ಬೆಂಗಳೂರು:ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಶುರುವಾಗಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ‘ಬರ’ದ ಬಿಸಿ ತಾಗಲಿದೆ. ದೋಸ್ತಿ ಮಾಡಿಕೊಂಡಿರುವ ಬಿಜೆಪಿ, ಜೆಡಿಎಸ್ ಆಡಳಿತಾರೂಢ ಕಾಂಗ್ರೆಸ್ ಮೇಲೆ ಒಟ್ಟಾಗಿ ಮುಗಿಬೀಳಲು ಸಜ್ಜಾಗಿವೆ. ಪೂರ್ವಭಾವಿಯಾಗಿ ಜಂಟಿ ಸಮರಾಭ್ಯಾಸ ನಡೆಸಿ, ವಿಷಯಗಳನ್ನು ಪಟ್ಟಿ ಮಾಡಿಕೊಂಡಿವೆ. ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮಿಷನ್, ಸಚಿವರ ಆಪ್ತರ ಏಜೆಂಟರು ಮುಂತಾದ ಗಂಭೀರ ಆರೋಪಗಳು ಸದನದಲ್ಲಿ ಅನುರಣಿಸಲಿವೆ. ಸರ್ಕಾರ ಸಹ ಹಿಂದಿನ ಅವಧಿಯ ಆಡಳಿತದ ವೈಫಲ್ಯಗಳನ್ನು ಅಂಕಿ-ಅಂಶಗಳಸಹಿತ ಪಟ್ಟಿ ಮಾಡಿಕೊಂಡಿದೆ. ಇದರಿಂದಾಗಿ ಆಡಳಿತ-ಪ್ರತಿಪಕ್ಷಗಳ ಪರಸ್ಪರ ಕೆಸರೆರಚಾಟದ ಕಣವಾಗುವ ಲಕ್ಷಣಗಳು ಗೋಚರಿಸಿವೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಮರು ದಿನವೇ ಸದನ ಸೇರಲಿದೆ. ಇದರಿಂದಾಗಿ ಉಭಯ ಸದನಗಳಿಗೂ ರಾಜಕೀಯ ಸೋಂಕು ತಗುಲಲಿದ್ದು, ಪಕ್ಷಗಳ ಬಲಾಬಲದ ಟೀಕೆ-ಟಿಪ್ಪಣೆಗೂ ವೇದಿಕೆಯಾಗುವ ಸಾಧ್ಯತೆಯಿದೆ.
ಪೂರ್ವ ಸಿದ್ಧತೆ:ಉತ್ತರಕರ್ನಾಟಕದಲ್ಲಿ ನಡೆಸುವ ಅಧಿವೇಶನದ ಮಹತ್ವ, ಕಲಾಪದ ಮೌಲ್ಯ, ಸಮಯ ವ್ಯರ್ಥವಾಗದಂತೆ ನೋಡಿ ಕೊಳ್ಳಬೇಕೆಂಬ ಸಕಾರಾತ್ಮಕ ಯೋಚನೆ ಕಾರ್ಯಗತ ಗೊಳ್ಳಲಿದೆಯೆ ಎಂಬುದನ್ನು ಕಾದು ನೋಡಬೇಕು. ಬರಗಾಲ, ಅಭಿವೃದ್ಧಿ ಸ್ಥಗಿತ, ಗ್ಯಾರಂಟಿಗಳ ವೈಫಲ್ಯ, ವರ್ಗಾವಣೆ ದಂಧೆ ಸೇರಿ ಹಲವು ವಿಷಯಗಳು ಚರ್ಚೆಗೆ ಪಟ್ಟಿ ಮಾಡಿಕೊಂಡಿದೆ.
ಆಡಳಿತಪಕ್ಷ ಕಾಂಗ್ರೆಸ್ ಕೂಡ ಬಿಜೆಪಿ, ಜೆಡಿಎಸ್ ನೇತೃತ್ವದ ಆಡಳಿತಾವಧಿಯ ದಾಖಲೆಗಳನ್ನು ಹುಡುಕಿ, ಕೆದಕಿ ಸಂಗ್ರಹಿಸಿದ ಮಾಹಿತಿಯಿದೆ. ಕಲಾಪದಲ್ಲಿ ಚರ್ಚೆ ಕಾವೇರಿಸಲು ಮೂರು ಪಕ್ಷಗಳು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿರುವುದು ನಿಚ್ಚಳವಾಗಿದೆ.
