ಆಟೋ ಚಾಲಕನಾಗಿದ್ದ ಪತಿ ಷಣ್ಮುಖ ಮತ್ತು ತನ್ನ ಐದು ವರ್ಷದ ಮಗನೊಂದಿಗೆ ರತ್ನಾ ಮಹಾನಗರವೊಂದರಲ್ಲಿ ವಾಸವಾಗಿದ್ದಳು. ಒಂದು ಕರಾಳರಾತ್ರಿ ರಸ್ತೆ ಅಪಘಾತದಲ್ಲಿ ಷಣ್ಮುಖ ಅಸುನೀಗಿದಾಗ ರತ್ನಾಳಿಗೆ 30 ವರ್ಷವೂ ತುಂಬಿರಲಿಲ್ಲ. ವಿಧವೆಯಾದ ತನ್ನ ನೆರವಿಗೆ ಸಮೀಪದ ಬಂಧುಗಳು ಯಾರೂ ಬಾರದಾದಾಗ ರತ್ನಾ ಹೆದರಲಿಲ್ಲ. ಗಾರ್ವೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದಳು. ಫ್ಯಾಕ್ಟರಿಯಲ್ಲಿ ಆಕೆ ಗಳಿಸುತ್ತಿದ್ದ ಸಂಬಳ ಅವಳ ಮನೆಬಾಡಿಗೆ ಮತ್ತು ಆಹಾರಕ್ಕೇ ಸಾಲುತ್ತಿರಲಿಲ್ಲ. ಆಗ ರತ್ನಾ ಕೆಲಸ ಬಿಟ್ಟು ಅಕ್ಕಪಕ್ಕದ ಮನೆಗಳಲ್ಲಿ ಕಸಮುಸುರೆ ಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಿಸಲು ಪ್ರಾರಂಭಿಸಿದಳು. ಪ್ರತಿದಿನವೂ ಬೆಳಗ್ಗೆ ಬೇಗನೆ ಎದ್ದು, ಅಡುಗೆ ಮಾಡಿ ಮಗನನ್ನು ಶಾಲೆಗೆ ಕಳುಹಿಸಿದ ನಂತರ ರತ್ನಾ ಐದಾರು ಅಪಾರ್ಟ್​ವೆುಂಟ್​ಗಳಿಗೆ ಹೋಗಿ ಮನೆಕೆಲಸಗಳನ್ನು ಮಾಡಿಕೊಟ್ಟು ತಿಂಗಳಿಗೆ 20 ಸಾವಿರ ರೂ. ಸಂಪಾದನೆ ಮಾಡತ ೊಡಗಿದಳು. ಜತೆಗೆ ವಿಧವಾ ಪೆನ್ಷನ್ ಬರುತ್ತಿದ್ದುದರಿಂದ ಜೀವನ ನಿರ್ವಹಣೆಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ.
ಏತನ್ಮಧ್ಯೆ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಾಗ ಆ ಯೋಜನೆಗೆ ತನ್ನ ಹೆಸರನ್ನು ನೋಂದಾಯಿಸಲು ಉದ್ದೇಶಿಸಿದಳು. ತನ್ನ ನೆರೆಯವರು ಸೂಚಿಸಿದಂತೆ ಹತ್ತಿರದಲ್ಲಿದ್ದ ಖಾಸಗಿ ಕಂಪ್ಯೂಟರ್ ಸೆಂಟರ್​ಗೆ ಅರ್ಜಿ ಸಲ್ಲಿಸಲು ಹೋದಳು. ಅಲ್ಲಿದ್ದ ಆಪರೇಟರ್, ರತ್ನಾಳ ಅರ್ಜಿಯನ್ನು ಅಪ್​ಲೋಡ್ ಮಾಡಿ ಅವಳ ಆಧಾರ್ ಕಾರ್ಡ್ ತೋರಿಸಲು ಕೇಳಿದ. ರತ್ನಾ ದಾಖಲೆಗಳನ್ನು ತೋರಿಸಿದಾಗ ಅವನ್ನೂ ಅಪ್​ಲೋಡ್ ಮಾಡಿದ ಆತ, ರತ್ನಾಳಿಗೆ ಬೆರಳಚ್ಚು ಕೊಡಲು ಸೂಚಿಸಿದ. ‘ನಾವು ನಿಮ್ಮ ಅರ್ಜಿ ದೃಢಿಕರೀಸಲು ನಿಮ್ಮ ಬೆರಳಚ್ಚನ್ನು ಪಡೆಯಬೇಕು, ಇಲ್ಲದಿದ್ದರೆ ಅರ್ಜಿ ಅಂಗೀಕಾರವಾಗುವುದಿಲ್ಲ’ ಎಂದ ಆತ. ರತ್ನಾ ತನ್ನ ಎಡಗೈ ಹೆಬ್ಬಟ್ಟಿನ ಬೆರಳಚ್ಚು ಗುರುತನ್ನು ಕೊಟ್ಟಳು.
