|ಅಶೋಕ ನೀಮಕರ್ಗಂಗಾವತಿ
ವಿಜಯನಗರ ಪ್ರತ್ಯೇಕ ಜಿಲ್ಲೆಯಾದ ಬಳಿಕ ಬಳ್ಳಾರಿ ಜಿಲ್ಲೆಯ ರಾಜಕೀಯಕ್ಕೆ ಬೇಲಿ ಹಾಕಿದಂತಾಗಿದೆ. ಬಳ್ಳಾರಿ ಮತ್ತು ವಿಜಯನಗರಕ್ಕೆ ತಲಾ ಐದು ಕ್ಷೇತ್ರಗಳು ಹಂಚಿಕೆಯಾಗಿವೆ. ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಹಾಗೂ ಎರಡರಲ್ಲಿ ಬಿಜೆಪಿ ಶಾಸಕರಿದ್ದಾರೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಅವಿಭಜಿತ ಬಳ್ಳಾರಿ ಜಿಲ್ಲೆಯ ಪಾತ್ರ ಪ್ರಮುಖವಾಗಿತ್ತು. ಅದಕ್ಕೆ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಜೋಡಿ ಕಾರಣರಾಗಿದ್ದರು. 14 ವರ್ಷಗಳ ಬಳಿಕವೂ ಜಿಲ್ಲೆಯಲ್ಲಿ ಬಿಜೆಪಿ, ರೆಡ್ಡಿ-ರಾಮುಲು ನೆರಳಿಂದ ಹೊರಬಂದು ಸ್ವಂತ ವರ್ಚಸ್ಸು ಬೆಳೆಸಿಕೊಂಡಿಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್​ನಲ್ಲಿ ಟಿಕೆಟ್ ಪೈಪೋಟಿ ಹೆಚ್ಚಾಗಿದೆ. ಐದು ಕ್ಷೇತ್ರಗಳ ಪೈಕಿ ನಾಲ್ಕು ಪರಿಶಿಷ್ಟ ಪಂಗಡಕ್ಕೆ ಹಾಗೂ ಒಂದು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸಿರಗುಪ್ಪದಲ್ಲಿ ಬಿಜೆಪಿಯ ಎಂ.ಎಸ್.ಸೋಮಲಿಂಗಪ್ಪ ಮೂರನೇ ಬಾರಿ ಶಾಸಕರಾಗಿದ್ದಾರೆ. ಇಲ್ಲಿ ಕೂಡ ಬಿಜೆಪಿಗೆ ಸೋಮಲಿಂಗಪ್ಪರ ವರ್ಚಸ್ಸೇ ಆಧಾರವಾಗಿದೆ. 2013ರಲ್ಲಿ ಬಿ.ಎಂ.ನಾಗರಾಜ ವಿರುದ್ಧ ಸೋತಿದ್ದರು. ಕಳೆದ ಚುನಾವಣೆಯಲ್ಲಿ ಬಿ.ಎಂ.ನಾಗರಾಜ ಬದಲಿಗೆ ಶಾಸಕ ಬಿ.ನಾಗೇಂದ್ರ ಅಳಿಯ ಬಿ.ಮುರಳಿಕೃಷ್ಣರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. 28 ವರ್ಷದ ಮುರಳಿಕೃಷ್ಣ ಯಾವುದೇ ಬಲ ಪ್ರದರ್ಶನವಿಲ್ಲದೆ ಸೋಮಲಿಂಗಪ್ಪಗೆ ತೀವ್ರ ಸ್ಪರ್ಧೆವೊಡ್ಡಿದ್ದರು. ಮಾಜಿ ಶಾಸಕ ಬಿ.ಎಂ.ನಾಗರಾಜ, ಎಪಿಎಂಸಿ ಮಾಜಿ ಸದಸ್ಯ ನರೇಂದ್ರಸಿಂಹ, ಬಿ.ಮುರಳಿಕೃಷ್ಣರೊಂದಿಗೆ ಟಿಕೆಟ್​ಗೆ ಸ್ಪರ್ಧೆಯೊಡ್ಡುವ ನಿರೀಕ್ಷೆಗಳಿವೆ. ಬಿಜೆಪಿಯಿಂದ ಶಾಸಕ ಸೋಮಲಿಂಗಪ್ಪ ಪುತ್ರ ಎಂ.ಎಸ್.ಸಿದ್ದಪ್ಪರನ್ನು ಮುಂಚೂಣಿಗೆ ತರುತ್ತಿದ್ದಾರೆ. ಮಗ ಸಿದ್ದಪ್ಪಗೆ ಟಿಕೆಟ್ ನೀಡದಿದ್ದರೆ ಸೋಮಲಿಂಗಪ್ಪ ಮತ್ತೆ ಸ್ಪರ್ಧಿಸಲಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಬಳ್ಳಾರಿ ನಗರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಹಣ ಬಲ ಹಾಗೂ ವ್ಯಕ್ತಿಗತ ವರ್ಚಸ್ಸೇ ಮುಖ್ಯ. ಬಿಜೆಪಿಯ ವಶದಲ್ಲಿರುವ ಕ್ಷೇತ್ರವನ್ನು ಜಿ.ಸೋಮಶೇಖರಡ್ಡಿ ಎರಡನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. 2008ರಿಂದ ರೆಡ್ಡಿ-ರಾಮುಲು ಕುಟುಂಬ ಹಾಗೂ ಅನಿಲ್ ಲಾಡ್ ನಡುವೆ ರಾಜಕೀಯದ ಹಾವು ಏಣಿಯಾಟ ನಡೆದಿದೆ. 