ಬೆಂಗಳೂರು ನಿಮಾತೃ ಕೆಂಪೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸುವುದು ಸಹಜವೇ. ಆದರೆ ಅವರ ಆಡಳಿತ, ಅಭಿವೃದ್ಧಿಯ ದೃಷ್ಟಿ, ಕೃಷಿಗೆ ನೀಡಿದ ಮಹತ್ವ ಇತ್ಯಾದಿ ಸಂಗತಿಗಳಿಂದ ಬಹಳಷ್ಟು ಪ್ರಭಾವಿತರಾಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಆ ಬಗ್ಗೆ ಇಲ್ಲಿ ಅರ್ಥಪೂರ್ಣವಾಗಿ ರ್ಚಚಿಸಿದ್ದಾರೆ.
ಡಾ. ಸಿ.ಎನ್.ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿ ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತೆ ಬಂದಿದೆ. ಕೇವಲ ಜಯಂತಿಯಂದು ಮಾತ್ರವಲ್ಲದೆ, ನಾಡಿನ ಪ್ರತಿಯೊಬ್ಬರೂ ಅನುದಿನವೂ ಸ್ಮರಿಸಲೇಬೇಕಾದ ಅಗ್ರಮಾನ್ಯರು ನಮ್ಮ ನಾಡಪ್ರಭುಗಳು. ಅಪ್ರತಿಮ ಆಡಳಿತಗಾರರೂ, ಪ್ರಖರ ದೂರದೃಷ್ಟಿಯುಳ್ಳವರೂ ಆಗಿದ್ದ ಅವರು, ಐದು ಶತಮಾನಗಳ ಹಿಂದೆ ಕಟ್ಟಿದ ಬೆಂಗಳೂರೆಂಬ ಕನಸಿನ ನಗರಿಯಲ್ಲಿ ನಾವೆಲ್ಲರೂ ಇದ್ದೇವೆ. ನಾನು ಅವರ ಪ್ರಭಾವದಲ್ಲೇ ಇದ್ದೇನೆ ಮಾತ್ರವಲ್ಲದೆ, ಅದೆಷೊ್ಟೕ ವಿಷಯಗಳ ಬಗ್ಗೆ ಚಕಿತನಾಗಿದ್ದೇನೆ.
ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಿ ನಾಡಪ್ರಭುಗಳ ವಿಷಯದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದ್ದನ್ನು ಶಿರಸಾವಹಿಸಿ ಮಾಡುತ್ತಿದ್ದೇನೆ. ಮೂಲತಃ ಪ್ರಭುಗಳ ವೀರಸಮಾಧಿಯುಳ್ಳ ಕೆಂಪಾಪುರಕ್ಕೆ ಅನತಿದೂರದ ಗ್ರಾಮದಲ್ಲಿ (ಚಿಕ್ಕಕಲ್ಯ) ಹುಟ್ಟಿದ ನಾನು ಬಾಲ್ಯದಿಂದಲೇ ಪ್ರಭುಗಳ ಕಥೆಗಳನ್ನು ಅವರ ಸಾಹಸಗಳನ್ನು ಕೇಳುತ್ತ ಬೆಳೆದವನು. ನಮ್ಮ ತಂದೆ-ತಾಯಿ ಹೇಳುತ್ತಿದ್ದ ಕಥೆಗಳು ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ. ಜೀವನದಲ್ಲಿ ನನ್ನ ಪಯಣದ ಪಥಗಳು ಬದಲಾಗುತ್ತಿದ್ದಂತೆಯೇ ನನಗೆ ಕೆಂಪೇಗೌಡರ ಕುರಿತಾದ ಆಸಕ್ತಿ, ಅವರ ಬಗ್ಗೆ ಅಧ್ಯಯನಶೀಲತೆಯ ಉತ್ಕಟತೆಯೂ ಹೆಚ್ಚಾಯಿತು. ಅದರಲ್ಲೂ ಶಾಸಕನಾದ ಮೇಲೆ, ಮಲ್ಲೇಶ್ವರ ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ವಿವಿಧ ಯೋಜನೆ ಹಾಕಿಕೊಂಡಾಗಲೆಲ್ಲ ಕೆಂಪೇಗೌಡರ ದಾರ್ಶನಿಕತೆ, ಅಭಿವೃದ್ಧಿಶೀಲತೆಯೂ ನನ್ನನ್ನು ಕಾಡಿದ್ದರಲ್ಲಿ ಅತಿಶಯವಿಲ್ಲ.
