| ಮಹೇಶ್ ವಿಜಾಪುರ ಬೆಳಗಾವಿನಾಡವಿರೋಧಿತನ ತೋರುತ್ತಲೇ ಬಂದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಕರ್ನಾಟಕ, ಕನ್ನಡ ಎಂದರೆ ಕಾಲು ಕೆದರಿ ತಂಟೆಗೆ ಬರುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಮೊಂಡಾಟಕ್ಕೆ ಈ ವರ್ಷದ ರಾಜ್ಯೋತ್ಸವ ಕೊನೆಯ ಮೊಳೆ ಹೊಡೆಯಿತು.
ಬೆಳಗಾವಿ ಮಹಾನಗರ ಪಾಲಿಕೆ ರಚನೆಯಾದ ದಿನಗಳಿಂದಲೂ ಎಂಇಎಸ್ ಪ್ರತಿನಿಧಿಸುತ್ತಿದ್ದ ಮೇಯರ್ ಮತ್ತು ಉಪಮೇಯರ್ ರಾಜ್ಯೋತ್ಸವ ಸೇರಿ ಯಾವೊಂದು ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ದಾಖಲೆಗಳೇ ಇಲ್ಲ. ಬದಲಾಗಿ ರಾಜ್ಯೋತ್ಸವದಂದು ಎಂಇಎಸ್ ಆಚರಿಸುವ ‘ಕರಾಳ ದಿನಾಚರಣೆ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೊಂಡುತನ ಮೆರೆಯುತ್ತಿದ್ದರು. ಆದರೆ ಈ ವರ್ಷ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಬಾರದ ಮೇಯರ್ ಶೋಭಾ ಸೋಮನಾಚೆ ಮತ್ತು ಉಪಮೇಯರ್ ರೇಷ್ಮಾ ಪಾಟೀಲ ಇಬ್ಬರೂ ಪಾಲ್ಗೊಂಡಿರುವುದು ಉತ್ತಮ ಬೆಳವಣಿಯಾಗಿ ಕಂಡುಬರುತ್ತಿದ್ದರೆ, ಕರಾಳ ದಿನ ಆಚರಿಸುವ ಎಂಇಎಸ್​ನ ಅಸ್ತಿತ್ವಕ್ಕೆ ಪೆಟ್ಟು ಕೊಟ್ಟಂತಾಗಿದೆ. ಜತೆಗೆ ಮರಾಠಿ ಭಾಷಿಕರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದ ಸ್ಥಳೀಯ ಶಾಸಕರೂ ಈಗ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಮೆಚ್ಚುಗೆಗೆ ಕಾರಣವಾಗುತ್ತಿದೆ.
ಪಕ್ಷಾಧಾರಿತ ಚುನಾವಣೆ ಕಾರಣ:1851ರಲ್ಲಿ ಮುಂಬೈ ಕರ್ನಾಟಕ ಪ್ರಾಂತ್ಯದ ಮೊದಲ ಮುನ್ಸಿಪಲ್ ಕಾಪೋರೇಷನ್ ಎನಿಸಿಕೊಂಡಿದ್ದ ಬೆಳಗಾವಿ 1984ರಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತ್ತು. ಅಂದಿನಿಂದ ಭಾಷಾಧಾರಿತವಾಗಿ ಚುನಾವಣೆ ಎದುರಿಸುತ್ತ ಬಂದಿದ್ದ ಪಾಲಿಕೆಯಲ್ಲಿ ಈವರೆಗೆ ಸಿದ್ದನಗೌಡ ಪಾಟೀಲ, ಎಂ.ಬಿ.ನಿರ್ವಾಣಿ, ಪ್ರಶಾಂತಾ ಬುಡವಿ ಮತ್ತು ಬಸಪ್ಪ ಚಿಕ್ಕಲದಿನ್ನಿ ನಾಲ್ವರು ಮಾತ್ರ ಕನ್ನಡ ಭಾಷೆಯ ಸದಸ್ಯರು ಮೇಯರ್ ಸ್ಥಾನಕ್ಕೇರಿದ್ದರೆ ಇನ್ನುಳಿದವರೆಲ್ಲರೂ ಎಂಇಎಸ್ ಸದಸ್ಯರೇ ಮೇಯರ್- ಉಪಮೇಯರ್​ಗಳಾಗಿದ್ದರು. 2021ರಲ್ಲಿ ಮೊದಲ ಬಾರಿಗೆ ಪಕ್ಷಗಳ ಚಿಹ್ನೆ ಆಧಾರದ ಮೇಲೆ ಚುನಾವಣೆ ನಡೆದಾಗ 58 ಸ್ಥಾನಗಳ ಪೈಕಿ 35ರಲ್ಲಿ ಗೆದ್ದಿದ್ದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದು ಶೋಭಾ ಸೋಮನಾಚೆ ಅವರನ್ನು ಮೇಯರ್ ಮತ್ತು ರೇಷ್ಮಾ ಪಾಟೀಲರನ್ನು ಉಪಮೇಯರ್ ಆಗಿ ಆಯ್ಕೆ ಮಾಡಿತ್ತು.
