ಗಣೇಶ ಎಂದರೆ ಭಕ್ತಿಯ ಉನ್ನತ ಭಾವ. ಹಾಗಾಗಿಯೇ ಗಣೇಶನ ಆಗಮನವೆಂದರೆ ದೊಡ್ಡ ಭಾವಸಂಭ್ರಮ. ಗಣೇಶ ಚತುರ್ಥಿಯ ಆಚರಣೆ ಸಾರ್ವಜನಿಕ ಉತ್ಸವವಾಗಿ ಮನಸುಗಳನ್ನು ಬೆಸೆಯುತ್ತಿದೆ. ನಮ್ಮ ನಾಡಿನಲ್ಲಿ ಗಣೇಶನ ಪ್ರಸಿದ್ಧ ದೇವಸ್ಥಾನ, ಕ್ಷೇತ್ರಗಳಿಗೆ ಕೊರತೆಯಿಲ್ಲ. ಆದರೆ, ಗ್ರಾಮಗಳಲ್ಲಿ ಅಥವಾ ನಿಸರ್ಗದ ತಾಣಗಳಲ್ಲಿ ನೆಲೆಸಿರುವ ಗಣಪನ ಕೆಲವು ದೇಗುಲ, ಕ್ಷೇತ್ರಗಳು ಸ್ಥಳೀಯರಿಗೆ ಮಾತ್ರ ಪರಿಚಿತ. ಇಂಥ ಕೆಲ ಮಂದಿರಗಳ ವೈಶಿಷ್ಟ್ಯವನ್ನು ಇಲ್ಲಿ ಪರಿಚಯಿಸಲಾಗಿದೆ. ಇದುವಿಜಯವಾಣಿಗಣೇಶ ಚತುರ್ಥಿ ವಿಶೇಷ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೂಡಲಗಿ ಗ್ರಾಮದ ಸದ್ಗುರು ಶ್ರೀ ಶಾಂತಾನಂದ ಸರಸ್ವತಿ (ಬಾಬಾ ಮಹಾರಾಜ್) ಮಠದಲ್ಲಿ ಏಕಶಿಲೆಯಲ್ಲಿ ಹೆಸರೇ ಸೂಚಿಸುವಂತೆ ಒಡಮೂಡಿದ ಸ್ವಯಂಭೂ ಸಿದ್ಧಿ ವಿನಾಯಕ ಅಸಂಖ್ಯ ಭಕ್ತರನ್ನು ಉದ್ಧರಿಸಿ, ಅವರ ಕಷ್ಟ-ಕಾರ್ಪಣ್ಯಗಳನ್ನು ನಿವಾರಣೆ ಮಾಡಿದ್ದಾನೆ. ವಿಶೇಷವಾಗಿ ಬಂಜೆತನ ನಿವಾರಣೆಗೆ ಪ್ರಸಿದ್ಧಿ ಪಡೆದ ದೇವಸ್ಥಾನ ಇದಾಗಿದ್ದು, ದೇಶದ ಮೂಲೆಮೂಲೆಗಳಿಂದ ಹಲವಾರು ಜನ ಇಲ್ಲಿಗೆ ಭೇಟಿ ನೀಡಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಂಜೆತನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿ ಸೋಮವಾರದ ವಿಶೇಷ ಪೂಜೆ ನಡೆಯುತ್ತದೆ. ಭಕ್ತಿಯಿಂದ ಬೇಡಿದ್ದನ್ನೆಲ್ಲ ಕೊಡುವ ಸ್ವಯಂಭೂ ಸಿದ್ಧಿ ವಿನಾಯಕ ಭಕ್ತರ ಪಾಲಿನ ಆರಾಧ್ಯದೈವ. ಈ ಮಠದಲ್ಲಿ ಶಾಂತಾನಂದ ಸರಸ್ವತಿಗಳ ಗದ್ದುಗೆ, ಶಿವ, ಅನ್ನಪೂರ್ಣೆಶ್ವರಿ ಹಾಗೂ ಸ್ವಯಂಭೂ ಸಿದ್ಧಿ ವಿನಾಯಕನ ದೇವಸ್ಥಾನವಿದ್ದು, ನಿತ್ಯ ಧಾರ್ವಿುಕ ವಿಧಿ-ವಿಧಾನದಂತೆ ಪೂಜಾಕೈಂಕರ್ಯ ನೆರವೇರುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ಜತೆಗೆ ಭಕ್ತಿ, ಜ್ಞಾನ, ವೈರಾಗ್ಯ ಕರುಣಿಸುವ ಶ್ರದ್ಧಾಕೇಂದ್ರವೆನಿಸಿದೆ. ಬೆಂಗಳೂರಿನಿಂದ 550 ಕಿ.ಮೀ. ಹಾಗೂ ಜಿಲ್ಲಾಕೇಂದ್ರ ಯಾದಗಿರಿಯಿಂದ 80 ಕಿ.