2008 ಹಾಗೂ 2018ರಲ್ಲಿ ಸೋಮಶೇಖರರೆಡ್ಡಿ ಗೆದ್ದಿದ್ದರೆ 2013ರಲ್ಲಿ ಅನಿಲ್ ಲಾಡ್ ಜಯಗಳಿಸಿದ್ದರು. ಅಕ್ರಮ ಗಣಿಗಾರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲಿನಲ್ಲಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ಸೋಮಶೇಖರ ರೆಡ್ಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರೆ, 2018ರಲ್ಲಿ ಅನಿಲ್ ಲಾಡ್ ಗೆಲ್ಲಲೇಬೇಕೆಂಬ ಛಲ ತೋರಿಸಲಿಲ್ಲ. ಬಿಜೆಪಿಯಲ್ಲಿ ಕಳೆದ ಬಾರಿಯಂತೆ ಈ ಸಲವೂ ನಗರದ ಖ್ಯಾತ ವೈದ್ಯ ಬಿ.ಕೆ.ಸುಂದರ್ ಹೆಸರು ಚಾಲ್ತಿಯಲ್ಲಿದೆ. ಶಾಸಕ ರೆಡ್ಡಿ ಪಕ್ಷದ ಕಾರ್ಯಕರ್ತರ ಬದಲಿಗೆ ಹಿಂಬಾಲಕರಿಗೆ ಮಣೆ ಹಾಕುತ್ತಾರೆ ಎನ್ನುವ ಅಪವಾದ ಹೊತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಅನಿಲ್ ಲಾಡ್ ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ಜತೆಗೆ ಮಾಜಿ ಶಾಸಕ ಎನ್.ಸೂರ್ಯನಾರಾಯಣರೆಡ್ಡಿ ಪುತ್ರ ಜಿಪಂ ಮಾಜಿ ಸದಸ್ಯ ನಾರಾ ಭರತ್​ರೆಡ್ಡಿ, ಮಾಜಿ ಸಚಿವ ದಿವಾಕರಬಾಬು ಪುತ್ರ, ಯುವ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿರುವ ಎಂ.ಹನುಮಕಿಶೋರ್, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಬುಡಾ ಮಾಜಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಹಾಗೂ ಹೊಸ ಮುಖ ಸುನೀಲ್ ರಾವೂರ್ ಹೆಸರುಗಳು ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ.
ಸಚಿವ ಬಿ.ಶ್ರೀರಾಮುಲು ಕ್ಷೇತ್ರವೆಂದೇ ಖ್ಯಾತಿ ಪಡೆದಿದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಳ್ಳಾರಿ (ಗ್ರಾಮೀಣ) ಕ್ಷೇತ್ರ. ಒಂದು ಉಪ ಚುನಾವಣೆ ಸೇರಿ ಮೂರು ಬಾರಿ ಶ್ರೀರಾಮುಲು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ವಲಸೆ ಹೋಗಿದ್ದರಿಂದ ಶ್ರೀರಾಮುಲು ಸಹೋದರ ಸಂಬಂಧಿ ಎಸ್.ಪಕ್ಕೀರಪ್ಪ ಸ್ಪರ್ಧಿಸಿ ಬಿ.ನಾಗೇಂದ್ರ ವಿರುದ್ಧ ಸೋತಿದ್ದರು. ಈ ಬಾರಿ ಶ್ರೀರಾಮುಲು ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎನ್ನುವ ಮಾತುಗಳಿವೆ. ಶ್ರೀರಾಮುಲು ಹಾಗೂ ಬಿ.ನಾಗೇಂದ್ರ ನಡುವಿನ ಕದನ ರಣ ರೋಚಕವಾಗಿರಲಿದೆ. ಶ್ರೀರಾಮುಲು ಸ್ಪರ್ಧಿಸದಿದ್ದರೆ ಎಸ್.ಪಕ್ಕೀರಪ್ಪ ಇಲ್ಲವೇ ಮಾಜಿ ಸಂಸದೆ ಜೆ.ಶಾಂತಾ ಅಭ್ಯರ್ಥಿಯಾಗಬಹುದು. ಕಾಂಗ್ರೆಸ್​ನಿಂದ ಅಸುಂಡಿ ವನ್ನೂರಪ್ಪ (ವಂಡ್ರಿ) ಕೂಡ ಆಕಾಂಕ್ಷಿಯಾಗಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸಂಡೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಈ.ತುಕಾರಾಮ್ ಎಂಬ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ವಿರೋಧಿ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಮಾಜಿ ಸಚಿವ ದಿ.ಎಂ.ವೈ.