| ಹೀರಾನಾಯ್ಕ ಟಿ. ಬಳ್ಳಾರಿ
ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದು ಕಷ್ಟದ ಕೆಲಸ ಎನ್ನುವಂತಿದ್ದ ದಿನಗಳಲ್ಲಿ 2008ರಲ್ಲಿ ಗಣಿನಾಡಿನಿಂದ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು, ಪಕ್ಷ ಅಧಿಕಾರಕ್ಕೆ ತರುವಲ್ಲಿ ರೆಡ್ಡಿ ಸಹೋದರರು ಯಶಸ್ವಿಯಾಗಿದ್ದರು. ಇಂತಹ ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಒಟ್ಟು ಐದು ಕ್ಷೇತ್ರಗಳ ಪೈಕಿ ಒಂದು ಸಾಮಾನ್ಯ, ನಾಲ್ಕು (ಎಸ್ಟಿ) ಮೀಸಲು ಕ್ಷೇತ್ರಗಳಿವೆ. ಮೂರರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಕಂಪ್ಲಿ, ಸಿರಗುಪ್ಪ, ಸಂಡೂರು ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿದ್ದು, ಇಲ್ಲಿ ಮೀಸಲಾತಿ ಹೆಚ್ಚಳದ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಿ ಮತಬೇಟೆ ಆಡಲು ಸಜ್ಜಾಗಿದೆ. ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸುತ್ತಿದ್ದು, ಶೇ.40 ಭ್ರಷ್ಟಾಚಾರ, ಲಿಂಗಾಯತ ನಾಯಕರ ಕಡೆಗಣನೆ ವಿಚಾರ ಜನರ ಮುಂದಿಡಲು ಅಣಿಯಾಗಿದೆ. ಐದು ಕ್ಷೇತ್ರಗಳಲ್ಲಿ 56 ಹುರಿಯಾಳುಗಳು ಅಂತಿಮ ಕಣದಲ್ಲಿದ್ದು, ಬಳ್ಳಾರಿ ನಗರ ಕ್ಷೇತ್ರದಲ್ಲೇ 24 ಅಭ್ಯರ್ಥಿಗಳು ಪೈಪೋಟಿಗಿಳಿದಿದ್ದಾರೆ.
ಬಳ್ಳಾರಿಯಲ್ಲಿ ಆರ್​ಆರ್​ಆರ್ ಫೈಟ್: ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳು ರೆಡ್ಡಿಗಳಿಗೆ ಮಣೆ ಹಾಕಿವೆ. ಬಿಜೆಪಿಯಿಂದ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್​ನಿಂದ ನಾರಾ ಭರತ್​ರೆಡ್ಡಿ, ಕೆಆರ್​ಪಿಪಿಯಿಂದ ಲಕ್ಷ್ಮೀ ಅರುಣಾ ರೆಡ್ಡಿ ಕಣದಲ್ಲಿದ್ದು, ಇವರಿಗೆ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಅನಿಲ್ ಲಾಡ್ ತೀವ್ರ ಪೈಪೋಟಿ ನೀಡಲು ಮುಂದಾಗಿದ್ದಾರೆ. ಬಿಜೆಪಿ ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿಗೆ ಟಿಕೆಟ್ ನೀಡಿದ್ದು, ಇವರು 2008ರಲ್ಲಿ 54,831 ಮತ ಪಡೆಯುವ ಮೂಲಕ ಕಾಂಗ್ರೆಸ್​ನ ಅಭ್ಯರ್ಥಿ ಅನಿಲ್ ಲಾಡ್ ಅವರನ್ನು 1022 ಮತಗಳ ಅಂತರದಿಂದ ಸೋಲಿಸಿದ್ದರು. ನಂತರದಲ್ಲಿ 2013ರಲ್ಲಿ ಚುನಾವಣೆ ಕಣದಿಂದ ಸೋಮಶೇಖರ ರೆಡ್ಡಿ ದೂರ ಉಳಿದಿದ್ದರು. 