| ಸ.ದಾ.ಜೋಶಿಕಲಬುರಗಿಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಕಲಬುರಗಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಜೋರ್ದಾರ್ ಹಲ್​ಚಲ್ ಶುರುವಾಗಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಈಗಾಗಲೆ ಭರ್ಜರಿ ತಾಲೀಮು ಶುರು ಮಾಡಿದ್ದು, ಕಳೆದ ಸಲ ಗೆದ್ದವರ-ಬಿದ್ದವರ ಜತೆಗೆ ಹಲವಾರು ಆಕಾಂಕ್ಷಿಗಳ ಗುದ್ದಾಟ ಕಣಕ್ಕೆ ರಂಗೇರಿಸುತ್ತಿದೆ. 9 ವಿಧಾನಸಭಾ ಕ್ಷೇತ್ರಗಳನ್ನು ಜಿಲ್ಲೆ ಹೊಂದಿದ್ದು, 2018ರಲ್ಲಿ 5ರಲ್ಲಿ ಬಿಜೆಪಿ, 4ರಲ್ಲಿ ಕಾಂಗ್ರೆಸ್ ಗೆದ್ದಿದೆ. ಸದ್ಯದ ಪರಿಸ್ಥಿತಿಯಲ್ಲೂ ಬಿಜೆಪಿ-ಕಾಂಗ್ರೆಸ್ ಸಮಬಲದ ಕುಸ್ತಿ ನಡೆಸಿದ್ದು, ಹೆಚ್ಚಿನ ಸ್ಥಾನ ತೆಕ್ಕೆಗೆ ಹಾಕಿಕೊಳ್ಳುವುದಕ್ಕೆ ತಂತ್ರ-ಪ್ರತಿತಂತ್ರ ಹೆಣೆಯಲಾರಂಭಿಸಿವೆ. ಅಷ್ಟೇನು ಪ್ರಾಬಲ್ಯ ಹೊಂದಿರದಿದ್ದರೂ ಕೆಲವೆಡೆ ದಳಪತಿಗಳು ಅಸ್ತಿತ್ವಕ್ಕಾಗಿ ಸಂಘರ್ಷ ನಡೆಸುತ್ತಿದ್ದಾರೆ. ಎಲ್ಲ ಪಕ್ಷದ ನಾಯಕರಿಗೂ ಸಂವಿಧಾನದ ಕಲಂ 371(ಜೆ) ಸಮರ್ಪಕ ಅನುಷ್ಠಾನ ಸೇರಿ ಹಿಂದುಳಿದ ಭಾಗದ ನೈಜ ಕಲ್ಯಾಣದ ವಿಷಯ ಗೌಣವಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಜೇವರ್ಗಿಯಲ್ಲಿ ಸಿಂಗ್ ಹೈ ಕಿಂಗ್ಕಾಂಗ್ರೆಸ್ ಭದ್ರಕೋಟೆ ಜೇವರ್ಗಿಯಲ್ಲಿ ಮತ್ತೆ ಡಾ.ಅಜಯ ಸಿಂಗ್ ಸ್ಪರ್ಧಿಸಲಿದ್ದು, ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ. ಬಿಜೆಪಿ ಸ್ಥಿತಿ ಅಷ್ಟೊಂದು ಮಜಬೂತ್ ಇಲ್ಲ. 2008ರಲ್ಲಿ ಮಾಜಿ ಸಿಎಂ ಧರ್ಮಸಿಂಗ್​ರನ್ನು ಸೋಲಿಸಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಮತ್ತೆ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿವೆ. ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹೆಸರು ಕೇಳಿಬರುತ್ತಿದೆ. ಜೆಡಿಎಸ್​ನಿಂದ ಕೇದಾರಲಿಂಗಯ್ಯ ಹಿರೇಮಠ ಮತ್ತೊಂದು ಕೈ ನೋಡಲಿದ್ದಾರೆ. ನಿವೃತ್ತ ಡಿಎಸ್ಪಿ ಎಸ್.ಎಸ್.ಹುಲ್ಲೂರ್ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳಿವೆ. ಆದರೆ ಇವರು ಇನ್ನೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಸದ್ಯದ ಮಟ್ಟಿಗೆ ಇಲ್ಲಿ ಕಾಂಗ್ರೆಸ್​ನ ಅಜಯಸಿಂಗ್ ಕಿಂಗ್ ಇದ್ದು, ಪ್ರತಿಸ್ಪರ್ಧಿಗಳ ಸಮರ್ಥ ಅಭ್ಯರ್ಥಿ ಕೊರತೆ ನೀಗಿದಾಗಲೇ ಫೈಟ್ ಟಫ್ ಆಗಬಹುದು.