ಮೀ. ದೂರದಲ್ಲಿದ್ದು, ಸುರಪುರ, ಕೆಂಭಾವಿಯಿಂದ ಬಸ್ ಹಾಗೂ ಖಾಸಗಿ ವಾಹನಗಳ ಸೌಕರ್ಯವಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಿಂದ ಅನತಿ ದೂರದ ದಟ್ಟಕಾಡಿನ ಮಧ್ಯೆ ಇರುವ ಕಮಂಡಲ ಗಣಪತಿ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಗಣಪತಿ ಮೂರ್ತಿ ಚರಣಗಳಲ್ಲಿ ಜಲೋದ್ಭವವಾಗಿ ತೀರ್ಥದ ರೂಪದಲ್ಲಿ ವರ್ಷಪೂರ್ತಿ ನಿರಂತರವಾಗಿ ಹರಿಯುತ್ತದೆ. ಕಮಂಡಲ ದೇವಸ್ಥಾನವಿರುವ ಪ್ರದೇಶದಲ್ಲಿ ಪುರಾಣ ಕಾಲದಲ್ಲಿ ವಸಿಷ್ಠ ಮಹರ್ಷಿಗಳ ಆಶ್ರಮವಿತ್ತು ಎನ್ನಲಾಗಿದೆ. ಪುರಾಣಗಳ ಪ್ರಕಾರ ಪಾರ್ವತಿ ದೇವಿ ಶನಿ ಗ್ರಹಚಾರ ಪೀಡಿತಳಾಗುತ್ತಾಳೆ. ಆಗ ಶಿವನು ಪಾರ್ವತಿಗೆ ಮೃಗವಧೆೆಯಲ್ಲಿ ತಪಸ್ಸು ಮಾಡುವಂತೆ ಆಜ್ಞಾಪಿಸುತ್ತಾನೆ. ತಪಸ್ಸಿಗೂ ಮುಂಚೆ ಪಾರ್ವತಿ ದೇವಿ ಸ್ನಾನ ಮಾಡಲು ಹಾಗೂ ಗಣಪತಿ ಪೂಜೆ ಮಾಡಲು ಸ್ಥಳವನ್ನರಸಿ ಹೊರಟಾಗ ಕಮಂಡಲದಲ್ಲಿ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಬಂದಳೆಂಬ ಪ್ರತೀತಿಯಿದೆ. ಪಾರ್ವತಿ ದೇವಿ ಪೂಜೆಗೆ ಮುಂದಾದಾಗ ಸ್ನಾನ ಮಾಡಲು ನೀರಿನ ಕೊರತೆ ಉಂಟಾದಾಗ ಬ್ರಹ್ಮದೇವನನ್ನು ಪ್ರಾರ್ಥಿಸುತ್ತಾಳೆ. ಆಗ ದೇವಲೋಕದಲ್ಲಿದ್ದ ಬ್ರಹ್ಮದೇವ ತನ್ನ ಕಮಂಡಲದಿಂದ ನೀರು ಚಿಮುಕಿಸಿದ್ದರಿಂದ ತೀಥೋದ್ಭವವಾಯಿತು. ನಂತರದಲ್ಲಿ ಪಾರ್ವತಿ ದೇವಿ ಸ್ನಾನ ಮಾಡಿ ಗಣಪತಿ ಪೂಜೆ ಮಾಡಿದಳು ಎಂದು ಹೇಳಲಾಗುತ್ತದೆ. ಅಂದಿನಿಂದ ಈವರೆಗೂ ಇಲ್ಲಿ ನೀರು ಸದಾ ಜಿನುಗುತ್ತಿರುತ್ತದೆ. ಈ ಪುಣ್ಯಕ್ಷೇತ್ರವು ಬ್ರಾಹ್ಮೀನದಿಯ ಉಗಮ ಸ್ಥಾನವಾಗಿ ಹಾಗೂ ಗಣಪತಿಯ ಆರಾಧನೆಯ ಸ್ಥಾನವಾಗಿ ಪ್ರಸಿದ್ಧವಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಸಣ್ಣ ಕೊಳವಿದೆ. ದೇವರ ಪಾದದ ಬಳಿ ಚಿಮ್ಮುವ ನೀರು ಹರಿದು ಬಂದು ಇದರಲ್ಲಿ ಸಂಗ್ರಹವಾಗುತ್ತದೆ. ಯಾವುದಾದರೂ ದೋಷಗಳಿದ್ದವರು ಈ ತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ಪರಿಹಾರವಾಗುತ್ತವೆ ಎಂಬುದು ನಂಬಿಕೆ. ದೇಗುಲ ಕೊಪ್ಪ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿದೆ.

