವನ್ನು ಶೋಕಿಗಾಗಿ ನೂರಾರು ಜನರನ್ನು ಸೇರಿಸಿ ಮಾಡಿದ್ದೀರಿ? ಯಾರೆಲ್ಲ ದೊಡ್ಡಸ್ತಿಕೆಗಾಗಿ ವೆರೈಟಿ ಅಡುಗೆ ಮಾಡಿಸಿ ಅರ್ಧ ಕಸದಬುಟ್ಟಿಗೆ ಕಳಿಸಲು ಕಾರಣಕರ್ತರಾಗಿದ್ದೀರಿ? ಯಾರೆಲ್ಲ ವಿಕೆಂಡಿನಲ್ಲಿ ಹಿಲ್​ಸ್ಟೇಷನಗೆ, ರೆಸಾರ್ಟ್​ಗೆ ಪ್ಲಾ್ಯನ್ ಮಾಡ್ತಿರಿ? ಯಾರೆಲ್ಲ ಟ್ರೆಕ್ಕಿಂಗ್ ಹೆಸರಲ್ಲಿ ಪರಿಸರದ ಏಕಾಂತಕ್ಕೆ ಧಕ್ಕೆ ತಂದಿದ್ದೀರಿ? ಯಾರೆಲ್ಲ ನಾನು ನೆಮ್ಮದಿಯಾಗಿರಬೇಕು ಅಂತ ಬೇರೆ ವ್ಯವಸ್ಥೆಯ ನೆಮ್ಮದಿ ಕೆಡಿಸಿದ್ದೀರಿ? ಯಾರೆಲ್ಲ ಟ್ರೆಕ್ಕಿಂಗ್ ಹೋಗುವಾಗ ಅಲ್ಲಿನ ಪರಿಸರಕ್ಕೆ ಕಸದ ಕೊಡುಗೆ ಕೊಟ್ಟು ಬಂದಿದ್ದೀರಿ? ಬಿಯರು ಬಾಟಲು ಬಿಟ್ಟು ಬಂದಿದ್ದೀರಿ? ಯಾರೆಲ್ಲ ಪರಿಸರದ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನೂ ಬಿಡದೆ ಟ್ರೆಕ್ಕಿಂಗ್ ಹೆಸರಲ್ಲಿ ಬೆತ್ತಲಾಗಿಸಿದ್ದೀರಿ? ಯಾರೆಲ್ಲ ರೆಸಾರ್ಟ್​ಗೆ ಹೋದಾಗ ಚಿತ್ತಾಗಿ ಕೂಗಾಡಿ ಅಲ್ಲಿನ ಸಹಜ ವಾತಾವರಣಕ್ಕೆ ಭಂಗ ತಂದಿದ್ದೀರಿ? ಯಾರೆಲ್ಲ ಹಬ್ಬಕ್ಕೆ, ಉತ್ಸವಕ್ಕೆ ಹಂಡ್ರೆಡ್ ಶಾಟ್ಸ್ ಪಟಾಕಿ ಹಚ್ಚಿ ಶಬ್ದಮಾಲಿನ್ಯ ಮಾಡಿದ್ದೀರಿ? ಯಾರೆಲ್ಲ ಸುಮ್ಮನಾದರೂ ಸಂಜೆಗೊಂದು ಡ್ರೖೆವ್ ಹೋಗಿದ್ದೀರಿ? ಯಾರೆಲ್ಲ ತಮ್ಮ ಪ್ರಕಟಿತ ಪುಸ್ತಕಗಳ ಸಂಖ್ಯೆ ಹೆಚ್ಚಿಸಿಕೊಳ್ಳಲಿಕ್ಕೆ ಬರೆದಿದ್ದೆಲ್ಲವನ್ನೂ ಪುಸ್ತಕ ಮಾಡಿದ್ದೀರಿ? ಯಾರೆಲ್ಲ ಕೇಳದಿದ್ದರೂ ಪುಸ್ತಕ ಕಳಿಸಿ ಹಣ ಹಾಕಿ ಅಂದಿದ್ದೀರಿ? It goes on.