ಪಾಟೀಲ್ ವರ್ಸಸ್ ಗುತ್ತೇದಾರ್ಕೊನೇ ಹಂತದಲ್ಲಿ ಅಭ್ಯರ್ಥಿ ಬದಲಾದರೂ ಕಳೆದ ಸಲದಂತೆ ಈಗಲೂ ಅಫಜಲಪುರ ಕ್ಷೇತ್ರದಲ್ಲಿ ಪಾಟೀಲ್ ವರ್ಸಸ್ ಗುತ್ತೇದಾರ್ ಕುಸ್ತಿ ನಡೆಯುವುದು ಖಚಿತ. ಕಾಂಗ್ರೆಸ್​ನಿಂದ ಶಾಸಕ ಎಂ.ವೈ.ಪಾಟೀಲ್ ಅಥವಾ ಅವರ ಪುತ್ರ ಅರುಣಕುಮಾರ್ ಸ್ಪರ್ಧೆ ನಿಶ್ಚಿತ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಲೀಕಯ್ಯ ಗುತ್ತೇದಾರ್ ಮತ್ತೆ ಅದೃಷ್ಟ ಪರೀಕ್ಷಿಸುವ ಸಾಧ್ಯತೆ ಹೆಚ್ಚಿವೆ. ಆದಾಗ್ಯೂ ಇವರು ಇಚ್ಛೆಪಟ್ಟಲ್ಲಿ ಸಹೋದರ ನಿತಿನ್ ಗುತ್ತೇದಾರ್ ಹೆಸರು ಬರಬಹುದು. ಜೆಡಿಎಸ್​ನಿಂದ ಶಿವಕುಮಾರ ನಾಟೀಕಾರ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಪಾಟೀಲ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಗುತ್ತೇದಾರ್ ತಂಡ ತಾಲೀಮು ನಡೆಸಿದರೆ, ಇನ್ನೊಮ್ಮೆ ಜಯಭೇರಿ ಬಾರಿಸಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿಕೊಳ್ಳಲು ಪಾಟೀಲ್ ಬಣ ಕಾರ್ಯತಂತ್ರ ಹೆಣೆಯುತ್ತಿದೆ.
ಮೀಸಲು ಕ್ಷೇತ್ರದಲ್ಲಿ ಹೆಚ್ಚಿದ ಕಾವುಎಸ್ಸಿ ಮೀಸಲು ಕ್ಷೇತ್ರ ಚಿಂಚೋಳಿಯಲ್ಲಿ ಬಿಜೆಪಿಯಿಂದ ಶಾಸಕ ಡಾ. ಅವಿನಾಶ್ ಜಾಧವ್ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್​ನಿಂದ ಸುಭಾಷ ರಾಠೋಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದರೂ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಇತರರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್​ನಿಂದ ಸಂಜೀವನ್ ಯಾಕಾಪುರ ನಿಲ್ಲಲಿದ್ದು, ಈಗಲೇ ತಯಾರಿ ನಡೆಸಿದ್ದಾರೆ. ಕಾಂಗ್ರೆಸ್ ವಶದಲ್ಲಿದ್ದ ಈ ಕ್ಷೇತ್ರವನ್ನು ಜಾಧವ್ ಕೇಸರಿಮಯ ಮಾಡಿದ್ದಾರೆ. ಅವಿನಾಶ್ ತಂದೆ ಡಾ.ಉಮೇಶ್ ಜಾಧವ್ ಕಲಬುರಗಿ ಸಂಸದರು. ಕ್ಷೇತ್ರದಲ್ಲಿ ಉತ್ತಮ ನೆಟ್​ವರ್ಕ್, ಟೀಮ್ ಹೊಂದಿದ್ದು, ಭಾರಿ ಉಮೇದಿನಲ್ಲಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕ್ಷೇತ್ರ ಕೈವಶಕ್ಕೆ ಕೈ ಪಡೆ ಸ್ಕೆಚ್ ಹಾಕುತ್ತಿದೆ.