ವಿಶ್ವವಿಖ್ಯಾತ ಮೈಸೂರು ಅರಮನೆಯಿಂದ ಕೂಗಳತೆ ದೂರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನ ಭಕ್ತರ ಇಷ್ಟಾರ್ಥ ಸಿದ್ಧಿಸುವ ಕ್ಷೇತ್ರ. ನಗರದ ಅಗ್ರಹಾರದ ತ್ಯಾಗರಾಜ ವೃತ್ತದಲ್ಲಿರುವ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಗಣೇಶೋತ್ಸವ ಮೂರ್ತಿಗಳ ಪೂಜೆಯೊಂದಿಗೆ ಇಲ್ಲಿನ ಸ್ಥಳ ಪಾವಿತ್ರ ್ಯೆ ಪಡೆಯಿತು. ಇಲ್ಲಿಗೆ ಭೇಟಿ ನೀಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. 101 ಗಣಪತಿ ವಿಗ್ರಹಗಳನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ 1965ರಲ್ಲಿ ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನ ಶ್ರೀಚಕ್ರ ಆಕಾರದಲ್ಲಿದೆ. ಮೊದಲ ಸಾಲಿನಲ್ಲಿ ಬೃಹತ್ ಏಕೈಕ ಗಣಪತಿ ವಿಗ್ರಹವಿದೆ. ಇದು ಆತ್ಮ-ಜೀವ ಎನ್ನಲಾಗುತ್ತದೆ. ನಂತರ ಎರಡನೇ ವೃತ್ತದಲ್ಲಿ 16 ಗಣಪತಿ ವಿಗ್ರಹಗಳಿವೆ. ಇದನ್ನು ಷೋಡಷ ಎಂದು ಕರೆಯಲಾಗುತ್ತಿದೆ. ಮೂರನೇ ವೃತ್ತದಲ್ಲಿ 24 ಗಣಪತಿ ವಿಗ್ರಹಗಳಿದ್ದು, ಅದನ್ನು ತತ್ವ ವೃತ್ತ ಎನ್ನಲಾಗುತ್ತದೆ. ನಾಲ್ಕನೇ ವೃತ್ತದಲ್ಲಿ 28 ವಿಗ್ರಹಗಳಿವೆ. ಅವುಗಳನ್ನು 27 ನಕ್ಷತ್ರ ಮತ್ತು ಅಭಿಜಿನ್ ಎಂದು ಗುರುತಿಸಲಾಗುತ್ತಿದೆ. ನಂತರದ ವೃತ್ತದಲ್ಲಿ ಪುರಾಣದಲ್ಲಿ ಗುರುತಿಸಿರುವಂತೆ 32 ಗಣಪತಿ ವಿಗ್ರಹಗಳಿವೆ.

ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಮೂರ್ತಿ : ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹೋಬಳಿಯ ಬಸವನಗರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಹಾಗಣಪತಿ ಭಕ್ತರ ಸಂಕಷ್ಟ ಪರಿಹರಿಸುವ ಆರಾಧ್ಯದೈವವಾಗಿದೆ. ನೂರಾರು ವರ್ಷಗಳ ಹಿಂದೆ ಈಗಿನ ಬಸವನಗರ ಗ್ರಾಮವು ಅರಣ್ಯಪ್ರದೇಶವಾಗಿತ್ತು. ಕಾಲಕ್ರಮೇಣ ಮನೆಗಳು ನಿರ್ವಣವಾಗಿ ಪುಟ್ಟ ಹಳ್ಳಿಯಾಯಿತು. ಮೊದಲು ಇಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಿ 40 ವರ್ಷಗಳಿಂದ ಪೂಜೆ ನಡೆಸಲಾಗುತ್ತಿತ್ತು. ನಂತರದಲ್ಲಿ ಹೊಸಳ್ಳಿ ಮಲ್ಲೇಶ್ ಎಂಬುವವರು ಮಹಾಗಣಪತಿ ದೇವಸ್ಥಾನ ನಿರ್ವಣಕ್ಕೆ ಜಾಗವನ್ನು ದಾನವಾಗಿ ನೀಡಿದರು. ಗ್ರಾಮದ ಗಣಪನ ಭಕ್ತರು ಹಾಗೂ ದಾನಿಗಳು ಒಗ್ಗೂಡಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿಸಿದರು. ಇದು ಬೆಟ್ಟದಪುರ ವ್ಯಾಪ್ತಿಯಲ್ಲಿ ಮೊದಲ ಗಣಪತಿ ದೇವಸ್ಥಾನವಾಗಿದೆ. ಹಬ್ಬಹರಿದಿನಗಳಲ್ಲಿ ದೂರದ ಊರುಗಳಿಂದ ಭಕ್ತರು ಆಗಮಿಸಿ ಇಷ್ಟಾರ್ಥಸಿದ್ಧಿಗಾಗಿ ಪೂಜೆ ಸಲ್ಲಿಸಿ, ಹರಕೆ ಮಾಡಿಕೊಳ್ಳುತ್ತಾರೆ. ಅಂದುಕೊಂಡಂತೆ ಹರಕೆ ನೆರವೇರಿದರೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಬಸವನಗರ ಗ್ರಾಮವು ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ 15 ಕಿ.ಮೀ., ಮೈಸೂರು ಜಿಲ್ಲಾಕೇಂದ್ರದಿಂದ 95 ಕಿ.ಮೀ. ದೂರವಿದೆ.
ಐತಿಹಾಸಿಕ ಚಿತ್ರದುರ್ಗ ಕೋಟೆಯೊಳಗೆ 400 ವರ್ಷಗಳ ಪುರಾತನ ಐತಿಹ್ಯವಿರುವ ಬೆಟ್ಟದ ಗಣಪತಿ ಬೇಡಿದ್ದನ್ನು ಕರುಣಿಸುವ ಭಕ್ತೋದ್ಧಾರಕ. ಪಾಳೇಗಾರರ ಕಾಲದಲ್ಲಿ ಸ್ವಾಮಿಯ ದೇಗುಲ ನಿರ್ವಣವಾಗಿದೆ. ಕಲ್ಯಾಣ, ಸಂತಾನ, ವ್ಯಾಪಾರ, ಉದ್ಯೋಗ, ಆರೋಗ್ಯ ಸೇರಿ ಬೇಡಿದ್ದನ್ನು ಕರುಣಿಸುವ ಮಹಾಗಣಪನನ್ನು ಅಂದಿನಿಂದ ಈವರೆಗೂ ವಿಶೇಷವಾಗಿ ಆರಾಧಿಸುತ್ತ ಬರಲಾಗಿದೆ.