ಇದಾದ ಕೆಲವು ವಾರಗಳ ನಂತರ ರತ್ನಾಳಿಗೆ ಮಾಸಾಶನ ಬರುವುದು ಪ್ರಾರಂಭವಾಯಿತು. ಆ ಹಣವನ್ನು ಆಕೆ ಡ್ರಾ ಮಾಡದೆ ಉಳಿತಾಯ ಮಾಡಲು ನಿರ್ಧರಿಸಿದ್ದಳು. ಐದಾರು ತಿಂಗಳ ಬಳಿಕ ಹಣ ತೆಗೆಯಲು ಬ್ಯಾಂಕಿಗೆ ಹೋದಾಗ ಅಕೌಂಟಿನಲ್ಲಿ ಕೇವಲ ಒಂದು ಸಾವಿರ ರೂಪಾಯಿ ಇದ್ದದ್ದನ್ನು ತಿಳಿದು ಗಾಬರಿಯಾದಳು. ಬ್ಯಾಂಕಿನ ಮ್ಯಾನೇಜರ್ ಬಳಿಗೆ ಹೋದ ಆಕೆ, ‘ಸರ್, ಕಳೆದ ಬಾರಿ ಪಾಸ್​ಬುಕ್ ಎಂಟ್ರಿ ಮಾಡಿಸಿದಾಗ ಖಾತೆಯಲ್ಲಿ 15 ಸಾವಿರಕ್ಕೂ ಹೆಚ್ಚು ಹಣವಿತ್ತು. ಆನಂತರ ಹಣವನ್ನೇ ಹೊರತೆಗೆದಿಲ್ಲ, ಈಗ ಖಾತೆಯಲ್ಲಿ ಕೇವಲ ಸಾವಿರ ರೂ. ಇದೆ ಎನ್ನುತ್ತಿದ್ದಾರೆ, ಇದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದಳು. ಅವರು ಕಂಪ್ಯೂಟರ್ ನೋಡಿ, ‘ಅಲ್ಲಮ್ಮ, ಇಲ್ಲಿ ನೋಡು, ನಿನ್ನ ಆಧಾರ್ ಕಾರ್ಡ್ ಬಳಸಿ ಕಳೆದ ತಿಂಗಳೇ ಎರಡು ಬಾರಿ ತಲಾ ಐದು ಸಾವಿರ ರೂ. ಪಡೆದಿರುವೆ, ಅದರ ಹಿಂದಿನ ತಿಂಗಳು ನಾಲ್ಕು ಸಾವಿರ ಡೆಬಿಟ್ ಆಗಿದೆಯಲ್ಲ?’ ಎಂದರು. ‘ಆಧಾರ್ ಕಾರ್ಡ್ ಉಪಯೋಗಿಸಿ ಹಣ ಹೇಗೆ ಪಡೆಯಲಾಗುತ್ತದೆ ಸ್ವಾಮಿ? ನಾನಂತೂ ಯಾವ ಕಾರ್ಡ್​ನ್ನೂ ಉಪಯೋಗಿಸಲಿಲ್ಲ’ ಎಂದಳು.
‘ಸರ್ಕಾರವು ಆಧಾರ್ ಕಾರ್ಡ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (ಎ.ಇ.ಪಿ.ಎಸ್) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಮೂಲಕ ಯಾವುದೇ ವ್ಯಕ್ತಿ ಇಂಥ ವ್ಯವಸ್ಥೆಯಿರುವ ಎ.ಟಿ.ಎಂಗೆ ಹೋಗಿ ಆಧಾರ್ ನಂಬರ್ ನೀಡಿ ಬೆರಳಚ್ಚು ಗುರುತನ್ನು ಕೊಟ್ಟರೆ ತನ್ನ ಬ್ಯಾಂಕ್ ಅಕೌಂಟ್​ನಿಂದ ದಿನವೊಂದಕ್ಕೆ ಗರಿಷ್ಠ 10 ಸಾವಿರ ರೂ.ಗಳವರೆಗೆ ಪಡೆಯಬಹುದು. ಕೆಲವು ಗ್ರಾಮಗಳಲ್ಲಿ ಪೋಸ್ಟ್ ಆಫೀಸ್​ಗಳ ಮೂಲಕವೂ ಹೀಗೆ ಹಣ ತೆಗೆಯಬಹುದು. ನಿನ್ನ ಖಾತೆಯಿಂದ ಹಣ ಹೋದ ಕೂಡಲೇ ಫೋನ್ ಮೂಲಕ ಸಂದೇಶ ಬರುತ್ತದೆಯಲ್ಲಾ?’ ಎಂದರು ಮ್ಯಾನೇಜರ್.
