| ಕೀರ್ತಿನಾರಾಯಣ ಸಿ. ಬೆಂಗಳೂರು
ಕಷ್ಟಪಟ್ಟು ದುಡಿದ ಹಣದಲ್ಲಿ ಕೊಂಡ ನಿಮ್ಮ ವಾಹನ ಕಳವಾಗಿದೆಯೇ? ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಗಾಡಿ ಮತ್ತೆ ಸಿಗುತ್ತದೆಂಬ ಭರವಸೆ ಕಣ್ಣುಗಳಿಂದ ಕಾಯುತ್ತಿದ್ದೀರಾ? ಅಂತಹ ಆಸೆ ಕಮರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ನಿಮ್ಮ ವಾಹನವನ್ನು ಪೊಲೀಸರು ಪತ್ತೆಹಚ್ಚಿದ್ದರೂ ಅದು ಕಾನೂನುಬದ್ಧವಾಗಿಯೇ ನಡೆದ ‘ಹರಾಜಿ’ನಲ್ಲಿ ಮಾರಾಟವಾಗಿ ಇನ್ನೊಬ್ಬರ ಹೆಸರಿಗೆ ನೋಂದಣಿಯಾಗಿ ಓಡಾಡುತ್ತಿರಬಹುದು! ಹೌದು, ವಾರಸುದಾರರಿಲ್ಲದ ವಾಹನ ಗಳ ‘ಹರಾಜು’ ಪ್ರಕ್ರಿಯೆಯಲ್ಲಿ ನಡೆಯುವ ಪೊಲೀಸರ ಕಳ್ಳಾಟವನ್ನು ‘ಹೋಂಡಾ ಡಿಯೋ’ ವಾಹನ ಬಟಾಬಯಲು ಮಾಡಿದೆ.
ರಾಜ್ಯದ ಎಲ್ಲ ಠಾಣೆಗಳಲ್ಲಿ, ಎಲ್ಲ ಪೊಲೀಸರೂ ಗೋಲ್‍ಮಾಲ್ ಮಾಡುತ್ತಾರೆ ಎಂದಲ್ಲ. ಆದರೆ, ಈಗ ಬೆಳಕಿಗೆ ಬಂದಿರುವ ಪ್ರಕರಣ ವಾಹನ ಹರಾಜು ವ್ಯವಹಾರವನ್ನು ಅನುಮಾನದಿಂದ ನೋಡುವಂತೆ ಮಾಡಿರುವುದಂತು ನಿಜ. ಕಸ್ಟಮ್ಸ್​ ಕಚೇರಿಯಲ್ಲಿ ಹೆಡ್ ಕಾನ್​ಸ್ಟೆಬಲ್ ಆಗಿರುವ ನಾಗರಾಜು ಪತ್ನಿಯ ಹೆಸರಲ್ಲಿದ್ದ ಹೋಂಡಾ ಡಿಯೋ ಕಳವಾಗಿತ್ತು. ವಾಹನ ಪತ್ತೆಯಾದ ನಂತರ ಮಾಲೀಕರಿಗೆ ಹಸ್ತಾಂತರಿಸಿಲ್ಲ. 20 ರಿಂದ 30 ಸಾವಿರ ರೂ. ಬೆಲೆಬಾಳುವ ಆ ವಾಹನವನ್ನು ಹರಾಜಿನಲ್ಲಿ ಪೊಲೀಸರೇ ಕೇವಲ 4,100 ರೂ.ಗೆ ಬಿಡ್ ಕೂಗಿ ತಮ್ಮದಾಗಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ವಾಹನ ಕಳವಾಗಿರುವ ಬಗ್ಗೆ ಎಫ್​ಐಆರ್ ದಾಖಲಾಗಿದ್ದರೂ ಮಾಲೀಕರನ್ನು ಪತ್ತೆಹಚ್ಚದ ಬ್ಯಾಡರಹಳ್ಳಿ ಠಾಣೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಬಹಿರಂಗ ಹರಾಜು ಹಾಕಿದ್ದಾರೆ.
ಮೇಲಧಿಕಾರಿಗಳು ಹಾಗೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟು ಯಾಮಾರಿಸಿರುವುದು ವಿಜಯವಾಣಿ ತನಿಖೆಯಲ್ಲಿ ದೃಢಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ವಿಜಯವಾಣಿ ಕಲೆಹಾಕಿದೆ. ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗುವ ನಗದು, ಚಿನ್ನಾಭರಣ ಇನ್ನಿತರ ವಸ್ತುಗಳಲ್ಲಿ ಒಂದಷ್ಟನ್ನು ಪೊಲೀಸರೇ ಲಪಟಾಯಿಸಿ, ಇನ್ನೊಂದನ್ನು ವಾರಸುದಾರರಿಗೆ ಕೊಡಲಾಗುತ್ತದೆ. ಕೆಲ ಪ್ರಕರಣದಲ್ಲಿ ಕಳವಾದ ವಸ್ತುಗಳು ಸಿಕ್ಕರೂ ಸಂಬಂಧಪಟ್ಟವರಿಗೆ ಹಸ್ತಾಂತರಿಸುವುದಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಹೋಂಡಾ ಡಿಯೋ ಪ್ರಕರಣದಿಂದಾಗಿ ಅಪವಾದ ಇನ್ನಷ್ಟು ಗಟ್ಟಿಯಾಗಿದೆ.
