| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನ ಬಿಟ್ ಕಾಯಿನ್ ಹಗರಣದ ಮರು ತನಿಖೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರಿಗೆ ಭಯೋತ್ಪಾದನಾ ಕೃತ್ಯವೆಸಗಲು ‘ಕ್ರಿಪ್ಟೋ ಕರೆನ್ಸಿ’ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂಪಾಯಿ ನೆರವು ಕೊಟ್ಟಿರುವ ಆತಂಕಕಾರಿ ವಿಚಾರ ಎನ್​ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಫೇಸ್​ಬುಕ್, ಟೆಲಿಗ್ರಾಂ ಮುಖೇನ ಬಿಟ್ ಕಾಯಿನ್ ಸಂಗ್ರಹಿಸಿ, ಡಾರ್ಕ್ ನೆಟ್ ಮುಖಾಂತರ ವಿವಿಧ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಸಂಗತಿ ತನಿಖೆಯಲ್ಲಿ ಸಾಬೀತಾಗಿದೆ.
ಈವರೆಗೆ ಹವಾಲಾ ದಂಧೆ ಹಾಗೂ ಅನಾಮಿಕರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ತಲುಪಿಸುತ್ತಿದ್ದ ಭಯೋತ್ಪಾದಕ ಸಂಘಟನೆಗಳೀಗ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಡಿಜಿಟಲ್ ಕರೆನ್ಸಿ ಮೂಲಕ ಹಣಕಾಸಿನ ಸಹಾಯ ಮಾಡುತ್ತಿವೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್​ಗಳು ಡಾರ್ಕ್ ವೆಬ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಳುಹಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಎನ್​ಐಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್​ಶೀಟ್​ನಲ್ಲೂ ಉಲ್ಲೇಖಿಸಿದೆ.
ಡಾರ್ಕ್ ನೆಟ್​ನಲ್ಲಿ ಯಾವುದೇ ರೀತಿಯ ವಹಿವಾಟು ನಡೆಸಿದರೆ ಬಳಕೆದಾರರ ವೈಯಕ್ತಿಕ ಮಾಹಿತಿ, ಸ್ಥಳದ ಕುರಿತ ವಿವರಗಳು ಬಹಿರಂಗವಾಗುವುದಿಲ್ಲ. ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಪತ್ತೆಹಚ್ಚುವುದು ಕಷ್ಟಸಾಧ್ಯ. ಡಾರ್ಕ್ ವೆಬ್​ನಲ್ಲಿ ನೂರಾರು ಜಾಲತಾಣಗಳಿದ್ದು, ಇಲ್ಲಿ ವಹಿವಾಟು ನಡೆಸಿದರೆ ಇಂಟರ್​ನೆಟ್ ಪ್ರೋಟೋಕಾಲ್ (ಐಪಿ) ವಿಳಾಸ ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಭಯೋತ್ಪಾದಕ ಕೃತ್ಯಗಳಿಗೆ ಡಾರ್ಕ್ ವೆಬ್​ನಲ್ಲಿ ಹಣಕಾಸು ವ್ಯವಹಾರ ಮಾಡಲಾಗಿದೆ.
ತನಿಖಾ ಸಂಸ್ಥೆಗಳ ಪ್ರಕಾರ 2018ರಿಂದಲೇ ಉಗ್ರ ಸಂಘಟನೆಗಳು ಡಿಜಿಟಲ್ ಕರೆನ್ಸಿಯನ್ನು ಬಳಸುತ್ತಿವೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಜಾಸ್ತಿಯಾಗುತ್ತಿದೆ. 2020ರಲ್ಲಿ ಕ್ರಿಪ್ಟೋ ಕರೆನ್ಸಿಯ ಒಟ್ಟಾರೆ ಅಕ್ರಮ ವಹಿವಾಟು ಪ್ರಮಾಣದಲ್ಲಿ ಶೇ.0.05 ಉಗ್ರ ಸಂಘಟನೆಗಳಿಗೆ ನಿಧಿ ಸಂಗ್ರಹವಾಗಿದೆ. ವಿಶ್ವದಲ್ಲಿ ಹಮಾಸ್ ಉಗ್ರ ಸಂಘಟನೆ ಬಿಟ್ ಕಾಯಿನ್ ಮೂಲಕ ಈವರೆಗೆ ಅತಿಹೆಚ್ಚು ಹಣ ಸಂಗ್ರಹಿಸಿರುವ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಹಮಾಸ್ ಸಂಘಟನೆ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಈ ಸಂಘಟನೆಗೆ ಸೇರಿದ ಬಿಟ್ ಕಾಯಿನ್ ವ್ಯಾಲೆಟ್​ಗಳನ್ನು ಇಸ್ರೇಲ್ ರಕ್ಷಣಾ ಇಲಾಖೆ ಜಪ್ತಿ ಮಾಡಿತ್ತು. ಇದೇ ಕಾರಣಕ್ಕೆ ಈಗ ಕರ್ನಾಟಕದ ಬಿಟ್ ಕಾಯಿನ್ ಹಗರಣದಲ್ಲಿ ಇಸ್ರೇಲ್ ತನಿಖಾ ಏಜೆನ್ಸಿ ಸಹಾಯ ಪಡೆಯಲು ಸಿಐಡಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
