ಬೆಂಗಳೂರು:ವಿದೇಶಗಳಲ್ಲಿ ಕೈತುಂಬಾ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಂಬಿಕೆಗೆ ಅರ್ಹವಲ್ಲದ, ನಕಲಿ ಏಜೆನ್ಸಿ- ಆಪ್ ಮೊರೆ ಹೋಗುವುದು ಸರಿಯಲ್ಲ. ನಕಲಿ ಕಂಪನಿಗಳು ಒಡ್ಡುವ ದೊಡ್ಡ ಮೊತ್ತದ ಸಂಬಳ, ಆಮಿಷಗಳಿಗೆ ಯುವಜನತೆ ಬಲಿಯಾಗಬಾರದು ಎಂದು ಎನ್​ಆರ್​ಐ ಕರ್ನಾಟಕ ವೇದಿಕೆಯ ಉಪಾಧ್ಯಕ್ಷೆ ಆರತಿ ಕೃಷ್ಣ ಕಿವತು ಹೇಳಿದ್ದಾರೆ. ಪ್ರವಾಸಿ ಭಾರತ ದಿನ ಹಿನ್ನೆಲೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ದಿಢೀರ್ ನಿರ್ಧಾರ ಕೈಗೊಂಡು ಫಾರಿನ್​ಗೆ ಹಾರಿ ಸಂಕಷ್ಟಕ್ಕೆ ಸಿಲುಕುವ ಬದಲು ಕೆಲಸದ ಬಗ್ಗೆ ಖಾತ್ರಿಪಡಿಸಿಕೊಂಡು ತೆರಳುವುದು ಕ್ಷೇಮ ಎಂದು ಪ್ರತಿಪಾದಿಸಿದರು.
ಇತ್ತೀಚಿಗೆ ಕಾಂಬೋಡಿಯಾ, ವಿಯೆಟ್ನಾಂ ಸಹಿತ ಕೆಲ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಭಾರತೀಯ ಯುವಜನತೆಗೆ ಕೆಲಸ ಕೊಡಿಸುವುದಾಗಿ ಕಂಪನಿಗಳು ಆಸೆ, ಆಮಿಷ ಒಡ್ಡುತ್ತಿವೆ. ಅಲ್ಲಿ ಹೋದ ಬಳಿಕ ಕಡಿಮೆ ಸಂಬಳ ಹಾಗೂ ಅನ್ಯ ಕೆಲಸಕ್ಕೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಆ ನರಕದಿಂದ ವಾಪಸ್ ಬರಲು ಸಾಧ್ಯವಾಗದೆ ಪರಿತಪಿಸಬೇಕಾಗುವ ಸ್ಥಿತಿ ಒದಗಲಿದೆ. ಇಂತಹವರ ನೆರವಿಗೆ ಧಾವಿಸಲು ಎನ್​ಆರ್​ಐ ವೇದಿಕೆ ಸಕ್ರಿಯವಾಗಿದೆ. ಆಯಾ ದೇಶಗಳ ರಾಯಭಾರಿ ಕಚೇರಿಗಳನ್ನು ಸಂರ್ಪಸಿ ವೀಸಾ ಸಹಿತ ಇನ್ನಿತರ ಕಾನೂನಾತ್ಮಕ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಪ್ರವಾಸಿ ಕರ್ನಾಟಕ ದಿನ ಆಚರಣೆ:ಭಾರತ ಪ್ರವಾಸಿ ದಿವಸ ಮಾದರಿಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ‘ಕರ್ನಾಟಕ ಪ್ರವಾಸಿ ದಿನ’ ಆಚರಿಸುವ ಉದ್ದೇಶ ಇದೆ. ಜನವರಿಯಲ್ಲೇ 2-3 ದಿನ ಕಾರ್ಯಕ್ರಮ ಆಯೋಜಿಸಿ ಹೂಡಿಕೆ ಸಮಾ ವೇಶದ ಜತೆಗೆ ಇನ್ನಿತರ ಯೋಜನೆಗಳ ಮಾಹಿತಿ ತಿಳಿಸಿಕೊಡಲಾಗುತ್ತದೆ. ಮುಂದಿನ ವರ್ಷದಿಂದ ಕರ್ನಾಟಕದ ಪ್ರವಾಸಿ ತಾಣಗಳನ್ನೇ ಕೇಂದ್ರೀಕರಿಸಿ ಟೂರಿಸ್ಟ್ ಸ್ಪಾಟ್​ಗಳಿಗೆ ಭೇಟಿ ನೀಡುವಂತೆಯೂ ವಿನಂತಿಸಿಕೊಳ್ಳಲಾಗುವುದು. ಇದರಿಂದ ಕರುನಾಡಿನ ವೈವಿಧ್ಯಮಯ ಪ್ರವಾಸಿ ಸ್ಥಳ ವೀಕ್ಷಿಸಿ ತಾಯ್ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಸ್ಮರಿಸಲು ಸಾಧ್ಯವಾಗುತ್ತದೆ.