ಗ್ರಾಮೀಣ ಕ್ಷೇತ್ರ ಸಿದ್ಧತೆ ಜೋರುಕಲಬುರಗಿ ಗ್ರಾಮೀಣ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ಮತ್ತಿಮಡು ಮತ್ತೊಂದು ಅವಕಾಶಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಇವರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ. ಕಳೆದ ಬಾರಿ ಸೋತಿದ್ದ ವಿಜಯಕುಮಾರ ಜಿ.ರಾಮಕೃಷ್ಣ ಮತ್ತೆ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ. ಯುವ ಮುಖಂಡ ರವಿ ಚವ್ಹಾಣ್ ಟಿಕೆಟ್ ಸಿಗುತ್ತದೆ ಎಂಬ ಜೋಶ್​ನಲ್ಲಿ ಕ್ಷೇತ್ರಾದ್ಯಂತ ಭರ್ಜರಿ ಸುತ್ತಾಟ ನಡೆಸಿದ್ದಾರೆ. ಮಾಜಿ ಸಚಿವ ರೇವೂನಾಯಕ ಬೆಳಮಗಿ ಕಾಂಗ್ರೆಸ್ ಸೇರಿ ಅಖಾಡಕ್ಕಿಳಿ ಯಬಹುದೆಂಬ ಚರ್ಚೆ ನಡೆದಿವೆ. ಚಂದ್ರಿಕಾ ಪರಮೇಶ್ವರ, ರಾಜಕುಮಾರ ಚವ್ಹಾಣ್ ಇತರರು ಆಕಾಂಕ್ಷಿಗಳಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ರಾಘವೇಂದ್ರ ಚಿಂಚನಸೂರ ಕಣಕ್ಕಿಳಿಯಲಿದ್ದಾರೆ.
ಹ್ಯಾಟ್ರಿಕ್ ಓಟದತ್ತ ಖರ್ಗೆ ಚಿತ್ತಚಿತ್ತಾಪುರ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಓಟದತ್ತ ಚಿತ್ತ ಹರಿಸಿದ್ದಾರೆ. ಇವರಿಗೆ ಕ್ಷೇತ್ರದಲ್ಲಿ ಬಲಿಷ್ಠ ಎದುರಾಳಿ ಸದ್ಯಕ್ಕೆ ಕಾಣುತ್ತಿಲ್ಲ. ಮಾಜಿ ಶಾಸಕ ವಾಲ್ಮೀಕಿ ನಾಯಕ್ ನಿಧನ ನಂತರ ಬಿಜೆಪಿಯಲ್ಲಿ ಸ್ಥಳೀಯವಾಗಿ ಹೇಳಿಕೊಳ್ಳುವ ಸಮರ್ಥರು ಸಿಗುತ್ತಿಲ್ಲ. ಹೀಗಾಗಿ ಕ್ಷೇತ್ರ ಕೇಸರಿ ಪಡೆ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಬಿಜೆಪಿಯಿಂದ ಅರವಿಂದ ಚವ್ಹಾಣ್, ಧರ್ಮಣ್ಣ ದೊಡ್ಡಮನಿ, ವಿಠಲ್ ನಾಯಕ್, ವಿಠ್ಠಲ್ ಜಾಧವ, ಶಾಮರಾವ ಪ್ಯಾಟಿ, ಮಣಿಕಂಠ ರಾಠೋಡ, ಬಸವರಾಜ ಬೆಣ್ಣೆಶಿರೂರ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಖರ್ಗೆ ಮಣಿಸಲು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾದಲ್ಲಿ ಕ್ಷೇತ್ರ ಬಿಗ್ ಫೈಟ್​ಗೆ ಸಾಕ್ಷಿಯಾಗಬಹುದು. ಜೆಡಿಎಸ್​ನಿಂದ ಶಾಮರಾವ ಸೂರನ್ ಸ್ಪರ್ಧಿಸಲಿದ್ದಾರೆ.