2022ರ ನ.19ರಂದು ಮಂಗಳೂರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಉಗ್ರ ಮಹಮ್ಮದ್ ಶಾರೀಕ್ ಡಾರ್ಕ್ ನೆಟ್​ನಲ್ಲಿ ಖಾತೆ ಹೊಂದಿದ್ದಾನೆ. ವಿದೇಶದಿಂದ ಡಾಲರ್ ಹಾಗೂ ಬಿಟ್ ಕಾಯಿನ್ ಈತನ ಖಾತೆ ಬರುತ್ತಿತ್ತು. ಇದನ್ನು ಆತ ಭಾರತೀಯ ಕರೆನ್ಸಿಗೆ ಬದಲಾವಣೆ ಮಾಡಿ ಸ್ನೇಹಿತರು, ಪರಿಚಯಸ್ಥರು ಸೇರಿ ನೂರಾರು ಜನರ ಖಾತೆಗಳಿಗೆ ವರ್ಗಾವಣೆ ಮಾಡಿ, ಮತ್ತೆ ಅವರ ಖಾತೆಗಳಿಂದ ಇನ್ನೊಬ್ಬರ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2018ರಿಂದ ಈವರೆಗೆ ಕರ್ನಾಟಕ ಸೇರಿ ದೇಶಾದ್ಯಂತ ಉಗ್ರರಿಗೆ ಹಣ ವರ್ಗಾವಣೆ ಸಂಬಂಧಿಸಿದಂತೆ ಎನ್​ಐಎ 65ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ 2022ರ ಅನ್ವಯ 24 ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸಿ ಚಾರ್ಜ್​ಶೀಟ್ ಸಲ್ಲಿಸಿದೆ. ಉಳಿದ ಪ್ರಕರಣಗಳಲ್ಲಿ ಸಾಕ್ಷ್ಯಸಂಗ್ರಹ ಪ್ರಕ್ರಿಯೆ ಮುಂದುವರಿದಿದೆ. ಬಿಟ್ ಕಾಯಿನ್ ನೆರವು ಸಂಬಂಧ ಹೆಚ್ಚಿನ ಪ್ರಕರಣಗಳು ಬಹಿರಂಗವಾಗಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರತ್ಯೇಕ ಸಿಎಫ್​ಟಿ ಘಟಕ ಸ್ಥಾಪನೆ:ಉಗ್ರರ ಆರ್ಥಿಕ ಶಕ್ತಿ ಕುಂದಿಸಿ, ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಈಗಾಗಲೇ ಗೃಹ ಇಲಾಖೆ ಅಧೀನದಲ್ಲಿ ಕೌಂಟರಿಂಗ್ ಆಫ್ ಫೈನಾನ್ಸಿಂಗ್ ಆಫ್ ಟೆರರಿಸಂ (ಸಿಎಫ್​ಟಿ ಸೆಲ್) ಹಾಗೂ ಎನ್​ಐಎ ಸುಪರ್ದಿಯಲ್ಲಿ ಟೆರರ್ ಫಂಡಿಂಗ್ ಮತ್ತು ಫೇಕ್ ಕರೆನ್ಸಿ (ಟಿಎಫ್​ಎಫ್​ಸಿ) ಸೆಲ್ ಸ್ಥಾಪನೆ ಮಾಡಲಾಗಿದೆ. ಈ ಎರಡೂ ಘಟಕಗಳು ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ ಬಗ್ಗೆ ನಿಗಾ ವಹಿಸಲಿವೆ.
ವಜೀರ್ ಎಕ್ಸ್ ವಿರುದ್ಧ 3 ಕೇಸ್:ಕ್ರಿಪ್ಟೋ ಕರೆನ್ಸಿ ವಿನಿಯಮ ವೇದಿಕೆ ವಜೀರ್ ಎಕ್ಸ್​ನ ಅಕ್ರಮ ವಹಿವಾಟು ಸಂಬಂಧ 3 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ವಿದೇಶಿ ವಿನಿಮಯ ಕಾಯ್ದೆಯಡಿ 1 ಪ್ರಕರಣ ಹಾಗೂ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆಯಡಿ 2 ಪ್ರಕರಣಗಳ ತನಿಖೆ ನಡೆಯುತ್ತಿದೆ. ಅಪರಿಚಿತ ವ್ಯಾಲೆಟ್​ಗಳಿಗೆ 2790 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ 64 ಕೋಟಿ ಮೌಲ್ಯದ ಕರೆನ್ಸಿಯನ್ನು ತಡೆಹಿಡಿಯಲಾಗಿದೆ.

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × one =
Remember me
