ಬೆಂಗಳೂರು:ವಿಶ್ವದ ಮಹಾನಗರಗಳು ಕರೊನಾಗೆ ಥರಗುಟ್ಟಿವೆ. ಅತ್ಯುತ್ತಮ ಆರೋಗ್ಯ ಸೇವೆ ಹೊಂದಿರುವ ಅತಿ ಸ್ವಚ್ಚ ನಗರಗಳೆನಿಸಿಕೊಂಡವೂ ಪೂರ್ಣ ಬಾಗಿಲು ಮುಚ್ಚಿಕೊಂಡಿವೆ. ಕೆಲವೆಡೆ ಸಾವಿನ ಮೆರವಣಿಗೆ ಇನ್ನೂ ನಿಯಂತ್ರಣಕ್ಕೆ ಬಂದೇ ಇಲ್ಲ. ಈ ನಡುವೆ, ಬೆಂಗಳೂರು ಲಾಕ್​ಡೌನ್ ಕಟ್ಟುಪಾಡಿನಿಂದ ಕಳಚಿಕೊಂಡು ಮತ್ತೆ ತನ್ನ ಗತಸ್ಥಿತಿಗೆ ಮರಳಲು ಸಜ್ಜಾಗುತ್ತಿದೆ. ರಾಜ್ಯದಲ್ಲಿ 115 ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣಗಳಿದ್ದು, ಬೆಂಗಳೂರಿನದ್ದೂ ಕೆಲವಿದೆ. ಇದೊಂದು ಆತಂಕದ ಹೊರತುಪಡಿಸಿದರೆ, ರಾಜ್ಯ ರಾಜಧಾನಿ ಧನಾತ್ಮಕ ದಾರಿಯತ್ತ ಸಾಗಿದೆ.
ಕರೊನಾ ಸೋಂಕು ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ವ್ಯಾಪಕವಾಗಿ ಹರಡಿದೆ. ಬಹುತೇಕ ದೊಡ್ಡ ನಗರಗಳು ಬೋರಲು ಬಿದ್ದಿವೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದುಕೊಡುವ ಮಹಾನಗರಗಳಲ್ಲಿ ಲಾಕ್​ಡೌನ್ ಕಷ್ಟ ಸಾಧ್ಯ. ಅದರ ಪರಿಪಾಲನೆಯಲ್ಲಿ ಬೆಂಗಳೂರು ತಕ್ಕಮಟ್ಟಿಗೆ ಯಶಸ್ವಿ ಆಗಿರುವುದರಿಂದ ಸೋಂಕು ಸಮುದಾಯಕ್ಕೆ ಹರಡಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣದಲ್ಲಿ ಸೋಂಕಿತನ ಮನೆಯವರಲ್ಲದೆ ನೆರೆಮನೆಯವರಿಗೆ ಹರಡಿದ್ದು ಬಿಟ್ಟರೆ, ಇಡೀ ಪ್ರದೇಶಕ್ಕೆ ವ್ಯಾಪಿಸಿದ ಉದಾಹರಣೆಗಳಿಲ್ಲ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಒಂದೇ ಒಂದು ಹೊಸ ಪ್ರಕರಣ ಸಿಕ್ಕಿಲ್ಲ.
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಶೇ.50 ಆದಾಯ ತಂದುಕೊಡುವುದು ಬೆಂಗಳೂರು. ಹೀಗಾಗಿ ರಾಜಧಾನಿಯನ್ನು ಆದಷ್ಟು ಶೀಘ್ರ ಸಹಜ ಸ್ಥಿತಿಗೆ ತರುವುದು ಸರ್ಕಾರದ ತುರ್ತು ಅಗತ್ಯವೂ ಆಗಿತ್ತು. ಹೀಗಾಗಿ ಆಡಳಿತ ಯಂತ್ರದ ಮೇಲೆ ಸರ್ಕಾರ ಒತ್ತಡ ಹೇರಿತ್ತು. ಸರ್ಕಾರದ ಸೂಚನೆ ಅನುಸಾರ ಇಷ್ಟು ದಿನ ಬಿಬಿಎಂಪಿ, ಪೊಲೀಸರು, ಆರೋಗ್ಯ ಇಲಾಖೆ ಪ್ರಯತ್ನ ಮತ್ತು ಸ್ವಯಂಸೇವಾ ಸಂಘಟನೆಗಳ ಸಹಕಾರ ಈಗ ಫಲಕೊಡುವ ಸೂಚನೆ ಕಾಣಿಸುತ್ತಿದೆ.
ಲಾಕ್​ಡೌನ್ ಉದ್ದೇಶ ವಿಫಲವಾಗದಂತೆ ಪೊಲೀಸರು ಹಾಕಿದ ಪರಿಶ್ರಮ, ಮನೆ ಮನೆಗೂ ತೆರಳಿ ಅಗತ್ಯವಾದವರನ್ನು ಕ್ವಾರಂಟೈನ್ ಮಾಡಿದ ಆಶಾ ಕಾರ್ಯಕರ್ತೆಯರು, ದೇಶದಲ್ಲೇ ಮೊದಲ ವಾರ್ ರೂಂ ಮಾಡಿ ಸೂಕ್ಷ್ಮವಾಗಿ ಕಣ್ಣಿಟ್ಟ ಆರೋಗ್ಯ ಇಲಾಖೆ ಕಾರಣದಿಂದ ಸೋಂಕು ಸಮುದಾಯಕ್ಕೆ ಹರಡು ವುದನ್ನು ತಡೆಯಲು ಸಾಧ್ಯವಾಗಿದೆ. ದೇಶದ ಇತರ ನಗರಗಳಂತೆ ಬೆಂಗಳೂರಿಗೂ ತಬ್ಲಿಘಿಗಳು ಬಂದಿದ್ದರು. ಮೆಕ್ಕಾದಿಂದ ಸೋಂಕು ಅಂಟಿಸಿಕೊಂಡು ಬಂದವರಿದ್ದರು, ವಿವಿಧ ದೇಶಗಳಿಂದ ಸೋಂಕಿತರಾಗಿ ಬಂದವರನ್ನು ಹುಡುಕಿ ಹುಡುಕಿ ಕ್ವಾರಂಟೈನ್ ಮಾಡಿದ್ದು, ಅವರ ಜತೆ ನೇರ ಸಂರ್ಪತರು ಹಾಗೂ ಎರಡನೇ ಹಂತದ ಸೋಂಕಿತರನ್ನೂ ಹುಡುಕಿ ಹೆಕ್ಕಿದ್ದು ಸಣ್ಣ ಸಾಧನೆಯೂ ಅಲ್ಲ. ಈ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ಬದಲು ಕೇರಳ, ತೈವಾನ್ ಬಗ್ಗೆ ಹೊಗಳಿ ಕುಳಿತವರೂ ನಮ್ಮ ನಡುವೆ ಸುಮಾರಷ್ಟಿದ್ದಾರೆ. ವಿಶ್ವದ ಮಹಾನಗರಗಳಲ್ಲಿ ಎಷ್ಟೇ ಆರೋಗ್ಯ ಸೌಲಭ್ಯ ಇದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮಣ್ಣುಮುಕ್ಕುತ್ತಿವೆ, ಸೋಂಕು ಮತ್ತು ಸಾವನ್ನು ತಡೆಯಲಾಗುತ್ತಿಲ್ಲ. ಆ ನಗರಗಳ ಆರ್ಥಿಕತೆ ಕುಸಿಯುತ್ತಿದೆ, ಜನರ ಭಯ ದೂರ ಮಾಡಲು ಸಾಧ್ಯವಾಗಿಲ್ಲ. ಅಂಥದ್ದರಲ್ಲಿ ಬೆಂಗಳೂರು ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಹೊರಟಿದೆ.
ಇನ್ನೂ ಇದೆ ಆತಂಕ:ಬೆಂಗಳೂರಿನಲ್ಲಿ ಮೂರು ದಿನಗಳಿಂದ ಹೊಸ ಪ್ರಕರಣ ಕಾಣಿಸಿಲ್ಲ ಎಂದು ಸರ್ಕಾರ ಬೆನ್ನುತಟ್ಟಿ ಕೊಂಡಿಲ್ಲ. ಅಧಿಕಾರಿಗಳಿಗೂ ಸಣ್ಣ ಆತಂಕ ಇದ್ದು, ಯಾವುದೇ ಕಾರಣಕ್ಕೂ ಪರಿಸ್ಥಿತಿ ಕೈ ತಪ್ಪದಂತೆ ಎಚ್ಚರ ವಹಿಸಿದ್ದಾರೆ. ಅತಿ ಹೆಚ್ಚು ಪೆಟ್ಟು ತಿಂದಿರುವ ಅಮೆರಿಕದಲ್ಲಿ ಕಳೆದ ತಿಂಗಳು ಇದೇ ಅವಧಿಯಲ್ಲಿ (ಮಾ.21) ಭಾರತದ ಈಗಿನ ಸಂಖ್ಯೆಗೆ ಸರಿಸಮಾನವಾಗಿತ್ತು. ನಿಯಂತ್ರಣ ಕೈ ಮೀರಿದ್ದರಿಂದ ಅಲ್ಲೀಗ 7.92 ಸೋಂಕಿತರ ಲೆಕ್ಕ ಸಿಕ್ಕಿದೆ. ಪ್ರತಿದಿನ ಸರಾಸರಿ 25 ಸಾವಿರ ಸೋಂಕಿತರು ಲೆಕ್ಕಕ್ಕೆ ಸೇರುತ್ತಿದ್ದಾರೆ. ಲಾಕ್​ಡೌನ್​ಗೆ ಹಿಂದೇಟು ಹೊಡೆದಿದ್ದು, ಬಳಿಕ ಅದರ ಪಾಲನೆಯಲ್ಲಿ ಉದಾಸೀನ ಮಾಡಿದ್ದಕ್ಕೆ ಆ ದೇಶ ಬೆಲೆತೆತ್ತಿದೆ. ಆದರೆ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿ ಆಗಬಾರದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮೇ 3ರೊಳಗೆ ಹೊಸ ಸೋಂಕಿತರು ಕಂಡುಬಂದರೆ ಅವರಿರುವ ಪ್ರದೇಶವನ್ನು ಕಟ್ಟಿಹಾಕಿ ಸೋಂಕು ಇನ್ನಷ್ಟು ಹರಡದಂತೆ ಮಾಡಲು ಸಾಧ್ಯವಿದೆ ಎಂಬ ವಿಶ್ವಾಸವೂ ಅಧಿಕಾರಿಗಳಲ್ಲಿದೆ.
| ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