ಆತ್ಮಸಾಕ್ಷಿಯಾಗಿ ಉತ್ತರಿಸಿಕೊಂಡರೆ ಈ ಇಷ್ಟರಲ್ಲಿ ಎಂಟಕ್ಕೆ ಹೌದು ಅಂತಿದ್ದರೂ ನಮಗೆ ಇನ್ನೊಬ್ಬರೆಡೆಗೆ ಹೀಗೆ ಬೆರಳು ತೋರುವ ಹಕ್ಕಿಲ್ಲ. ‘ಅಯ್ಯೋ ಇದನ್ನೆಲ್ಲ ಕೇಳಲಿಕ್ಕೆ ನೀನು ಯಾರು? ನಮ್ಮ ಅಂತಸ್ತಿಗೆ ತಕ್ಕಂತೆ ನಾವು ಖರೀದಿಸ್ತಿವಿ. ಬದುಕ್ತೀವಿ. ಫಾರಿನ್ ಟೂರೂ ಹೋಗ್ತಿವಿ. ನಿನಗೆ ಶಕ್ತಿ ಇಲ್ಲ ಅಂದ್ರೆ ತೆಪ್ಪಗಿರು’ ಅಂದಿರಾ. ಹಾಗೆನ್ನುವ ಹಾಗೇ ಇಲ್ಲ. ‘ನಮ್ಮ ಹಣದಲ್ಲಿ ವರ್ಷಕ್ಕೆರಡು ವಿದೇಶಿ ಪ್ರವಾಸ ಮಾಡ್ತಿವಿ. ಮನೆ ಕಟ್ತಿವಿ’ ಅನ್ನುವಿರಾದರೆ, ಗುಡ್ಡ ಕುಸಿಯಲು ಕಾರಣವಾದ ಮೈನಿಂಗು, ಹೈವೇ ತಯಾರಾಗಲು ಬೇಕಾದ ಕೃಷಿಭೂಮಿ, ಏರ್​ಪೋರ್ಟಿಗೆ ಬೇಕಾದ ಜಾಗದಲ್ಲಿದ್ದ ಕೆರೆ ಎಲ್ಲ ಕೊನೆಯಾಗುವುದಕ್ಕೆ ನೀವೂ ಕೊಡುಗೆ ನೀಡಿದ್ದೀರಿ. ಮಾಡಿ, ಆದರೆ ಬೆರಳು ತೋರಿಸುವ ಹಕ್ಕು ನಿಮಗಿಲ್ಲ.
ಈ ಎಲ್ಲ ಸವಲತ್ತುಗಳನ್ನು ಅನುಭವಿಸಲಿಕ್ಕಾಗಿಯೇ ಮಾಡಿರುವುದು ಎಂದಮೇಲೆ ತಪ್ಪು ಅಂತ ಹೇಳುವುದು ಎಷ್ಟು ಸರಿ? ಹಾಗಾದರೆ ನಾವು ಬೆರಳು ತೋರುತ್ತಿರುವುದು ಇದಾವುದೂ ಇದ್ದರೂ ಇರದಿದ್ದರೂ ಬದುಕು ಬದಲಾಗದ ಆ ವರ್ಗಕ್ಕಾ?