ಇಷ್ಟಾರ್ಥ ಈಡೇರಿದ ಬಳಿಕ ಭಕ್ತರು ಗಣೇಶ ಚತುರ್ಥಿಯಂದು ಮೋದಕ, ಕರಿಗಡಬಿನ ಹಾರ ಸಮರ್ಪಿಸುವ ಪರಂಪರೆ ಬೆಳೆದು ಬಂದಿದೆ. ವಿನಾಯಕನ ಸನ್ನಿಧಾನಕ್ಕೆ ಬೃಹತ್ ಬಂಡೆಯೊಂದು ಹೊಂದಿಕೊಂಡಿದ್ದು, ಆನೆ ಮಾದರಿಯಲ್ಲಿದೆ. ಇದು ಮಾನವ ನಿರ್ವಿುತವಲ್ಲ. ಪ್ರಾಕೃತಿಕವಾಗಿ ಸೃಷ್ಟಿಯಾಗಿದೆ. ಹೀಗಾಗಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದೇಗುಲಕ್ಕೆ ಬಾಗಿಲು ಇಲ್ಲದ ಕಾರಣ ಕೋಟೆಗೆ ಬರುವ ಬಹುತೇಕರು ಸ್ವಾಮಿಯ ದರ್ಶನ ಪಡೆದೇ ಹಿಂದಿರುಗುತ್ತಾರೆ. ಮಂಗಳವಾರ, ಶುಕ್ರವಾರ, ಹಬ್ಬಗಳನ್ನು ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಭಕ್ತರೇ ಪೂಜೆ ಸಲ್ಲಿಸುವುದು ಇಲ್ಲಿಯ ಮತ್ತೊಂದು ವಿಶೇಷ.
ಗಣೇಶ ಚತುರ್ಥಿಯ ವರಸಿದ್ಧಿ ವಿನಾಯಕ ವ್ರತಕ್ಕೆ ಐತಿಹಾಸಿಕ ಆಧಾರವಿದೆ. ಕನ್ನಡ ನಾಡನ್ನು 300 ವರ್ಷ ಆಳಿದ ಹೊಯ್ಸಳರ ಕಾಲದ ಐತಿಹಾಸಿಕ ದಾಖಲೆ ಇದಕ್ಕೆ ಸಾಕ್ಷಿ. ಅಂದರೆ, 900 ವರ್ಷಗಳ ಹಿಂದೆಯೇ ಗಣಪನಿಗೆ ಚೌತಿ ಪೂಜೆಯನ್ನು ಸಂಭ್ರಮದಿಂದ ಮಾಡಲಾಗುತ್ತಿತ್ತು ಎಂಬುದನ್ನು ಹಾಸನ ಜಿಲ್ಲೆ ಹಳೇಬೀಡಿನ ಹೊಯ್ಸಳೇಶ್ವರ ದೇಗುಲದ ಶಾಸನದ ಮೂಲಕ ತಿಳಿಯಬಹುದು. ಶಾಲಿವಾಹನ ಶಕವರ್ಷ 1208ನೇ ಇಸವಿಯ ಸರ್ವಜಿತು ಸಂವತ್ಸರದ ಆಷಾಢ ಮಾಸದ ಶುಕ್ಲಪಕ್ಷ ಪಾಡ್ಯ ಶುಕ್ರವಾರದ ದಿನ ದೇವಪ್ಪ ಎಂಬುವರು ಹೊಯ್ಸಳೇಶ್ವರ ದೇವರ ಸನ್ನಿಧಿಯ ‘ಇಂದೆಯ ಬೆನಕ’(ಗಣಪ)ನ ಭಾದ್ರಪದ ಚೌತಿಯ ಪೂಜೆಗೆ ಮತ್ತು ಕಜ್ಜಾಯ ಪ್ರಸಾದಕ್ಕೆಂದು ಗದ್ಯಾಣವನ್ನು ಮುಡಿಪಿಟ್ಟ ಬಗ್ಗೆ ಶಿಲಾಶಾಸನವು ತಿಳಿಸುತ್ತದೆ. ಪ್ರಸ್ತುತ ಶಾಸನದ ಭಾಗವು ನಶಿಸಿಹೋಗಿದ್ದು, ಅದರ ಸಂಗ್ರಹಣೆಯ ಭಾಗವು ಸರ್ಕಾರದ ಎನ್​ಸೈಕ್ಲೋಪಿಡಿಯಾದಲ್ಲಿ ಲಭ್ಯವಿದೆ. ಇಂತಹ ಮಹತ್ವದ ಗಣೇಶನ ಮೂಲ ವಿಗ್ರಹ ಯಾವುದೆಂಬ ಖಾತ್ರಿ ಇಲ್ಲವಾದರೂ ಹೊಯ್ಸಳೇಶ್ವರ ದೇವರ ಸನ್ನಿಧಿಯ ಪಕ್ಕದ ಕೋಷ್ಠಕದಲ್ಲಿರುವ ಗಣೇಶನನ್ನೇ ‘ಇಂದೆಯ ಬೆನಕ’ ಎಂದು ಆರಾಧಿಸಲಾಗುತ್ತಿದೆ. ಪ್ರಸ್ತುತ ಕಜ್ಜಾಯ ನಿವೇದನ ಪದ್ಧತಿ ಇಲ್ಲವಾಗಿದೆ. ನಿತ್ಯಪೂಜೆ ಹಾಗೂ ಚೌತಿಯ ವಿಶೇಷ ಆರಾಧನೆ ಜರುಗುತ್ತಿದೆ. ಇದು ಹಾಸನ ಜಿಲ್ಲಾ ಕೇಂದ್ರದಿಂದ 31 ಕಿ.ಮೀ., ಬೆಂಗಳೂರಿನಿಂದ 314 ಕಿ.ಮೀ. ಅಂತರದಲ್ಲಿದೆ.