‘ಸ್ವಾಮಿ, ನಾನು ಅನಕ್ಷರಸ್ಥೆ ನನಗೆ ನನ್ನ ಫೋನಿನಲ್ಲಿ ಬರುವ ಸಂದೇಶಗಳನ್ನು ಓದಲು ಬರುವುದಿಲ್ಲ’ ಎಂದಳು ರತ್ನಾ. ‘ಈ ಹಿಂದೆ ನಿನ್ನ ಬೆರಳಚ್ಚನ್ನು ಯಾರಿಗಾದರೂ ಕೊಟ್ಟೆಯಾ? ನೆನಪು ಮಾಡಿಕೋ’ ಎಂದರು ಮ್ಯಾನೇಜರ್. ‘ಹೌದು ಸ್ವಾಮಿ. ಮೂರ್ನಾಲ್ಕು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಖಾಸಗಿ ಕಂಪ್ಯೂಟರ್ ಸೆಂಟರ್ ಒಂದಕ್ಕೆ ಆಧಾರ್ ಸಂಖ್ಯೆ ಮತ್ತು ಬೆರಳಚ್ಚನ್ನು ಕೊಟ್ಟಿದ್ದೆ’ ಎಂದಾಗ, ‘ಬೆರಳಚ್ಚು ಗುರುತನ್ನು ದುರುಪಯೋಗ ಮಾಡಿ ಯಾರೋ ಖಾತೆಗೆ ಕನ್ನ ಹಾಕಿದ್ದಾರೆ. ಹತ್ತಿರದ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು’ ಎಂದರು ಮ್ಯಾನೇಜರ್.
ರತ್ನಾ ಹತ್ತಿರದ ಸೈಬರ್ ಪೊಲೀಸ್ ಠಾಣೆಗೆ ಹೋದಳು. ಅಲ್ಲಿ ಇನ್ನೂ ಹಲವಾರು ಮಹಿಳೆಯರು ಇದೇ ರೀತಿಯಾಗಿ ಹಣ ಕಳೆದುಕೊಂಡು ದೂರನ್ನು ಕೊಡಲು ಬಂದಿದ್ದರು. ಮಧ್ಯಮವರ್ಗಕ್ಕೆ ಸೇರಿದ್ದ ಸುಶಿಕ್ಷಿತ ವ್ಯಕ್ತಿಯಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಅವರ ಸರತಿಯಲ್ಲಿ ಮುಂದೆ ನಿಂತಿದ್ದ. ಪೊಲೀಸರು ‘ಏನಾಯಿತು’ ಎಂದು ಅವನನ್ನು ಕೇಳಿದಾಗ, ಆತ, ‘ನಾನು ಇಲ್ಲಿಯ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿದ್ದೇನೆ. ಕೆಲವು ದಿನಗಳ ಹಿಂದೆ ನನ್ನ ಫೋನಿಗೆ ಎರಡನೆಯ ಹೊಸ ಸಿಮ್ ಖರೀದಿಸಲು ಅಂಗಡಿಯೊಂದನ್ನು ಸಂರ್ಪಸಿದೆ. ಅಲ್ಲಿಯ ಸೇಲ್ಸ್​ಮನ್ ಮನೆಗೇ ಬಂದು ಹೊಸ ಸಿಮ್ ಕೊಟ್ಟು ಸಿಮ್ಾಗಿ ಆಧಾರ್ ಅಥೆಂಟಿಕೇಷನ್ ಕೇಳಿದ. ನಾನು ಒಪ್ಪಿದಾಗ ಆತ ತಾನು ತಂದಿದ್ದ ಯಂತ್ರದಲ್ಲಿ ನನ್ನ ಬೆರಳಚ್ಚು ಗುರುತನ್ನು ತೆಗೆದುಕೊಂಡ. ನನ್ನ ಖಾತೆಯಿಂದ 10 ಸಾವಿರ ರೂ. ತೆಗೆಯಲಾಗಿದೆ ಎಂದು ನಿನ್ನೆ ನನ್ನ ಫೋನ್​ಗೆ ಒಂದು ಮೆಸೇಜ್ ಬಂದಿತು. ಬ್ಯಾಂಕಿಗೆ ಹೋಗಿ, ಆಧಾರ್ ವಿವರ ಉಪಯೋಗಿಸಿ ಹಣವನ್ನೇ ತೆಗೆದಿಲ್ಲ ಎಂದಾಗ ಅವರು ನೀವು ಯಾರಿಗಾದರೂ ಬೆರಳಚ್ಚು ಕೊಟ್ಟಿರಾ? ಎಂದು ಕೇಳಿದರು. ಹೌದು ಎಂದೆ. ಅವರ ಸೂಚನೆ ಮೇರೆಗೇ ನಿಮಗೆ ದೂರು ನೀಡಲು ಬಂದಿರುವೆ’ ಎಂದ.