2018ರಲ್ಲಿ ಮತ್ತೆ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾದರು. ಕಾಂಗ್ರೆಸ್​ನಿಂದ ಕಣದಲ್ಲಿರುವ ಯುವಕ ನಾರಾ ಭರತ್ ರೆಡ್ಡಿ ಹೊಸ ಮುಖ. ಅನಿಲ್​ಲಾಡ್ ಕೈ ಟಿಕೆಟ್ ತಪ್ಪಿದ ಕಾರಣ ತೆನೆ ಹೊತ್ತಿದ್ದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಕಣದಲ್ಲಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಂದೆಡೆ ರೆಡ್ಡಿ ಸಹೋದರರ ಸವಾಲ್​ಗೆ ಕ್ಷೇತ್ರ ಮುನ್ನುಡಿ ಬರೆದಿದ್ದು, ಅದಕ್ಕಾಗಿ ಮಾವ-ಸೊಸೆಯ ನಡುವಿನ ಪೈಪೋಟಿ ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಲಿಂಗಾಯತ, ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿವೆ. ಕಾಂಗ್ರೆಸ್​ನ ವೋಟ್​ಬ್ಯಾಂಕ್ ಆಗಿದ್ದ ಮುಸ್ಲಿಂ ಮತಗಳು ಜೆಡಿಎಸ್ ಹಾಗೂ ಕೆಆರ್​ಪಿಪಿ ಪಾಲಾಗುವ ಸಾಧ್ಯತೆ ಹೆಚ್ಚಿವೆ. ಒಟ್ಟಾರೆ ಈ ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎನ್ನುವುದು ನಿಗೂಢ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾದ ಕಾಂಗ್ರೆಸ್​ನ ಹಾಲಿ ಶಾಸಕ ಬಿ.ನಾಗೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನಡುವೆ ಕಾಳಗ ಏರ್ಪಡಲಿದೆ. 2018ರಲ್ಲಿ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಲಯ ಕಂಡುಕೊಂಡಿರುವ ನಾಗೇಂದ್ರ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡಿದ್ದಾರೆ. ಕ್ಷೇತ್ರದ ಜನರೊಂದಿಗಿನ ಐದು ವರ್ಷಗಳ ಒಡನಾಟ ಅವರ ಗೆಲುವಿಗೆ ಸಹಾಯವಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮತ್ತೊಂದೆಡೆ ರಾಮುಲು ತವರು ಜಿಲ್ಲೆಗೆ ಬಂದಿದ್ದು, ಈ ಬಾರಿ ಗೆದ್ದು ಜಿಲ್ಲೆಗೆ ಇನ್ನಷ್ಟು ಕೊಡುಗೆ ನೀಡಲಿ ಎನ್ನುವುದು ಅವರ ಬೆಂಬಲಿಗರ ಅಭಿಪ್ರಾಯ. ಆದರೆ ಮುಸ್ಲಿಮರ ಮೀಸಲಾತಿ ರದ್ದು ಮಾಡಿದ್ದು ಬಿಜೆಪಿಗೆ ಮುಳುವಾಗಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕ್ಷೇತ್ರದಲ್ಲಿ 45 ಸಾವಿರ ಮುಸ್ಲಿಂ ಮತಗಳಿದ್ದು, ಇದು ಕಾಂಗ್ರೆಸ್​ಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ. ಲಿಂಗಾಯತ, ಎಸ್ಸಿ, ಎಸ್ಟಿ ಮತಗಳನ್ನು ಇಬ್ಬರು ಎಷ್ಟು ಪಡೆಯುತ್ತಾರೆ ಎಂಬುದೇ ನಿರ್ಣಾಯಕ.