ಉತ್ತರದೆಡೆ ಗಮನ:ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರಗಳು ಒತ್ತು ನೀಡಿವೆ. ಆದರೂ ಆಗಾಗ್ಗೆ ಉತ್ತರಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ತಲೆ ಎತ್ತಿ ಆಡಳಿತದ ಚುಕ್ಕಾಣಿ ಹಿಡಿದವರಿಗೆ ತಲೆಬಿಸಿ ಉಂಟು ಮಾಡಿದ ನಿದರ್ಶನಗಳಿವೆ. ಈ ಬಾರಿಯ ಅಧಿವೇಶನ ‘ಉತ್ತರದಾಯಿ’ಯಾಗುವ ನಿರೀಕ್ಷೆ ಗರಿಗೆದರಿದೆ. ಉತ್ತರಕರ್ನಾಟಕದ ಸಮಸ್ಯೆಗಳು, ಬೇಕು-ಬೇಡಗಳ ಬಗ್ಗೆ ವಿಶೇಷ ಚರ್ಚೆ, ‘ಉತ್ತರ’ ಸಿಗಬೇಕೆಂದು ಜನರು ಅಪೇಕ್ಷಿಸಿದ್ದಾರೆ. ಉಭಯ ಸದನಗಳ ಪೀಠಾಧ್ಯಕ್ಷರಾದ ಯು.ಟಿ. ಖಾದರ್ ಹಾಗೂ ಬಸವರಾಜ ಹೊರಟ್ಟಿ ಚಿಂತನಾ ಲಹರಿಯು ‘ಉತ್ತರದಾಯಿತ್ವ’ದತ್ತ ಮುಖ ಮಾಡಿದೆ. ಕಳೆದ ವರ್ಷದ ಚಳಿಗಾಲದ ಅಧಿವೇಶನದ ಕಲಾಪಗಳು ಬಹುಪಾಲು ಮತಾಂತರ ನಿಷೇಧ, ಪಂಚಮಸಾಲಿ 2ಎ ಮೀಸಲು ಇನ್ನಿತರ ವಿವಾದ, ತಗಾದೆಗಳು ಆವರಿಸಿಕೊಂಡಿದ್ದವು. ಕಾಟಾಚಾರಕ್ಕೆ ಉತ್ತರಕರ್ನಾಟಕದ ಬಗ್ಗೆ ಚರ್ಚೆಯಾದವು. ರೈಲು, ನೀರಾವರಿ ಯೋಜನೆಗಳ ಬಗ್ಗೆ ಒಂದಿಷ್ಟು ನಿರ್ಧಾರಗಳ ಹೊಮ್ಮಿದವೇ ಹೊರತು ವಿಶೇಷ ಉಪಕ್ರಮಗಳು ಗೌಣವಾದವು.