‘ನಮ್ಮ ಊರು ನಮ್ಮ ನಾಡು’:ಕನ್ನಡಿಗ ಅನಿವಾಸಿಯರು ಹಲವು ದೇಶಗಳಲ್ಲಿ ವಾಸವಿದ್ದಾರೆ. ಇವರಲ್ಲಿ ಹೆಚ್ಚಿನವರು ಹುಟ್ಟೂರಿನ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಇಂತಹವರಿಗೆ ಅವಕಾಶ ನೀಡುವ ಜತೆಗೆ ಮಾನ್ಯತೆ ನೀಡಿದಲ್ಲಿ ದೊಡ್ಡ ರೀತಿಯಲ್ಲಿ ಸಾಮಾಜಿಕ ಕಾರ್ಯ ಅರ್ಹರಿಗೆ ತಲುಪಲಿದೆ. ಇಂತಹವರನ್ನು ಗುರುತಿಸಿ ಅವರೇ ಸೂಚಿಸುವ ಸ್ಥಳಗಳಲ್ಲಿ ಜನರಿಗೆ ಅನುಕೂಲ ಕಲ್ಪಿಸಲು ‘ನಮ್ಮ ಊರು ನಮ್ಮ ನಾಡು’ ಹೆಸರಿನಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಆರತಿ ಕೃಷ್ಣ ಮಾಹಿತಿ ನೀಡಿದರು.
ಕೌಶಲ ತರಬೇತಿ:ಗಲ್ಪ್ ರಾಷ್ಟ್ರಗಳಲ್ಲಿ ಪ್ಲಂಬಿಂಗ್, ಎಲೆಕ್ಟ್ರಿಷಿಯನ್ ಸಹಿತ ಇತರ ವೃತ್ತಿಗಳಿಗೆ ಬೇಡಿಕೆ ಇದ್ದು, ತಾಯ್ನಾಡಿನಲ್ಲೇ ನೈಪುಣ್ಯತೆ ಪಡೆದುಹೋದಲ್ಲಿ ಹೆಚ್ಚು ಮೊತ್ತದ ವೇತನ ಸಿಗಲಿದೆ. ಇಂತಹ ವೃತ್ತಿಗಳನ್ನು ಪಟ್ಟಿ ಮಾಡಿ ಅರ್ಹರಿಗೆ ತರಬೇತಿಯೊಂದಿಗೆ ಕೌಶಲ ಹೆಚ್ಚಿಸುವ ಕೆಲಸವನ್ನು ಅನಿವಾಸಿ ಕರ್ನಾಟಕ ವೇದಿಕೆಯು ರೂಪಿಸಲಿದ್ದು, 2023-24ನೇ ಸಾಲಿನ ಆರಂಭದಲ್ಲಿ ಚಾಲನೆ ಸಿಗಲಿದೆ.
ಏಕ ವೇದಿಕೆಗೆ ಕನ್ನಡ ಸಂಘ:ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಕನ್ನಡಿಗರು ಸಂಘಗಳನ್ನು ಸ್ಥಾಪಿಸಿದ್ದಾರೆ. ಜಾತಿ, ಮತ ಆಧಾರದ ಮೇಲೂ ಸಂಘಗಳು ಹುಟ್ಟಿಕೊಂಡಿವೆ. ಕನ್ನಡದ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯಲು ಎಲ್ಲ ಸಂಘಗಳನ್ನು ಎನ್​ಆರ್​ಕೆ ಹೆಸರಿನಲ್ಲಿ ಒಂದೇ ವೇದಿಕೆ ಅಡಿ ತರುವ ಪ್ರಯತ್ನ ಸಾಗಿದೆ. ಇದರಿಂದ ಕನ್ನಡಿಗರು ಆಯಾ ದೇಶಗಳಲ್ಲಿ ತೊಂದರೆಗೆ ಸಿಲುಕಿದರೆ ಸುಲಭವಾಗಿ ಸಂರ್ಪಸಿ ಕರೆತರಲು ಸಾಧ್ಯವಾಗಲಿದೆ.