ಕಂಪ್ಲಿ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದ ಟಿ.ಎಚ್.ಸುರೇಶ್ ಬಾಬು ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್​ನಿಂದ ಹಾಲಿ ಶಾಸಕ ಜೆ.ಎನ್.ಗಣೇಶ್ ಮತ್ತೊಮ್ಮೆ ಶಾಸಕರಾಗುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್​ನಿಂದ ಜೆಡಿಎಸ್ ಸೇರಿರುವ ರಾಜುನಾಯಕ ಕೂಡ ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಹಾಲಿ-ಮಾಜಿ ಶಾಸಕರ ನಡುವೆ ಪೈಪೋಟಿಯಿದೆ. ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್​ನಿಂದ ರಾಜುನಾಯಕ ಸ್ಪರ್ಧಿಸಿದ್ದು, ಇದರಿಂದಾಗಿ ಕಾಂಗ್ರೆಸ್​ಗೆ ಸ್ವಲ್ಪಮಟ್ಟಿಗೆ ಹಾನಿ ಮಾಡುವ ಆತಂಕವಿದೆ. ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಮತಗಳು ಹೆಚ್ಚಿದ್ದು, ಯಾರಿಗೆ ಒಲವು ತೋರುತ್ತಾರೆ ಎನ್ನುವುದನ್ನು ನೋಡಬೇಕಿದೆ. ಮಂಗಳಮುಖಿ ರಾಮಕ್ಕ.ಟಿ ದೇಶ ಪ್ರೇಮ ಪಕ್ಷದಿಂದ ಸ್ಪರ್ಧಿಸಿರುವುದು ಕ್ಷೇತ್ರದ ವಿಶೇಷ.
ಕಾಂಗ್ರೆಸ್​ನ ಭದ್ರಕೋಟೆ ಎಂದೇ ಖ್ಯಾತಿ ಪಡೆದ ಸಂಡೂರು ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗೆದ್ದಿಲ್ಲ. ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಈ.ತುಕಾರಾಮ್ ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ರಾಘವೇಂದ್ರ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಶಿಲ್ಪಾ ರಾಘವೇಂದ್ರಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಮತ್ತೊಂದೆಡೆ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ದಿವಾಕರ್ ಟಿಕೆಟ್ ಸಿಗದ ಕಾರಣ ಕೆಆರ್​ಪಿಪಿಯಿಂದ ಸ್ಪರ್ಧೆಯಲ್ಲಿದ್ದಾರೆ. ಇದು ಬಿಜೆಪಿಗೆ ಹಿನ್ನಡೆ ತರುವ ಸಾಧ್ಯತೆಗಳಿವೆ. ಕ್ಷೇತ್ರದಲ್ಲಿ ಲಿಂಗಾಯತ, ಎಸ್ಸಿ, ಎಸ್ಟಿ ಹಾಗೂ ಕುರುಬ ಸಮುದಾಯದ ಮತಗಳು ಹೆಚ್ಚಿವೆ.
ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮತ್ತೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್​ನಿಂದ ಬಿ.ಎಂ.ನಾಗರಾಜ ಅಖಾಡಕ್ಕಿಳಿದಿದ್ದಾರೆ. 2013ರಲ್ಲಿ ಬಿ.ಎಂ.ನಾಗರಾಜ ಗೆದ್ದರೆ, ಸೋಮಲಿಂಗಪ್ಪ ಸೋಲು ಅನುಭವಿಸಿದ್ದರು. 2018ರಲ್ಲಿ ಮತ್ತೆ ಸೋಮಲಿಂಗಪ್ಪ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್​ನಿಂದ ಬಿ.ಮುರಳಿಕೃಷ್ಣ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಬಿಗ್​ಫೈಟ್ ಬಿದ್ದಿದೆ. ಕೆಆರ್​ಪಿಪಿಯಿಂದ ಧರಪ್ಪನಾಯಕ ಸ್ಪರ್ಧೆಗಿಳಿದಿದ್ದು ಇಬ್ಬರಿಗೂ ತೀವ್ರ ಪೈಪೋಟಿ ನೀಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಲಿಂಗಾಯತ, ಪರಿಶಿಷ್ಟರು, ಕುರುಬ, ಮುಸ್ಲಿಂ ಹಾಗೂ ರೆಡ್ಡಿಗಳ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರ ಇದಾಗಿದೆ.

ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