ಹಾಲಿ-ಮಾಜಿ ಕುಸ್ತಿಗೆ ಸಜ್ಜುಆಳಂದ ಕ್ಷೇತ್ರ ಹಾಲಿ ಶಾಸಕ ಬಿಜೆಪಿಯ ಸುಭಾಷ ಗುತ್ತೇದಾರ್, ಕಾಂಗ್ರೆಸ್​ನ ಮಾಜಿ ಶಾಸಕ ಬಿ.ಆರ್.ಪಾಟೀಲ್ ನಡುವಿನ ಹಣಾಹಣಿಗೆ ಮತ್ತೆ ಸಜ್ಜಾಗುತ್ತಿದೆ. ಕಳೆದೈದು ಚುನಾವಣೆಗಳಿಂದ ಇಲ್ಲಿ ಗುತ್ತೇದಾರ್-ಪಾಟೀಲ್ ಚುನಾವಣೆ ಆಟ ಜಬರ್​ದಸ್ತ್ ನಡೆದಿದೆ. ಅವರೊಮ್ಮೆ, ಇವರೊಮ್ಮೆ ಗೆಲುವಿನಾಟ ಕದನ ಕುತೂಹಲ ಸೃಷ್ಟಿಸುತ್ತಿದೆ. ಈಗಿನಿಂದಲೇ ಮುಂದಿನ ಪ್ರತಿನಿಧಿ ಯಾರು? ಎಂಬ ಚರ್ಚೆ ಶುರುವಾಗಿದೆ. ಜೆಡಿಎಸ್​ನಲ್ಲಿದ್ದ ಸುಭಾಷ ಗುತ್ತೇದಾರ್ ಬಿಜೆಪಿ ಸೇರಿ ಮೊದಲ ಸಲ ಕಮಲ ಅರಳಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಯಿಂದ ಸುಭಾಷ ಗುತ್ತೇದಾರ್ ನಿಲ್ಲುವ ಸಾಧ್ಯತೆ ಹೆಚ್ಚಿವೆ. ಕೊನೇ ಹಂತದಲ್ಲಿ ಅವರ ಪುತ್ರ ಜಿಪಂ ಮಾಜಿ ಸದಸ್ಯ ಹರ್ಷಾನಂದ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ. ಜೆಡಿಎಸ್​ನಿಂದ ಮಹೇಶ್ವರಿ ವಾಲಿ ಹೆಸರು ಕೇಳಿಬರುತ್ತಿದೆ. ಆಪ್​ನ ಚಂದ್ರಶೇಖರ ಹಿರೇಮಠ ಸಹ ಅಖಾಡದಲ್ಲಿದ್ದಾರೆ.
ಕಾಂಗ್ರೆಸ್​ಗೆ ಕಮಲದೋಟ ಕಸಿವಿಸಿಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹ್ಯಾಟ್ರಿಕ್ ಗೆಲುವಿಗಾಗಿ ದಾಳ ಬೀಸಿದ್ದಾರೆ. ಕಾಂಗ್ರೆಸ್ ಟೀಮ್ ಇವರ ಓಟಕ್ಕೆ ಬ್ರೇಕ್ ಹಾಕಲು ಎಲ್ಲ ರೀತಿಯ ತಯಾರಿ ನಡೆಸಿದ್ದು, ಈಗಿನಿಂದಲೇ ಅಖಾಡ ಗರಂ ಆಗಿದೆ. ಕೈ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿನೇ ಉದ್ದವಾಗುತ್ತಿರುವುದು ಕದನ ಕುತೂಹಲ ಹೆಚ್ಚಿಸಿದೆ. ಕಳೆದ ಸಲ ಅಲ್ಲಮಪ್ರಭು ಪಾಟೀಲ್ ಅಲ್ಪ ಮತಗಳಿಂದ ಸೋತಿದ್ದರು. ಈಗಲೂ ಇವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಲಕ್ಷಣ ಕಾಣುತ್ತಿವೆ. ಆದರೆ, ಕ್ಷೇತ್ರ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದರೂ ಅಚ್ಚರಿಪಡುವಂತಿಲ್ಲ. ಮಾಜಿ ಮೇಯರ್ ಶರಣಕುಮಾರ ಮೋದಿ, ಉದ್ಯಮಿ ಸಂತೋಷ ಬಿಲಗುಂದಿ, ನೀಲಕಂಠ ಮೂಲಗೆ ಇತರರ ಹೆಸರು ಕೇಳಿಬರುತ್ತಿವೆ. ಸಮಾಜ ಸೇವಕ ಶರಣು ಪಪ್ಪಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಆಪ್​ನಿಂದ ಸಿದ್ದು ಪಾಟೀಲ್ ತೆಗನೂರ, ಜೆಡಿಎಸ್​ನಿಂದ ಕೃಷ್ಣಾರೆಡ್ಡಿ ನಿಲ್ಲುವ ಸಾಧ್ಯತೆಗಳಿವೆ.