ಹೆಚ್ಚು ಫೋಕಸ್;ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಹಾಗೂ ಕನಿಷ್ಠ ಸವಲತ್ತುಗಳ ಮೇಲೆ ಹೆಚ್ಚು ಗಮನಹರಿಸಿ, ಪರಿಣಾಮಕಾರಿಯಾಗಿ ವಸ್ತುಸ್ಥಿತಿ ಅವಲೋಕನ ಸಂಭವವಿದೆ. ಮಾನವ ಅಭಿವೃದ್ಧಿ ಸೂಚ್ಯಂಕ, ಸುಸ್ಥಿರ ಅಭಿವೃದ್ಧಿ ಗುರಿಗಳು, ಡಾ.ಡಿ.ಎಂ. ನಂಜುಂಡಪ್ಪ, ಗಡಿ ಪ್ರದೇಶಾಭಿವೃದ್ಧಿ ವರದಿಗಳು, ಮೌಲ್ಯಮಾಪನ, ನಿಯತಾಂಕಗಳು ವಿಷಯವಸ್ತು ಒದಗಿಸುತ್ತವೆ. ತಲಾ ಆದಾಯ, ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಲಭ್ಯತೆ, ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನಗಳ ಮೇಲೂ ಬೆಳಕು ಚೆಲ್ಲುವ ಅವಕಾಶಗಳು ವಿಪುಲವಾಗಿವೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅನುದಾನ ಮಂಜೂರು, ಬಿಡುಗಡೆ, ಬಳಕೆ ಮತ್ತು ಉಪಯೋಗದ ಬಗ್ಗೆ ಎರಡು ಆಯಾಮದ ಮೌಲ್ಯಮಾಪನಗಳಾಗಿವೆ. ಸಂವಿಧಾನದ 371ಜೆ ಅನ್ವಯ ಕಲ್ಯಾಣ ಕರ್ನಾಟಕಕ್ಕೆ ಶಾಸನಾತ್ಮಕ ವಿಶೇಷ ಸ್ಥಾನಮಾನ ನೀಡಿದ ಬಳಿಕ ಅಭಿವೃದ್ಧಿ, ಉದ್ಯಮ ಸ್ಥಾಪನೆ, ಉದ್ಯೋಗಾವಕಾಶ ಸೃಷ್ಟಿ ವಲಯಗಳಲ್ಲಿ ಆಗಿರುವ ಸಾಧನೆ ಮತ್ತು ವೇದನೆ ಎರಡೂ ಹೊರಬೀಳಲು ವೇದಿಕೆಯಾಗಲಿದೆ. ರಾಷ್ಟ್ರೀಯ ನೀತಿ ಆಯೋಗದ ಶಿಫಾರಸು ಪ್ರಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ರಾಯಚೂರು ಮತ್ತು ಯಾದಗಿರಿ ಸೇರಿದ್ದು, ಕೇಂದ್ರ ಸರ್ಕಾರದ ನೀಡಿದ ಕೊಡುಗೆಗಳು ಪರಾಮಶಿಸಲು ಶಾಸಕರು ಉತ್ಸುಕರಾಗಿದ್ದಾರೆ.
ಕಾರ್ಯಯೋಜನೆಗೆ ದಿಕ್ಸೂಚಿ:ಆಯಾ ಕ್ಷೇತ್ರದ ಆಮೂಲಾಗ್ರ ಸುಧಾರಣೆಗೆ ನಿರ್ದಿಷ್ಟ ಪರಿಹಾರದ ಪ್ಯಾಕೇಜ್, ಬೇಕಾದ ಆರ್ಥಿಕ ಸಂಪನ್ಮೂಲದ ಮಾಗೋಪಾಯಗಳ ಬಗ್ಗೆ ಸದನ ಚಿಕಿತ್ಸಕ ನೋಟ ಬೀರಬಹುದು. ಕೃಷ್ಣಾ ಎರಡನೇ ನ್ಯಾಯಾಧಿಕರಣದ ಹಂಚಿಕೆ ನೀರು ಬಳಕೆಗೆ ಅಡ್ಡಿಯಾದ ಅಧಿಸೂಚನೆ ಪ್ರಕಟಣೆ ವಿಳಂಬ, ಕಳಸಾ-ಬಂಡೂರಿ ನಾಲಾ ಯೋಜನೆಗಳಿಗೆ ವಿವಿಧ ತೀರುವಳಿಗಳ ಬಾಕಿ ವಿಷಯವು ಆಡಳಿತ-ಪ್ರತಿಪಕ್ಷಗಳ ವಾಗ್ಯುದ್ಧಕ್ಕೆ ಇಳಿದರೂ ಅಚ್ಚರಿಯಿಲ್ಲವೆಂದು ವಿಶ್ಲೇಷಿಸಲಾ ಗುತ್ತಿದೆ. ಈ ನಡುವೆ ಯು.ಟಿ. ಖಾದರ್ ಹಾಗೂ ಬಸವರಾಜ ಹೊರಟ್ಟಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಭಾನುವಾರ ಪ್ರತ್ಯೇಕ ಮಾಧ್ಯಮಗೋಷ್ಠಿ ಕರೆದಿದ್ದು, ಅಧಿವೇಶನಕ್ಕೆ ಸ್ಪಷ್ಟ ಮಾರ್ಗಸೂಚಿ ಹಾಕಿಕೊಡುವ ನಿರೀಕ್ಷೆಯಿದೆ.
