| ಸತೀಶ್ ಕೆ. ಬಳ್ಳಾರಿ ಬೆಂಗಳೂರು
ದೇಶದ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕರೊನಾ ಸೋಂಕಿತರ ಪ್ರಮಾಣದಲ್ಲಿ ಆಗುತ್ತಿರುವ ಏರಿಕೆ ದೆಹಲಿ, ಮುಂಬೈ ಮತ್ತು ಚೆನ್ನೈಗಳನ್ನೂ ಹಿಂದಿಕ್ಕಿದೆ. ಕಳೆದ ಹತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ 19,498 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣ ಶೇ.49.73 ಹೆಚ್ಚಾಗಿದೆ. ಆದರೆ ಗುಣಮುಖರ ಪ್ರಮಾಣ ಈವರೆಗೆ ಶೇ. 24 ಇದ್ದು, ದೇಶವೇ ಬೆಂಗಳೂರಿನತ್ತ ನೋಡುವಂತಾಗಿದೆ. ಇದೇ ಅವಧಿಯಲ್ಲಿ ದೆಹಲಿಯಲ್ಲಿ 15,402, ಮುಂಬೈ-12,933, ಚೆನ್ನೈ-14,742 ಹಾಗೂ ಕೋಲ್ಕತದಲ್ಲಿ 6,178 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ, ಜು.13ರಿಂದ 23ರವರೆಗೆ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ 19,702ರಿಂದ 39,200ಕ್ಕೆ ಏರಿದೆ. ಕೇವಲ ಹತ್ತು ದಿನಗಳಲ್ಲಿ 19,498 ಹೊಸ ಸೋಂಕಿತರು ಪತ್ತೆಯಾಗಿದ್ದು, ಕೋವಿಡ್ ಪ್ರಕರಣಗಳ ಏರಿಕೆ ಪ್ರಮಾಣದಲ್ಲಿ ದೇಶದ ಎಲ್ಲ ಮಹಾನಗರಗಳನ್ನು ಬೆಂಗಳೂರು ಹಿಂದಕ್ಕೆ ತಳ್ಳಿದೆ. ಒಟ್ಟು ಸೋಂಕಿತರ ಪ್ರಮಾಣ ಶೇ.49.73 ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತರ ಸ್ಥಾನದಲ್ಲಿ 4ನೇ ಸ್ಥಾನ: ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಮಹಾನಗರಗಳಲ್ಲಿ ಈವರೆಗೆ ದೆಹಲಿ 1.26 ಲಕ್ಷ ಸೋಂಕಿತರನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿದೆ. ಮುಂಬೈ 1.04 ಲಕ್ಷ, ಚೆನ್ನೈ 90,900 ಸೋಂಕಿತರನ್ನು ಹೊಂದಿದ್ದು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಆದರೆ, ಬೆಂಗಳೂರಿನಲ್ಲಿ 39,200 ಸೋಂಕಿತ ಪ್ರಕರಣಗಳು ಪತ್ತೆಯಾಗಿ ನಾಲ್ಕನೇ ಸ್ಥಾನ ಹೊಂದಿದ್ದರೆ, ಕೋಲ್ಕತ 15,332 ಸೋಂಕಿತರನ್ನು ಹೊಂದಿ 5ನೇ ಸ್ಥಾನದಲ್ಲಿದೆ.
ಸಿಲಿಕಾನ್ ಸಿಟಿಯಲ್ಲಿ ಅತಿಕಡಿಮೆ ಗುಣಮುಖ: ಅತಿ ಹೆಚ್ಚು ಸೋಂಕಿತರು ಪತ್ತೆಯಾದ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕೇವಲ ಶೇ.23.79 ಸೋಂಕಿತರು ಗುಣವಾಗಿದ್ದಾರೆ. ಈ ಪ್ರಮಾಣ ದೆಹಲಿಯಲ್ಲಿ ಶೇ. 85, ಚೆನ್ನೈ ಶೇ.83, ಮುಂಬೈ ಶೇ.71.76 ಹಾಗೂ ಕೋಲ್ಕತ ಶೇ.59 ಇದೆ. ಆದರೆ, ಗುಣವಾದವರ ಪ್ರಮಾಣ ಬೆಂಗಳೂರಿನಲ್ಲಿ ಅತಿ ಕಡಿಮೆ ಇರುವುದು ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲವೋ ಎಂಬ ಆತಂಕ ಮೂಡಿಸಿದೆ. ಬಿಬಿಎಂಪಿ ಮತ್ತು ಅರೋಗ್ಯ ಇಲಾಖೆ ಸೋಂಕು ಪತ್ತೆ ಹಚ್ಚುವಲ್ಲಿ ಶ್ರಮವಹಿಸಿದಂತೆ ಚಿಕಿತ್ಸೆಗೂ ಆದ್ಯತೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಶೇ. 2 ಸಾವು: ಉದ್ಯಾನನಗರಿಯಲ್ಲಿ ಒಟ್ಟಾರೆ ಸೋಂಕಿತರ ಪೈಕಿ ಈವರೆಗೆ 784 ಜನರು ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ.2 ಮಾತ್ರ. ಆದರೆ ಸಾವಿನ ಪ್ರಮಾಣ ದೆಹಲಿಯಲ್ಲಿ ಶೇ.2.94, ಮುಂಬೈ ಶೇ.5.61, ಚೆನ್ನೈ ಶೇ.2.13 ಹಾಗೂ ಕೋಲ್ಕತದಲ್ಲಿ ಶೇ.4.06 ಇದೆ. ಇನ್ನು ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ 452 ಜನರು ಮೃತಪಟ್ಟಿದ್ದಾರೆ.