ವಿಜಯನಗರ, ಅದರಲ್ಲೂ ಶ್ರೀಕೃಷ್ಣದೇವರಾಯರ ಸಮಕಾಲೀನರಾಗಿ ಅವರ ಸಾಮ್ರಾಜ್ಯದ ದಕ್ಷಿಣದಲ್ಲಿ ರಾಮರಾಜ್ಯದಂಥ ಆಡಳಿತ ನಡೆಸಿದ ಕೆಂಪೇಗೌಡರ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ಆಗಬೇಕಿದೆ. ಬೆಂಗಳೂರನ್ನು ಕಟ್ಟಿದರೆಂಬ ವಿಷಯಕ್ಕಿಂತ ನಂಬಿಕೆ, ಆತ್ಮವಿಶ್ವಾಸ, ನಿಷ್ಠೆ ಮತ್ತು ಮೌಲ್ಯ ಎಂಬ ತತ್ವಗಳ ಮೇಲೆ ಆಡಳಿತವನ್ನು ನಿಲ್ಲಿಸಿದ್ದ ಅವರು, ಜನಪರವಾಗಿ ಕೆಲಸ ಮಾಡಿದ್ದು ಹಾಗೂ ಜೀವಿತ ದುದ್ದಕ್ಕೂ ಈ ತತ್ವಗಳನ್ನು ಮೀರಿ ನಡೆಯದಿರುವುದು ನನ್ನ ಯೋಚನೆಗಳಲ್ಲಿ ಬದಲಾವಣೆ ತಂದ ಅಂಶಗಳಲ್ಲಿ ಪ್ರಮುಖವು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ.
ಕುಟಿಲತೆ ಇಲ್ಲದ ರಾಜನೀತಿ, ವಿಸ್ತರಣಾವಾದವಿರದ ರಣನೀತಿ ಇವತ್ತಿಗೂ ಕೆಂಪೇಗೌಡರನ್ನು ರಾಜಕೀಯವಾಗಿಯೂ ಅಜರಾಮರರನ್ನಾಗಿ ಮಾಡಿದೆ. ಅಭಿವೃದ್ಧಿಯ ಅಜೆಂಡಾದೊಂದಿಗೆ ಸಾಗಿದ ಅವರು ಓರ್ವ ಸ್ವತಂತ್ರ ದೊರೆ ಅಥವಾ ಚಕ್ರವರ್ತಿಯೂ ಮಾಡಲು ಸಾಧ್ಯವಾಗದ್ದನ್ನು ನಮಗಾಗಿ ಮಾಡಿದ್ದಾರೆ. 59 ವರ್ಷಗಳ ಅವರ ಅವಿಚ್ಛಿನ್ನ ಆಡಳಿತದಲ್ಲಿ ತಲೆತಲೆಮಾರು ಮರೆಯದ ಅದೆಷೊ್ಟೕ ಮೈಲುಗಲ್ಲುಗಳು ಸ್ಥಾಪನೆಯಾಗಿದ್ದವು. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನಾಯಕನೂ ಕೆಂಪೇಗೌಡರಿಂದ ಕಲಿಯಲೇಬೇಕಾದ್ದು ಬಹಳಷ್ಟಿವೆ. ಜತೆಗೆ, ಬೆಂಗಳೂರನ್ನು ಕಟ್ಟಿದ ಪರಿ, ಕೃಷಿ, ವ್ಯಾಪಾರ, ವಾಣಿಜ್ಯ ಚಟುವಟಿಕೆ, ನೀರಾವರಿ, ಮೂಲಸೌಕರ್ಯ, ಟೌನ್ ಪ್ಲಾ್ಯನಿಂಗ್ ಸೇರಿ ಅನೇಕ ಕ್ಷೇತ್ರಗಳಲ್ಲಿ ಅವರಿಗಿದ್ದ ಅಪಾರ ಜ್ಞಾನ, ಸ್ಪಷ್ಟವಾದ ದೂರದೃಷ್ಟಿ ವರ್ತಮಾನದ ನಮಗೆಲ್ಲರಿಗೂ ದಾರಿದೀಪ. ಪ್ರಸಕ್ತ ತಂತ್ರಜ್ಞಾನದ ಕಾಲವನ್ನೂ ಬೆರಗು ಮಾಡುವಂತೆ ನೂರಾರು ವರ್ಷಗಳ ಹಿಂದೆ ಪ್ರಜೆಗಳೇ ಊಹಿಸಲಾರದಷ್ಟು ಪ್ರಗತಿ ಸಾಧಿಸಿದ್ದರು ಕೆಂಪೇಗೌಡರು. ಇಂಥ ಮಾದರಿಗಳನ್ನು ನಾವು ಹೆಕ್ಕಿ ತೆಗೆದು ಅಳವಡಿಸಿಕೊಳ್ಳಬೇಕಿದೆ.