ಘೋರ್ಪಡೆಯವರ ಬಳಿಕ ಈ ಕ್ಷೇತ್ರ ಲಾಡ್​ಗಳ ತೆಕ್ಕೆಗೆ ಜಾರಿದೆ. ಮಾಜಿ ಸಚಿವ ಸಂತೋಷ್ ಲಾಡ್ ಬೆಂಬಲದೊಂದಿಗೆ ತುಕಾರಾಮ್ 2008ರಿಂದ ನಿರಂತರ ಗೆಲ್ಲುತ್ತಾ ಬರುತ್ತಿದ್ದಾರೆ. ಎಂ.ವೈ.ಘೋರ್ಪಡೆ ಪುತ್ರ ಕಾರ್ತಿಕೇಯ ಘೋರ್ಪಡೆ ಕಳೆದ ಚುನಾವಣೆಯಿಂದ ಕ್ಷೇತ್ರದಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಬೇಕೆಂದು ಕಾರ್ತಿಕೇಯ ಘೋರ್ಪಡೆ ಕಳೆದ ಚುನಾವಣೆಯಲ್ಲಿ ಏನೆಲ್ಲ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿ ಡಿ.ರಾಘವೇಂದ್ರ ಪ್ರಬಲ ಪೈಪೋಟಿ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ಕಳೆದ ಚುನಾವಣೆಯ ಫಲಿತಾಂಶ ಕಾಂಗ್ರೆಸ್​ಗೆ ಎಚ್ಚರಿಕೆಯ ಗಂಟೆಯಾದರೂ ರಾಘವೇಂದ್ರ ನಿಧನದಿಂದ ಮುಂದಿನ ಅಭ್ಯರ್ಥಿ ಯಾರೆಂಬ ಪ್ರಶ್ನೆ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಸಚಿವ ಬಿ.ಶ್ರೀರಾಮುಲು ಆಪ್ತ, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿವಾಕರ್ ಕಳೆದ ಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಓಡಾಡಿದ್ದರೂ ಮನ್ನಣೆ ಸಿಕ್ಕಿರಲಿಲ್ಲ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾರ್ತಿಕೇಯ ಘೊರ್ಪಡೆ ಸೂಚಿಸಿದವರಿಗೆ ಕ್ಷೇತ್ರದಲ್ಲಿ ಟಿಕೆಟ್ ಪಕ್ಕಾ ಆಗಿದೆ. ಸದ್ಯಕ್ಕೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ನಿಗೂಢವಾಗಿದೆ.
ವರಸೆಯಲ್ಲಿ ಶ್ರೀರಾಮುಲುಗೆ ಅಳಿಯರಾಗುವ ಟಿ.ಎಚ್.ಸುರೇಶಬಾಬು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಂಪ್ಲಿಯಲ್ಲಿ ಸೋತಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರವನ್ನು ಸುರೇಶಬಾಬು 2008 (ಬಿಜೆಪಿ) ಹಾಗೂ 2013ರಲ್ಲಿ (ಬಿಎಸ್​ಆರ್ ಕಾಂಗ್ರೆಸ್) ಪ್ರತಿನಿಧಿಸಿದ್ದರು. 2008ರಲ್ಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊರಗಿನವರೇ ಶಾಸಕರಾಗುತ್ತಿರುವುದು ವಿಶೇಷ. ಸುರೇಶಬಾಬು ಬಳ್ಳಾರಿಯವರಾದರೆ ಹಾಲಿ ಶಾಸಕ, ಕಾಂಗ್ರೆಸ್​ನ ಜೆ.ಎನ್.ಗಣೇಶ ಹೊಸಪೇಟೆ ಯವರಾಗಿದ್ದಾರೆ. ಮೂರು ಚುನಾವಣೆಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬದಲಾಯಿಸಿದ್ದು ವಿಶೇಷ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಸುರೇಶಬಾಬುಗೆ ಪ್ರಬಲ ಪೈಪೋಟಿ ನೀಡಿದ್ದ ಜೆ.ಎನ್.ಗಣೇಶಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮನ್ನಣೆ ನೀಡಿತ್ತು. ಈ ಬಾರಿಯೂ ಜೆ.ಎನ್.ಗಣೇಶ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಆದರೂ, ಬಿ.ನಾರಾಯಣಪ್ಪ, ಗಂಗಾವತಿಯ ರಾಜು ನಾಯಕ ಟಿಕೆಟ್​ಗೆ ಸ್ಪರ್ಧೆಯೊಡ್ಡುವ ನಿರೀಕ್ಷೆಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − nine =
Remember me