ರತ್ನಾ ಮತ್ತಿತರರ ದೂರುಗಳ ಜತೆಗೇ ಮುಖ್ಯೋಪಾಧ್ಯಾಯರ ದೂರೂ ಸೈಬರ್ ಠಾಣೆಯಲ್ಲಿ ದಾಖಲಾಯಿತು. ಏತನ್ಮಧ್ಯೆ ತಂದೆಯ ಆಸ್ತಿಯನ್ನು ವಿಭಜನೆ ಮಾಡಿಕೊಂಡ ಮೂರು ಜನ ಸೋದರರು ಜಿಲ್ಲಾ ಕೇಂದ್ರವೊಂದರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ದಾಖಲೆಗಳನ್ನು ನೋಂದಣಿ ಮಾಡಿಸಿದರು. ಇದಾದ ಕೆಲವೇ ದಿನಗಳ ನಂತರ ಆ ಮೂರೂ ಸೋದರರ ಬ್ಯಾಂಕ್ ಖಾತೆಗಳಿಂದ ಪ್ರತಿದಿನವೂ ಹತ್ತು ಸಾವಿರ ರೂ.ಗಳಂತೆ ಐದು ದಿನಗಳು ಸತತವಾಗಿ ಎ.ಇ.ಪಿ.ಎಸ್ ಮೂಲಕ ಒಂದೂವರೆ ಲಕ್ಷ ರೂ.ಗಳನ್ನು ಕದಿಯಲಾಗಿತ್ತು. ದುರಂತವೆಂದರೆ ಆ ಮೂರೂ ನಿರಕ್ಷರಸ್ಥ ಸೋದರರು ತಮ್ಮ ಖಾತೆಯಿಂದ ಹಣ ಹೋದ ಬಗ್ಗೆ ಮೊಬೈಲ್ ಫೋನಿನಲ್ಲಿ ಬಂದ ಸಂದೇಶಗಳನ್ನು ಗಮನಿಸಿಯೇ ಇರಲಿಲ್ಲ. ಆ ಮೂರೂ ಜನರು ನೀಡಿದ ದೂರುಗಳೂ ದಾಖಲಾದವು. ಈ ಯಾವ ಪ್ರಕರಣದಲ್ಲಿಯೂ ಆರೋಪಿಗಳು ಪತ್ತೆಯಾಗಲಿಲ್ಲ.