ಇಂದು ಬೆಂಗಳೂರು ಅಗಾಧವಾಗಿ ಬೆಳೆದಿದೆ. ನಗರದೊಳಗೆ ಅನೇಕ ನಗರಗಳೂ, ಪಾಳ್ಯಗಳೂ, ಕಾಲನಿಗಳೂ ಇವೆ. ಆದರೆ ಕೆಂಪೇಗೌಡರು ಬೆಂಗಳೂರನ್ನು ಮುಂದಿನ ಶತಶತಮಾನಗಳ ಮುನ್ನೋಟದಿಂದ ನಿರ್ವಿುಸಿದ್ದರು. ಭವಿಷ್ಯದಲ್ಲಿ ಬೃಹತ್ತಾಗಿ ಬೆಳೆಯುವ ತಮ್ಮ ರಾಜಧಾನಿಯ ನಿರ್ವಹಣೆ ಬಗ್ಗೆಯೂ ಆಗಲೇ ಬೆಳಕು ಚೆಲ್ಲಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ಸಾಗುತ್ತಿದ್ದೇವೆ, ಅಲ್ಲದೆ ಅವರು ಕಟ್ಟಿದ ಅನೇಕ ಪೇಟೆಗಳಲ್ಲಿ ಕೆಲವು ಈಗಲೂ ನಮ್ಮ ಕಣ್ಣಮುಂದಿವೆ. ಅಲ್ಲಿ ನಾವು ಓಡಾಡುತ್ತಿದ್ದೇವೆ, ಅಲ್ಲಿ ಆ ಕಾಲದ ಸೊಗಡನ್ನೂ ಸವಿಯುತ್ತಿದ್ದೇವೆ. ಹೀಗೆ, ಕೆಂಪೇಗೌಡರು 64 ಪೇಟೆಗಳನ್ನು ನಿರ್ವಿುಸಿದರೆಂದು ದಾಖಲೆಗಳು ಹೇಳುತ್ತವೆ. ಇವುಗಳಲ್ಲಿ 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿವೆ. ಹೀಗಾಗಿ ಅವರ ಟೌನ್ ಪ್ಲಾ್ಯನಿಂಗ್ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹೆಜ್ಜೆ ಇಡಲಿದೆ.