***
ನಮ್ಮೂರಿನ ಐತಿಹಾಸಿಕ ಬೆಟ್ಟದ ತುದಿಗೆ ವೆಹಿಕಲ್ ಹಾದಿ ಮಾಡುವ ಸಲುವಾಗಿ, ಎಷ್ಟೋ ಯುಗಗಳಿಂದ ಸಹಜವಾಗಿದ್ದ ಅದರ ಬುಡಕ್ಕೆ ಡೈನಮೈಟ್ ಇಟ್ಟು ಸಿಡಿಸಲಾಯಿತು. ಆ ಹಾದಿ ಹೋಗುವ ಮಾರ್ಗದಲ್ಲಿ ಶತಮಾನಗಳಿಂದಿದ್ದ ಕಲ್ಲುಗುಂಡುಗಳನ್ನು, ಕುಳ್ಳು ಮರಗಳನ್ನು ಬುಡಮೇಲು ಮಾಡಿ ಹಿಟಾಚಿ ಜೆಸಿಬಿಯಲ್ಲಿ ಬೆಟ್ಟದಿಂದಾಚೆಗೆ ಉರುಳಿಸಿದ್ರು. ಬೆಟ್ಟಕ್ಕೆ ಹೋದಾಗ ಈ ದೃಶ್ಯ ನೋಡಿ ಎದೆ ಒಡೆದು ವಿಚಾರಿಸಿದಾಗ, ‘ಇದಕ್ಕೆ ತಲೆ ಹಾಕಬೇಡಿ ನೀವು, ಸೋಕಾಲ್ಡ್ ಪರಿಸರವಾದಿಗಳು’ ಅಂದರು. ‘ಬೆಟ್ಟಕ್ಕೆ ವರ್ಷಕ್ಕೊಮ್ಮೆ ಆಗುವ ಜಾತ್ರೆಗೆ ಸಾಮಗ್ರಿ ಸಾಗಿಸುವ ಕಷ್ಟ ನಮಗೆ ಗೊತ್ತಿದೆ, ನಿಮಗ್ಯಾಕೆ ಉಸಾಬರಿ ಅಂತಲೂ’ ಆಯ್ತು.
ಎಷ್ಟೆಷ್ಟೊ ಯುಗಗಳ ಆಚೆಗೆ ಭೂಮಿಯಿಂದ ಸಿಡಿದ ಜ್ವಾಲಾಮುಖಿ ಹೀಗೆ ಸಾವಿರಾರು ಎಕರೆ ವಿಸ್ತಾರಕ್ಕೆ, ಸಾವಿರಾರು ಮೀಟರ್ ಎತ್ತರಕ್ಕೆ ಚಿಮ್ಮಿ ಗುರುತ್ವದ ನಿಯಮಾನುಸಾರ, ಈ ಸೌರಮಂಡಲದ ಸೂತ್ರಕ್ಕನುಸಾರ ಒಂದು ಅಕಾರದಲ್ಲಿ ರೂಪುಗೊಂಡಿದೆ ಮತ್ತು ಅಲ್ಲಿ ನಿಂತಿದೆ. ಇಡೀ ಆ ಸ್ಥಳೀಯ ಭೂಪ್ರದೇಶದ ವಾತಾವರಣ ಬೆಟ್ಟದ ಇರುವಿಕೆಯಿಂದ ಸೂತ್ರಬದ್ಧವಾಗಿದೆ. ಸಹಜವಾಗಿದೆ. ಜೊತೆಗೆ ಮನುಷ್ಯರೂ ಹತ್ತಲಾಗುವಂತೆ ಸಹಜ ಏರು ಹೊಂದಿದೆ. ಯಾವುದೋ ಸಣ್ಣ ಕಾರಣ ನೀಡಿ ಇಂತಹ ರಕ್ಷಕ ಬೆಟ್ಟದ ನಡುವೆ ಗೆರೆ ಎಳೆಯುವುದು ಎಷ್ಟು ಮಾತ್ರ ಸರಿ?