ವೈದ್ಯರಿಗೆ ರಕ್ಷಣೆ ಒದಗಿಸಿ, ಆಸ್ಪತ್ರೆಗಳಿಗೆ ಭದ್ರತೆ ಕಲ್ಪಿಸಿ
ಬೆಂಗಳೂರು: ವೈದ್ಯರಿಗೆ ರಕ್ಷಣೆ ನೀಡಬೇಕು ಮತ್ತು ಕರೊನಾ ಆಸ್ಪತ್ರೆಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದೆ. ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಈ ಕುರಿತ ಕಾನೂನು ಬಿಗಿಗೊಳಿಸಬೇಕು ಎಂದು ಐಎಂಎ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಕಳೆದ 25 ದಿನಗಳಲ್ಲಿ 4 ದೌರ್ಜನ್ಯ ಪ್ರಕರಣಗಳು ನಡೆದಿವೆ. ಈ ದಾಳಿಗಳು ಆತಂಕಕಾರಿಯಾಗಿದ್ದು, ಇಡೀ ಆರೋಗ್ಯ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಸೂಚನೆ ಪಾಲಿಸಿದವರಿಗೆ ತೆರಿಗೆ ವಿನಾಯಿತಿ
ಬೆಂಗಳೂರು: ಸರ್ಕಾರದ ಸೂಚನೆಯನ್ನು ಚಾಚೂತಪ್ಪದೆ ಪಾಲಿಸಿದ ಖಾಸಗಿ ಆಸ್ಪತ್ರೆಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ದಕ್ಷಿಣ ವಲಯದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರ ಜೀವ ರಕ್ಷಣೆಗಾಗಿ ಬೆಂಬಲಿಸಿದ ಆಸ್ಪತ್ರೆಗಳಿಗೆ ವಿನಾಯಿತಿ ನೀಡುವುದರಿಂದ ಸರ್ಕಾರದ ಬಗ್ಗೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ಅಶೋಕ್ ತಮ್ಮ ನಿಲುವು ಸಮರ್ಥಿಸಿಕೊಂಡರು. ರಾಜಧಾನಿಯನ್ನು ಕಂಗೆಡಿಸಿರುವ ಕರೊನಾ ನಿಯಂತ್ರಣ ಸಂಬಂಧ ಯಾವುದೆಲ್ಲ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ನಿಗದಿತ ಕಾಲಮಿತಿಯೊಳಗೆ ಗುರಿ ತಲುಪುವುದಕ್ಕಾಗಿ ಮತಗಟ್ಟೆ ಮಟ್ಟದಲ್ಲಿ 10 ಸ್ವಯಂಸೇವಕರ ಪಟ್ಟಿ ಈಗಾಗಲೇ ತಯಾರಿಸಿದ್ದೇವೆ. ಸೋಂಕಿತರ ಕುಟುಂಬಕ್ಕೆ ಆರೋಗ್ಯ ಕಿಟ್ ವಿತರಿಸಲು ನಿರ್ಧರಿಸಲಾಗಿದ್ದು, ಮಾಸ್ಕ್, ಥರ್ವಮೀಟರ್, ಸ್ಯಾನಿಟೈಸರ್, ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ಸೇರಿ ಅಗತ್ಯ ವಸ್ತುಗಳು ಇದರಲ್ಲಿರುತ್ತವೆ ಎಂದರು.
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