ಉತ್ತರದಲ್ಲಾಗುತ್ತಾ ಚಂದ್ರೋದಯ?ಅಲ್ಪಸಂಖ್ಯಾತರ ಬಾಹುಳ್ಯದ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಶಾಸಕಿ ಕನೀಜ್ ಫಾತಿಮಾ ಇಸ್ಲಾಂ ಮತ್ತೆ ಸ್ಪರ್ಧಿಸುವುದು ಖಚಿತ. ಬಿಜೆಪಿಯಿಂದ ಕಳೆದ ಬಾರಿ ಅಲ್ಪ ಮತಗಳಿಂದ ಸೋತಿದ್ದ ಯುವ ಮುಖಂಡ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಈ ಸಲವೂ ಅಖಾಡಕ್ಕಿಳಿಯಲಿದ್ದಾರೆ. ಚಂದು ಪಾಟೀಲ್ ಕ್ಷೇತ್ರಾದ್ಯಂತ ನಿರಂತರ ಸುತ್ತಾಡಿ, ಅನೇಕ ಕೆಲಸಕಾರ್ಯ ಮಾಡುತ್ತ ಜನರೊಂದಿಗೆ ಸಂಪರ್ಕ, ಸಂಬಂಧ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಯುವ ಪಡೆ ಇಲ್ಲಿ ಕಮಲ ಅರಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಚಂದ್ರೋದಯ ಆಗುವ ಭರವಸೆ ಮತ್ತಷ್ಟು ಜೋಶ್ ತುಂಬಿದೆ. ಜೆಡಿಎಸ್​ನಿಂದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ಕಣಕ್ಕಿಳಿಯಲಿದ್ದಾರೆ. ಎಐಎಂಐಎಂನಿಂದ ಮಿರ್ಚಿ ಸೇಠ್, ಇಲಿಯಾಸ್ ಭಾಗವಾನ್ ಸ್ಪರ್ಧಿಸ ಬಹುದು. ಆಮ್ ಆದ್ಮಿ ಪಕ್ಷದಿಂದ ಮಾಜಿ ಉಪ ಮೇಯರ್ ಸಜ್ಜಾದ್ ಅಲಿ ಇನಾಮದಾರ್ ಹೆಸರು ಚರ್ಚೆಗೆ ಬರುತ್ತಿದೆ.
ಸೇಡಂನಲ್ಲಿ ಪಾಟೀಲ್​ದ್ವಯರ ಜಿದ್ದಾಜಿದ್ದಿಸೇಡಂ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರೂ ಆಗಿರುವ ಕೆಕೆಆರ್​ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಮೂರು ಸೋಲಿನ ಬಳಿಕ ಮೊದಲ ಬಾರಿ ಗೆದ್ದ ತೆಲ್ಕೂರ್, ಈಗ ಪುನರಾಯ್ಕೆ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಸೋತಿದ್ದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತೆ ಸ್ಪರ್ಧಿಸಲಿದ್ದು, ಪಾಟೀಲ್​ದ್ವಯರ ಜಿದ್ದಿನ ಕುಸ್ತಿಗೆ ಅಖಾಡ ಸಿದ್ಧವಾಗುತ್ತಿದೆ. ಬರುವ ಚುನಾವಣೆ ದೃಷ್ಟಿಯಿಂದಲೇ ಶರಣಪ್ರಕಾಶ ಕ್ಷೇತ್ರದ ಜನರೊಂದಿಗೆ ಬೆರೆತು ವಿವಿಧೆಡೆ ಓಡಾಡುತ್ತಿದ್ದಾರೆ. ಜೆಡಿಎಸ್​ನಿಂದ ಯುವ ಮುಖಂಡ ಬಾಲರಾಜ್ ಗುತ್ತೇದಾರ್ ನಿಲ್ಲುತ್ತಿದ್ದು, ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