***
ಈ ಯುಗದ ಮತ್ತು ಭೂಮಿಯ ಆಯಸ್ಸಿನ ಮುಂದಿನ ಅಷ್ಟೂ ಕಾಲಕ್ಕೆ ಸರಿಪಡಿಸಲಾಗದಂತಹ ತಪ್ಪು ಎಂದರೆ ಎತ್ತಿನಹೊಳೆ ಜಲವಿದ್ಯುತ್ ಯೋಜನೆ ಹಾಗು ಎತ್ತಿನಹೊಳೆ ನದಿತಿರುವು ಯೋಜನೆ. ಇಂತಹ ಹೇಯ, ಅಪದ್ಧ, ಬೇಜವಾಬ್ದಾರಿಯ ಕೆಲಸ ಮುಂದಿನ ದಿನಗಳಲ್ಲಿ ಆಗುವುದಿಲ್ಲ. ಆಗಬಾರದು ಕೂಡ. ಈ ಭೂಮಂಡಲದ ಉದಯದ ಕಾಲಾನುಸಾರ ಸಹ್ಯಾದ್ರಿ ಶಿಖರ ಶ್ರೇಣಿಗಳು ಭೂಮಿಯ ಮೇಲಿನ ಅತಿ ಹಿರಿಯ ರಚನೆಗಳು. ಹಿಮಾಲಯ ಪರ್ವತ ಶ್ರೇಣಿ ಇದಕ್ಕೆ ಹೋಲಿಸಿದರೆ ಇನ್ನೂ ಎಳಸು. ಯುಗಯುಗಗಳಿಂದ ಇರುವ ಈ ಸಹ್ಯಾದ್ರಿ ಶ್ರೇಣಿಗಳು ಇಡೀ ಭೂಮಂಡಲದ ವ್ಯವಸ್ಥಿತ ಕಾರ್ಯಕ್ಕೆ ಅನಿವಾರ್ಯ.
ತಲೆ ಮಾಸಿರುವ ರಾಜಕಾರಣಿಯೊಬ್ಬ ಇದರ ನಡು ಹೃದಯಕ್ಕೆ ಚೂರಿ ಹಾಕಬಲ್ಲ ಎಂದರೆ ಇಲ್ಲಿನ ವ್ಯವಸ್ಥೆ ಎಷ್ಟು ಸಡಿಲವಿದೆ? ಎಷ್ಟೋ ಶತಮಾನಗಳಿಂದ ಗಾಳಿಯ ಚಲನೆ, ನದಿಯ ಹರಿವು, ಮೋಡಗಳ ಕಟ್ಟುವಿಕೆ ಒಂದು ಸೂತ್ರಬದ್ಧತೆಗೆ, ಸುಸಂಬದ್ಧತೆಗೆ ಒಳಪಟ್ಟಿದ್ದು ಈ ಸಹ್ಯಾದ್ರಿ ಶ್ರೇಣಿಗಳಿಂದ. ಯಾವಾಗ ಭೂಮಿಯ ಎದೆಯಾಳವನ್ನು ತಲುಪುವಂತೆ ರಾಕ್ಷಸ ಗಾತ್ರದ ಪೈಪುಗಳನ್ನು ಹೂಳಲು ಮರಗಳನ್ನು ಕಡಿದು ವೈಬ್ರೆಟರ್​ಗಳಲ್ಲಿ ಕೊರೆದರೋ ಅಲ್ಲಿಂದಲೇ ಈ ಅಸಹಜ ಮಳೆ (unnatural dispersal pattern of rain) ಸುರಿಯುವಿಕೆ ಶುರುವಾಯಿತು.
2019ರಲ್ಲಿ ಸಕಲೇಶಪುರದಲ್ಲಿ ಮೊದಲ ಬಾರಿಗೆ ಒಂದೇ ದಿನ ಇಪ್ಪತ್ನಾಲ್ಕು ಇಂಚು ಮಳೆ ಸುರಿದಾಗ ಹಿರಿಯರೊಬ್ಬರು, ‘ಪಶ್ಚಿಮ ಘಟ್ಟಗಳ ನಡುವೆ ನಿರ್ವಿುಸಿದ ಈ ನರಕದ ಹೊಂಡದಿಂದಾಗಿ ಗಾಳಿಯ ಚಲನೆಯ ದಿಕ್ಕೇ ಬದಲಾಗಿದೆ. ಇನ್ನು ಸಹಜ ಮಳೆ ಕನಸೇ’ ಅಂದಿದ್ದರು.