ಕಳ್ಳಾಟ ಬಯಲಾಗಿದ್ದೇಗೆ?:ಸಂಚಾರ ನಿಯಮ ಉಲ್ಲಂಘನೆಗೆ ಪೊಲೀಸರು ಕಳವಾದ ವಾಹನಕ್ಕೆ ದಂಡವೇನಾದರು ವಿಧಿಸಿದ್ದಾರಾ ಎಂದು ದೂರುದಾರ ನಾಗರಾಜು ಪುತ್ರ ಆಗಾಗ ಟ್ರಾಫಿಕ್ ಫೈನ್‌ ವೆಬ್‌ಸೈಟ್‌ನಲ್ಲಿ ಪರಿಶೀಲಿಸುತ್ತಿದ್ದರು. ಕಳೆದ ವಾರ ಶೇ.50 ದಂಡದಲ್ಲಿ ರಿಯಾಯಿತಿ ಘೋಷಿಸಿದಾಗ ಮತ್ತೆ ವಾಹನದ ಮೇಲಿನ ದಂಡ ಪರಿಶೀಲಿಸಿದ್ದರು. ಆಗ ಕೆಂಗೇರಿ ಸೆಟಲೈಟ್ ಬಸ್ ನಿಲ್ದಾಣದ ಸಮೀಪ ಹೆಲೈಟ್‌ರಹಿತ ಚಾಲನೆಗೆ ವಾಹನ ಸಮೇತ ಫೋಟೋ ತೆಗೆದು ದಂಡ ಹಾಕಿದ್ದರು. ತಮ್ಮದೇ ವಾಹನ ಎಂದು ತಂದೆ ನಾಗರಾಜುಗೆ ತಿಳಿಸಿದ್ದರು. ಕೂಡಲೇ ನಾಗರಾಜು ಗಂಗಮ್ಮನಗುಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಏನು ಮಾಡಬೇಕಿತ್ತು?* ವಾರಸುದಾರರಿಲ್ಲದ ವಾಹನ ಸಿಕ್ಕಾಗ ನಡೆಸಿದರೂ ವಾಹನದ ಅದರ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರು ಪತ್ತೆಯಾಗಿಲ್ಲ ಮಾಲೀಕರ ವಿಳಾಸ ಪತ್ತೆಹಚ್ಚಬೇಕು.* ದೇಶದ ಯಾವುದೇ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆ‌ ಪ್ರತಿ ನೋಡುವ ವ್ಯವಸ್ಥೆ ಈಗ ಇದೆ. ಇದರಲ್ಲಿ ವಾಹನದ ಹಿನ್ನೆಲೆ ಪರಿಶೀಲಿಸಬೇಕಿತ್ತು.*ಎನ್​ಸಿಆರ್​ಬಿ, ಸಿಆರ್​ಬಿ, ಸಂಚಾರ ಪೊಲೀಸರ ಸಹಯೋಗದಲ್ಲಿ ವಾಹನ ಸಮನ್ವಯ ಆಪ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ವಾಹನದ ಮಾಹಿತಿ ಪರಿಶೀಲಿಸಬೇಕಿತ್ತು.* ಆ‌ಟಿಒ ಕಚೇರಿಯಲ್ಲಿ ವಿಚಾರಿಸಿದ್ದರೂ ವಾಹನದ ಸಂಪೂರ್ಣ ವಿವರ ಸಿಗುತ್ತಿತ್ತು. ಅದನ್ನೂ ಮಾಡಿಲ್ಲ.
ಮಾಡಿದ್ದೇನು?