ಕೆಂಪಾಪುರ ಅಭಿವೃದ್ಧಿ
ಕೆಂಪೇಗೌಡರ ಸಮಾಧಿಯುಳ್ಳ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿಸುವುದು ನನ್ನ ಮತ್ತೊಂದು ಮಹತ್ವಾಕಾಂಕ್ಷೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು, ಸ್ಥಳೀಯ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ, ಕೆಂಪಾಪುರ ಕೆರೆ ಅಭಿವೃದ್ಧಿ ಯೋಜನೆಗಳ ಮೂಲಕ ಸರ್ವಋತು ಪ್ರವಾಸಿತಾಣವನ್ನಾಗಿಸುವ ಕನಸನ್ನು ಸಾಕಾರ ಮಾಡಲು ಹೆಜ್ಜೆ ಇಡಲಾಗಿದೆ. ಐಡೆಕ್ ತಜ್ಞರು ಈಗಾಗಲೇ ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದು, ಸದ್ಯವೇ ಸಮಗ್ರ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಆವತಿ, ಶಿವಗಂಗೆ ಸೇರಿ ಕೆಂಪೇಗೌಡರು ಕೆಲಸ ಮಾಡಿದ ಜಾಗಗಳನ್ನು ಗುರುತಿಸಿ ಒಂದು ಸರ್ಕ್ಯೂಟ್ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
ಹೊಸ ಪೀಳಿಗೆಗೆ ಹೇಳಬೇಕು
ಕೆಂಪೇಗೌಡರನ್ನು ಈಗಿನ ಹಾಗೂ ಹೊಸ ಪೀಳಿಗೆಗೆ ಪರಿಚಯಿಸಲು ಪ್ರಾಧಿಕಾರದಿಂದ ಮಹತ್ವದ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇವೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟ ಮೇಲೆ ನಮ್ಮ ನಗರದ ಅಸ್ಮಿತೆಯಾದ ಅವರ ವಿರಾಜಮಾನ ಪ್ರತಿಮೆಯನ್ನು ಮಾಡಬೇಕು ಎಂದು ಬೇಡಿಕೆ ಬಂದಾಗ ಸರ್ಕಾರ ಕೂಡಲೇ ಕಾರ್ಯೋನ್ಮುಖವಾಯಿತು. 23 ಎಕರೆ ಪ್ರದೇಶದಲ್ಲಿ ಸುಂದರ ಪಾರ್ಕ್ ಮಾಡಿ ಅದರಲ್ಲಿ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಇದು ಕೇವಲ ಸಾಂಕೇತಿಕ ಪ್ರತಿಮೆಯಾಗಿರದೆ ಅವರ ಇತಿಹಾಸ, ಪರಂಪರೆ ಸಾರುವ ಪಾರ್ಕ್ ಆಗಿರಲಿದೆ, ಜತೆಗೆ ಕನ್ನಡ, ಇಂಗ್ಲಿಷ್​ನಲ್ಲಿ ಅವರ ಸಾಹಿತ್ಯ ಅಲ್ಲಿ ಲಭ್ಯವಾಗುವಂತೆ ಮಾಡಲಾಗುವುದು, ದೃಶ್ಯರೂಪದ ಧ್ವನಿಬೆಳಕಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಒಂದೇ ವರ್ಷದಲ್ಲಿ ಇಡೀ ಯೋಜನೆ ಮುಗಿಸಿ 2021ರ ಜಯಂತಿ ದಿನ ಲೋಕಾರ್ಪಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಚಿರಸ್ಥಾಯಿ ಆಗಿಸುವ ಗುರಿ
ಮುಂದಿನ ಪೀಳಿಗೆಗಳು ಕೆಂಪೇಗೌಡರ ಬಗ್ಗೆ ಮಾತ ನಾಡಬೇಕು. ನವಯುಗದ ಯುವಕ-ಯುವತಿಯರಿಗೆ, ದೇಶ-ವಿದೇಶಗಳ ಜನರು ನಾಡಪ್ರಭುಗಳ ಬಗ್ಗೆ ತಿಳಿಯಬೇಕು. ಅವರ ಅಭಿವೃದ್ಧಿಯ ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು, ವ್ಯಾಪಾರ-ವಾಣಿಜ್ಯ ಚಟುವಟಿಕೆ, ಪರಿಸರ ಪ್ರೀತಿ ಇತ್ಯಾದಿಗಳು ಚಿರ ಸ್ಥಾಯಿಯಾಗಿ ಉಳಿಯಬೇಕು. ಇಷ್ಟು ಸಾಕಾರವಾದರೆ ಅದಕ್ಕಿಂತ ಧನ್ಯತೆ ಬೇರೇನಿದೆ..?
ರಜೆ ಬೇಕಾ, ತಗೊಳ್ಳಿ; ಸಂಬಳ ಮಾತ್ರ ಕೇಳ್ಬೇಡಿ; ನೌಕರರಿಗೆ ಕೆಎಸ್​ಆರ್​ಟಿಸಿ ಆಫರ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