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂನಲ್ಲಿ ಬೆರಳಚ್ಚು ವಿವರಗಳನ್ನು ಉಪಯೋಗಿಸಿ ಮೋಸ ಮಾಡುವ ಪ್ರಕರಣಗಳು ಕಳೆದ ಐದಾರು ತಿಂಗಳಿನಿಂದ ಹೆಚ್ಚಾಗಿ ವರದಿಯಾಗುತ್ತಿವೆ. ಸಾಮಾನ್ಯವಾಗಿ ನಮ್ಮ ಬೆರಳಚ್ಚುಗಳನ್ನು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸುವ ಪೋರ್ಟಲ್​ಗಳಿಗೆ ಕೊಡುವುದರಿಂದ ನಮ್ಮ ವಿವರಗಳು ಅಲ್ಲಿಂದ ಸೋರಿಕೆಯಾಗುತ್ತವೆ ಎನ್ನುವುದು ಒಂದು ನಂಬಿಕೆ. ಎರಡನೆಯದಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೊಂದಣಿ ಮಾಡಿಸುವಾಗ ನಮ್ಮ ಬೆರಳಚ್ಚು ನೀಡುವುದು ಕಡ್ಡಾಯವಾಗಿರುತ್ತದೆ. ಆ ಕಚೇರಿಯ ಸಿಬ್ಬಂದಿ ಜೊತೆ ಕದೀಮರು ಸೇರಿ ನಮ್ಮ ಬೆರಳಚ್ಚು ನಕಲು ಮಾಡಿಕೊಂಡು ಹಣವನ್ನು ಕದಿಯುತ್ತಿದ್ದಾರೆ. ಇದನ್ನರಿತ ಸರ್ಕಾರ ಈಗಾಗಲೇ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಮೂರನೆಯದಾಗಿ ಫೋನುಗಳಿಗೆ ಬರುವ ಕೆಲವು ಸಂದೇಶಗಳಲ್ಲಿ ಇರುವ ಲಿಂಕ್​ಗಳನ್ನು ಕ್ಲಿಕ್ ಮಾಡಿ ಆಧಾರ್ ವಿವರಗಳನ್ನು ಕೊಟ್ಟಾಗ ಆ ಮೂಲಕ ಡೇಟಾ ಕಳುವಾಗುತ್ತದೆ. ಕೊನೆಯದಾಗಿ ಸಿಮ್ ಕಾರ್ಡ್ ಖರೀದಿಸುವಾಗ ಅಧಿಕೃತ ಮಳಿಗೆಗೆ ಮಾತ್ರ ಭೇಟಿ ನೀಡಬೇಕು. ಸಿಕ್ಕ ಸಿಕ್ಕ ಅಂಗಡಿಗಳಲ್ಲಿ ಸಿಮ್ಾರ್ಡ್ ಖರೀದಿ ಮಾಡಿ ಬೆರಳಚ್ಚು ನೀಡಿದರೆ ವಂಚನೆಯಾಗುವುದು ಖಂಡಿತ.
ಆಧಾರ್ ಎನೆಬಲ್ಡ್ ಪೇಮೆಂಟ್ ಸಿಸ್ಟಂ ಮೂಲಕ ಕಳ್ಳತನ ಮಾಡಿದ ಪ್ರಕರಣಗಳ ಪತ್ತೆ ಕಠಿಣವಾದ್ದರಿಂದ ನಾವು ಕಳೆದುಕೊಂಡ ಹಣ ಮರಳಿ ಬರುವುದು ಕಷ್ಟ. ಈ ರೀತಿಯ ವಂಚನೆಯಿಂದ ಬಚಾವಾಗಬೇಕಾದರೆ ಇರುವ ಒಂದೇ ಉಪಾಯ ನಮ್ಮ ಬಯೋಮೆಟ್ರಿಕ್ ಅನ್ನು ಲಾಕ್ ಮಾಡುವುದು. ಅದನ್ನು ನಾವೇ ಬೇಕಾದಾಗ ಲಾಕ್ ಮಾಡಬಹುದು, ಬೇಕಾದಾಗ ತೆರೆಯಬಹುದು. ಹೀಗೆ ಮಾಡಬೇಕಾದರೆ ಆಧಾರ್​ನ ಅಧಿಕೃತ ಪೋರ್ಟಲ್​ಗೆ ಹೋಗಿ ಮಾಡಬೇಕು. ಒಂದು ವೇಳೆ ಬಯೋಮೆಟ್ರಿಕ್ ಲಾಕ್ ಆಗಿದ್ದರೆ ನಮ್ಮ ಖಾತೆಗೆ ಯಾರೂ ಕನ್ನ ಹಾಕಲು ಸಾಧ್ಯವಿಲ್ಲ. ‘ನಿಮ್ಮ ನೆರೆಯವನ ಮನೆಗೆ ಬೆಂಕಿ ಹತ್ತಿದಾಗ ನಿಮ್ಮ ಸುರಕ್ಷತೆಗೆ ಅಪಾಯ ಖಂಡಿತ’ ಎಂದ ರೋಮನ್ ಕವಿ ಹೊರೇಸ್. ಬೇರೆಯವರಿಗಾದ ಮೋಸದಿಂದ ನಾವು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಅಪಾಯ ಖಾತ್ರಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