ಕೊಡಗಿನ ಸುಂಟಿಕೊಪ್ಪ ಪಟ್ಟಣದಲ್ಲಿ 2003ರಲ್ಲಿ ಮೇ ಫ್ಲವರ್ ವೃಕ್ಷದಲ್ಲಿ ಸ್ವಯಂ ಮೂಡಿದ ಗಣೇಶನ ಮೂರ್ತಿಯೇ ಈಗ ವೃಕ್ಷೋದ್ಭವ ಗಣಪತಿಯಾಗಿ ಭಕ್ತರನ್ನು ಸೆಳೆಯುತ್ತಿದೆ. ಸ್ಥಳದ ಮಹಿಮೆ ಬಗ್ಗೆ ಆರಂಭದಲ್ಲಿ ಮಾಹಿತಿ ನೀಡಿದವರು ಹಿರಿಯ ಆರ್ಚಕ ಗಣೇಶ ಶರ್ಮ. 2018ರಲ್ಲಿ ದೇವಾಲಯದಲ್ಲಿ ನಾಗಪ್ರತಿಷ್ಠೆ, ಲಕ್ಷ್ಮೀ ಪಾರ್ವತಿ, ಅಯ್ಯಪ್ಪ, ಆಂಜನೇಯ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿವರ್ಷ ಈ ದೇವಾಲಯದಲ್ಲಿ ಗಣಪತಿ ಉತ್ಸವದಲ್ಲಿ ಗೌರಿಯನ್ನು ಮಾತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ವಿಸರ್ಜಿಸುವುದು ಸಂಪ್ರದಾಯ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ದೇವಾಲಯದ ವಾರ್ಷಿಕೋತ್ಸವ. ಉಳಿದ ದಿನಗಳಲ್ಲಿ ನಿತ್ಯಪೂಜೆ, ಹಬ್ಬ ಹರಿದಿನಗಳಂದು ವಿಶೇಷ ಪೂಜಾಕೈಂಕರ್ಯಗಳು ನಡೆಯುತ್ತವೆ. ದೇವಾಲಯದ ಮಹಿಮೆ ತಿಳಿದು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ದೇಗುಲ ಜಿಲ್ಲಾಕೇಂದ್ರ ಮಡಿಕೇರಿಯಿಂದ 14 ಕಿ.ಮೀ. ದೂರ, ರಾಜಧಾನಿ ಬೆಂಗಳೂರಿನಿಂದ 240 ಕಿ.ಮೀ. ದೂರದಲ್ಲಿದೆ.