*ಪ್ರಾಮಾಣಿಕ ಪ್ರಯತ್ನ ನಡೆಸಿದರೂ ವಾಹನದ ಮಾಲೀಕರು ಪತ್ತೆಯಾಗಿಲ್ಲ ಎಂದು ಸುಳ್ಳು ವರದಿ ಸಲ್ಲಿಸಿ ನ್ಯಾಯಾಲಯದಿಂದ ಬಹಿರಂಗ ಹರಾಜು ಹಾಕಿದ್ದು.* ವಾಹನದ ಬೆಲೆ 20 ರಿಂದ 30 ಸಾವಿರ ರೂ. ಇದ್ದರೂ ಬರೀ 4100 ರೂ.ಗೆ ಆಶಾ ಎಂಬುವರ ಹೆಸರಲ್ಲಿ ಬಿಡ್ ಕರೆದು ವಾಹನ ನೋಂದಣಿ ಮಾಡಿದ್ದು.* ಖರೀದಿದಾರರು ಪೊಲೀಸ್ ಕ್ವಾರ್ಟಸ್​ನ ವಿಳಾಸ ಕೊಟ್ಟಿದ್ದಾರೆ. ಪೊಲೀಸ್‌’ ಸಿಬ್ಬಂದಿ ಕುಟುಂಬಸ್ಥರು ಅಥವಾ ಸಂಬಂಧಿಕರೇ ಆಗಿರಬಹುದು, ಅವರ ಹೆರಿಗೆ ವಾಹನ ನೋಂದಣಿಯಾಗಿದೆ.
ಮಾಲೀಕರು ಮಾಡಬೇಕಾದ್ದೇನು?ವಾಹನದ ಮಾಲೀಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ, ಆರ್‌ಟಿಒ ಕಚೇರಿಗೆ ಹೋಗಿ ನೋಂದಣಿ ಸಂಖ್ಯೆಯನ್ನು ಬ್ಲಾಕ್ ಮಾಡಿಸಲಿಲ್ಲ. ಒಂದು ವೇಳೆ ವಾಹನ ಕಳವಾಗಿರುವ ಬಗ್ಗೆ ಆರ್‌ಟಿಒ ಕಚೇರಿಯಲ್ಲಿ ಎಫ್‌ಐಆ‌ ಪ್ರತಿ ತೋರಿಸಿದ್ದರೆ ತಕ್ಷಣ ಗಾಡಿ ನಂಬರ್ ಬ್ಲಾಕ್ ಮಾಡುತ್ತಿದ್ದರು. ಆಗ ವಾಹನದ ನೋಂದಣಿ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ವಂಚನೆ ನಡೆದಿದ್ದೇಗೆ?ಬೆಂಗಳೂರಿನ ಕೆ.ಜಿ. ಹಳ್ಳಿ ಕಲಾನಗರದ 9ನೇ ಕ್ರಾಸ್​ನಲ್ಲಿ ಎ. ನಾಗರಾಜು ಕುಟುಂಬ ಸಮೇತ ವಾಸವಿದ್ದಾರೆ. 2020ರ ಆ.12ರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ‘ಕೆಎ-04-ಎಚ್​ಯುು-3225’ ನಂಬರ್​ನ ಕೆಂಪು ಬಣ್ಣದ ಹೋಂಡಾ ಡಿಯೋ ವಾಹನ ಕಳವಾಗಿತ್ತು. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪರಾಧ ಸಂಖ್ಯೆ 0065/2020 ಎಫ್​ಐಆರ್ ಕೂಡ ದಾಖಲಾಗಿದೆ. ದೂರು ದಾಖಲಾದ ಕೆಲವೇ ದಿನಗಳಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ಪತ್ತೆಯಾಗಿದೆ. ಪೊಲೀಸರು ಠಾಣೆಗೆ ತಂದು ನಿಲ್ಲಿಸಿದ್ದಾರೆ. ಮಾಲೀಕರನ್ನು ಪತ್ತೆಹಚ್ಚಿ ವಾಹನ ಹಸ್ತಾಂತರಿಸುವ ಬದಲು ಠಾಣೆ ಸರಹದ್ದಿನಲ್ಲಿದ್ದ ವಾಹನಗಳ ಪಟ್ಟಿಗೆ ಈ ವಾಹನವನ್ನೂ ಸೇರಿಸಿ ಹರಾಜು ಪ್ರಕ್ರಿಯೆಗೆ ಪ್ರಸ್ತಾವನೆ ಸಿದ್ಧಪಡಿಸಿ, 2020 ಸೆ.5ರಂದು ಕೋರ್ಟ್ ಅನುಮತಿ ಕೋರಿ ಸಲ್ಲಿಸಿದ್ದರು. ಅ.1ರಂದು ಸ್ಥಳೀಯ ನ್ಯಾಯಾಲಯ ಹರಾಜು ಹಾಕಲು ಅನುಮತಿ ಕೊಟ್ಟಿತ್ತು. ಇದಕ್ಕೂ ಮುನ್ನ ಪಶ್ಚಿಮ ವಿಭಾಗದ ಡಿಸಿಪಿ ಅನುಮತಿಯನ್ನೂ ಪಡೆಯಲಾಗಿದೆ. ನಂತರ ಅ.23ರಂದು ಮೋಟಾರು ವಾಹನ ನಿರೀಕ್ಷಕರನ್ನು ಕರೆಸಿ ದರ ನಿಗದಿಪಡಿಸಿದ್ದರು. ನ.4ರಂದು ಜಕ್ಕರಾಯನ ಕೆರೆಯಲ್ಲಿ ಹರಾಜು ನಡೆಸಿದ್ದರು.