ಮೈತ್ರಿ ಪಕ್ಷಗಳಿಂದ ಒಗ್ಗಟ್ಟಿನ ಹೋರಾಟ:ವರ್ಗಾವಣೆ ದಂಧೆ, ಕಾವೇರಿ ನೀರು ಹಂಚಿಕೆ ವಿಚಾರದ ಅಸಮರ್ಪಕ ನಿರ್ವಹಣೆ ಮತ್ತಿತರ ಸರ್ಕಾರದ ತಪ್ಪುಗಳ ವಿರುದ್ಧ ಹೋರಾಡಲು ಮೈತ್ರಿ ಪಕ್ಷಗಳು ಜತೆಯಾಗಿ ನಿಲುವಳಿ ಸೂಚನೆ ಮಂಡಿಸಲಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಳಗಾವಿ ಅಧಿವೇಶನ ನಮ್ಮ ಪಾಲಿಗೆ ಬಹಳ ಮಹತ್ವವಾದ ಅಧಿವೇಶನ. ಸರ್ಕಾರ ಒಟ್ಟು 60 ತಪ್ಪುಗಳನ್ನು ಮಾಡಿದೆ ಎಂದು ತಿಳಿಸಿದರು. ಆರ್. ಅಶೋಕ್ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದ್ದು, ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಪಕ್ಷದ ಮುಖಂಡರಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರಿಷತ್ ಪ್ರತಿಪಕ್ಷ ನಾಯಕ, ವಿಧಾನಸಭೆ ಉಪನಾಯಕ, ಉಭಯ ಸದನಗಳ ವಿಪ್​ಗಳ ನೇಮಕ ಕುರಿತು ಕೇಂದ್ರದ ನಾಯಕರ ಜತೆ ನಾನು, ವಿಜಯೇಂದ್ರ ಮಾತಾಡಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ತೆಗೆದುಕೊಂಡಿದೆ. ಅಧಿವೇಶನ ಆರಂಭಕ್ಕೂ ಮುಂಚೆ ಆಯ್ಕೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಎರಡು ದಿನ ಮೀಸಲು:ಈ ಬಾರಿ ಅಧಿವೇಶನದಲ್ಲಿ ಮೊದಲ ವಾರವೇ ಉತ್ತರ ಕರ್ನಾಟಕದ ಸ್ಥಿತಿಗತಿ ಕುರಿತು ವಿಸõತವಾದ ಚರ್ಚೆಗೆ ಎರಡು ದಿನ ಮೀಸಲಿಡಲು ಹೊರಟ್ಟಿ, ಖಾದರ್ ಒತ್ತಾಸೆಯಾಗುವ ಸಾಧ್ಯತೆಗಳಿವೆ. ಸಾರಾಸಗಟು ಎಲ್ಲ ವಿಷಯಗಳನ್ನು ಕೈಗೆತ್ತಿಕೊಳ್ಳುವ ಬದಲು ನಿರ್ದಿಷ್ಟವಾಗಿ ಆಯ್ದ ವಿಷಯಗಳತ್ತ ಚರ್ಚೆ ಕೇಂದ್ರೀಕೃತವಾಗುವಂತೆ ನೋಡಿಕೊಳ್ಳಲು ಮನಸ್ಸು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಉತ್ತರಕರ್ನಾಟಕದ 13 ಜಿಲ್ಲೆಗಳಿಂದ ಆಯ್ಕೆಯಾದ ಶಾಸಕರಲ್ಲಿ ಹಳಬರು- ಹೊಸಬರ ಸಮ್ಮಿಶ್ರಣವಿದ್ದು, ಪ್ರತಿಯೊಬ್ಬ ಶಾಸಕರು ತಮ್ಮ ಒಲವು-ನಿಲುವು ವ್ಯಕ್ತಪಡಿಸಲು ಅವಕಾಶ ನೀಡುವ ಬಗ್ಗೆ ಪೀಠಾಧ್ಯಕ್ಷರು ಯೋಚಿಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