ಕುಂದು-ಕೊರತೆ ಸಭೆ:ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದು, ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ವೇದಿಕೆ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಕುಂದು-ಕೊರತೆ ಸಭೆ ಆಯೋಜಿಸಲಾಗುತ್ತಿದೆ. ಮೊದಲ ಸಭೆ ಚಿಕ್ಕಮಗಳೂರಿನಲ್ಲಿ ಜ.27ರಂದು ನಿಗದಿಯಾಗಿದೆ.
ಎನ್​ಆರ್​ಐಗಳ ಮತಹಕ್ಕಿಗೆ ಮನವಿ:ಅನಿವಾಸಿಯರಿಗೆ ಮತದಾನ ಹಕ್ಕು ನೀಡುವ ಒತ್ತಾಯದ ಹಿನ್ನೆಲೆಯಲ್ಲಿ ಯಾವುದೇ ಚುನಾವಣೆಗಳಲ್ಲಿ ಮತ ಹಾಕಲು ಖುದ್ದಾಗಿ ಅಥವಾ ಆನ್​ಲೈನ್ ಮೂಲಕ ವೋಟ್ ಹಾಕಲು ಅವಕಾಶ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವ ಚಿಂತನೆ ಇದೆ. ಇದರಿಂದ ಕನ್ನಡಿಗರೂ ಸೇರಿದಂತೆ ಅನಿವಾಸಿ ಭಾರತೀಯರು ತಾಯ್ನಾಡಿನ ಮೇಲೆ ಇನ್ನಷ್ಟು ಪ್ರೀತಿ, ದೇಶಪ್ರೇಮದೊಂದಿಗೆ ಸಂಬಂಧ ವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಅಂಶವನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ ಎನ್ನುತ್ತಾರೆ ಆರತಿ ಕೃಷ್ಣ.
ಆರತಿ ಕೃಷ್ಣ ಪರಿಚಯಮಲೆನಾಡ ಇಂದಿರಾ ಎಂದು ಜನರಿಂದ ಕರೆಸಿಕೊಳ್ಳುತ್ತಿರುವ ಆರತಿ ಕೃಷ್ಣ 2ನೇ ಬಾರಿಗೆ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯರ ಕೋಶದ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ. ರಾಜಕೀಯ ವಿಜ್ಞಾನ ಪದವಿ ಪಡೆದ ಅವರು ಅಮೆರಿಕದಲ್ಲಿ ತಮ್ಮ ಪತಿಯ ಉದ್ಯಮದಲ್ಲಿ ಸಹಾಯ ಮಾಡುತ್ತಲೇ ಸಾರ್ವಜನಿಕ ನೀತಿ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆಗೆ ಸೇರಿದರು. ಆ ನಂತರ ದೆಹಲಿಯಲ್ಲಿ ರಾಯಭಾರ ಕಚೇರಿಯ ಸಲಹೆಗಾರರಾಗಿದ್ದರು. ಎಐಸಿಸಿಯ ಸಾಗರೋತ್ತರ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರತಿ ಕೃಷ್ಣ ಅವರು ತಮ್ಮ ಫೌಂಡೇಶನ್ ಮೂಲಕ ಮಲೆನಾಡು ಭಾಗದಲ್ಲಿ ಅನೇಕ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ.
ಸಂಕಷ್ಟದಲ್ಲಿ ಸಿಲುಕಿದವರಿಗೆ ಆಪದ್ಬಾಂಧವಆರತಿ ಕೃಷ್ಣ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಸಂಖ್ಯ ಕನ್ನಡಿಗರು ರಾಜ್ಯಕ್ಕೆ ವಾಪಸಾಗಲು ರಾಯಭಾರತ್ವ ವಹಿಸಿ ಗಮನಸೆಳೆದಿದ್ದಾರೆ. ವಿವಿಧ ದೇಶಗಳ ದೂತವಾಸಗಳನ್ನು ಸಂರ್ಪಸಿ ಅಲ್ಲಿನ ಕಾನೂನು ಹಾಗೂ ವೀಸಾ ಸಂಬಂಧಿತ ಕೆಲಸ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂತ್ರಸ್ತರಲ್ಲಿದ್ದ ಆತಂಕ ದೂರಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಮೆರಿಕ, ಯೂರೋಪ್, ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ವಾಪಸ್ ಬರುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಯುಕ್ರೇನ್ ಯುದ್ಧದ ವೇಳೆ ಭಾರತೀಯರನ್ನು ಕರೆತರಲು ವಾರಗಟ್ಟಲೇ ಅಲ್ಲಿನ ಎಂಬೆಸಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ರಾಜತಾಂತ್ರಿಕ ನೈಪುಣ್ಯತೆ ಪ್ರದರ್ಶಿಸಿದ ಪರಿಣಾಮ ನೂರಾರು ಕನ್ನಡಿಗರು ಕ್ಷೇಮವಾಗಿ ಹಿಂದಿರುಗಲು ಸಾಧ್ಯವಾಗಿದೆ. ಕೋವಿಡ್ ವೇಳೆ ಕರಾವಳಿ ಪ್ರದೇಶದಲ್ಲಿ ಸಾವಿಗೀಡಾಗಿದ್ದ ಮಹಿಳೆಯ ಪತಿಗೆ ಬಾಂಗ್ಲಾದೇಶದಿಂದ ನೇರವಾಗಿ ಭೂಮಾರ್ಗವಾಗಿ ಸಂಚರಿಸಲು ಅನುಮತಿ, ವಿದೇಶಗಳಲ್ಲಿ ಸಾವಿಗೀಡಾದ ಕನ್ನಡಿಗರ ಮೃತದೇಹ ತರಲು ಹಣ ಹೊಂದಿಸಲಾಗದವರಿಗೆ ಸಮುದಾಯ ಕಲ್ಯಾಣ ನಿಧಿ (ಸಿಡಬ್ಲ್ಯುಎಫ್) ಮೂಲಕ ಆರ್ಥಿಕ ನೆರವು ಒದಗಿಸಿದ್ದಾರೆ.
ಫೋರಂನಿಂದ ಕೈಗೊಳ್ಳಲಿರುವ ಉಪಕ್ರಮ
· ಅನಿವಾಸಿ ಕನ್ನಡಿಗರಿಗೆ ಗುರುತಿನ ಚೀಟಿ ವಿತರಣೆ ಪುನರಾರಂಭ.
· ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟ (ಎಎಪಿಐ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗ ವೈದ್ಯರಿಂದ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳುವುದು ಹಾಗೂ ಅವರನ್ನು ಗೌರವಿಸುವುದು.
· ಪ್ರತಿ ಜಿಲ್ಲೆಯಲ್ಲೂ ಡಿಸಿ ನೇತೃತ್ವದಲ್ಲಿ ಕಲ್ಯಾಣ ಸಮಿತಿ, ನೊಡಲ್ ಅಧಿಕಾರಿಗಳ ನಿಯೋಜನೆ.
· ವಿಚ್ಛೇದನ ಪ್ರಕರಣಗಳಲ್ಲಿ ಕಾನೂನು ನೆರವು, ಕೋರ್ಟ್​ಗಳಲ್ಲಿ ವ್ಯಾಜ್ಯ ಇತ್ಯರ್ಥಕ್ಕೆ ಸಹಾಯ.
· ಆಸ್ತಿ ವ್ಯಾಜ್ಯ, ಗಂಭೀರ ಪ್ರಕರಣಗಳಲ್ಲಿ ಸಿಲುಕುರುವವರಿಗೆ ನ್ಯಾಯದಾನಕ್ಕಾಗಿ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ.
· ಕೊಲ್ಲಿ ಸೇರಿ ಇನ್ನಿತರ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಬಡ ಕಾರ್ವಿುಕರಿಗೆ ಜೀವವಿಮೆ ಯೋಜನೆ ಜಾರಿ.
ಅನಿವಾಸಿ ಕನ್ನಡಿಗರ ಬೇಡಿಕೆಗಳೇನು?
· ಗಲ್ಪ್ ರಾಷ್ಟ್ರಗಳ ನೇರ ವಿಮಾನ ಸಂಪರ್ಕ ಕಲ್ಪಿಸುವುದು.
· ತಪಾಸಣೆ ನೆಪದಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಸುವುದು.
· ಮರಳಿ ತಾಯ್ನಾಡಿಗೆ ವಾಪಸಾಗಲು ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು
· ಕರ್ನಾಟಕದಲ್ಲಿ ವೈದ್ಯ ಸೀಟು ಪಡೆಯಲು ಎನ್​ಆರ್​ಐ ಶುಲ್ಕ ಬದಲು ಇತರ ಸಾಮಾನ್ಯರಂತೆ ಶುಲ್ಕ ನಿಗದಿ.
· ರಾಜ್ಯದಲ್ಲಿ ಹೂಡಿಕೆಗೆ ಸರ್ಕಾರದಿಂದ ವಿವಿಧ ಪರವಾನಗಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಸಿಂಧು ಮೆನನ್​ ಈಗ ಹೇಗಿದ್ದಾರೆ? ಇಲ್ಲಿವೆ ಫೋಟೋಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