ಆಶಾ ಹೆಸರಲ್ಲಿ 4100 ರೂಪಾಯಿಗೆ ಬಿಡ್ಕೆಂಗೇರಿ ಸೆಟಲೈಟ್​ನ ವಲಗೇರಹಳ್ಳಿಯಲ್ಲಿರುವ ಹೊಸ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ವಾಸ ವಿರುವ ಆಶಾ ಎಂಬುವರ ಹೆಸರಿನಲ್ಲಿ 4,100 ರೂ.ಗೆ ಬಿಡ್ ಕರೆದಿದ್ದಾರೆ. ವಾಹನದ ಆರಂಭಿಕ ಮೊತ್ತ 4000 ರೂ. ನಿಗದಿಪಡಿಸಲಾಗಿತ್ತು. ವಾಹನದ ದಾಖಲಾತಿಗಳನ್ನು ಆಶಾ ಹೆಸರಿಗೆ ಮಾಡಿಕೊಡುವಂತೆ ಆಗ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಆಗಿದ್ದ ಎ. ರಾಜೀವ್ ಹರಾಜು ಪ್ರಕ್ರಿಯೆಯ ನಡಾವಳಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಅದೇ ದಿನ ದಾಖಲೆ ಟ್ರಾನ್ಸ್​ಫರ್ ಮಾಡುವಂತೆಯೂ ಸೂಚಿಸಲಾಗಿದೆ. ಇದೇ ಪ್ರತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಜೆಎಂ ನ್ಯಾಯಾಲಯಕ್ಕೂ ಕಳುಹಿಸಲಾಗಿದೆ. ಈ ಕಳ್ಳಾಟ ಮೇಲಧಿಕಾರಿಗಳು ಅಥವಾ ಕೋರ್ಟ್ ಗಮನಕ್ಕಾಗಲಿ ಬಂದಿಲ್ಲ. ಎಲ್ಲವೂ ಕಾನೂನುಬದ್ಧವಾಗಿಯೇ ಮಾಡಿದ್ದೇವೆ ಎಂದು ನಂಬಿಸಿ ಅನುಮತಿ ಪಡೆಯಲಾಗಿದೆ.
ಕೋರ್ಟ್​ಗೇ ಸುಳ್ಳು ಮಾಹಿತಿ…!ವಾಹನಗಳ ಮಾಲೀಕರ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದರೆ, ಪತ್ತೆಯಾಗಿಲ್ಲ. ಮಳೆ-ಗಾಳಿಗೆ ಸಿಕ್ಕಿ ವಾಹನಗಳು ತುಕ್ಕು ಹಿಡಿಯುತ್ತಿವೆ. ಹೀಗಾಗಿ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿ ನ್ಯಾಯಾಲ ಯದಿಂದ ಅನುಮತಿ ಪಡೆದಿದ್ದರು. ನ.4ರಂದು ಜಕ್ಕರಾಯನ ಕೆರೆ ಆವರಣದಲ್ಲಿ ಬ್ಯಾಡರಹಳ್ಳಿ ಠಾಣೆ ಸರಹದ್ದಿನ ಒಟ್ಟು 70 ವಾಹನಗಳನ್ನು ಹರಾಜು ಹಾಕಲಾಗಿದೆ. ಇದರಲ್ಲಿ 35 ವಾಹನಗಳನ್ನು ರಿಯಾಜ್ ಖಾನ್ ಎಂಬುವವರೇ ಬಿಡ್ ಕೂಗಿ ಖರೀದಿಸಿದ್ದಾರೆ. ಉಳಿದ 35 ವಾಹನಗಳನ್ನು ಬೇರೆಬೇರೆಯವರು ಬಿಡ್ ಕರೆದಿದ್ದಾರೆ.
ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ​ ಪೋಸ್ಟ್​: ಮಲಯಾಳಂ ಇಂಡಸ್ಟ್ರಿಗೆ IT ಶಾಕ್​, 225 ಕೋಟಿ ರೂ. ಕಪ್ಪುಹಣ ಪತ್ತೆ

ಯಾವ ರೀತಿ ಮಲಗುವುದು ಉತ್ತಮ? ಯುವತಿಯ ಡಬಲ್​ ಮೀನಿಂಗ್​ ಪ್ರಶ್ನೆ, ಸಿಟ್ಟಿಗೆದ್ದ ಆಟೋ ಚಾಲಕರು

ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × five =
Remember me