ಒಂದು ಮೆಟ್ಟಿಲು ತೊಳೆಯುವುದಕ್ಕೆ ಬಕೆಟ್​ಗಟ್ಲೆ ನೀರು ಸುರಿದು, ಒಂದು ಕಮೋಡು ಫ್ಲಶ್ಶಿಗೆ ಇಡೀ ಕುಟುಂಬಕ್ಕಾಗುವಷ್ಟು ನೀರು ಬೇಕಾಯ್ತೊ ಅಲ್ಲಿಂದಲೇ ನದಿ ತಿರುವುಗಳಂತಹ ಅಸಹಜ ಯೋಜನೆಗಳೂ ಶುರುವಾದವು. ರಾಜಕಾರಣಿಗಳ, ಉದ್ಯಮಿಗಳ ನೂರು ತಲೆಮಾರಿಗಾಗುವಷ್ಟು ರೊಕ್ಕ ಕೂಡಿಡುವುದಕ್ಕೆ ಈ ಯೋಜನೆಗಳು ಅಗತ್ಯವೂ ಆಗಬೇಕಾಯ್ತು. ‘ಕಾಫಿ ತೋಟದವರು ಹಾಳು ಮಾಡಿದ್ದೀರಿ’ ಅಂದರು. ಕಾಫಿ ನಮ್ಮ ಭಾಗಕ್ಕೆ ಪರಿಚಯವಾಗಿದ್ದು ನೂರು ವರ್ಷಗಳೀಚೆಗೆ. ಭೂಕುಸಿತದಂತಹ ವಿಕೋಪ ಶುರುವಾಗಿದ್ದು ಐದು ವರ್ಷಗಳೀಚೆಗೆ. ಕಾಫಿತೋಟಗಳನ್ನು, ಖಾಲಿ ಬೆಟ್ಟಗಳನ್ನು ಮಹಾನಗರಿಗರು ಖರೀದಿಸಲಾರಂಭಿಸಿದ್ದೂ ಈಚೆಗೆ. ಬಂದವರು ಬೆಟ್ಟದ ತುದಿಯಲ್ಲಿ ನರಕದ ಕೂಪಗಳನ್ನು ನಿರ್ವಿುಸಿ ಹಣದ ಹೊಳೆ ನೋಡತೊಡಗಿದರು. ಇದು ಸ್ಥಳೀಯರನ್ನು ಪ್ರೇರೇಪಿಸಿತು. ಇನ್ನು ಕಾಫಿತೋಟದಿಂದಲೇ ಗುಡ್ಡ ಕುಸಿಯಿತು ಎನ್ನುವ ಜ್ಞಾನಿಗಳು ಒಮ್ಮೆ ಬಂದು ತೋಟದ ಜೀವವೈವಿಧ್ಯ, ಮರಗಾಡು ಮತ್ತು ಮರಗಳ, ಕಳೆಗಳ, ಕಾಡುಬಳ್ಳಿಗಳ ಬೇರು ನಿರ್ವಿುಸಿರುವ ಮಣ್ಣಿನ ದಟ್ಟ ಬಂಧ, ಸಹಜ ಎಲಿವೇಷನ್ ನೋಡಬೇಕು. ಬೆಳೆಗಾರರು ಕೆರೆಗಳನ್ನು ನಿರ್ಮಾಣ ಮಾಡಬೇಕಿರುವುದು ತಗ್ಗಿನ ಜಾಗದಲ್ಲಿ. ರಾಜಕಾರಣಿಗಳು ಈಚೆಗೆ ಖರೀದಿಸಿದ ಬೆಟ್ಟದ ತುದಿಯಲ್ಲಿ ಶೋಕಿಯ ಈಜುಕೊಳಗಳು ನಿರ್ವಣವಾದವು.