ವಿಶ್ವವಿಖ್ಯಾತ ಹೊಸಪೇಟೆಯ ಹಂಪಿ ಪರಿಸರದಲ್ಲಿ ಸಾವಿರಾರು ಗುಡಿ ಗೋಪುರಗಳಿವೆ. ಕಲ್ಲು-ಬಂಡೆಗಳಲ್ಲಿ ದೇವರ ಮೂರ್ತಿಗಳು ಕೆತ್ತಲಾಗಿದೆ. ಐತಿಹಾಸಿಕ ಕಮಲಾಪುರ ಕೆರೆಕಟ್ಟೆ ಗಣೇಶ ದೇವಸ್ಥಾನವು ಸ್ಥಳೀಯರ ಹಾಗೂ ರೈತರ ಆರಾಧ್ಯದೈವವಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಕೆರೆಯ ನಿರ್ವಣದ ವೇಳೆ ರಕ್ಷಣೆಗೆಂದು ಬಲಗಡೆ ಗಣೇಶ ಗುಡಿ, ಎಡಗಡೆ ಆಂಜನೇಯ ದೇವಸ್ಥಾನ, ಕೆರೆ ಮೇಲೆ (ಮಧ್ಯೆ) ಕಟ್ಟೆಭರಮಪ್ಪ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕಮಲಾಪುರದಿಂದ ಕೆರೆ ಏರಿ ಹತ್ತುವ ಮುನ್ನ ಬಲಗಡೆ ಐತಿಹಾಸಿಕ ಗಣಪತಿ ದೇಗುಲವಿದೆ. ಬಂಡೆ ಮೇಲೆ ದಕ್ಷಿಣಾಭಿಮುಖವಾಗಿ ನಾಟ್ಯದ ಭಂಗಿಯಲ್ಲಿ ವಿನಾಯಕ ನಿಂತಿರುವುದು ವಿಶೇಷವಾಗಿದೆ. ಬಯಲಿನಲ್ಲೇ ವಿರಾಜಮಾನನಾಗಿ ನಿಂತು ಪೂಜಿಸಲ್ಪಡುವ ವಿನಾಯಕನಿಗೆ ಭಕ್ತರಿಂದ ಗರ್ಭಗುಡಿ ಹಾಗೂ ಗೋಪುರ ನಿರ್ಮಾಣ ಮಾಡಲಾಗಿದೆ. ಪ್ರಕೃತಿಯ ಮಡಿಲಿನಲ್ಲಿ ಆವಿರ್ಭವಿಸಿ ಭಕ್ತಸಾಗರದ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವ ಈ ಗಣೇಶನಿಗೆ ಅಸಂಖ್ಯಾತ ಭಕ್ತರಿರುವುದು ಇಲ್ಲಿನ ಮಹಿಮೆಗೆ ಸಾಕ್ಷಿ. ಈ ದೇವಸ್ಥಾನ ಹಂಪಿಯಿಂದ 5 ಕಿ.ಮೀ., ಹೊಸಪೇಟೆಯಿಂದ 11 ಕಿ.ಮೀ. ಹಾಗೂ ಬೆಂಗಳೂರಿನಿಂದ 338 ಕಿ.ಮೀ ದೂರದಲ್ಲಿದೆ.

ಮುಳಬಾಗಿಲು ತಾಲೂಕಿನ ಕೌಂಡಿನ್ಯ ಮಹಾಋಷಿ ತಪಸ್ಸುಗೈದ ತ್ರಿಕೂಟಾದ್ರಿ ಪರ್ವತ ಕಾಲಾನಂತರದಲ್ಲಿ ಕೂಡಮಲೆಯಾಗಿ ಮಹಿಮಾನ್ವಿತ ಪ್ರದೇಶ ಎನಿಸಿಕೊಂಡು ನಂತರ ಕುರುಡುಮಲೆ ಶ್ರೀ ಲಕ್ಷ್ಮೀಗಣಪತಿ ದೇಗುಲವಾಗಿ ಪ್ರಸಿದ್ಧಿ ಪಡಿದಿದೆ. ದೇವಶಿಲ್ಪಿ ಮಯನಿಂದ ನಿಮಾರ್ಣವಾದ ಬೃಹತ್ ಸಾಲಿಗ್ರಾಮ ಶಿಲೆಯ 16 ಅಡಿ ಎತ್ತರದ ಘನಗಾತ್ರದ ಸುಂದರವಾದ ಸಿದ್ಧಿ ವಿನಾಯಕ ಮೂರ್ತಿಯನ್ನು ದೇವಾನುದೇವತೆಗಳ ಕೂಟದಲ್ಲಿ ಸಾಕ್ಷಾತ್ ಪರಮೇಶ್ವರನಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಪುಣ್ಯಕ್ಷೇತ್ರದ ದರ್ಶನ ಪಡೆಯುವುದು ಸುದೈವ ಎಂಬ ನಂಬಿಕೆ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಪರಮೇಶ್ವರನು ದೇವಋಷಿಗಳ ಪ್ರಾರ್ಥನೆಯಂತೆ ತ್ರಿಪುರರ ಸಂಹಾರಕ್ಕೆ ಹೊರಡುವ ಮೊದಲು ಸಕಲಕಾರ್ಯಸಿದ್ಧಿ ಪ್ರದಾಯಕನಾದ ವಿಘ್ನೇಶ್ವರನನ್ನು ಇಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಐತಿಹ್ಯವಿರುವ ಪುಣ್ಯಕ್ಷೇತ್ರವಿದು. ದೇವರು, ಋಷಿಗಳು ಒಂದೆಡೆ ಸೇರಿದ್ದರಿಂದ ತ್ರಿಕೂಟಾದ್ರಿ ಪರ್ವತ ಈಗ ಕುರುಡುಮಲೆಯಾಗಿದೆ. ಇಲ್ಲಿಯ ದೇವಾಲಯದ ಶಿಲ್ಪಕಲೆಯು ಆಕರ್ಷಕವಾಗಿದೆ. ಗಣೇಶ ಚತುರ್ಥಿಯಂದು ದೇವಾಲಯದಲ್ಲಿ ವಿಶೇಷ ಹೋಮಹವನ, ಪೂಜೆಗಳು ನಡೆಯುತ್ತವೆ. ಮರುದಿನ ರಥೋತ್ಸವ, ಪೂಜಾದಿ ಕಾರ್ಯಗಳು ನಡೆದುಕೊಂಡು ಬರುತ್ತಿವೆ.
ವಿಶ್ವವಿಖ್ಯಾತ ಮೈಸೂರು ಅರಮನೆಯಿಂದ ಕೂಗಳತೆ ದೂರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನ ಭಕ್ತರ ಇಷ್ಟಾರ್ಥ ಸಿದ್ಧಿಸುವ ಕ್ಷೇತ್ರ. ನಗರದ ಅಗ್ರಹಾರದ ತ್ಯಾಗರಾಜ ವೃತ್ತದಲ್ಲಿರುವ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಗಣೇಶೋತ್ಸವ ಮೂರ್ತಿಗಳ ಪೂಜೆಯೊಂದಿಗೆ ಇಲ್ಲಿನ ಸ್ಥಳ ಪಾವಿತ್ರ ್ಯೆ ಪಡೆಯಿತು. ಇಲ್ಲಿಗೆ ಭೇಟಿ ನೀಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. 101 ಗಣಪತಿ ವಿಗ್ರಹಗಳನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ 1965ರಲ್ಲಿ ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನ ಶ್ರೀಚಕ್ರ ಆಕಾರದಲ್ಲಿದೆ. ಮೊದಲ ಸಾಲಿನಲ್ಲಿ ಬೃಹತ್ ಏಕೈಕ ಗಣಪತಿ ವಿಗ್ರಹವಿದೆ. ಇದು ಆತ್ಮ-ಜೀವ ಎನ್ನಲಾಗುತ್ತದೆ. ನಂತರ ಎರಡನೇ ವೃತ್ತದಲ್ಲಿ 16 ಗಣಪತಿ ವಿಗ್ರಹಗಳಿವೆ. ಇದನ್ನು ಷೋಡಷ ಎಂದು ಕರೆಯಲಾಗುತ್ತಿದೆ. ಮೂರನೇ ವೃತ್ತದಲ್ಲಿ 24 ಗಣಪತಿ ವಿಗ್ರಹಗಳಿದ್ದು, ಅದನ್ನು ತತ್ವ ವೃತ್ತ ಎನ್ನಲಾಗುತ್ತದೆ. ನಾಲ್ಕನೇ ವೃತ್ತದಲ್ಲಿ 28 ವಿಗ್ರಹಗಳಿವೆ. ಅವುಗಳನ್ನು 27 ನಕ್ಷತ್ರ ಮತ್ತು ಅಭಿಜಿನ್ ಎಂದು ಗುರುತಿಸಲಾಗುತ್ತಿದೆ. ನಂತರದ ವೃತ್ತದಲ್ಲಿ ಪುರಾಣದಲ್ಲಿ ಗುರುತಿಸಿರುವಂತೆ 32 ಗಣಪತಿ ವಿಗ್ರಹಗಳಿವೆ.
ಕರ್ನಾಟಕ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 16 =
Remember me