ಪೆಟ್ಟು ಕೊಟ್ಟಿದ್ದರು:ಮಹಾನಗರ ಪಾಲಿಕೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಎಂಇಎಸ್ ಮುಖಂಡರು ಮೇಯರ್, ಉಪಮೇಯರ್ ಸೇರಿ ಎಂಇಎಸ್​ನಿಂದ ಆಯ್ಕೆಗೊಂಡ ನಗರಸೇವಕರೆಲ್ಲರೂ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಆಚರಿಸುವ ಕರಾಳ ದಿನಾಚರಣೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿದ್ದರು. 2013ರಲ್ಲಿ ಎಂಇಎಸ್ ಬಲ ಮುರಿದಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ ರಾಜ್ಯ ಸರ್ಕಾರದ ಮಾತು ಕೇಳುವ ಸದಸ್ಯರನ್ನು ಮೇಯರ್ ಸ್ಥಾನಕ್ಕೆ ಆಯ್ಕೆಗೊಳ್ಳುವಂತೆ ನೋಡಿಕೊಳ್ಳುವುದಲ್ಲದೆ ಮಹಾನಗರ ಪಾಲಿಕೆ ಪರಿಷತ್ ಸಭೆಗೂ ಮುಂಚೆ ‘ನಾಡಗೀತೆ’ ಹಾಡಿಸುವ ಮೂಲಕ ಎಂಇಎಸ್​ಗೆ ಮೊದಲ ಮರ್ವಘಾತ ಕೊಟ್ಟಿದ್ದರು. ಅಂದಿನ ಮೇಯರ್ ಮಹೇಶ್ ನಾಯಕ್ ಮತ್ತು ಕಿರಣ ಸಾಯನಾಕ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳದ ಕಾರಣಕ್ಕೆ ಸಿಟ್ಟಿಗೆದ್ದ ಎಂಇಎಸ್ ನಾಯಕರು ಅವರ ಮನೆಗಳಿಗೆ ಮುತ್ತಿಗೆ ಹಾಕಿ ಕಲ್ಲು ತೂರಿ ಬೆದರಿಸಿದ್ದರು.
ಸೂಪರ್​ಸೀಡ್:ನಗರಾಭಿವೃದ್ಧಿ ಇಲಾಖೆ ನಿಯಮಾನುಸಾರ ಆಡಳಿತ ನಿರ್ವಹಿಸದೆ ನಾಡವಿರೋಧಿ ಚಟುವಟಿಕೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ 2005 ಮತ್ತು 2011ರಲ್ಲಿ ಎಂಇಎಸ್ ಆಡಳಿತದ ಮಹಾನಗರ ಪಾಲಿಕೆಯನ್ನು ವಜಾ (ಸೂಪರಸೀಡ್)ಗೊಳಿಸಲಾಗಿತ್ತು. ನಾಡವಿರೋಧಿ ನಿಲುವು ಹೊಂದಿದ್ದ 2005ರಲ್ಲಿ ಮೇಯರ್ ಆಗಿದ್ದ ವಿಜಯ ಮೋರೆ ಅವರಿಗೆ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಮಸಿ ಬಳಿದಿದ್ದರೆ, 2011ರಲ್ಲಿ ಮೇಯರ್ ಆಗಿದ್ದ ಮಂಧಾ ಬಾಳೆಕುಂದ್ರಿ ವಿರುದ್ಧವೂ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದವು. 2013ರ ಕೊನೆಯ ಅವಧಿಯಲ್ಲಿ ಮತ್ತೆ ನಾಡವಿರೋಧಿತನ ಮುಂದುವರಿಸಿದ ಮೇಯರ್ ಸರಿತಾ ಪಾಟೀಲ್ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಪ್ರಯತ್ನಗಳು ನಡೆದಿದ್ದವು.
ಕರಾಳ ದಿನಾಚರಣೆ ಠುಸ್:ಎಂಇಎಸ್​ನ ಕೆಲ ಸದಸ್ಯರು ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ, ಗೋಗರೆದು ಕರೆದ ಮೇಲೂ ಮಹಾರಾಷ್ಟ್ರದ ಯಾವೊಬ್ಬ ನಾಯಕ ಕೂಡ ಬೆಳಗಾವಿಗೆ ಬರುವ ಧೈರ್ಯ ಮಾಡಲಿಲ್ಲ. ಇದರಿಂದ ಎಂಇಎಸ್ ಮುಖಂಡರು ಮುಖಭಂಗ ಅನುಭವಿಸಿದರು. ಕರಾಳ ದಿನ ಮಾಡುವುದಾಗಿ ಘೊಷಿಸಿದ್ದ ಮುಖಂಡರು, ಕರ್ನಾಟಕ ರಾಜ್ಯೋತ್ಸವ ಆರ್ಭಟ ನೋಡಿ ಒಂದೇ ತಾಸಿನಲ್ಲಿ ರ‍್ಯಾಲಿ ಮುಗಿಸಿ ನಡೆದರು. ಇನ್ನು ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರನ್ನು ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿಯೇ ಪೊಲೀಸರು ತಡೆದರು.
ಬಾಲಕನ ಹುಟ್ಟುಹಬ್ಬದ ಮುನ್ನಾದಿನವೇ ಸಂಸಾರ ಸರ್ವನಾಶ; ಸಮಾಧಿ ಮೇಲೆ ಬರ್ತ್​ಡೇ ಗಿಫ್ಟ್​​ಗಳನ್ನಿಟ್ಟ ಅಜ್ಜ-ಅಜ್ಜಿ!

ಮಕ್ಕಳಾದರೆ ದಂಡ ಹಾಕಬಾರದು; ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಬೇಕು: ಎಲಾನ್ ಮಸ್ಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 16 =
Remember me