***
ಯೋಧರು ಟೊಂಕಕಟ್ಟಿ ರಕ್ಷಣೆಗೆ ನಿಂತರು, ಜೀವದ ಹಂಗು ತೊರೆದು ಯಾವುದೋ ಕೂಸನ್ನು ರಕ್ಷಿಸಿದ್ರು. ಉಕ್ಕುವ ನದಿಗೆ ಧುಮುಕಿ ಶವ ಹುಡುಕಿದ್ರು. ಯಾಕೆ? ಯೋಧರಾದ ಮಾತ್ರಕ್ಕೆ ಅವರ ಜೀವಕ್ಕೆ ಬೆಲೆ ಇಲ್ಲದಾಯಿತಾ? ಹಂಗು ತೊರೆದು ಹೋರಾಡಿ ಕೂಸನ್ನು ಹೊತ್ತು ತರುತ್ತಿರುವ ಆ ಯೋಧನ ಕಣ್ಣಲ್ಲಿರುವ ಆತಂಕ, ಭಯ ಎಲ್ಲೋ ದೂರದಲ್ಲಿರುವ ಅವನ ಕುಟುಂಬಕ್ಕೆ ತಲುಪಿದಾಗ ಅವರ ಪರಿಸ್ಥಿತಿ ಹೇಗಿರಬೇಡ. ಮಗ ಮನೆಗೆ ಬಂದಾನೋ ಇಲ್ಲವೊ ಎನ್ನುವ ಅವರ ಅತಂಕ ಕೇಳುವವರಾರು. ಈ ವಿಕೋಪದ ದಿನಗಳಲ್ಲಿ ಉತ್ತರಾಖಂಡಕ್ಕೆ ಪ್ರವಾಸ ಹೋಗಿ, ಅಲ್ಲಿ ಭೂಮಿ ಕುಸಿದರೆ, ನದಿ ಮುನಿದರೆ ನಾವು ರೆಡಿ ಇರ್ತಿವಿ ಅಂತ ಯೋಧರು ಈ ಶೋಕಿ ಜನಗಳಿಗೆ ಬರೆದು ಕೊಟ್ಟಿದ್ದಾರಾ?
***
ಹೊಸ ಬ್ರಿಡ್ಜ್ ತಯಾರಾಯಿತು ಕೇರಳದಲ್ಲಿ. ಇನ್ನಷ್ಟು ಮೈನಿಂಗು. ಇನ್ನಷ್ಟು ಪರಿಸರ ನಾಶ. ಅಲ್ಲೆಲ್ಲೊ ಬೆಟ್ಟಕ್ಕೆ ರೋಪ್ ವೇ ಹಾಕಿದ್ರು. ಪರಿಸರದ ಪ್ರೖೆವೇಸಿಗೆ ಇನ್ನಷ್ಟು ಭಂಗ. ಇನ್ನೆರಡು ಮನೆ ಕಟ್ಟಿದ್ವಿ. ಉಕ್ಕು, ಕಬ್ಬಿಣ, ಮರ, ವಿದ್ಯುತ್ ಇನ್ನಷ್ಟು ಪರಿಸರ ನಾಶ. ಇನ್ನೊಂದು ಕಾರು, ಇನ್ನೂ ತೈಲ, ಇದೊಂದು ವಿಷವರ್ತಲ. ಯಾರಿಗೋ ಕೈ ತೋರುವ ಮುನ್ನ ನಾವೆಷ್ಟು ಸಹಜವಾಗಿದ್ದೀವಿ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳ ಬೇಕಾದ ಅನಿವಾರ್ಯ ಕಾಲವಿದು.
(ಲೇಖಕರು ಕವಯಿತ್ರಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
